ADVERTISEMENT

ರೆಸಿಪಿ | ಮಾವಿನ ಹಣ್ಣಿನಲ್ಲಿ ಬಗೆ ಬಗೆ ಖಾದ್ಯ

​ಪ್ರಜಾವಾಣಿ ವಾರ್ತೆ
Published 8 ಜೂನ್ 2024, 0:30 IST
Last Updated 8 ಜೂನ್ 2024, 0:30 IST
ಸೀಕರಣೆ
ಸೀಕರಣೆ   
ಉತ್ತರ ಕರ್ನಾಟಕ ಶೈಲಿಯ ಮಾವಿನ ಹಣ್ಣಿನ ರೆಸಿಪಿಗಳನ್ನು ನೀಡಿದ್ದಾರೆ ಕವಿತಾ ಪಾಟೀಲ್

ಮಾವಿನ ಹಣ್ಣಿನ ಸೀಕರಣೆ ಮತ್ತು ಜೋಳದ ಮುದ್ದಿ ಹೋಳಿಗೆ

ಬೇಕಾಗುವ ಸಾಮಗ್ರಿಗಳು: ಮಾವಿನಹಣ್ಣು, ಬಾಳೆಹಣ್ಣು, ಬೆಲ್ಲ, ಏಲಕ್ಕಿ, ಚಿಟಿಗೆ ಉಪ್ಪು ,ನೀರು, ಜೋಳದ ಹಿಟ್ಟು, ಗೋಧಿ ಹಿಟ್ಟು, ‌ಚಿಟಿಗೆ ಉಪ್ಪು, ನೀರು, ಎಣ್ಣೆ

ಸೀಕರಣೆ ಮಾಡುವ ವಿಧಾನ:  ಮೊದಲು ಐದರಿಂದ ಆರು ಮಾವಿನ ಹಣ್ಣುಗಳನ್ನು ತೊಳೆದಿಟ್ಟುಕೊಂಡು, ಕಾಲು ಕೆ.ಜಿಯಷ್ಟು ಬೆಲ್ಲವನ್ನು ನೀರಿನಲ್ಲಿ ನೆನೆಸಿಟ್ಟುಕೊಳ್ಳಬೇಕು. ನಂತರ ಮಾವಿನ ಹಣ್ಣುಗಳನ್ನು ಸೀಕರಣೆ ಮಾಡಲು ಹದವಾಗಿ ಕೈಯಿಂದ ಮೆತ್ತಗಾಗುವಂತೆ ಹಿಚುಕಿ, ಒಂದೊಂದಾಗೆ ಹಿಂಡಬೇಕು. ನಂತರ ನೆನೆಸಿಟ್ಟ ಬೆಲ್ಲವನ್ನು ಕರಗಿದ ನಂತರ ಹಿಂಡಿಟ್ಟ ಮಾವಿನ ಹಣ್ಣಿನ ರಸಕ್ಕೆ ಸೇರಿಸಬೇಕು. ಇದಾದ ನಂತರ ಎರಡು ಏಲಕ್ಕಿಯನ್ನು ಪುಡಿಮಾಡಿ ಹಾಕಿ ಮತ್ತೆ ಚಿಟಿಕೆಯಷ್ಟು ಉಪ್ಪು ಸೇರಿಸಬೇಕು. ಎರಡು ಅಥವಾ ಮೂರು ಬಾಳೆಹಣ್ಣನ್ನು ಹೆಚ್ಚಿ‌ ಸೇರಿಸಿಕೊಳ್ಳಬೇಕು. ಇಲ್ಲವೇ ಹಾಗೆ ಬಿಡಬಹುದು. ರಸಾಯನ ಗಟ್ಟಿ ಇದ್ದಲ್ಲಿ, ತುಸು ನೀರು ಸೇರಿಸಬಹುದು. 

