ಅಡುಗೆ ಮಾಡುವಾಗ ರುಚಿ ಜೊತೆಗೆ ಪೌಷ್ಟಿಕತೆ ಹೆಚ್ಚಿಸುವ ಪದಾರ್ಥಗಳು ಇದ್ದರೆ ಅದು ಪರಿಪೂರ್ಣ. ಊಟಕ್ಕೆ ಉಪ್ಪಿನಕಾಯಿ ಎಷ್ಟು ಮುಖ್ಯವೋ ಅಷ್ಟೇ ಕೋಸಂಬರಿಯೂ ಮುಖ್ಯ. ಸಾಮಾನ್ಯವಾಗಿ ಮಾಡುವ ಕೋಸಂಬರಿಗಿಂತ ವಿಭಿನ್ನವಾಗಿ ಒಣಹಣ್ಣುಗಳು ಮತ್ತು ಬೀಜಗಳಿಂದ ಮಾಡಿದ ಕೋಸಂಬರಿ ವಿಧಾನವನ್ನು ಇಲ್ಲಿ ತಿಳಿಸಲಾಗಿದೆ.
ಒಣದ್ರಾಕ್ಷಿ ಕೋಸಂಬರಿ
ಬೇಕಾಗುವ ಪದಾರ್ಥಗಳು: ಒಣ ದ್ರಾಕ್ಷಿ ಒಂದು ಕಪ್, ಹೆಸರುಬೇಳೆ 1/4 ಕಪ್, ಕಾಯಿ ತುರಿ 2 ಚಮಚ, ಕ್ಯಾರೆಟ್ 1, ಉಪ್ಪು,ಲಿಂಬು,ಸಕ್ಕರೆ, ಹಸಿಮೆಣಸು 1, ಉದ್ದಿನಬೇಳೆ, ಸಾಸಿವೆ ಕಾಳು, ಎಣ್ಣೆ.
ಮಾಡುವ ವಿಧಾನ: ಹೆಸರುಬೇಳೆ ನೆನಸಿ ಕುದಿ ನೀರಿನಲ್ಲಿ ಬೇಯಿಸಿ ಬಸಿದು , ಅದಕ್ಕೆ ಹುಳಿ ಸಿಹಿ ಇರುವ ಒಣದ್ರಾಕ್ಷಿ ತೊಳೆದು ಹಾಕಬೇಕು.ಸಣ್ಣಗೆ ಹೆಚ್ಚಿದ ಕ್ಯಾರೆಟ್ ಸೇರಿಸಬೇಕು.ಒಗ್ಗರಣೆಗೆ ಮೇಲಿನ ಪದಾರ್ಥಗಳನ್ನು ಹಾಕಿ ಉಪ್ಪು ಹುಳಿ, ಚಿಟಿಕೆ ಸಕ್ಕರೆ ಕಾಯಿತುರಿ ಸೇರಿಸಿ ಚೆನ್ನಾಗಿ ಕಲಸಿದರೆ ದ್ರಾಕ್ಷಿ ಕೋಸಂಬರಿ ಸಿದ್ಧ.
ಗೋಡಂಬಿ ಕೋಸಂಬರಿ
ಬೇಕಾಗುವ ಪದಾರ್ಥಗಳು : ಗೋಡಂಬಿ 1 ಕಪ್, ಸ್ವೀಟ್ ಕಾರ್ನ್ 1/4 ಕಪ್, ತೆಂಗಿನಕಾಯಿ ತುರಿ 2 ಚಮಚ, ಹಸಿಮೆಣಸು 1, ಉಪ್ಪು ಸ್ವಲ್ಪ, ಲಿಂಬು ಹುಳಿ ಸ್ವಲ್ಪ , ಉದ್ದಿನ ಬೇಳೆ, ಸಾಸಿವೆ ಕಾಳು 1 ಚಮಚ. ಕೊತ್ತಂಬರಿ ಸೊಪ್ಪು ಸ್ವಲ್ಪ, ಒಗ್ಗರಣೆಗೆ 1 ಚಮಚ ಎಣ್ಣೆ.
ಮಾಡುವ ವಿಧಾನ : ಗೋಡಂಬಿಯನ್ನು 4 ತಾಸು ಚಿಟಿಕೆ ಉಪ್ಪು ಹಾಕಿ ನೆನಸಿ ಇಡಬೇಕು. ನೀರು ಬಸಿದು ಚೂರುಗಳನ್ನಾಗಿ ಮಾಡಬೇಕು. ಒಗ್ಗರಣೆಗೆ ಒಂದು ಚಮಚ ಎಣ್ಣೆ ಹಾಕಿ ಉದ್ದಿನ ಬೇಳೆ, ಸಾಸಿವೆ ಕಾಳು, ಹಸಿಮೆಣಸು ಹಾಕಿ , ಚಿಟಿಪಿಟಿ ಆದಮೇಲೆ ಕಾರ್ನ್, ಗೋಡಂಬಿ, ಲಿಂಬು ರಸ, ಕಾಯಿತುರಿ , ಉಪ್ಪು, ಕೊತ್ತಂಬರಿ ಸೊಪ್ಪು ಎಲ್ಲಾ ಸೇರಿಸಿ ಕಲಸಿದರೆ ಗೋಡಂಬಿ ಕೋಸಂಬರಿ ತಯಾರಾಗುವುದು.
ಶೇಂಗಾ ಬೀಜದ ಕೋಸಂಬರಿ
ಬೇಕಾಗುವ ಪದಾರ್ಥಗಳು: ಶೇಂಗಾ 1 ಕಪ್, ಈರುಳ್ಳಿ 1, ಹಸಿಮೆಣಸು1, ಕ್ಯಾರೆಟ್ 1, ಉಪ್ಪು , ಲಿಂಬು, ಉದ್ದಿನ ಬೇಳೆ, ಸಾಸಿವೆ, ಕೊತ್ತಂಬರಿ ಸೊಪ್ಪು ಸ್ವಲ್ಪ, ಚಿಟಿಕೆ ಅರಿಶಿಣ,ಖಾರದ ಪುಡಿ ಸ್ವಲ್ಪ.
ಮಾಡುವ ವಿಧಾನ: ಶೇಂಗಾ ಹುರಿದು ಸಿಪ್ಪೆ ಬಿಡಿಸಿ. ಒಗ್ಗರಣೆಗೆ ಎಣ್ಣೆ ಹಾಕಿ ಉದ್ದಿನಬೇಳೆ, ಸಾಸಿವೆ, ಹಸಿಮೆಣಸು, ಸ್ವಲ್ಪ ಖಾರದ ಪುಡಿ, ಅರಿಶಿಣ ಪುಡಿ ಹಾಕಿ ಒಗ್ಗರಣೆ ಕಾದಮೇಲೆ ಬಿಡಿಸಿಟ್ಟ ಶೇಂಗಾ, ಉಪ್ಪು, ಲಿಂಬು ಹುಳಿ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ಆರಿದ ಮಿಶ್ರಣಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಕಾಯಿತುರಿ ಹಾಕಿ ಸರಿಯಾಗಿ ಕಲಸಿದರೆ ರುಚಿಯಾದ ಕೋಸಂಬರಿ ತಯಾರಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.