ADVERTISEMENT

ರೆಸಿಪಿ: ಫ್ರೈಡ್‌ ಫಿಶ್‌ ದಿಲ್ ಖುಷ್

ದೀಪಕ್ ಎನ್.
Published 11 ಫೆಬ್ರುವರಿ 2023, 1:25 IST
Last Updated 11 ಫೆಬ್ರುವರಿ 2023, 1:25 IST
ಫಿಶ್ ತವಾ ಫ್ರೈ
ಫಿಶ್ ತವಾ ಫ್ರೈ   

ಮೀನಿನಲ್ಲಿ ವೈವಿಧ್ಯಮಯ ತಳಿಗಳಿದ್ದಂತೆ, ಅವುಗಳಿಂದ ತಯಾರಿಸುವ ಖಾದ್ಯಗಳಲ್ಲೂ ಸಿಕ್ಕಾಪಟ್ಟೆ ವೆರೈಟಿಗಳಿವೆ. ಅಂಥವುಗಳಲ್ಲಿ ಸುಲಭ, ಸರಳ ಹಾಗೂ ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಮತ್ಸ್ಯ ಖಾದ್ಯಗಳ ರೆಸಿಪಿಗಳನ್ನು ಇಲ್ಲಿ ಪರಿಚಯಿಸಿದ್ದಾರೆ ದೀಪಕ್ ಗೌಡ.

**

ಫಿಶ್ ತವಾ ಫ್ರೈ (ಮಸಾಲ ಫ್ರೈ)

ADVERTISEMENT

ಬೇಕಾಗುವ ಸಾಮಗ್ರಿಗಳು: ಬಂಗುಡೆ ಮೀನು –4, ಕಾರ್ನ್ ಫ್ಲೋರ್ –ಒಂದು ಚಮಚ, ಅರಿಶಿನ ಪುಡಿ –ಅರ್ಧ ಚಮಚ, ಖಾರದಪುಡಿ -ಒಂದು ಚಮಚ, ಶುಂಠಿ -ಬೆಳ್ಳುಳ್ಳಿ ಪೇಸ್ಟ್, ಉಪ್ಪು –ಅರ್ಧ ಚಮಚ, ಸ್ವಲ್ಪ ನೀರು, ಸ್ವಲ್ಪ ಎಣ್ಣೆ.

ಮೇಲಿನ ಎಲ್ಲ ಪದಾರ್ಥಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಹೀಗೆ ಬೆರೆಸಿಕೊಂಡ ಮಸಾಲೆಯನ್ನು ಮೀನಿಗೆ ಹಚ್ಚಿ ಒಂದು ಗಂಟೆ ಕಾಲ ನೆನಸಿಡಬೇಕು.

ಮಾಡುವ ವಿಧಾನ: ಪ್ಯಾನ್‍ನಲ್ಲಿ ಎರಡು ಚಮಚ ಎಣ್ಣೆ ಹಾಕಿಕೊಂಡು ಬಿಸಿ ಮಾಡಲು ಇಡಬೇಕು. ಎಣ್ಣೆ ಬಿಸಿಯಾದ ಮೇಲೆ ಮಿಶ್ರಣ ಮಾಡಿದ ಮೀನುಗಳನ್ನು ಹಾಕಿ ಫ್ರೈ ಮಾಡಲು ಬಿಡಬೇಕು. ಮೀನಿನ ಒಂದು ಭಾಗ ಚೆನ್ನಾಗಿ ಬೆಂದ ಮೇಲೆ ಮತ್ತೊಂದು ಕಡೆಗೆ ತಿರುಗಿಸಿ ಕೊಡಬೇಕು. ಹೀಗೆ ಮೀನನ್ನು 10 ನಿಮಿಷಗಳ ಕಾಲ ಫ್ರೈ ಮಾಡಲು ಬಿಡಬೇಕು. ಈಗ ಫಿಶ್ ತವಾ ಫ್ರೈ ಸೇವಿಸಲು ಸಿದ್ಧ.

