ADVERTISEMENT

ನಳಪಾಕ | ಫಿಶ್ ಮಂಚೂರಿಯನ್‌, ಫಿಶ್ ಸೂಪ್‌

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2021, 19:43 IST
Last Updated 10 ಡಿಸೆಂಬರ್ 2021, 19:43 IST
ಫಿಶ್ ಕಬಾಬ್‌
ಫಿಶ್ ಕಬಾಬ್‌   

ಮಂಚೂರಿಯನ್‌

ಬೇಕಾಗುವ ಸಾಮಗ್ರಿಗಳು:
ಮೀನು – 250 ಗ್ರಾಂ, ಕಾರ್ನ್ ಫ್ಲೋರ್ – ಒಂದೂವರೆ ಚಮಚ, ಮೈದಾಹಿಟ್ಟು – ಒಂದೂವರೆ ಚಮಚ, ಉಪ್ಪು – ರುಚಿಗೆ, ಎಣ್ಣೆ – ಕರಿಯಲು
ನೆನೆಸಿಡಲು: ಸೋಯಾ ಸಾಸ್‌ – ಮುಕ್ಕಾಲು ಚಮಚ, ಕಾಳುಮೆಣಸಿನ ಪುಡಿ – ಕಾಲು ಚಮಚ, ಶುಂಠಿ ಪೇಸ್ಟ್ – 1 ಚಮಚ, ಬೆಳ್ಳುಳ್ಳಿ ಪೇಸ್ಟ್ – 1 ಚಮಚ,
ಮಂಚೂರಿಯನ್‌ ತಯಾರಿಸಲು: ಬೆಳ್ಳುಳ್ಳಿ ಎಸಳು – 3, ಈರುಳ್ಳಿ ದಂಟು – 2, ಹಸಿರು ದೊಣ್ಣೆ ಮೆಣಸು – ಕಾಲು ಕಪ್‌, ಕೆಂಪು ದೊಣ್ಣೆ ಮೆಣಸು – ಕಾಲು ಕಪ್‌, ಸೋಯಾ ಸಾಸ್‌ – 1 ಚಮಚ, ವಿನೆಗರ್‌ – 1 ಚಮಚ, ಚಿಲ್ಲಿ ಸಾಸ್‌ – 2 ಚಮಚ, ನೀರು – 2 ಚಮಚ, ಸಕ್ಕರೆ – 1 ಚಮಚ, ಕಾರ್ನ್ ಫ್ಲೋರ್ – ಮುಕ್ಕಾಲು ಚಮಚ.

ತಯಾರಿಸುವ ವಿಧಾನ: ಒಂದು ಬಟ್ಟಲಿನಲ್ಲಿ ಸೋಯಾ ಸಾಸ್‌, ಚಿಲ್ಲಿ ಸಾಸ್‌, ಸಕ್ಕರೆ ಹಾಗೂ ವಿನೆಗರ್ ಸೇರಿಸಿ ಮಿಶ್ರಣ ಮಾಡಿ ಇಡಿ. ಮೀನನ್ನು ಚೆನ್ನಾಗಿ ತೊಳೆದು ಕತ್ತರಿಸಿಟ್ಟುಕೊಳ್ಳಿ. ಅದಕ್ಕೆ ಸೋಯಾ ಸಾಸ್‌, ಶುಂಠಿ–ಬೆಳ್ಳುಳ್ಳಿ ಪೇಸ್ಟ್‌ ಹಾಗೂ ಕಾಳುಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮಿಶ್ರಣ ಮಾಡಿಕೊಂಡ ಮೀನಿನ ತುಂಡಿಗೆ ಕಾರ್ನ್ ಫ್ಲೋರ್‌, ಮೈದಾಹಿಟ್ಟು ಹಾಗೂ ಉಪ್ಪು ಸೇರಿಸಿ. ಸ್ವಲ್ಪ ನೀರು ಚಿಮುಕಿಸಿ, ಹಿಟ್ಟು ಮೀನಿಗೆ ಚೆನ್ನಾಗಿ ಹಿಡಿಯುವಂತೆ ನೋಡಿಕೊಳ್ಳಿ. ಪಾತ್ರೆಯೊಂದರಲ್ಲಿ ಎಣ್ಣೆ ಬಿಸಿ ಮಾಡಿ. ಅದರಲ್ಲಿ ಮೀನಿನ ತುಂಡುಗಳನ್ನು ಕರಿಯಿರಿ. ಇನ್ನೊಂದು ಪಾತ್ರೆಗೆ ಎರಡು ಚಮಚ ಕರಿದ ಎಣ್ಣೆ ಹಾಕಿ, ಅದಕ್ಕೆ ಬೆಳ್ಳುಳ್ಳಿ–ಶುಂಠಿ ಹಾಕಿ ಪರಿಮಳ ಬರುವವರೆ‌ಗೆ ಹುರಿಯಿರಿ. ನಂತರ ದೊಣ್ಣೆ ಮೆಣಸು, ಈರುಳ್ಳಿ ಹಾಕಿ ದೊಡ್ಡ ಉರಿಯಲ್ಲಿ 2 ನಿಮಿಷ ಹುರಿದುಕೊಳ್ಳಿ. ಮೊದಲೇ ಮಿಶ್ರಣ ಮಾಡಿಟ್ಟುಕೊಂಡಿದ್ದ ಸಾಸ್ ಸೇರಿಸಿ ಅದಕ್ಕೆ 2 ಚಮಚ ನೀರು ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ಒಮ್ಮೆ ರುಚಿ ನೋಡಿಕೊಂಡು ಸಾಸ್ ಅಥವಾ ಉಪ್ಪು ಬೇಕಾದರೆ ಸೇರಿಸಿ. ಈ ಮಿಶ್ರಣ ಸ್ವಲ್ಪ ದಪ್ಪಗಾದ ಮೇಲೆ ಹುರಿದುಕೊಂಡು ಮೀನು ಸೇರಿಸಿ ಮಿಶ್ರಣ ಮಾಡಿ ದೊಡ್ಡ ಉರಿಯಲ್ಲಿ ಎರಡು ನಿಮಿಷ ಬೇಯಿಸಿ. ನಿಮಗೆ ಬೇಕಾದರೆ ಕಾರ್ನ್‌ಫ್ಲೋರ್‌ಗೆ ಸೇರಿಸಿ ಅದಕ್ಕೆ ಸೇರಿಸಿ ಮತ್ತೆ ಮೀನು ಬೇಯುವವರೆಗೆ ಕುದಿಸಿ.

