ADVERTISEMENT

ಬೆಬಿಂಕಾ...ಗೋವಾದ ಸಿಹಿ–ಸವಿ ಪದರು

ಎಸ್.ರಶ್ಮಿ
Published 28 ಅಕ್ಟೋಬರ್ 2023, 23:32 IST
Last Updated 28 ಅಕ್ಟೋಬರ್ 2023, 23:32 IST
ಗೋವಾದ ಸಿಹಿರಾಣಿ ಬೆಬಿಂಕಾ
ಗೋವಾದ ಸಿಹಿರಾಣಿ ಬೆಬಿಂಕಾ   

‘ಗೋವಾಕ್ಕ ಹೋದ್ರ ಬೆಬಿಂಕಾ ತಿನಸ್ತೀನಿ. ಮಸ್ತ್‌ ಇರ್ತದ...’ ಅಂತ ಗೆಳತಿ ಗೌರಿ ಜಿಗಜಿನ್ನಿ ಕಣ್ಮುಚ್ಚಿ ಅದರ ಸ್ವಾದವನ್ನು ನೆನಪಿಸಕೊಂಡೇ ಹೇಳಿದ್ದಳು. ಅಷ್ಟೇ ನೆಪ ಸಾಕಿತ್ತು, ಗೋವಾದೆಡೆ ಪ್ರಯಾಣ ಬೆಳೆಸಲು. ನಾಲ್ವರು ಜೀವದ ಗೆಳತಿಯರು ಗೋವಾದತ್ತ ಪಯಣ ಬೆಳೆಸಿದ್ದೆವು.

ಬಾಗಾ ಬೀಚ್‌ ಬಳಿ ಟ್ಯಾಕ್ಸಿ ಡ್ರೈವರ್‌ನನ್ನು ಮಾತಾಡಿಸುವಾಗ ಕೇಳಿದ್ದೆ: ‘ಬೆಬಿಂಕಾ ಎಲ್ಲಿ ಸಿಗಬಹುದು?’

‘ಯಾವುದಾದರೂ ಲೋಕಲ್ ಬೇಕರಿಗೆ ಹೋಗಿ ವಿಚಾರಿಸಿ. ನಿಮಗೆ ಅದೃಷ್ಟವಿದ್ದರೆ ಸಿಗುವುದು’ ಅಂದರು. ಮರುದಿನ ಹನ್ನೊಂದೂವರೆ ಹೊತ್ತಿಗೆ ಹೋಗುವಾಗಲೇ ಅದು ಖಾಲಿಯಾಗಿತ್ತು. ಮರಳುವಾಗ ಒಂದೇ ಒಂದು ಸ್ಲೈಸ್‌ ಸಿಕ್ಕಿತಲ್ಲ. ನಾವು ನಾಲ್ವರೂ ಗೆಳತಿಯರು, ಒಂದೊಂದು ಚಮಚ ಎತ್ತಿಕೊಂಡೆವು.

ADVERTISEMENT

ನೋಡಲು ಅಂಥ ಆಕರ್ಷಕವಾಗಿಯೇನೂ ಕಾಣಲಿಲ್ಲ. ಬರ್ಫಿಯ ತುಂಡೊಂದು ಇದ್ದಂತಿತ್ತು. ಆದರೆ ಬೆಲ್ಲದ ಕಡುಕಂದು, ತಿಳಿಕಂದು, ಹಾಲ್ಕೆನೆಯ ಬಿಳುಪು, ಬೆಳ್ಮೋಡದ ಬೆಳ್ಳಿಬಿಳುಪಿನ ಪದರು.. ಹೀಗೆ ಪದರುಗಳು ಒಂದಕ್ಕೊಂದು ಎರಡು ಹಂತಗಳಲ್ಲಿ ಅಂಟಿಕೊಂಡಿದ್ದವು.

ನೋಡಿದೊಡನೆ ಬಾಗಾ ಬೀಚ್‌ನಲ್ಲಿ ಕಂಡಿದ್ದ ಎಲ್ಲ ಚರ್ಮಗಳ ಶೇಡುಗಳೂ ಇಲ್ಲಿದ್ದವು. ಒಮ್ಮೆ ಚಮಚದಿಂದಲೇ ಕತ್ತರಿಸಿದೊಡನೆ ಅದರ ಹತ್ತಿಯಂತಹ ಮೃದುತ್ವ ಅರಿವಾಯಿತು.

