ADVERTISEMENT

ನಳಪಾಕ | ದೇಸಿ ಅಕ್ಕಿ ತಳಿಗಳ ಖಾದ್ಯ ವೈವಿಧ್ಯ

ಶ್ರೀನಿಧಿ ಅಡಿಗ
Published 25 ನವೆಂಬರ್ 2022, 19:30 IST
Last Updated 25 ನವೆಂಬರ್ 2022, 19:30 IST
ಮುಲ್ಲಂಕಿಮಾ ಅಕ್ಕಿಯ ಮಶ್ರೂಮ್ ರಿಸೊಟ್ಟೊ
ಮುಲ್ಲಂಕಿಮಾ ಅಕ್ಕಿಯ ಮಶ್ರೂಮ್ ರಿಸೊಟ್ಟೊ   

ಕಣ್ಮರೆಯಾಗಿರುವ ಕೆಲವು ದೇಸಿ ಅಕ್ಕಿಯ ತಳಿಗಳು ಒಮ್ಮೊಮ್ಮೆ ಕೃಷಿ ಮೇಳದಲ್ಲೋ, ಆಹಾರ ಪ್ರದರ್ಶನದಲ್ಲೋ ಕಾಣಿಸುತ್ತವೆ. ಔಷಧೀಯ ಗುಣವಿರುವ ಇಂಥ ತಳಿಯ ಅಕ್ಕಿಗಳಿಂದ ರುಚಿಕಟ್ಟಾದ, ವೈವಿಧ್ಯಮಯ ಸಸ್ಯಾಹಾರ ಮತ್ತು ಮಾಂಸಹಾರಗಳನ್ನು ತಯಾರಿಸಬಹುದು.ರುಚಿಕಟ್ಟಾದ ಯಾವ ಖಾದ್ಯಗಳನ್ನು ತಯಾರಿಸಬಹುದು ಎಂದು ಗ್ರೀನ್‌ ಪೀಸ್‌ ಇಂಡಿಯಾ ಸಂಸ್ಥೆಯ ಬಾಣಸಿಗರಾದ ರುತ್ವಿಕ್‌ ಅಜಿತ್‌ ಖಾಸ್ನಿಸ್‌ ಮತ್ತು ವಿಕಾಸ್‌ ಪಿ ಮಾನೆ ತೋರಿಸಿಕೊಟ್ಟಿದ್ದಾರೆ. ಅವುಗಳ ರೆಸಿಪಿಗಳನ್ನು ಶ್ರೀನಿಧಿ ಅಡಿಗ ಅವರು ಇಲ್ಲಿ ಪರಿಚಯಿಸಿದ್ದಾರೆ.

***

ಮುಲ್ಲಂಕಿಮಾ ಅಕ್ಕಿಯ ಮಶ್ರೂಮ್ ರಿಸೊಟ್ಟೊ
ಸುವಾಸನೆಭರಿತ ಬಿಳಿಬಣ್ಣದ ದಪ್ಪ ಅಕ್ಕಿ ಮುಲ್ಲಂಕಿಮಾ ಹೆಚ್ಚಾಗಿ ಕೇರಳದ ವಯನಾಡಿನಲ್ಲಿ ಸಿಗುತ್ತದೆ. ಇದು, ಪಾಯಸ, ಘೀ ರೈಸ್‌, ಇಟಾಲಿಯನ್‌ ರೆಸೆಟ್ಟೋ, ಚೈನೀಸ್‌ ಫ್ರೈಡ್‌ ರೈಸ್‌ಗಳಿಗೆ ಉತ್ತಮವಾಗಿ ಹೊಂದಿಕೊಳ್ಳುತ್ತದೆ. ಮಲ್‌ಬಾರ್‌ ಬಿರಿಯಾನಿಗೆ ಇದು ಹೇಳಿ ಮಾಡಿಸಿದ ಅಕ್ಕಿ. ಇದರಲ್ಲಿ ಹೆಚ್ಚಿನ ವಿಟಮಿನ್ ಎ ಅಂಶವಿರುವುದರಿಂದ ಮಕ್ಕಳಿಗೆ ಒಳ್ಳೆಯದು .

