ADVERTISEMENT

Food Recipe| ಚಳಿಗೆ ಬಿಸಿ ಬ್ರೆಡ್ ರೋಲ್ಸ್‌

ಕೆ.ವಿ.ರಾಜಲಕ್ಷ್ಮಿ
Published 20 ಜನವರಿ 2023, 19:30 IST
Last Updated 20 ಜನವರಿ 2023, 19:30 IST
ಬ್ರೆಡ್ ರೋಲ್ಸ್
ಬ್ರೆಡ್ ರೋಲ್ಸ್   

ಎಲ್ಲೆಲ್ಲೂ ಚಳಿ ಚಳಿ. ಮುಂಜಾನೆ–ಸಂಜೆ ಎರಡೂ ಅವಧಿಯಲ್ಲೂ ಕೊರೆಯುವಂತಹ ಚಳಿ. ಚಳಿಗಾಲದಲ್ಲಿ ಹಸಿವು ಹೆಚ್ಚು, ಜೊತೆಗೆ ಬಿಸಿ ಬಿಸಿ ಖಾದ್ಯಗಳು ಬೇಕೆನಿಸುತ್ತದೆ, ಅಲ್ವಾ. ಇಂಥ ಥಂಡಿಗಾಲಕ್ಕೆ ಹೇಳಿ ಮಾಡಿಸಿದ್ದು ಬ್ರೆಡ್‌ನಿಂದ ಮಾಡುವ ತಿನಿಸುಗಳು. ದಿಢೀರನೆ ತಯಾರಿಸಬಹುದಾದ ಅಂಥ ತಿನಿಸುಗಳ ರೆಸಿಪಿಯನ್ನು ಕೆ.ವಿ.ರಾಜಲಕ್ಷ್ಮಿ ಇಲ್ಲಿ ಪರಿಚಯಿಸಿದ್ದಾರೆ.

––––––––––

1. ಬ್ರೆಡ್ ರೋಲ್ಸ್

ADVERTISEMENT

ಬೇಕಾಗುವ ಸಾಮಗ್ರಿ

ಸಾದಾ ಬ್ರೆಡ್ 6 ಸ್ಲೈಸ್, ಸಣ್ಣ ರವೆ ಅರ್ಧ ಕಪ್, ಮಧ್ಯಮ ಗಾತ್ರದ ಈರುಳ್ಳಿ 1, ಹಸಿರು ಮೆಣಸಿನಕಾಯಿ 2, ಶುಂಠಿ ಸಣ್ಣ ತುಂಡು, ತಾಜಾ ಕೊತ್ತಂಬರಿಸೊಪ್ಪು ಒಂದು ಹಿಡಿ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ

ಬ್ರೆಡ್ ಸ್ಲೈಸ್ ಗಳನ್ನು ಎರಡು ಮಡಿಕೆ ತುಂಡರಿಸಿ. ಈರುಳ್ಳಿಯನ್ನು ನಾಲ್ಕೈದು ಹೋಳುಗಳಾಗಿ ಹೆಚ್ಚಿಕೊಳ್ಳಿ. ಹಸಿರುಮೆಣಸಿನಕಾಯಿ, ಶುಂಠಿ, ಕೊತ್ತಂಬರಿ ಸೊಪ್ಪುಗಳೊಂದಿಗೆ ಒಟ್ಟಿಗೆ ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಕೊಳ್ಳಿ. ಈ ಮಿಶ್ರಣಕ್ಕೆ ರವೆ, ಉಪ್ಪು ಸೇರಿಸಿ. ಅಗತ್ಯಬಿದ್ದಲ್ಲಿ ಒಂದರಿಂದ ಎರಡು ಚಮಚ ನೀರು ಚುಮುಕಿಸಿ ಗಟ್ಟಿಯಾಗಿ ಕಲಸಿಕೊಳ್ಳಿ. ಕಲಸಿದ ಹಿಟ್ಟಿನಿಂದ ಚಾಕ್‌ಪೀಸ್‌ ತರಹ ಉದ್ದ ಆಕಾರ ಮಾಡಿ. ನಂತರ ಆ ತುಂಡುಗಳನ್ನು ಎಣ್ಣೆಯಲ್ಲಿ ಕರಿಯಿರಿ. ಗರಿ ಗರಿ, ಕ್ರಿಸ್ಪಿಯಾದ ಬ್ರೆಡ್‌ ರೋಲ್ಸ್‌ ರೆಡಿ

