ADVERTISEMENT

Recipe | ತರಹೇವಾರಿ ತರಕಾರಿ ತಿನಿಸು

ಜಾನಕಿ ಎಸ್.
Published 28 ಜನವರಿ 2023, 2:51 IST
Last Updated 28 ಜನವರಿ 2023, 2:51 IST
ಕ್ಯಾಬೇಜ್ ವಡಪ್ಪೆ
ಕ್ಯಾಬೇಜ್ ವಡಪ್ಪೆ   

ಸೀಜನ್ ಬಂತೆಂದರೆ ದೊಡ್ಡಗಾತ್ರದ ಕ್ಯಾಬೇಜ್, ಕುಂಬಳಕಾಯಿ ಕಡಿಮೆ ದರದಲ್ಲಿ ಸಿಗುತ್ತದೆ. ಹಾಗಿದ್ದಾಗ ಇವೆಲ್ಲವನ್ನೂ ಬಳಸಿ ಕೇವಲ ಪಲ್ಯ ಸಾಂಬಾರ್ ಮಾಡಿ ಖಾಲಿ ಮಾಡಲು ಸಾಧ್ಯವಿಲ್ಲ. ಬೆಳಗಿನ ತಿಂಡಿ ಮಾಡಲು ಇಂತಹ ತರಕಾರಿ ಬಳಸಿದರೆ ರುಚಿ ಜೊತೆಗೆ ಆರೋಗ್ಯ ಒಟ್ಟಿಗೆ ಸಿಗುತ್ತದೆ. ಇಂಥ ವಿಶಿಷ್ಟ ಖಾದ್ಯಗಳ ‌ರೆಸಿಪಿಯನ್ನು ಪರಿಚಯಿಸಿದ್ದಾರೆ ಜಾನಕಿ ಎಸ್.

ಕ್ಯಾಬೇಜ್ ವಡಪ್ಪೆ

ಬೇಕಾಗುವ ಪದಾರ್ಥಗಳು: ಸಣ್ಣಗೆ ಕತ್ತರಿಸಿದ ಕ್ಯಾಬೇಜ್ 1 ದೊಡ್ಡ ಬೌಲ್, ಹಸಿಮೆಣಸು 2, ಈರುಳ್ಳಿ 2, ಕೊತ್ತಂಬರಿ ಸೊಪ್ಪು ಸ್ವಲ್ಪ, ಮೊಸರು ಒಂದು ಸೌಟು, ಅಕ್ಕಿ ಹಿಟ್ಟು ಒಂದು ಬಟ್ಟಲು, ಎಣ್ಣೆ.

ಮಾಡುವ ವಿಧಾನ: ಎಲ್ಲಾ ಪದಾರ್ಥಗಳನ್ನು ಉಪ್ಪು ಹಾಕಿ ಚೆನ್ನಾಗಿ ಕಲೆಸಬೇಕು. ಅದಕ್ಕೆ ಅಕ್ಕಿ ಹಿಟ್ಟು ಸ್ವಲ್ಪ ಸ್ವಲ್ಪ ಸೇರಿಸಿ ಕಲಸಿ ಅರ್ಧ ತಾಸು ಬಿಡಬೇಕು. ಒಂದು ಮುದ್ದೆಯಷ್ಟು ಕಲಸಿದ ಹಿಟ್ಟನ್ನು ತೆಗೆದುಕೊಂಡು ತೆಳುವಾಗಿ ಹೋಳಿಗೆ ಲಟ್ಟಿಸುವ ಹಾಳೆಯಮೇಲೆ ತಟ್ಟಿ ತವದ ಮೇಲೆ ಹಾಕಿ. ಪೇಪರ್ ತೆಗೆದು ಎಣ್ಣೆ ಬಿಟ್ಟು ಎರಡು ಕಡೆ ಬೇಯಿಸಿ. ರುಚಿಕರ ವಡಪ್ಪೆ ರೆಡಿ .