ADVERTISEMENT

ಬೇಕಾಗುವ ಪದಾರ್ಥಗಳು
4 ರಿಂದ 6 ಕಪ್ ವಿವಿಧ ವಿಧದ ತರಕಾರಿಗಳ ಸ್ಟಾಕ್‌ ಅಥವಾ ರಸ, ಎರಡು ಚಮಚ ಬೆಣ್ಣೆ, ಎರಡು ಕಪ್ ಬಟನ್ ಮಶ್ರೂಮ್‌ (ಸ್ವಚ್ಛಗೊಳಿಸಿ, ಅರ್ಧದಿಂದ ಒಂದು -ಇಂಚಿನ ತುಂಡುಗಳಾಗಿ ಕತ್ತರಿಸಿ ಇಟ್ಟುಕೊಳ್ಳಿ), ಕಾಲು ಕಪ್ ಸಣ್ಣಗೆ ಹೆಚ್ಚಿದ ಈರುಳ್ಳಿ, 5-6 ಬೆಳ್ಳುಳ್ಳಿಯ ಎಸಳು, ಒಂದು ಕಪ್ ಪಾಲ್ ತೊಂಡಿ ಅಥವಾ ಮುಲ್ಲಂಕಿಮಾ ಅಕ್ಕಿ, ಅರ್ಧ ಕಪ್ ಡ್ರೈ ಬಿಳಿ ವೈನ್, 1/3 ಕಪ್ ತಾಜಾ ಚೀಸ್‌, ಕೋಷರ್ ಉಪ್ಪು ಮತ್ತು ತಾಜಾ ಕರಿಮೆಣಸಿನ ಪುಡಿ, 2 ಚಮಚ ತಾಜಾ ಈರುಳ್ಳಿ ಸೊಪ್ಪು (ಸ್ಪ್ರಿಂಗ್‌ ಆನಿಯನ್‌)

ಮಾಡುವ ವಿಧಾನ: ‌‌ಒಂದು ಪಾನ್‌ನಲ್ಲಿ ಬೆಣ್ಣೆಯನ್ನು ಕರಗಿಸಿ. ಹೆಚ್ಚಿದ ಬೆಳ್ಳುಳ್ಳಿ, ಈರುಳ್ಳಿ ಸೇರಿಸಿ, ಹುರಿಯಬೇಕು. ಅದು ಸ್ವಲ್ಪ ಬಾಡಿದ ನಂತರ ಅಣಬೆಗಳನ್ನು ಸೇರಿಸಿ, 5 ನಿಮಿಷಗಳ ಕಾಲ ಹುರಿಯಬೇಕು. ಇದಕ್ಕೆ ಮುಲ್ಲಂಕಿಮಾ ಅಕ್ಕಿಯನ್ನು ಸೇರಿಸಿ, ಎಲ್ಲವೂ ಚೆನ್ನಾಗಿ ಬೆರೆಯುವಂತೆ ಸೌಟಿನಲ್ಲಿ ಆಗಾಗ ಮಗುಚುತ್ತಿರಬೇಕು. ಈಗ ಈ ಮಿಶ್ರಣಕ್ಕೆ ಬಿಳಿ ವೈನ್‌ ಸೇರಿಸಿ ಚೆನ್ನಾಗಿ ಕುದಿಸಬೇಕು. ನಂತರ ತೆಗೆದುಕೊಂಡಿರುವ ಅರ್ಧದಷ್ಟು ಭಾಗ ತರಕಾರಿ ರಸವನ್ನು ಈ ಮಿಶ್ರಣಕ್ಕೆ ಸೇರಿಸಿ, ಅನ್ನ ತಳಕ್ಕೆ ಹಿಡಿದುಕೊಳ್ಳದಂತೆ ಆಗಾಗ ಮಗುಚುತ್ತಾ ಇರಬೇಕು. ಈ ರಸವನ್ನು ಅನ್ನವು ಸರಿಯಾಗಿ ಹೀರಿಕೊಂಡ ನಂತರ ಇನ್ನುಳಿದ ತರಕಾರಿ ರಸ ಸೇರಿಸಬೇಕು. ಇದನ್ನು ಅನ್ನವು ಹೀರಿಕೊಳ್ಳುವವರೆಗೂ ತಿರುವಬೇಕು. ಇದು 25 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಅಕ್ಕಿ ಯನ್ನುತುಂಬಾ ಬೇಯಿಸಬಾರದು.

ಇದಕ್ಕೆ ತಾಜಾ ಪನೀರ್‌ ಬೆರೆಸಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಮತ್ತು ಮೆಣಸು ಸೇರಿಸಿ. ಕತ್ತರಿಸಿದ ತಾಜಾ ಈರುಳ್ಳಿ ಸೊಪ್ಪಿನೊಂದಿಗೆ ಅಲಂಕರಿಸಿ ಮತ್ತು ಬಡಿಸಿ.

***

ಕಪ್ಪು ಅಕ್ಕಿ ಪಾಯಸ
ವಿಟಮಿನ್‌ ಇ ಅಂಶ ಹೊಂದಿರುವ ಕಪ್ಪು ಅಕ್ಕಿ ಚರ್ಮ ಮತ್ತು ಕೂದಲಿಗೆ ಉತ್ತಮ. ಇದು ರಕ್ಕದೊತ್ತಡವನ್ನು ಸಮಸ್ಥಿತಿಯಲ್ಲಿಡುತ್ತದೆ. ಹೃದಯ ಸಂಬಂಧಿ ಸಮಸ್ಯೆ ಇರುವವರಿಗೆ ಹಾಗು ಮಧುಮೇಹಿಗಳಿಗೆ ಉತ್ತಮ ಆಹಾರ.

