ಕರ್ಜಿಕಾಯಿ
ಬೇಕಾಗುವ ಸಾಮಗ್ರಿಗಳು: ಚಿರೋಟಿ ರವೆ 2 ಕಪ್, ಮೈದಾ 1 ಕಪ್, ಹುರಿಗಡಲೆ, ಶೇಂಗಾ, ಒಣಕೊಬ್ಬರಿ ತುರಿ ತಲಾ 1/4 ಕಪ್. ಗಸಗಸೆ ಎರಡು ಚಮಚ, ಪುಡಿಬೆಲ್ಲ 1 ಕಪ್, ಚಿಟಕಿ ಉಪ್ಪು.
ಮಾಡುವ ವಿಧಾನ: ಕಣಕಕ್ಕೆ, ಮೊದಲಿಗೆ ಅಗಲ ಪಾತ್ರೆಯಲ್ಲಿ ರವೆ, ಮೈದಾ ಚಿಟುಕಿ ಉಪ್ಪು ಸೇರಿಸಿ ಸ್ವಲ್ಪ ಸ್ವಲ್ಪವೇ ನೀರು ಹಾಕಿಕೊಂಡು ಚಪಾತಿ ಹಿಟ್ಟಿನ ಹದಕ್ಕೆ ಮೃದುವಾಗಿ ಕಲೆಸಿ, ಮೇಲೆ ಅಡುಗೆ ಎಣ್ಣೆ ಸವರಿ. ಮುಚ್ಚಳ ಮುಚ್ಚಿ ಅರ್ಧ ಗಂಟೆ ಬದಿಗಿಡಿ. ಹೂರಣಕ್ಕೆ, ಜಿಡ್ಡು ಹಾಕದೆ ಶೇಂಗಾ, ಗಸಗಸೆ ಹುರಿದಿಟ್ಟುಕೊಂಡು ತಣಿಸಿ. ಹುರಿಗಡಲೆ ಒಣಕೊಬ್ಬರಿ ಬೆಲ್ಲದೊಂದಿಗೆ ತರಿತರಿಯಾಗಿ ಅರೆದುಕೊಳ್ಳಿ. ಕಲೆಸಿದ ಹಿಟ್ಟನ್ನು ಪುರಿಯಾಕಾರಕ್ಕೆ ಲಟ್ಟಿಸಿ ಮಧ್ಯೆ ಅರೆದ ಸಿಹಿ ಮಿಶ್ರಣವನ್ನು ತುಂಬಿ ಮುಚ್ಚಿ ಕರ್ಜಿಕಾಯಿ ಆಕಾರದಲ್ಲಿ ಪ್ರೆಸ್ ಮಾಡಿ, ಎಣ್ಣೆಯಲ್ಲಿ ಕರಿಯಿರಿ.
ಮೋದಕ
ಬೇಕಾಗುವ ಸಾಮಗ್ರಿ: ಅಕ್ಕಿಹಿಟ್ಟು 1 ಕಪ್, 1 ಚಮಚ ಮೈದಾ, ತೆಂಗಿನ ತುರಿ ಅರ್ಧ ಕಪ್, ಬೆಲ್ಲದ ಪುಡಿ 1/2 ಕಪ್, ಚಿಟುಕಿ ಉಪ್ಪು.
ಮಾಡುವ ವಿಧಾನ: ಹೂರಣಕ್ಕೆ, ಬೆಲ್ಲ ಕರಗಿಸಿ ತೆಂಗಿನತುರಿ ಸೇರಿಸಿ ಸಣ್ಣ ಉರಿಯಲ್ಲಿ ನಾಲ್ಕೈದು ನಿಮಿಷ ಗೊಟಾಯಿಸಿ, ತಣಿದ ನಂತರ ಸಣ್ಣ ಸಣ್ಣ ಉಂಡೆಗಳನ್ನಾಗಿ ಅಣಿಮಾಡಿಕೊಳ್ಳಿ. ಕಣಕಕ್ಕೆ, 1 ಕಪ್ ನೀರಿಗೆ ಎಣ್ಣೆ, ಮೈದಾ ಉಪ್ಪು ಸೇರಿಸಿ ಚೆನ್ನಾಗಿ ಕುದಿಸಿ. ಅದಕ್ಕೆ ಅಕ್ಕಿಹಿಟ್ಟು ಸೇರಿಸಿ, ಉರಿಯಾರಿಸಿ ಗಂಟಿಲ್ಲದಂತೆ ಚೆನ್ನಾಗಿ ಮಿಶ್ರಣ ಮಾಡಿಟ್ಟುಕೊಳ್ಳಿ ಮುಚ್ಚಳ ಮುಚ್ಚಿ, ಐದು ನಿಮಿಷ ಬದಿಗಿಡಿ. ನಂತರ ಸ್ವಲ್ಪ ಅಕ್ಕಿಹಿಟ್ಟನ್ನು ಅಂಗೈಯಗಲಕ್ಕೆ ತಟ್ಟಿ ಮಧ್ಯೆ ಬೆಲ್ಲದ ಹೂರಣವಿಟ್ಟು ಮುಚ್ಚಿ ಮೋದಕಗಳನ್ನು ತಯಾರಿಸಿಕೊಂಡು ಇಡ್ಲಿ ಪಾತ್ರೆಯಲ್ಲಿ ಆವಿಯಲ್ಲಿ ಬೇಯಿಸಿ.
ರವೆ ತಂಬಿಟ್ಟು
ಬೇಕಾಗುವ ಸಾಮಗ್ರಿ: ಸಣ್ಣ ರವೆ 1 ಕಪ್, ಅಕ್ಕಿಹಿಟ್ಟು 1/4 ಕಪ್, ಬೆಲ್ಲದ ಪುಡಿ 1 1/2 ಕಪ್, ಏಲಕ್ಕಿ ಪುಡಿ 1 ಚಮಚ, ತುಪ್ಪ 2 ಚಮಚ.
ಮಾಡುವ ವಿಧಾನ: ಮೊದಲಿಗೆ ತುಪ್ಪದಲ್ಲಿ ರವೆ ಮತ್ತು ಅಕ್ಕಿ ಹಿಟ್ಟನ್ನು ಒಳ್ಳೆಯ ಪರಿಮಳ ಬರುವವರೆಗೆ ಹುರಿದುಕೊಳ್ಳಿ. ನಂತರ ಬಾಣಲಿಯಲ್ಲಿ ಬೆಲ್ಲದ ಪುಡಿಗೆ ಸ್ವಲ್ಪ ನೀರುಸೇರಿಸಿ, ಬೆಲ್ಲ ಕರಗಿ ನೊರೆಬರುವಾಗ ಹುರಿದ ಮಿಶ್ರಣವನ್ನು ಸೇರಿಸಿ ಕೈಯಾಡುತ್ತಿರಿ. ಮಿಶ್ರಣ ಬೆಂದು ಹದವಾದಾಗ ಏಲಕ್ಕಿ ಪುಡಿ, ಸ್ವಲ್ಪ ತುಪ್ಪ ಸೇರಿಸಿ ಮಗುಚಿ, ತಟ್ಟೆಗೆ ವರ್ಗಾಯಿಸಿ. ಬಿಸಿಯಿರುವಾಗಲೇ ಸಣ್ಣ ಉಂಡೆ ಕಟ್ಟಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.