2. ಬ್ರೆಡ್ ಕುಕೀಸ್

ಬೇಕಾಗುವ ಸಾಮಗ್ರಿ

ಸ್ವೀಟ್ ಬ್ರೆಡ್ 6 ರಿಂದ 8 ಸ್ಲೈಸ್‌, ಎರಡು ಚಮಚ ಕಡಲೆಹಿಟ್ಟು, ಒಣಕೊಬ್ಬರಿ ತುರಿ 1 ಚಮಚ, ಗೋಡಂಬಿ 4, ಚಿಟಿಕೆ ಉಪ್ಪು.

ಮಾಡುವ ವಿಧಾನ

ಮೇಲೆ ಹೇಳಿದ ಎಲ್ಲ ಸಾಮಗ್ರಿಗಳನ್ನು ಮಿಕ್ಸಿಯಲ್ಲಿ ಒಟ್ಟಿಗೆ ಹಾಕಿ ಪುಡಿ ಮಾಡಿಕೊಳ್ಳಿ. ಈ ಮಿಶ್ರಣಕ್ಕೆ ಸ್ವಲ್ಪವೇ ನೀರು ಚಿಮುಕಿಸಿ. ಗಟ್ಟಿಯಾಗಿ ಕಲಸಿಕೊಳ್ಳಿ. ನಂತರ ಅಚ್ಚಿನಲ್ಲಿ ಬೇಕಾದ ಆಕಾರ ಮಾಡಿಕೊಳ್ಳಿ. ನಂತರ ಅವುಗಳನ್ನು ಎಣ್ಣೆಯಲ್ಲಿ ಕರಿಯಿರಿ. ಹದ ನೋಡಿ ತೆಗೆಯಿರಿ. ಬ್ರೆಡ್‌ ಕುಕ್ಕೀಸ್ ರೆಡಿ. ಇದನ್ನು ಯಾವುದೇ ಸಾಸ್‌ ಅಥವಾ ಚಟ್ನಿಯೊಂದಿಗೆ ಸೇವಿಸಬಹುದು.

3. ಬ್ರೆಡ್ ಕಾರ್ನ್ ಫ್ರೈ

ಬೇಕಾಗುವ ಸಾಮಗ್ರಿ

ಗೋಧಿ ಬ್ರೆಡ್ 6 ರಿಂದ 8 ಸ್ಲೈಸ್‌ಗಳು. ಅಮೆರಿಕನ್‌ ಕಾರ್ನ್ ಬೀಜ 25 ರಿಂದ 30, ಸಣ್ಣ ರವೆ 1 ಚಮಚ, ಕಡಲೆಹಿಟ್ಟು ಒಂದು ಚಮಚ, ಅಚ್ಚಮೆಣಸಿನಪುಡಿ 1 ಚಮಚ, ರುಚಿಗೆ ತಕ್ಕಸ್ಟು ಉಪ್ಪು.

ಮಾಡುವ ವಿಧಾನ

ಬ್ರೆಡ್ ತುಂಡುಗಳನ್ನು ನೀರಲ್ಲಿ ಅದ್ದಿ ಹಿಂಡಿ, ಮೆತ್ತಗಾಗಿಸಿ. ಇದಕ್ಕೆ ಮೇಲೆ ಹೇಳಿದ ಉಳಿದ ಸಾಮಗ್ರಿಗಳನ್ನು ಸೇರಿಸಿ ಕಲೆಸಿಕೊಂಡು ವಡೆಯಾಕಾರದಲ್ಲಿ ತಟ್ಟಿ. ಎಣ್ಣೆಯಲ್ಲಿ ಕರಿಯಿರಿ. ಬ್ರೆಡ್‌ ಕಾರ್ನ್‌ ಫ್ರೈ ಖಾದ್ಯ ರೆಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.