ಕಬ್ಬಿನ ಹಾಲು ಹಲ್ವ (ಮಣ್ಣಿ)

ADVERTISEMENT

ಬೇಕಾಗುವ ಪದಾರ್ಥಗಳು: ಕಬ್ಬಿನ ಹಾಲು ಅರ್ಧ ಲೀಟರ್, ಅಕ್ಕಿ ಒಂದು ಕಪ್, ಏಲಕ್ಕಿ 1-2, ತುಪ್ಪ ಸ್ವಲ್ಪ, ಬೆಲ್ಲ ಸ್ವಲ್ಪ.

ಮಾಡುವ ವಿಧಾನ: ಅಕ್ಕಿಯನ್ನು ತೊಳೆದು ಸ್ವಲ್ಪ ನೀರಿನಲ್ಲಿ 2 ಗಂಟೆ ನೆನೆಸಿ ಇಟ್ಟು ಸ್ವಲ್ಪ ಕಬ್ಬಿನ ರಸ ಸೇರಿಸಿ. ಏಲಕ್ಕಿ ಹಾಕಿ ನುಣ್ಣಗೆ ರುಬ್ಬಬೇಕು. ದಪ್ಪ ಬಾಣಲೆಗೆ ಮಿಶ್ರಣವನ್ನು ಹಾಕಿ ಇನ್ನಷ್ಟು ಕಬ್ಬಿನ ರಸ ಸೇರಿಸಿ. ಬೆಲ್ಲ ಸ್ವಲ್ಪ ಸೇರಿಸಿ ತಳ ಬಿಡುವವರೆಗೆ ಕಾಯಿಸಿ. ಬೆಂದ ನಂತರ ತುಪ್ಪ ಸವರಿದ ಪ್ಲೇಟ್‌ಗೆ ಸುರವಿ ಸಮನಾಗಿ ಹರಡ ಬೇಕು.ತಣ್ಣಗಾದಮೇಲೆ ಬೇಕಾದ ಆಕಾರಕ್ಕೆ ಕಟ್ ಮಾಡಿದರೆ ರುಚಿಯಾದ ಹಲ್ವ ರೆಡಿ.

ಸಿಹಿ ಕುಂಬಳಕಾಯಿ ಇಡ್ಲಿ

ಬೇಕಾಗುವ ಪದಾರ್ಥಗಳು: ತುರಿದ ಸಿಹಿ ಕುಂಬಳಕಾಯಿ ಒಂದು ದೊಡ್ಡ ಬೌಲ್, ಇಡ್ಲಿ ರವೆ 11/2 ಕಪ್, ಮೊಸರು 1 ಸೌಟು, ಒಗ್ಗರಣೆಗೆ ಎಣ್ಣೆ ಸಾಸಿವೆ ಕರಿಬೇವು ಹಸಿಮೆಣಸು ಒಂದೆರಡು, ರುಚಿಗೆ ಉಪ್ಪು.
ಮಾಡುವ ವಿಧಾನ: ರವೆ ಸ್ವಲ್ಪ ಹುರಿದುಕೊಳ್ಳಿ. ಒಗ್ಗರಣೆಗೆ ಎಣ್ಣೆ ಹಾಕಿ ಸಾಸಿವೆ ಕರಿಬೇವು ಹಸಿಮೆಣಸು ಸೇರಿಸಿ ಕಾಯಿಸಿ ನಂತರ ಒಲೆಯಿಂದ ಇಳಿಸಿ, ರವೆ ಚೆನ್ನಾಗಿ ತೊಳೆದು ನೀರು ಬಸಿದು ಮೊಸರು , ಕುಂಬಳಕಾಯಿ ತುರಿ ಎಲ್ಲಾ ಸೇರಿಸಿ ಕಲಸಿ ಒಂದು ತಾಸು ನೆನೆಯಲು ಬಿಡಬೇಕು. ಇಡ್ಲಿ ಅಚ್ಚಿಗೆ ಹಾಕಿ 15 ನಿಮಿಷ ಬೇಯಿಸಿದರೆ ಸಾರು ಅಥವಾ ಚಟ್ನಿ ಯೊಂದಿಗೆ ಇಡ್ಲಿ ಸವಿಯಲು ಸಿದ್ಧ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.