ಬಾಯಿಗಿಟ್ಟರೆ ... ಆಹಹಾ... ಆಹಹಾ.. ಆ ಸೆಕೆಯಲ್ಲಿಯೂ ತಂಗಾಳಿ ಸೂಸಿದಂತೆ. ಬಾಯಿಗೆ ಮೊದಲು ತಾಕುವುದೇ ಬೆಲ್ಲದ ಸವಿ. ಕ್ಯಾರಮಲ್‌ ಸಿಹಿ, ನಂತರ ಕೊಬ್ಬರಿ ಹಾಲಿನ ಮಂದ ಸವಿ, ಜೊತೆಗೆ ಮೊಟ್ಟೆಯ ಹಳದಿ ಭಾಗದ ಸಣ್ಣದೊಂದು ಫ್ಲೇವರ್‌ ಅಷ್ಟೆ. ಅದೆಲ್ಲವೂ ಬಾಯೊಳಗೆ ಕರಗುತ್ತಿದೆ. ಪ್ರತಿಪದರು ಕರಗಿದಾಗಲೂ ಅನನ್ಯ ಸವಿ, ತಿಳಿಯಾದ ಸಿಹಿ.

ಗೋವಾ ಅಂದರೆ ಹಳೆ ಚರ್ಚು, ಬಿಳೆ ಚರ್ಚು, ಸಮುದ್ರ ತೀರ, ಬಿಳಿ ಮರಳು, ಹಸಿರು ನೀರು, ಬಿಳಿ ಚರ್ಮ, ಕಂದು ಚರ್ಮ, ಕ್ರೂಸು, ಬಿಯರು, ಕುಡಿತ, ಕುಣಿತ... ಇಷ್ಟೆಲ್ಲ ನೆನಪಾಗುವ ನಮಗೆ, ಬೆಬಿಂಕಾ ಬಾಯಿಗಿಟ್ಟಾಗ ಅದೆಲ್ಲವೂ ಮರೆತೇಹೋಗಿತ್ತು.

ಪೋರ್ಚುಗಲ್ಲರ ಈ ಸಿಹಿಯು ಭಾರತೀಯ ಸವಿ ಹೊತ್ತು ಶತಮಾನಗಳು ಕಳೆದರೂ ಯಾವೊಂದು ಹೊಸತನಕ್ಕೂ ಒಗ್ಗಿಕೊಳ್ಳದೆ, ತನ್ನದೇ ಆದ ಸಾಂಪ್ರದಾಯಿಕ ಸ್ವಾದ ಉಳಿಸಿಕೊಂಡಿರುವುದು ಮಾತ್ರ ಸೋಜಿಗ.

ಗೋವಾದ ಸಿಹಿರಾಣಿ ಬೆಬಿಂಕಾ

ಬೆಬಿಂಕಾ ಹೆಸರು ಬಂದದ್ದು ಹೀಗೆ...

ಪೋರ್ಚುಗಲ್‌ನಿಂದ ಬಂದ ನನ್‌ಗಳಲ್ಲಿ ಬೆಬೆಕಾ ನನ್‌ ಅವರೂ ಒಬ್ಬರು. ಅವರ ಗೌರವಾರ್ಥ ಈ ಹೆಸರು ಬಂದಿದೆ. ಕಾರಣ, ಈ ಖಾದ್ಯವನ್ನು ಬೆಬೆಕಾ ಎಂಬ ನನ್‌ ಇಲ್ಲಿಯವರಿಗೆ ಮಾಡಲು ಕಲಿಸಿದ್ದು. ನನ್‌ಗಳು ತಮ್ಮ ವಸ್ತ್ರಗಳಿಗೆ ಗಂಜಿ ಹಾಕಲು ಮೊಟ್ಟೆಯ ಬಿಳಿಭಾಗವನ್ನು ಬಳಸುತ್ತಿದ್ದರು. ಉಳಿದ ಹಳದಿ ಭಾಗವನ್ನೇನು ಮಾಡುವುದು ಎಂದಾಗ, ಬೆಬೆಕಾ ಆ ಹಳದಿ ಭಾಗಕ್ಕೆ ಹಿಟ್ಟು ಬೆರೆಸಿ, ತೆಂಗಿನ ಹಾಲು, ಬೆಲ್ಲದ ಪಾಕದೊಂದಿಗೆ ಬೇಯಿಸಿ ಈ ಸಿಹಿ ಖಾದ್ಯ ಮಾಡಿಕೊಡುತ್ತಿದ್ದರು.

ಗಿಣ್ಣದ ಒಡೆಯನ್ನು ಹೋಲುತ್ತಿದ್ದರೂ, ವಿಶೇಷ ರುಚಿ ಬರುತ್ತ ಇದ್ದಿದ್ದು ಕಾಯಿಹಾಲಿನಿಂದ, ಬೆಲ್ಲದ ಪಾಕದಿಂದ. ಅತಿ ಸಂಯಮ ಮತ್ತು ಬಹಳ ಸಮಯ ಬೇಡುವ ಈ ಖಾದ್ಯ ತಯಾರಿಕೆ ಬಲು ನಾಜೂಕು.

