ADVERTISEMENT

ರಸಸ್ವಾದ | ಮೇಕೆ ಮಾಂಸದ ಖಾದ್ಯ

ಧರ್ಮೇಂದ್ರ ಎಸ್‌.ದೊಡ್ಡಮಗ್ಗೆ
Published 20 ಜುಲೈ 2024, 1:06 IST
Last Updated 20 ಜುಲೈ 2024, 1:06 IST
<div class="paragraphs"><p>ಮೇಕೆ ಮಾಂಸದ ಖಾದ್ಯ</p></div>

ಮೇಕೆ ಮಾಂಸದ ಖಾದ್ಯ

   

ಮೇಕೆ ಮಾಂಸದ ವಿವಿಧ ಖಾದ್ಯಗಳ ತಯಾರಿ ಹೇಗೆ ಎನ್ನುವ ಮಾಹಿತಿ ಇಲ್ಲಿದೆ

ಮೇಕೆ ಕಾಲಿನ ಸೂಪ್‌

ಬೇಕಾಗುವ ಸಾಮಗ್ರಿಗಳು: ಮೇಕೆ ಕಾಲು 3, ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಚಮಚ, ಕೊತ್ತಂಬರಿ ಸ್ವಲ್ಪ, ಪುದೀನ ಸ್ವಲ್ಪ, ಹಸಿ ಮೆಣಸಿನಕಾಯಿ 2, ಕಾಳು ಮೆಣಸಿನ ಪುಡಿ 1/4 ಚಮಚ, ಜೀರಿಗೆ ಪುಡಿ 1/4 ಚಮಚ, ಈರುಳ್ಳಿ 1, ಟೊಮೆಟೊ 1, ಎಣ್ಣೆ, ತುಪ್ಪ, ಸಾಸಿವೆ, ಉಪ್ಪು.

ADVERTISEMENT

ತಯಾರಿಸುವ ವಿಧಾನ: ಎಣ್ಣೆ ಮತ್ತು ತುಪ್ಪವನ್ನು ಸಮ ಪ್ರಮಾಣದಲ್ಲಿ ಹಾಕಿ ಕಾದ ನಂತರ ಸಾಸಿವೆ ಸಿಡಸಿ, ಈರುಳ್ಳಿ, ಹಸಿ ಮೆಣಸಿನಕಾಯಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಟೊಮೆಟೊ, ಮೇಕೆಕಾಲು, ಜೀರಿಗೆ ಪುಡಿ, ಕಾಳು ಮೆಣಸಿನ ಪುಡಿ, ಕೊತ್ತಂಬರಿ, ಪುದೀನ, ಉಪ್ಪನ್ನು ಹಾಕಿ ಫ್ರೈ ಮಾಡಿ ನಂತರ ನೀರು ಸೇರಿಸಿ ಸ್ವಲ್ಪ ಬೇಯಿಸಿದ ತರುವಾಯ ಕುಕ್ಕರ್ ಮುಚ್ಚಳ ಮುಚ್ಚಿ 15 ವಿಷಲ್ ಹಾಕಿಸಿ.

