ADVERTISEMENT

ಸ್ವಾದಭರಿತ ಮೊಟ್ಟೆಯ ಸ್ಯಾಂಡ್‌ವಿಚ್‌, ಪಕೋಡ

ಎಂ.ಎಸ್.ಧರ್ಮೇಂದ್ರ
Published 9 ಆಗಸ್ಟ್ 2019, 19:30 IST
Last Updated 9 ಆಗಸ್ಟ್ 2019, 19:30 IST
   

ಬ್ರೆಡ್– ಮೊಟ್ಟೆ ಟೋಸ್ಟ್ ಸ್ಯಾಂಡ್‌ವಿಚ್‌

ಬೇಕಾಗುವ ಸಾಮಗ್ರಿಗಳು: ಬ್ರೆಡ್ ಅರ್ಧ ಪೌಂಡ್, ಮೊಟ್ಟೆ ಮೂರು, ಈರುಳ್ಳಿ ಒಂದು, ಕ್ಯಾರೆಟ್ ಒಂದು, ಬೀನ್ಸ್ ಐದು, ಹಸಿಮೆಣಸಿನಕಾಯಿ ಎರಡು, ಕ್ಯಾಪ್ಸಿಕಂ ಅರ್ಧ, ಕೊತ್ತಂಬರಿ ಸೊಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸ್ವಲ್ಪ, ಅರಿಸಿನ ಪುಡಿ, ಕರಿಬೇವಿನ ಸೊಪ್ಪು, ಪೆಪ್ಪರ್‌ಪುಡಿ, ಟೊಮೆಟೊ ಕೆಚಪ್, ಎಣ್ಣೆ, ಬೆಣ್ಣೆ, ಸಾಸಿವೆ, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಬ್ರೆಡ್ ಪೀಸ್‌ಗೆ ಬೆಣ್ಣೆ ಸವರಿ ತವಾದ ಮೇಲೆ ಎರಡು ಕಡೆ ಟೋಸ್ಟ್ ಮಾಡಿಟ್ಟುಕೊಳ್ಳಿ. ಈರುಳ್ಳಿ, ಕ್ಯಾರೆಟ್, ಬೀನ್ಸ್, ಕ್ಯಾಪ್ಸಿಕಂ, ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿಗಳನ್ನು ಸಣ್ಣಗೆ ಕತ್ತರಿಸಿಟ್ಟುಕೊಳ್ಳಿ. ತೆರೆದ ಪಾತ್ರೆಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಸಿಡಿಸಿ ಹಸಿಮೆಣಸಿನಕಾಯಿ, ಕರಿಬೇವು, ಕ್ಯಾಪ್ಸಿಕಂ, ಈರುಳ್ಳಿ, ಕ್ಯಾರೆಟ್, ಬೀನ್ಸ್, ಕೊತ್ತಂಬರಿಸೊಪ್ಪು, ಪೆಪ್ಪರ್‌ಪುಡಿ, ಉಪ್ಪು ಮತ್ತು ಅರಿಶಿನ ಪುಡಿ ಹಾಕಿ ಚೆನ್ನಾಗಿ ಫ್ರೈ ಮಾಡಿ.

ADVERTISEMENT

ಮೊಟ್ಟೆಯನ್ನು ಒಡೆದು ಬಟ್ಟಲಿಗೆ ಹಾಕಿ ಚೆನ್ನಾಗಿ ಗೊಟಾಯಿಸಿದ ನಂತರ ಆರಿದ ಫ್ರೈ ಮಾಡಿದ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಕಲೆಸಿ.
ಒಲೆಯ ಮೇಲೆ ಫ್ರೈ ಪ್ಯಾನ್ ಇರಿಸಿ ಎಣ್ಣೆ ಸವರಿ ಕಾದ ನಂತರ ಮೊಟ್ಟೆ ಮಿಶ್ರಣವನ್ನು ಹಾಕಿ ದೋಸೆ ರೀತಿ ವೃತ್ತಾಕಾರದಲ್ಲಿ ಹರಡಬೇಕು. ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ ಒಂದು ಬದಿಯನ್ನು ಚೆನ್ನಾಗಿ ಬೇಯಿಸಿದ ನಂತರ ಮುಚ್ಚಳ ತೆಗೆದು, ಮಗುಚಿ ಹಾಕಿ ಇನ್ನೊಂದು ಬದಿಯನ್ನು ಚೆನ್ನಾಗಿ ಬೇಯಿಸಿ.