ADVERTISEMENT

ಸೂಪ್‌

ಬೇಕಾಗುವ ಸಾಮಗ್ರಿಗಳು: ಮೀನು – 1, ಆಲಿವ್ ಎಣ್ಣೆ – 2 ಚಮಚ, ಈರುಳ್ಳಿ – 1 ದೊಡ್ಡದು (ಉದ್ದಕ್ಕೆ ಸೀಳಿಕೊಂಡಿದ್ದು), ಬೆಳ್ಳುಳ್ಳಿ ಎಸಳು – 6, ಕೊತ್ತಂಬರಿ ಪುಡಿ – 1 ಚಮಚ, ಜೀರಿಗೆ ಪುಡಿ – 1 ಚಮಚ, ಟೊಮೆಟೊ – 2 ಮಧ್ಯಮ ಗಾತ್ರದ್ದು, ಚಿಕನ್ ಸ್ಟಾಕ್‌ – 5 ಕಪ್‌, ಉಪ್ಪು – ರುಚಿಗೆ, ಕಾಳುಮೆಣಸಿನ ಪುಡಿ – ರುಚಿಗೆ, ಕಾರ್ನ್‌ಫ್ಲೋರ್‌ – 3 ಚಮಚ, ಕ್ಯಾರೆಟ್ – 3, ಕೊತ್ತಂಬರಿ ಸೊಪ್ಪು – ಸ್ವಲ್ಪ

ತಯಾರಿಸುವ ವಿಧಾನ: ಮೀನನ್ನು ಚೆನ್ನಾಗಿ ತೊಳೆದು ಕತ್ತರಿಸಿಕೊಂಡು ಅದಕ್ಕೆ ಉಪ್ಪು ಹಾಗೂ ಕಾಳುಮೆಣಸಿನ ಪುಡಿ ಸೇರಿಸಿ ಕಲೆಸಿ ಇಡಿ. ಒಂದು ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ. ಅದಕ್ಕೆ ಈರುಳ್ಳಿ, ಬೆಳ್ಳುಳ್ಳಿ ಸೇರಿಸಿ ಪರಿಮಳ ಬರುವವರೆಗೂ ಹುರಿದುಕೊಳ್ಳಿ. ಅದಕ್ಕೆ ಕೊತ್ತಂಬರಿ ಹಾಗೂ ಜೀರಿಗೆ ಪುಡಿ ಸೇರಿಸಿ ಮಿಶ್ರಣ ಮಾಡಿ. ಅದಕ್ಕೆ ಚಿಕ್ಕದಾಗಿ ಕತ್ತರಿಸಿದ ಟೊಮೆಟೊ ಸೇರಿಸಿ ಟೊಮೆಟೊ ಮೆದುವಾಗುವವರೆಗೂ ಬೇಯಿಸಿ. ಅದಕ್ಕೆ ಕ್ಯಾರೆಟ್‌, ಹಸಿಮೆಣಸು, ಚಿಕನ್ ಸ್ಟಾಕ್‌, ಉಪ್ಪು, ಕಾಳುಮೆಣಸಿನ ಪುಡಿ ಸೇರಿಸಿ ಸಣ್ಣ ಉರಿಯಲ್ಲಿ ಅರ್ಧ ಗಂಟೆ ಕುದಿಸಿ. ಅದಕ್ಕೆ ಮೊದಲೇ ಮಿಶ್ರಣ ಮಾಡಿ. ಅದಕ್ಕೆ ಕಾರ್ನ್‌ಫ್ಲೋರ್ ನೀರು ಸೇರಿಸಿ ಮತ್ತೆ ಕುದಿಸಿ. ಅದಕ್ಕೆ ಮೀನಿನ ತುಂಡು ಹಾಗೂ ಕೊತ್ತಂಬರಿ ಸೊಪ್ಪು ಸೇರಿಸಿ 10 ನಿಮಿಷ ಕುದಿಸಿ. ನಂತರ ರುಚಿ ನೋಡಿಕೊಂಡು ಉಪ್ಪು ಬೇಕಾದರೆ ಸೇರಿಸಿ. ಈಗ ನಿಮ್ಮ ಮುಂದೆ ರುಚಿಯಾದ ಫಿಶ್ ಸೂಪ್ ಕುಡಿಯಲು ಸಿದ್ಧ. ಇದು ಆರೋಗ್ಯದ ದೃಷ್ಟಿಯಿಂದಲೂ ಉತ್ತಮ.