ಮಟನ್ ಬಿರಿಯಾನಿ

ಬೇಕಾಗುವ ಸಾಮಗ್ರಿಗಳು: ಮೇಕೆ ಮಾಂಸ ಅರ್ಧ ಕೆ.ಜಿ, ಸೋನಾ ಮಸೂರಿ ಅಕ್ಕಿ 1/4 ಕೆ.ಜಿ, ಬಾಸುಮತಿ ಅಕ್ಕಿ 1/4 ಕೆ.ಜಿ, ಶುಂಠಿ - ಬೆಳ್ಳುಳ್ಳಿ ಪೇಸ್ಟ್ 2 ಚಮಚ, ಕೊತ್ತಂಬರಿ, ಪುದೀನ ಸೊಪ್ಪು, ಹಸಿಮೆಣಸಿನಕಾಯಿ 15, ಮೊಸರು 2 ಚಮಚ, ಖಾರದಪುಡಿ 2 ಚಮಚ, ಧನಿಯಾಪುಡಿ 1 ಚಮಚ, ಅರಿಶಿನ ಪುಡಿ ಸ್ವಲ್ಪ, ಬಿರಿಯಾನಿ ಮಸಾಲೆ (ಮನೆಯಲ್ಲಿ ತಯಾರಿಸಿದ್ದು) 2 ಚಮಚ, ಪತ್ರೆ 2 ಎಸಳು, ಗೋಡಂಬಿ 10, ಕಾಳು ಮೆಣಸು(ಪೆಪ್ಪರ್) 20, ಏಲಕ್ಕಿ 2, ಲವಂಗ 5, ಚಕ್ಕೆ 2 ಇಂಚು ಉದ್ದದ್ದು, ಪಲಾವ್ ಎಲೆ 2, ಮೊರಾಠಿ ಮೊಗ್ಗು 2, ಈರುಳ್ಳಿ 5, ಟೊಮ್ಯಾಟೊ 3, ಎಣ್ಣೆ, ತುಪ್ಪ(ನಂದಿನಿ), ಸಾಸಿವೆ, ಉಪ್ಪು ರುಚಿಗೆ ತಕ್ಕಷ್ಟು.
ತಯಾರಿಸುವ ವಿಧಾನ: ಮಾಂಸಕ್ಕೆ ಅರಿಶಿನ ಪುಡಿ, ಖಾರದಪುಡಿ, ನೀರು, ಸ್ವಲ್ಪ ಉಪ್ಪನ್ನು ಬೆರೆಸಿ ಕುಕ್ಕರ್‌ನಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಿ.
• ಈರುಳ್ಳಿ, ಹಸಿಮೆಣಸಿನಕಾಯಿ, ಟೊಮ್ಯಾಟೊ (ದಪ್ಪದಪ್ಪವಾಗಿ) ಕತ್ತರಿಸಿಟ್ಟುಕೊಳ್ಳಿ.
• ಕೊತ್ತಂಬರಿ ಮತ್ತು ಪುದೀನಗಳನ್ನು ರುಬ್ಬಿಟ್ಟುಕೊಳ್ಳಿ.
• ಅಗಲವಾದ ತೆರೆದ ಪಾತ್ರೆಗೆ ಎಣ್ಣೆ ಮತ್ತು ತುಪ್ಪ ಸಮ ಪ್ರಮಾಣದಲ್ಲಿ ಹಾಕಿ ಕಾದ ನಂತರ ಸಾಸಿವೆ ಸಿಡಸಿ ಚಕ್ಕೆ, ಲವಂಗ, ಮೆಣಸು, ಏಲಕ್ಕಿ, ಪತ್ರೆ, ಪಲಾವ್ ಎಲೆ, ಮೊರಾಠಿ ಮೊಗ್ಗು, ಹಸಿಮೆಣಸಿನಕಾಯಿ, ಗೋಡಂಬಿ, ಈರುಳ್ಳಿ ಹಾಕಿ ಕಂದು ಬಣ್ಣ ಬರುವರೆಗೆ ಫ್ರೈ ಮಾಡಿದ ನಂತರ ಬೆಂದ ಮಾಂಸ, ಶುಂಠಿ - ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಬಿರಿಯಾನಿ ಮಸಾಲೆ, ಖಾರದಪುಡಿ, ಧನಿಯಾಪುಡಿ, ಅರಿಶಿನ ಪುಡಿ, ರುಬ್ಬಿದ ಕೊತ್ತಂಬರಿ ಮತ್ತು ಪುದೀನ, ಮೊಸರು ಹಾಕಿ ಹಸಿವಾಸನೆ ಹೋಗುವ ತನಕ ಫ್ರೈ ಮಾಡಿದ ನಂತರ ಟೊಮೆಟೊ ಹಾಕಿ ಸ್ವಲ್ಪ ಫ್ರೈ ಮಾಡಿ, ಒಂದಕ್ಕೆ ಎರಡಕ್ಕಿಂತ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ನೀರನ್ನು ಹಾಕಿ (ಮಾಂಸ ಬೇಯಿಸಿದ ನೀರನ್ನು ಬಳಸಿಕೊಳ್ಳಿ). ಅಕ್ಕಿಯನ್ನು ಈ ಮಿಶ್ರಣಕ್ಕೆ ಸೇರಿಸಿ ರುಚಿ ನೋಡಿ ಕಡಿಮೆಯಿದ್ದನ್ನು ಸೇರಿಸಿ. ಅಕ್ಕಿ ಮುಕ್ಕಾಲು ಭಾಗ ಬೆಂದಾಗ ಕತ್ತರಿಸಿದ ಕೊತ್ತಂಬರಿ ಮತ್ತು ಪುದೀನವನ್ನು ಉದುರಿಸಿ ಮುಚ್ಚಳ ಮುಚ್ಚಿ ಪಾತ್ರೆಯನ್ನು ತವಾದ ಮೇಲೆ ಬೇಯಲು ಇಡಿ. ಒಂದು ಪಾತ್ರೆಯಲ್ಲಿ ಬಿಸಿನೀರನ್ನು ಕಾಯಿಸಿ ಮುಚ್ಚಳದ ಮೇಲೆ ಬಿರಿಯಾನಿ ಬೇಯುವ ತನಕ ಇಡಿ ಬೆಂದ ನಂತರ ಮುಚ್ಚಳ ತೆಗೆದು ಚೆನ್ನಾಗಿ ಮಿಕ್ಸ್ ಮಾಡಿ. 