ಬ್ರೇಡ್ ಪೀಸ್‌ಗಳ ಮಧ್ಯೆ ಆಮ್ಲೆಟ್‌ ಅನ್ನು ಬ್ರೆಡ್ ಆಕಾರಕ್ಕೆ ಕತ್ತರಿಸಿ ಇಟ್ಟು ಕೊನೆಗೆ ತ್ರಿಕೋನಾಕಾರದಲ್ಲಿ ಕತ್ತರಿಸಿ ಟೊಮೆಟೊ ಕೆಚಪ್ ಜೊತೆ ತಿನ್ನಲು ಕೊಡಿ.

ಅಣಬೆ – ಮೊಟ್ಟೆ ಫ್ರೈ

ಬೇಕಾಗುವ ಸಾಮಗ್ರಿಗಳು: 1 ಪ್ಯಾಕೆಟ್ ಬಟನ್ ಅಣಬೆ (ಮಶ್ರೂಮ್‌), ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಚಮಚ, ಕೊತ್ತಂಬರಿ ಸೊಪ್ಪು ಸ್ವಲ್ಪ, ಕರಿಬೇವು 1 ಕಡ್ಡಿ, ಹಸಿಮೆಣಸಿನಕಾಯಿ 3, ಪೆಪ್ಪರ್ ಪುಡಿ ಸ್ವಲ್ಪ, ಈರುಳ್ಳಿ 1, ಮೊಟ್ಟೆ 2, ಎಣ್ಣೆ, ಸಾಸಿವೆ, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಈರುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ, ಕರಿಬೇವು ಕತ್ತರಿಸಿಟ್ಟುಕೊಳ್ಳಿ. ಬಟನ್ ಅಣಬೆಗೆ ಅರಿಶಿನ ಪುಡಿ ಹಾಕಿ ಚೆನ್ನಾಗಿ ತೊಳೆದು ಬೇಕಾದ ಆಕಾರಕ್ಕೆ ಕತ್ತರಿಸಿಟ್ಟುಕೊಳ್ಳಿ. ಕತ್ತರಿಸಿದ ಅಣಬೆಯನ್ನು ನೀರು ಹಾಕದೆ ಫ್ರೈ ಪ್ಯಾನ್‌ನಲ್ಲಿ ಡ್ರೈ ಆಗುವ ತನಕ ಫ್ರೈ ಮಾಡಿಟ್ಟುಕೊಳ್ಳಿ. ಫ್ರೈ ಪ್ಯಾನ್‌ಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಸಿಡಿಸಿ. ಕರಿಬೇವು, ಹಸಿಮೆಣಸಿನಕಾಯಿ ಹಾಕಿದ ಸ್ವಲ್ಪ ಸಮಯದ ನಂತರ ಈರುಳ್ಳಿ ಹಾಕಿ ಕಂದು ಬಣ್ಣ ಬರುವ ತನಕ ಫ್ರೈ ಮಾಡಿದ ಮೇಲೆ ಬೇಯಿಸಿದ ಅಣಬೆ, ಪೆಪ್ಪರ್ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಉಪ್ಪು ಹಾಕಿ. ಸ್ವಲ್ಪ ಬೇಯಿಸಿದ ನಂತರ ಮೊಟ್ಟೆ ಒಡೆದು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ ಬೇಯಿಸಿ. ಬೆಂದ ನಂತರ ಮುಚ್ಚಳ ತೆಗೆದು ಕೊತ್ತಂಬರಿ ಸೊಪ್ಪನ್ನು ಉದುರಿಸಿ ಉಣಬಡಿಸಿ.