ಕಬಾಬ್‌

ಬೇಕಾಗುವ ಸಾಮಗ್ರಿಗಳು: ಮೀನು – ಅರ್ಧ ಕೆಜಿ, ನಿಂಬೆರಸ – 1 ಚಮಚ, ಕಡಲೆಹಿಟ್ಟು – 1 ಕಪ್‌, ಶುಂಠಿ– ಬೆಳ್ಳುಳ್ಳಿ ಪೇಸ್ಟ್ – 1 ಚಮಚ, ಹಸಿಮೆಣಸಿನ ಪೇಸ್ಟ್ – ಅರ್ಧ ಚಮಚ, ಕೊತ್ತಂಬರಿ ಪುಡಿ – ಅರ್ಧ ಚಮಚ, ಅರಿಸಿನ ಪುಡಿ – ಕಾಲು ಚಮಚ, ಜೀರಿಗೆ ಪುಡಿ – 1 ಚಮಚ, ಗರಂಮಸಾಲೆ – ಅರ್ಧ ಚಮಚ, ಕೊತ್ತಂಬರಿ ಸೊಪ್ಪು – 1 ಕಪ್‌, ಈರುಳ್ಳಿ – 1 ಕಪ್‌, ಉಪ್ಪು – ರುಚಿಗೆ, ಎಣ್ಣೆ – ಕರಿಯಲು

ತಯಾರಿಸುವ ವಿಧಾನ: ಮೊದಲು ಮೀನನ್ನು ಚೆನ್ನಾಗಿ ತೊಳೆದು ಒಣಗಿಸಿ. ಅದನ್ನು ಬೌಲ್‌ ಒಂದರಲ್ಲಿ ಹಾಕಿ ಅದಕ್ಕೆ ಉಪ್ಪು ಹಾಗೂ ನಿಂಬೆರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಎಣ್ಣೆಯನ್ನು ಬಿಸಿಮಾಡಿ ಮೀನನ್ನು ಎಣ್ಣೆಯಲ್ಲಿ ಕರಿಯಿರಿ. ಮೀನನ್ನು ತಣ್ಣಗಾದ ಮೇಲೆ ಅದನ್ನು ಸ್ವಲ್ಪ ಸಣ್ಣದಾಗಿ ಕತ್ತರಿಸಿಕೊಳ್ಳಿ. ಅದಕ್ಕೆ ಶುಂಠಿ–ಬೆಳ್ಳುಳ್ಳಿ ಪೇಸ್ಟ್‌, ಹಸಿಮೆಣಸಿನ ಪೇಸ್ಟ್‌, ಕೊತ್ತಂಬರಿ ಪುಡಿ, ಅರಿಸಿನ ಪುಡಿ, ಜೀರಿಗೆ ಪುಡಿ, ಗರಂ ಮಸಾಲೆ, ಉಪ್ಪು ಹಾಗೂ ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅದನ್ನು 30 ನಿಮಿಷ ಹಾಗೆ ಇಡಿ. ಅದಕ್ಕೆ ಕಡಲೆಹಿಟ್ಟು ಹಾಗೂ ಈರುಳ್ಳಿ ಸೇರಿಸಿ ಮಿಶ್ರಣ ಮಾಡಿ. ಎಣ್ಣೆ ಬಿಸಿ ಮಾಡಿ ಎಣ್ಣೆಯಲ್ಲಿ ಮೀನನ್ನು ಕರಿಯಿರಿ. ಮೀನಿನ ಕಬಾಬ್ ತಿನ್ನಲು ತುಂಬಾ ಚೆನ್ನಾಗಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.