ಮೇಕೆ ತಲೆ ಮಾಂಸದ ಸಾರು

ಬೇಕಾಗುವ ಸಾಮಗ್ರಿಗಳು: ಮೇಕೆ ತಲೆಮಾಂಸ 1 ಕೆ.ಜಿ, ಶುಂಠಿ 3 ಇಂಚು, ಬೆಳ್ಳುಳ್ಳಿ 3 ಹುಂಡೆ, ಕೊತ್ತಂಬರಿ ಸೊಪ್ಪು ಸ್ವಲ್ಪ, ಪುದೀನಾ ಸೊಪ್ಪು ಸ್ವಲ್ಪ, ಕಸೂರಿ ಮೇಥಿ 1 ಚಮಚ, ಧನಿಯಾ ಪುಡಿ 2 ಚಮಚ, ಖಾರದಪುಡಿ 2 ಚಮಚ, ಅರಿಶಿನ ಪುಡಿ ಸ್ವಲ್ಪ, ಕಾಳುಮೆಣಸು 10, ಲವಂಗ 5, ಚಕ್ಕೆ 2 ಇಂಚು ಉದ್ದದ್ದು, ಗಸೆಗಸೆ ಸ್ವಲ್ಪ, ಜಾಯಿಕಾಯಿ ಸ್ವಲ್ಪ, ಹುರಿಗಡಲೆ 1 ಚಮಚ, ಈರುಳ್ಳಿ 4, ಟೊಮ್ಯಾಟೊ 3, ಕಾಯಿ 1/2 ಹೋಳು, ಸಾಸಿವೆ, ಎಣ್ಣೆ, ತುಪ್ಪ, ಉಪ್ಪು.

ತಯಾರಿಸುವ ವಿಧಾನ: ಈರುಳ್ಳಿ ಖಾರಕ್ಕೆ : ಈರುಳ್ಳಿ, ಕೊತ್ತಂಬರಿ ಸೊಪ್ಪು, ಪುದೀನಾ, ಅರಿಶಿನ ಪುಡಿ, ಶುಂಠಿ, ಬೆಳ್ಳುಳ್ಳಿಗೆ ಸ್ವಲ ನೀರು ಹಾಕಿ ರುಬ್ಬಿಟ್ಟುಕೊಳ್ಳಿ.
• ಮಸಾಲೆಗೆ: ಟೊಮೆಟೊ, ಧನಿಯಾಪುಡಿ, ಖಾರದಪುಡಿಗೆ, ಕಾಯಿ, ಜಾಯಿಕಾಯಿ, ಹುರಿಗಡಲೆ, ಗಸೆಗಸೆ, ಕಾಳುಮೆಣಸು, ಲವಂಗ, ಚಕ್ಕೆಗೆ ನೀರು ಹಾಕಿ ರುಬ್ಬಿಟ್ಟುಕೊಳ್ಳಿ.
• ಕುಕ್ಕರ್‌ಗೆ ಎಣ್ಣೆ ಮತ್ತು ತುಪ್ಪ ಸಮ ಪ್ರಮಾಣದಲ್ಲಿ ಹಾಕಿ ಸಾಸಿವೆ ಸಿಡಸಿ ಮಾಂಸಕ್ಕೆ ಉಪ್ಪು ಹಿಡಿಯುವ ತನಕ ಫ್ರೈ ಮಾಡಿದ ನಂತರ ಈರುಳ್ಳಿ ಖಾರ ಮಿಶ್ರಣ ಹಾಕಿ ಸ್ವಲ್ಪ ಪ್ರಮಾಣದಲ್ಲಿ ನೀರು ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ ಮೂರು ವಿಷಲ್ ಹಾಕಿಸಿ, ಮುಚ್ಚಳ ತೆಗೆದು ಮಸಾಲೆ ಹಾಕಿ ಚೆನ್ನಾಗಿ ಬೇಯಿಸಿ, ಬೆಂದ ನಂತರ ಕಸೂರಿಮೇಥಿ ಉದುರಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.