ಅಣಬೆ – ಮೊಟ್ಟೆ ಪಕೋಡ

ಬೇಕಾಗುವ ಸಾಮಗ್ರಿಗಳು: 1 ಪ್ಯಾಕೆಟ್ ಬಟನ್ ಅಣಬೆ, ಕಡಲೆ ಹಿಟ್ಟು 2 ಚಮಚ, ಕೆಂಪು ಖಾರದಪುಡಿ 1 ಚಮಚ, ಅಕ್ಕಿಹಿಟ್ಟು 1 ಚಮಚ, ಪೆಪ್ಪರ್ ಪುಡಿ ಸ್ವಲ್ಪ, ಗರಂಮಸಾಲೆ ಸ್ವಲ್ಪ, ಈರುಳ್ಳಿ 1, ಕೊತ್ತಂಬರಿ ಸ್ವಲ್ಪ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸ್ವಲ್ಪ, ಮೊಟ್ಟೆ 1, ಎಣ್ಣೆ, ಸಾಸಿವೆ, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಚೆನ್ನಾಗಿ ತೊಳೆದ ಮಶ್‌ರೂಮ್, ಈರುಳ್ಳಿ ಮತ್ತು ಕೊತ್ತಂಬರಿಯನ್ನು ಕತ್ತರಿಸಿಟ್ಟುಕೊಳ್ಳಿ. ಕಡಲೆ ಹಿಟ್ಟು, ಕೆಂಪು ಖಾರದಪುಡಿ, ಅಕ್ಕಿಹಿಟ್ಟು, ಪೆಪ್ಪರ್‌ಪುಡಿ, ಗರಂಮಸಾಲೆ, ಕೊತ್ತಂಬರಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಮೊಟ್ಟೆ, ಕತ್ತರಿಸಿದ ಅಣಬೆ, ಈರುಳ್ಳಿ, ಕೊತ್ತಂಬರಿ ಸೊಪ್ಪು ಮತ್ತು ಉಪ್ಪನ್ನು ಹಾಕಿ ಪಕೋಡ ರೀತಿ ಕಲೆಸಿಟ್ಟುಕೊಳ್ಳಿ. ಎಣ್ಣೆಗೆ ಹಾಕಿ ಹದ ಉರಿಯಲ್ಲಿ ಕರಿಯಿರಿ. ಇದನ್ನು ಟೊಮೆಟೊ ಸಾಸ್‌ ಜೊತೆ ತಿನ್ನಿರಿ.

ಮೊಟ್ಟೆ– ತರಕಾರಿ ಆಮ್ಲೆಟ್

ಬೇಕಾಗುವ ಸಾಮಗ್ರಿಗಳು: ಮೊಟ್ಟೆ ಮೂರು, ಈರುಳ್ಳಿ ಒಂದು, ಕ್ಯಾರೆಟ್ ಒಂದು, ಬೀನ್ಸ್ ಐದು, ಹಸಿಮೆಣಸಿನಕಾಯಿ ಎರಡು, ಕ್ಯಾಪ್ಸಿಕಂ ಅರ್ಧ, ಕೊತ್ತಂಬರಿ ಸೊಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸ್ವಲ್ಪ, ಅರಿಸಿನ ಪುಡಿ, ಕರಿಬೇವಿನ ಸೊಪ್ಪು, ಪೆಪ್ಪರ್‌ಪುಡಿ, ಎಣ್ಣೆ, ಸಾಸಿವೆ, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಈರುಳ್ಳಿ, ಕ್ಯಾರೆಟ್, ಬೀನ್ಸ್, ಕ್ಯಾಪ್ಸಿಕಂ, ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿಗಳನ್ನು ಸಣ್ಣಗೆ ಕತ್ತರಿಸಿಟ್ಟುಕೊಳ್ಳಿ.ತೆರೆದ ಪಾತ್ರೆಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಸಿಡಿಸಿ. ಹಸಿಮೆಣಸಿನಕಾಯಿ, ಕರಿಬೇವು, ಕ್ಯಾಪ್ಸಿಕಂ, ಈರುಳ್ಳಿ, ಕ್ಯಾರೆಟ್, ಬೀನ್ಸ್, ಕೊತ್ತಂಬರಿಸೊಪ್ಪು, ಪೆಪ್ಪರ್‌ಪುಡಿ, ಉಪ್ಪು ಮತ್ತು ಅರಿಸಿನ ಪುಡಿ ಹಾಕಿ ಚೆನ್ನಾಗಿ ಫ್ರೈ ಮಾಡಿ.

ಮೊಟ್ಟೆಯನ್ನು ಒಡೆದು ಬಟ್ಟಲಿಗೆ ಹಾಕಿ ಚೆನ್ನಾಗಿ ಗೊಟಾಯಿಸಿದ ನಂತರ ಉಪ್ಪು, ಆರಿದ ಫ್ರೈ ಮಾಡಿದ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಕಲೆಸಿ.ಒಲೆಯ ಮೇಲೆ ಫ್ರೈ ಪ್ಯಾನ್ ಇರಿಸಿ ಎಣ್ಣೆ ಸವರಿ ಖಾದ ನಂತರ ಮೊಟ್ಟೆ ಮಿಶ್ರಣವನ್ನು ಹಾಕಿ ದೋಸೆ ರೀತಿ ವೃತ್ತಾಕಾರದಲ್ಲಿ ಹರಡಬೇಕು. ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ ಒಂದು ಬದಿಯನ್ನು ಚೆನ್ನಾಗಿ ಬೇಯಿಸಿದ ನಂತರ ಮುಚ್ಚಳ ತೆಗೆದು, ಮಗುಚಿ ಹಾಕಿ ಇನ್ನೊಂದು ಬದಿಯನ್ನು ಚೆನ್ನಾಗಿ ಬೇಯಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.