**

ರವಾ ಫ್ರೈ

ಬೇಕಾಗುವ ಸಾಮಗ್ರಿಗಳು: ಬಂಗುಡೆ ಮೀನು -3, ರವೆ -ಒಂದು ಕಪ್, ಎಣ್ಣೆ, ವಿನೆಗರ್ -ಒಂದು ಚಮಚ, ಖಾರದಪುಡಿ -ಒಂದು ಚಮಚ, ಪೆಪ್ಪರ್ ಪುಡಿ -ಒಂದು ಚಮಚ, ಶುಂಠಿ – ಬೆಳ್ಳುಳ್ಳಿ ಪೇಸ್ಟ್, ಅರಿಶಿನ ಪುಡಿ -ಅರ್ಧ ಚಮಚ, ರುಚಿಗೆ ತಕ್ಕಷ್ಟು ಉಪ್ಪು. ಮೀನಿನಲ್ಲಿ ಹೆಚ್ಚು ಉಪ್ಪಿನಾಂಶ ಇರುವುದರಿಂದ ಕಡಿಮೆ ಉಪ್ಪು ಬಳಸಬೇಕು.

ಮಾಡುವ ವಿಧಾನ: ಒಂದು ತಟ್ಟೆಯಲ್ಲಿ ಪುಡಿಗಳನ್ನು ಹಾಕಿಕೊಂಡು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಹೀಗೆ ಮಿಶ್ರಣ ಮಾಡಿಕೊಂಡ ಮಸಾಲೆಯನ್ನು ಮೀನಿಗೆ ಚೆನ್ನಾಗಿ ಹಚ್ಚಿ, ಅರ್ಧ ಗಂಟೆ ಕಾಲ ನೆನಸಿಡಬೇಕು. ಬಳಿಕ ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಲು ಇಡಿ. ಎಣ್ಣೆ ಬಿಸಿಯಾದ ಮೇಲೆ ಬಳಿಕ ಮಿಶ್ರಣ ಮಾಡಿಕೊಂಡ ಮೀನುಗಳಿಗೆ ರವೆ ಸವರಿಕೊಂಡು ಫ್ರೈ ಮಾಡಲು ಇಡಬೇಕು. ಮೀನಿನ ಒಂದು ಭಾಗ ಚೆನ್ನಾಗಿ ಬೆಂದ ಮೇಲೆ ಮತ್ತೊಂದು ಕಡೆಗೆ ತಿರುಗಿಸಿ ಕೊಡಬೇಕು. ಹೀಗೆ ಐದರಿಂದ ಹತ್ತು ನಿಮಿಷ ಚೆನ್ನಾಗಿ ಫ್ರೈ ಮಾಡಬೇಕು. ಈಗ ರವಾ ಫ್ರೈ ಸೇವಿಸಲು ಸಿದ್ಧ.

**

ಕರಿಮೀನು ಸಾರು

ಬೇಕಾಗುವ ಸಾಮಗ್ರಿಗಳು: ಹಸಿ ಅವರೆಕಾಳು –100 ಗ್ರಾಂ, ಕರಿಮೀನು –50 ಗ್ರಾಂ, ಬದನೆಕಾಯಿ –3, ಆಲೂಗಡ್ಡೆ –2, ಸಾಸಿವೆ –ಒಂದು ಚಮಚ, ಅರಿಶಿಣ ಪುಡಿ –ಒಂದು ಚಮಚ, ಸಾಂಬಾರ್ ಪುಡಿ –ಎರಡು ಚಮಚ, ಖಾರದಪುಡಿ –ಒಂದು ಚಮಚ,
ಒಗ್ಗರಣೆ ಬೇಕಾದಷ್ಟು ಎಣ್ಣೆ, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು,

ಮಸಾಲೆ: ಜೀರಿಗೆ –ಅರ್ಧ ಚಮಚ, ಈರುಳ್ಳಿ –1 ಬೆಳ್ಳುಳ್ಳಿ –1 ಟಮೊಟೊ –1, ಹುಣಸೆ ಹಣ್ಣಿನ ರಸ –ಒಂದು ಕಪ್, ಕೊತ್ತಂಬರಿ ಸೊಪ್ಪು, ತುರಿದ ಕೊಬ್ಬರಿಯನ್ನು ಸೇರಿಸಿ ಮಸಾಲೆ ರುಬ್ಬಿಕೊಳ್ಳಬೇಕು.

