ಈ ಕಾಲದಲ್ಲಿ ಜ್ವರ, ಶೀತ, ಒಣ ಕೆಮ್ಮು.. ಹೀಗೆ ಹಲವು ಆರೋಗ್ಯ ಸಮಸ್ಯೆಗಳು ಬಾಧಿಸುವುದು ಸಾಮಾನ್ಯ. ಇಂಥ ಆರೋಗ್ಯ ಸಮಸ್ಯೆಗಳನ್ನು ಅಲಕ್ಷಿಸಿದರೆ ವಿಪರೀತ ತೊಂದರೆಗೆ ಎಡೆಮಾಡಿಕೊಡುತ್ತದೆ. ಒಮ್ಮೊಮ್ಮೆ ಆಸ್ಪತ್ರೆಗೆ ದಾಖಲಾಗಬೇಕಾದ ಪರಿಸ್ಥಿತಿಯೂ ಬರಬಹುದು.
ಇಂಥ ಕಾಯಿಲೆಗಳ ನಿಯಂತ್ರಣಕ್ಕಾಗಿ ನಿತ್ಯದ ಆಹಾರದ ಜೊತೆ ಜೊತೆಗೆ, ರುಚಿ ರುಚಿಯಾದ ಕಷಾಯಗಳನ್ನು ಮಾಡಿಕೊಂಡು ಆಗಾಗ ಕುಡಿಯುತ್ತಿರಬೇಕು.
ಇದರಿಂದ ಆರೋಗ್ಯಕ್ಕೂ ಒಳ್ಳೆಯದು. ದೇಹದಲ್ಲಿ ರೋಗನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ. ಕಾಡುವ ಕಾಯಿಲೆಗಳು ಶಮನವಾಗಿ, ಹೊಸ ಕಾಯಿಲೆಗಳು ದೇಹ ಪ್ರವೇಶಿಸಿದಂತೆ ತಡೆಯುತ್ತವೆ. ನಿತ್ಯದ ಆಹಾರದೊಂದಿಗೆ ಸೇವಿಸಬಹುದಾದ ಕೆಲವು ಕಷಾಯಗಳ ರೆಸಿಪಿ ಇಲ್ಲಿದೆ.
ಮಜ್ಜಿಗೆ ಹುಲ್ಲಿನ ಕಷಾಯ
ಬೇಕಾಗುವ ಸಾಮಗ್ರಿಗಳು: ಮಜ್ಜಿಗೆ ಹುಲ್ಲು – 3 ರಿಂದ 4 ಎಲೆ, ಕಾಳುಮೆಣಸು – 7 ರಿಂದ 8, ಹಸಿ ಶುಂಠಿ – ಅರ್ಧ ತುಂಡು, ಜೀರಿಗೆ – ಕಾಲು ಚಮಚ, ಬೆಲ್ಲದ ಪುಡಿ – ನಾಲ್ಕು ಚಮಚ.
ತಯಾರಿಸುವ ವಿಧಾನ: ಜೀರಿಗೆ, ಕಾಳುಮೆಣಸು, ಶುಂಠಿ ಜಜ್ಜಿ 3 ಲೋಟ ನೀರಿಗೆ ಸೇರಿಸಿ. ಅದಕ್ಕೆ ಎಲೆ ಕತ್ತರಿಸಿ ಹಾಕಿ. ಕುದಿಯಲು ಒಲೆ ಮೇಲೆ ಇಡಿ. ಒಂದು ಕುದಿ ಬಂದ ಮೇಲೆ ಬೆಲ್ಲದ ಪುಡಿ ಸೇರಿಸಿ ಕುದಿಸಬೇಕು.10 ನಿಮಿಷ ಕುದಿಸಿದರೆ ಚೆನ್ನಾಗಿ ಮಜ್ಜಿಗೆ ಹುಲ್ಲಿನ ರಸ ಬಿಟ್ಟುಕೊಂಡು ಕಷಾಯ ತಯಾರಾಗುತ್ತದೆ.ಹಾಲು ಬಿಸಿ ಮಾಡಿ ಕಷಾಯಕ್ಕೆ ಸೇರಿಸಿಕೊಂಡು ಕುಡಿಯಲು ಬಹಳರುಚಿ . ಚಳಿಗಾಲದ ದಿನಗಳಲ್ಲಿ ವಾರಕ್ಕೊಮ್ಮೆ ಕುಡಿದರೆ ಒಳ್ಳೆಯದು.
ಕೆಂಪು ಚಂದನ ಕಷಾಯ
ಬೇಕಾಗುವ ಸಾಮಗ್ರಿಗಳು: ಕೆಂಪುಚಂದನ– ಒಂದು ತುಂಡು, ಹಾಲು – ಒಂದು ಲೋಟ, ಸಕ್ಕರೆ – ಒಂದು ಚಮಚ, ಸಾಣೆಕಲ್ಲು.
ತಯಾರಿಸುವ ವಿಧಾನ: ಒಂದು ಚಮಚ ಹಾಲನ್ನು ಸಾಣೆಕಲ್ಲಿನ ಮೇಲೆ ಹಾಕಿ ಚಂದನದಿಂದ ತೇಯ್ದು ದಪ್ಪಗಿನ ಗಂಧ ತಯಾರಿಸಬೇಕು. ತೇಯ್ದಗಂಧವನ್ನು ಉಳಿದ ಹಾಲಿನಲ್ಲಿ ಹಾಕಿ ಸರಿಯಾಗಿ ಕಲೆಸಿ. ಸಕ್ಕರೆ ಸೇರಿಸಿ ಬಿಸಿ ಮಾಡಿ. ಈಸುಗಂಧವಿರುವ ಹಾಲು ಕುಡಿಯಲು ಹಿತವಾಗಿರುತ್ತದೆ. ಬಾಯಿ ಹುಣ್ಣಿನಿಂದ ಬಳಲುವವರಿಗೆ ಈ ಕಷಾಯ ಉತ್ತಮ.
ಒಣದ್ರಾಕ್ಷಿ ಉತ್ತುತ್ತೆ ಕಷಾಯ
ಬೇಕಾಗುವ ಸಾಮಗ್ರಿಗಳು: ಒಣದ್ರಾಕ್ಷಿ – 15, ಉತ್ತುತ್ತೆ – 2, ಕೆಂಪು ಕಲ್ಲುಸಕ್ಕರೆ – 1ರಿಂದ 2 ಹರಳು, ನೀರು – 2 ರಿಂದ 3 ಲೋಟ
ತಯಾರಿಸುವ ವಿಧಾನ: ದ್ರಾಕ್ಷಿ, ಉತ್ತುತ್ತೆಯನ್ನು ಚೆನ್ನಾಗಿ ತೊಳೆದು ನೀರಿನಲ್ಲಿ ನೆನೆಸಿ. ಅದಕ್ಕೆ ಕಲ್ಲುಸಕ್ಕರೆ ಹಾಕಿ 15 ನಿಮಿಷ ಕುದಿಸಿದರೆ ಕಷಾಯ ರೆಡಿ. ದಿನದಲ್ಲಿ ಎರಡು ಮೂರು ಬಾರಿ ಇದನ್ನು ಕುಡಿಯುವುದರಿಂದ ಒಣ ಕೆಮ್ಮು ಕಡಿಮೆ ಆಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.