ಲೇಖಕರು: ಸುಷ್ಮಾ ಸವಸುದ್ದಿ
ಗೋಕಾಕ ಹೆಸರು ಕೇಳಿದ ತಕ್ಷಣ ಅದರ ಮುಂದೆ ‘ಫಾಲ್ಸ್’, ‘ಕರದಂಟು’ ಪದಗಳು ಅಪ್ರಯತ್ನಾಪೂರ್ವಕವಾಗಿ ಸೇರಿಕೊಂಡು ಬಿಡುತ್ತವೆ. ಗೋಕಾಕ ಜತೆಗೆ ಹೀಗೆ ಬಿಡಸಲಾರದಂತೆ ತಳಕು ಹಾಕಿಕೊಂಡ ಕರದಂಟಿಗೆ ಶತಮಾನಗಳ ಇತಿಹಾಸವಿದೆ. ಗೋಕಾಕಿನ ಅಜ್ಜ ಒಬ್ಬರು ಬೆಲ್ಲ, ತುಪ್ಪ, ಅಂಟು, ಒಣಹಣ್ಣು ಸೇರಿಸಿ ಚಕ್ಕೆ ರೀತಿಯ ಸಿಹಿ ಖಾದ್ಯ ತಯಾರಿಸಿ, ಸುತ್ತ ಊರಿನ ಜಾತ್ರೆಗಳಲ್ಲಿ ಮಾರಾಟ ಮಾಡ್ತಾ ಇದ್ದರಂತೆ. ಅವರ ಕೈ ರುಚಿಯ ಸ್ವಾದಕ್ಕೆ ಮರುಳಾದ ಜನ ಗೋಕಾಕ ಅಜ್ಜಾನ ಕರದಂಟಿಗೆ ಬೇಡಿಕೆಯನ್ನೂ ಹೆಚ್ಚಿಸಿದರು. ಹೀಗೆ ಗೋಕಾಕಿನ ಅಜ್ಜ ಆರಂಭಿಸಿದ ಕರದಂಟು ಇಂದು ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲೂ ಖ್ಯಾತಿ ಪಡೆದಿದೆ.
ನಿಸರ್ಗದತ್ತವಾಗಿ ಸಿಗುವ ಅಂಟನ್ನು ಬಳಸಿಕೊಂಡು ಈ ಖಾದ್ಯವನ್ನು ತಯಾರಿಸುವುದು ಇದರ ವಿಶೇಷ. ಅಂಟನ್ನು ಕರೆದು ಮಾಡುವುದರಿಂದ ಇದಕ್ಕೆ ‘ಕರದಂಟು’ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಬೆಲ್ಲ, ತುಪ್ಪ, ಒಣಹಣ್ಣುಗಳಂತಹ ಪೌಷ್ಟಿಕಾಂಶವಿರುವ ಪದಾರ್ಥಗಳನ್ನು ಬಳಸಿ ತಯಾರು ಮಾಡುವ ಈ ಖಾದ್ಯ ಬಾಣಂತಿಯರಿಗೆ, ಕ್ರೀಡಾಪಟುಗಳಿಗೆ, ಬೆಳೆಯುವ ಮಕ್ಕಳಿಗೆ ಉತ್ತಮ ಎಂದು ತಜ್ಞರಿಂದ ದೃಢಪಟ್ಟಿದೆ.
ಬೇಕಾಗುವ ಸಾಮಗ್ರಿಗಳು
ಅರ್ಧ ಕಪ್ ತುಪ್ಪ, ಅರ್ಧ ಕಪ್ ಒಣ ಕೊಬ್ಬರಿ, ಅರ್ಧ ಕಪ್ ಅಂಟು, ಮುಕ್ಕಾಲು ಕಪ್ ಗೋಡಂಬಿ, ಬಾದಾಮಿ, ಪಿಸ್ತಾ, ಒಣ ದ್ರಾಕ್ಷಿ, ಅಂಜೂರ, ಒಣ ಖರ್ಜೂರ, 1 ಕಪ್ ಬೆಲ್ಲ, ಅರ್ಧ ಕಪ್ ಅಂಜುರು ಹಣ್ಣು, ಸ್ವಲ್ಪ ಏಲಕ್ಕಿ, ಆಳ್ವಿ, ಗಸಗಸೆ
ತಯಾರಿಸುವ ವಿಧಾನ
ಒಂದು ಪಾತ್ರೆಯಲ್ಲಿ ತುರಿದ ಒಣ ಕೊಬ್ಬರಿಯನ್ನು ಹುರಿದುಕೊಳ್ಳಬೇಕು. ತುಪ್ಪವನ್ನು ಕುದಿಸಿ ಅದರಲ್ಲಿ ಅಂಟನ್ನು ಹುರಿದುಕೊಂಡು, ಅದನ್ನು ಹುರಿದಿಡಲಾದ ಒಣ ಕೊಬ್ಬರಿಗೆ ಸೇರಿಸಬೇಕು. ನಂತರ ಅದೇ ತುಪ್ಪದಲ್ಲಿ ಒಣ ಹಣ್ಣುಗಳಾದ ಗೋಡಂಬಿ, ಬಾದಾಮಿ, ಪಿಸ್ತಾ, ಒಣದ್ರಾಕ್ಷಿ, ಅಂಜೂರು, ಒಣ ಖರ್ಜೂರಗಳನ್ನು ಹುರಿದು, ಈ ಒಣ ಕೊಬ್ಬರಿ ತುರಿಗೆ ಸೇರಿಸಬೇಕು. ಏಲಕ್ಕಿ, ಆಳ್ವಿ, ಗಸಗಸೆಯನ್ನು ಪ್ರತ್ಯೇಕವಾಗಿ ಹುರಿದು, ಅವುಗಳನ್ನು ಕೊಬ್ಬರಿ, ಒಣ ಹಣ್ಣುಗಳೊಂದಿಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು.
ಒಂದು ಕಪ್ ಬೆಲ್ಲಕ್ಕೆ ಅರ್ಧ ಕಪ್ ನೀರು ಹಾಕಿ ಕಾಯಿಸಿ, ಬೆಲ್ಲವನ್ನು ಕರಗಿಸಬೇಕು. ಹುರಿದಿಟ್ಟುಕೊಂಡ ಪದಾರ್ಥಗಳ ಮಿಶ್ರಣಕ್ಕೆ ಕರಗಿರುವ ಬಿಸಿ ಬೆಲ್ಲವನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ, ಅದನ್ನು ತುಪ್ಪ ಸವರಿದ ಒಂದು ತಟ್ಟೆ ಅಥವಾ ಪಾತ್ರೆಗೆ ಹಾಕಬೇಕು. ಅರ್ಧ ಗಂಟೆಯ ನಂತರ ತೆಗೆದರೆ ಪಾತ್ರೆಯ ಆಕೃತಿಯ ಕರದಂಟು ತಯಾರಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.