ಮಾಡುವ ವಿಧಾನ: ಪಾತ್ರೆಯಲ್ಲಿ ಅವರೆಕಾಳು, ಆಲೂಗಡ್ಡೆ ಬೇಯಲು ಇಡಬೇಕು. ಇವು ಬೆಂದ ಮೇಲೆ ಬದನೆಕಾಯಿ ಯನ್ನು ಹಾಕಿ ಬೇಯಲು ಬಿಡಬೇಕು. ಬಳಿಕ ರುಬ್ಬಿದ ಮಸಾಲೆಯನ್ನು ಸೇರಿಸಿ ಸಾಂಬರ್‌ ಅನ್ನು ಚೆನ್ನಾಗಿ ಕುದಿಯಲು ಬಿಟ್ಟು ಒಗ್ಗರಣೆಗೆ ಸಿದ್ಧಪಡಿಸಿಕೊಳ್ಳಬೇಕು. ಹೀಗೆ ಚೆನ್ನಾಗಿ ಸಾಂಬಾರ್ ಕುದಿ ಬಂದ ಬಳಿಕ ಕರಿಮೀನುಗಳನ್ನು ಸಾಂಬಾರ್‌ಗೆ ಹಾಕಿ ಚೆನ್ನಾಗಿ ತಿರುಗಿಸಿ ಕೊಡಬೇಕು. 10 ರಿಂದ 15 ನಿಮಿಷಗಳವರೆಗೆ ಬೇಯಿಸಿದರೆ ಕರಿಮೀನು ಸಾರು ಸವಿಯಲು ರೆಡಿ.

**

ಬಂಗುಡೆ ಮೀನಿನ ಸಾರು

ಬೇಕಾಗುವ ಸಾಮಗ್ರಿಗಳು: ಅರ್ಧ ಕೆಜಿ ಬಂಗುಡೆ ಮೀನುಗಳನ್ನು ತೆಗೆದುಕೊಂಡು ಎರಡು ಭಾಗಗಳಾಗಿ ಕತ್ತರಿಸಿಕೊಳ್ಳಬೇಕು. ಹುಣಸೆ ಹಣ್ಣಿನ ರಸ –ಒಂದು ಕಪ್‌, ಒಗ್ಗರಣೆಗೆ ಬೇಕಾದಷ್ಟು ಎಣ್ಣೆ, ದನಿಯಾ ಪುಡಿ –ಒಂದು ಚಮಚ, ಖಾರದಪುಡಿ –ಒಂದು ಚಮಚ, ಸಾಂಬಾರ್ ಪುಡಿ –ಒಂದು ಚಮಚ, ಅರಿಶಿಣ ಪುಡಿ –ಒಂದು ಚಮಚ, ಕರಿಬೇವು, ಚಕ್ಕೆ –2 ಲವಂಗ –2, ಮೆಂತ್ಯ –ಒಂದು ಚಮಚ, ಮೆಣಸು –ಒಂದು ಚಮಚ, ಜೀರಿಗೆ –ಒಂದು ಚಮಚ, ಬ್ಯಾಡಿಗೆ ಮೆಣಸಿನಕಾಯಿ –2, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಈರುಳ್ಳಿ -2 ಬೆಳ್ಳುಳ್ಳಿ -1 ಶುಂಠಿ- ಬೆಳ್ಳುಳ್ಳಿ ಪೇಸ್ಟ್ ಹಾಕಿಕೊಂಡು ಮಸಾಲ ಪದಾರ್ಥಗಳನ್ನು ಸೇರಿಸಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು. ಬಳಿಕ ರುಬ್ಬಿದ ಮಸಾಲೆಗಳನ್ನು ಪಾತ್ರೆಗೆ ಹಾಕಿಕೊಂಡು ಸಾಂಬರ್‌ಗೆ ಬೇಕೆನಿಸುವಷ್ಟು ನೀರು ಮತ್ತು ಉಪ್ಪು ಹಾಕಿಕೊಂಡು ಚೆನ್ನಾಗಿ ಕುದಿಸಿಕೊಳ್ಳಬೇಕು. ಬಳಿಕ ಕತ್ತರಿಸಿದ ಮೀನುಗಳನ್ನು ಸಾಂಬಾರ್‌ಗೆ ಸೇರಿಸಬೇಕು ಐದರಿಂದ 10 ನಿಮಿಷಗಳ ಕಾಲ ಚೆನ್ನಾಗಿ ಕುದಿಯಲು ಬಿಡಬೇಕು. ಇಲ್ಲಿಗೆ ಘಮ ಘಮ ಬಂಗುಡೆಮೀನಿನ ಸಾಂಬಾರ್ ಸವಿಯಲು ಸಿದ್ಧ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.