ಬೇಕಾಗುವ ಪದಾರ್ಥಗಳು:ಒಂದು ಕಪ್‌ ಕಪ್ಪು ಅಕ್ಕಿ, ಎರಡೂವರೆ ಕಪ್‌ ನೀರು, ಒಂದು ಲೀಟರ್‌ ಕೆನೆಭರಿತ ಹಾಲು, ನಾಲ್ಕು ಚಮಚ ಬೆಲ್ಲದ ಪುಡಿ ಅಥವಾ ರುಚಿಗೆ ತಕ್ಕಂತೆ, ಒಂದು ಚಮಚ ಏಲಕ್ಕಿ ಪುಡಿ, 10 ಗ್ರಾಂ ಬಾದಾಮಿ, 10 ಗ್ರಾಂ ಗೋಡಂಬಿ, 10 ಗ್ರಾಂ ಒಣ ದ್ರಾಕ್ಷಿ, ಒಂದು ಚಮದ ಹಸುವಿನ ತುಪ್ಪ.

ಮಾಡುವ ವಿಧಾನ: ಬಾಣಲೆಯಲ್ಲಿ ತುಪ್ಪ ಹಾಕಿ ಬಾದಾಮಿ, ಗೋಡಂಬಿ ಮತ್ತು ಒಣದ್ರಾಕ್ಷಿಗಳನ್ನು ಹುರಿದು ಇಟ್ಟುಕೊಳ್ಳಿ. ಒಂದು ಕಪ್‌ ಕಪ್ಪು ಅಕ್ಕಿಯನ್ನು ಎರಡೂವರೆ ಕಪ್ ನೀರಿನಲ್ಲಿ 15 ನಿಮಿಷ ನೆನೆಸಿ ಮತ್ತು ಅಕ್ಕಿಯನ್ನು ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸುವಾಗ ನೆನೆಸಲು ಬಳಸಿದ ನೀರನ್ನು ಬಳಸಿ. ದೊಡ್ಡ ಉರಿಯಲ್ಲಿ ಒಂದು ವಿಶಲ್‌, ಸಣ್ಣ ಉರಿಯಲ್ಲಿ ಒಂದು ವಿಶಲ್‌ ಬರುವವರೆಗೆ ಬೇಯಿಸಿ. ಮತ್ತೊಂದು ಪ್ಯಾನ್‌ಗೆ ಹಾಲನ್ನು ಹಾಕಿ ಅದನ್ನು ಮಧ್ಯಮ ಉರಿಯಲ್ಲಿ ಕಾಯಿಸಿ. ಹಾಲು ಬಿಸಿಯಾಗುತ್ತಿದ್ದಂತೆ ಬೆಲ್ಲದ ಪುಡಿಯನ್ನು ಸೇರಿಸಿ ಮತ್ತು ನಿಧಾನವಾಗಿ ಕುದಿಸಬೇಕು. ಹಾಲಿಗೆ ಈಗಾಗಲೇ ಬೇಯಿಸಿಕೊಂಡ ಅನ್ನ (ಅದರಲ್ಲಿ ಗಂಜಿಯ/ತೆಳಿ ಅಂಶ ಇದ್ದರೆ ಅದನ್ನೂ ಸೇರಿಸಿ), ಒಣ ಹಣ್ಣುಗಳು ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ ಮತ್ತು ಮಧ್ಯಮ ಉರಿಯಲ್ಲಿ ಕುದಿಸಿ. ಒಂದು ಸೌಟಿನಲ್ಲಿ ಈ ಮಿಶ್ರಣವನ್ನು ಆಗಾಗ ಕಲಕುತ್ತಿರಿ. ಹಾಲು ಕುದಿಯುತ್ತಿದ್ದಂತೆ ಈ ಮಿಶ್ರಣ ದಪ್ಪವಾಗಲು ಆರಂಭಿಸುತ್ತದೆ. ಸ್ವಲ್ಪ ಗಟ್ಟಿಯಾಗಿ ಪಾಯಸದ ಹದಕ್ಕೆ ಬಂದು, ಈ ಮಿಶ್ರಣದ ಬಣ್ಣವು ಚಾಕೊಲೇಟ್ ಬಣ್ಣಕ್ಕೆ ಬದಲಾದ ನಂತರ ಅದನ್ನು ನೀವು ಸ್ಟವ್‌ನಿಂದ ಇಳಿಸಬಹುದು.

ಪಾಯಸ ತಣ್ಣಗಾದ ಮೇಲೆ ಕೆಲವು ಗಂಟೆಗಳ ಕಾಲ ಫ್ರಿಡ್ಜ್‌ನಲ್ಲಿ ಇರಿಸಿದರೆ ರುಚಿಗಳು ಸರಿಯಾಗಿ ಹೊಂದಿಕೆ ಆಗುತ್ತವೆ. ಸವಿ ರುಚಿ ಪಾಯಸ ಸೇವನೆಗೆ ಸಿದ್ಧ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.