ಒಂದು ಟ್ರೇ ತುಂಬ ಸಾಂಪ್ರದಾಯಿಕ ಪದ್ಧತಿಯಲ್ಲಿ ಬೆಬಿಂಕಾ ತಯಾರಿಸಲು ಕನಿಷ್ಠವೆಂದರೂ ನಾಲ್ಕು ಗಂಟೆ
ಬೇಕು. ಪ್ರತಿಸಲವೂ ಪ್ರತಿ ಪದರು ಹಾಕುವಾಗಲೂ ಹಿತವಾಗಿ ಓವನ್‌ನಲ್ಲಿ ಬೇಯಿಸಬೇಕು. ಮೊದಲು ಏಳು, ಹದಿನಾರು ಪದರುಗಳಲ್ಲಿ ಬೇಯಿಸುತ್ತಿದ್ದ ಬೆಬಿಂಕಾ ಈಗ ಹತ್ತು ಪದರುಗಳಿಗೆ ಇಳಿದಿದೆ. ಇದನ್ನು ವೆನಿಲಾ ಐಸ್‌ಕ್ರೀಮ್‌ ಜೊತೆಗೆ ಸರ್ವ್‌ ಮಾಡುತ್ತಾರೆ.

ಬೆಲ್ಲ ತೋಯುವಷ್ಟೆ ನೀರು ಹಾಕಿ ಪಾಕ ಮಾಡಿಟ್ಟುಕೊಳ್ಳುತ್ತಾರೆ. ನಂತರ ಕಾಯಿತುರಿ ಹಿಂಡಿ, ಹಾಲು ಮಾಡಿಟ್ಟುಕೊಳ್ಳುತ್ತಾರೆ. ಆ ಹಾಲು ದೋಸೆಹಿಟ್ಟಿನ ಹದಕ್ಕೆ ಬರುವಷ್ಟು ಗೋಧಿ ಅಥವಾ ಮೈದಾಹಿಟ್ಟನ್ನು ಹಾಕಿ ಕಲಕಿಕೊಳ್ಳುತ್ತಾರೆ. ಗಂಟಿಲ್ಲದಂತೆ ಈ ಹಿಟ್ಟನ್ನು ಸೋಸಿಕೊಳ್ಳುತ್ತಾರೆ. ನಂತರ ಇನ್ನೊಂದು ಪಾತ್ರೆಯಲ್ಲಿ ಮೊಟ್ಟೆಯ ಹಳದಿ ಭಾಗವನ್ನು ಬೀಟ್‌ ಮಾಡಿ, ಅದನ್ನೂ ಹಿಟ್ಟಿನ ಹದಕ್ಕೆ ತರುತ್ತಾರೆ. ಕಾಯಿಹಾಲಿನ ಜೊತೆಗೆ ಇದನ್ನೂ ಬೆರೆಸುತ್ತಾರೆ.

ಮತ್ತೆ ಒಲೆಯ ಮೇಲೆ ಮಡಕೆ ಇರಿಸಿ, ಅದರ ಅರ್ಧದಷ್ಟು ಮರಳು ಹಾಕಿ, ಆ ಮರಳು ಕಾದಮೇಲೆ ಬೆಬಿಂಕಾದ ಮಿಶ್ರಣವನ್ನು ಮೊದಲ ಪದರುಕ್ಕೆ ತುಪ್ಪ ಸವರಿ ಹಾಕುತ್ತಾರೆ. ಆ ಮಡಕೆಯ ಮೇಲೆ ಸುಡುಕೆಂಡದ ಇನ್ನೊಂದು ಮಡಕೆ ಇಟ್ಟು ಬೇಯಿಸುತ್ತಾರೆ. 20–25 ನಿಮಿಷ ಬೇಯಿಸಿದಾಗ ಕೇಕಿನ ಹದಕ್ಕೆ ಬಂದಿರುತ್ತದೆ. ಹಾಗೆ ಬಂದಿರುವಾಗಲೇ ಮೇಲಿನ ಪದರುಕ್ಕೆ ತುಪ್ಪ ಸವರಿ ಮತ್ತೊಂದು ಪದರು ಬೆಬಿಂಕಾ ಮಿಶ್ರಣ ಸುರಿಯುತ್ತಾರೆ. ಮತ್ತೆ ಮುಚ್ಚಿಡುತ್ತಾರೆ. ಹೀಗೆ ಎರಡನೆಯ ಪದರು ಕೇಕಿನ ಹದಕ್ಕೆ ಬರುವಾಗ, ಮೊದಲ ಪದರು ತನ್ನ ಬಣ್ಣ ಕಳೆದುಕೊಂಡು ಕಂದು ಬಣ್ಣಕ್ಕೆ ತಿರುಗಿರುತ್ತದೆ. ಕೊನೆಯ ಪದರುಿಗೆ ಬರುವ ಹೊತ್ತಿಗೆ ಬಣ್ಣದ ಶೇಡುಗಳೆಲ್ಲ ಇದೇ ಖಾದ್ಯದಲ್ಲಿ ಕಂಡುಬರುತ್ತವೆ.

ಬೆಬಿಂಕಾ ಮಿಶ್ರಣವನ್ನು ಎರಡು–ಮೂರು ಭಾಗಗಳಲ್ಲಿ ವಿಂಗಡಿಸಿಕೊಂಡು ಕ್ಯಾರಮೆಲ್‌ ಮಿಶ್ರಣವನ್ನು ಹಾಕುತ್ತಾರೆ. ಇದರಿಂದಾಗಿಯೇ ಕಂದು ಮತ್ತು ಕಡುಕಂದು ಬಣ್ಣ ಬರುವುದು ಸಾಧ್ಯವಾಗುತ್ತದೆ.

ಬೆಬಿಂಕಾದ ಪ್ರತಿ ಪದರುವೂ ಗೋವಾದ ಬಹುಸಂಸ್ಕೃತಿಯನ್ನು ಸಂಕೇತಿಸುವಂತಿದೆ. ಒಮ್ಮೆ ಕ್ಯಾರಮೆಲ್‌ ಮಿಶ್ರಣವನ್ನು ತಯಾರಿಸುವಾಗ ಪೋರ್ಚುಗಲ್‌ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ. ಕಾಯಿಹಾಲನ್ನು ಹಾಕುವಾಗ ಸ್ಥಳೀಯ ಕೊಂಕಣಿಗರ ಸಂಸ್ಕೃತಿಯನ್ನು. ಮೊಟ್ಟೆಯ ಹಳದಿ ಭಾಗ, ಇವೆರಡೂ ಸಂಸ್ಕೃತಿಗಳನ್ನು ಬೆಸೆಯುವ ಕೆಲಸ ಮಾಡುತ್ತದೆ. ಸದ್ಯ ಬೆಲ್ಲದಲ್ಲಿ ಬೆಬಿಂಕಾ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಎಲ್ಲರೂ ಸಕ್ಕರೆಯನ್ನೇ ಬಳಸುತ್ತಾರೆ.

ಸಕ್ಕರೆ ಅಥವಾ ಬೆಲ್ಲ ಎರಡೂ ಕಾಳಜಿ ಬೇಡುವಂಥವು. ಅವುಗಳ ವಿಷಯದಲ್ಲಿ ಸಣ್ಣ ನಿರ್ಲಕ್ಷ್ಯವೂ ಸುಟ್ಟವಾಸನೆ ಆವರಿಸಿಕೊಳ್ಳುವಂತೆ ಮಾಡುತ್ತದೆ. ಈ ಹಿಟ್ಟಿನೊಂದಿಗೆ ಏಲಕ್ಕಿ ಪುಡಿ ಬೆರೆತುಹೋದ ಮೇಲೆ ಹಿತವಾದ ಪರಿಮಳ. ಅಲ್ಲಲ್ಲಿ ಮನದನ್ನೆಯ ಕೆನ್ನೆ ಮೇಲಿನ ಕರಿ ಮಚ್ಚೆಯಂತೆ ಕಾಣಿಸಿಕೊಳ್ಳುವ ಏಲಕ್ಕಿ ಪುಡಿ ಬೆಬಿಂಕಾಗೆ ಮಾಧುರ್ಯ ನೀಡುತ್ತದೆ. ಈ ತಿಂಡಿ ಗೋವಾದ ಸಿಹಿತಿನಿಸುಗಳ ರಾಣಿ ಎಂಬ ಖ್ಯಾತಿಯನ್ನೂ ಪಡೆದಿದೆ.

ಮಧುರ ನೆನಪುಗಳಿಗೆ, ಮದಿರೆಯ ಮೋಹಕ್ಕೆ, ಸಾಗರದ ಸೆಳೆತಕ್ಕೆ ಗೋವಾ ಕಡೆ ಪಯಣಿಸುವವರು ಒಮ್ಮೆ ಬೆಬಿಂಕಾ ತಿಂದರೆ ಮತ್ತೆ ಮತ್ತೆ ಆ ರುಚಿಗಾಗಿ ಅಲ್ಲಿನ ಬೇಕರಿಗಳನ್ನೂ ಸುತ್ತು ಹಾಕುವರು.

ಗೋವಾ ಬೀಚ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.