ಜೋಳದ ಮುದ್ದಿ ಮಾಡುವ ವಿಧಾನ: ಒಂದು ಕಪ್ ಗೋಧಿ ಹಿಟ್ಟನ್ನು ಅರ್ಧ ಚಮಚ ಉಪ್ಪು ಮತ್ತೆ  ಒಂದು ಚಮಚ ಎಣ್ಣೆಯನ್ನು ಸೇರಿಸಿ ಮೊದಲು ಹೋಳಿಗೆ ಹಿಟ್ಟಿನ ಹದಕ್ಕೆ ಕಲಸಿಟ್ಟು ಮುಚ್ಚಿಡಬೇಕು ನಂತರ ಒಂದು ಪಾತ್ರೆಯಲ್ಲಿ ಒಂದು ಸಣ್ಣ ಲೋಟದಷ್ಟು ನೀರನ್ನು ಬಿಸಿಗಿಟ್ಟು ಅದು ಕುದಿಯಲು ಆರಂಭಿಸಿದಾಗ ಒಂದು ಕಪ್  ಜೋಳದ ಹಿಟ್ಟನ್ನು ಹಾಕಿ‌ ಮುದ್ದೆ ಮಾಡಿಟ್ಟುಕೊಳ್ಳಬೇಕು. ನಂತರ ಮುದ್ದೆಯನ್ನು ಹದವಾಗಿ ನಾದಿಕೊಂಡು ಚಿಕ್ಕ ಚಿಕ್ಕ ಉಂಡೆ ಮಾಡಿ ಗೋಧಿ ಹಿಟ್ಟಿನಲ್ಲಿ ಹೂರಣದ ರೀತಿ ತುಂಬಿಟ್ಟುಕೊಂಡು ಲಟ್ಟಿಸಿ ಎಣ್ಣೆಹಾಕಿ ಬೇಯಿಸಿದರೆ ಜೋಳದ ಮುದ್ದಿ ಹೋಳಿಗೆ ಸೀಕರಣೆ ಜತೆ ತಿನ್ನಲು ಸಿದ್ಧ. 

ADVERTISEMENT
ತಾಲಿಪಟ್ಟು

ತಾಲಿಪಟ್ಟು

ಬೇಕಾಗುವ ಸಾಮಗ್ರಿಗಳು:  ಗೋಧಿ ಹಿಟ್ಟು ಜೋಳದ ಹಿಟ್ಟು ಅಕ್ಕಿ ಹಿಟ್ಟು ಹಸಿಕಡಲೆ ಹಿಟ್ಟು‌ ಈರುಳ್ಳಿ ಮೆಣಸಿನಕಾಯಿ ಕರಿಬೇವಿನ ಸೊಪ್ಪು ಕೊತ್ತಂಬರಿ ಸೊಪ್ಪು ಜೀರಿಗೆ ಓಂಕಾಳು ದನಿಯಾ ಪುಡಿ ಅರಿಶಿನ ಉಪ್ಪು ಎಣ್ಣೆ ಮತ್ರು ನೀರು.  

ಮಾಡುವ ವಿಧಾನ: ಒಂದು ಪಾತ್ರೆಗೆ ಒಂದು ಕಪ್ ಗೋಧಿ ಹಿಟ್ಟು ಒಂದು ಅರ್ಧ ಕಪ್ ಅಕ್ಕಿ ಹಿಟ್ಟು ಎರಡು ಚಮಚದಷ್ಟು ಜೋಳದ ಹಿಟ್ಟು ಮತ್ತು ಎರಡು ಚಮಚದಷ್ಟು ಹಸಿ ಕಡಲೆ‌ ಹಿಟ್ಟನ್ನು‌ ಹಾಕಿ‌ ಎಲ್ಲವನ್ನು‌ ಸರಿಯಾಗಿ‌ ಮಿಶ್ರಣ ಮಾಡಬೇಕು. ನಂತರ ಎರಡು ಹೆಚ್ಚಿದ ಈರುಳ್ಳಿ ನಾಲ್ಕರಿಂದ ಐದು ಮೆಣಸಿನಕಾಯಿ ಒಂದು ಕಡ್ಡಿ ಕರಿಬೇವು ಅರ್ಧ ಹಿಡಿಯಷ್ಟು‌ ಕೊತ್ತಂಬರಿ ಸೊಪ್ಪು  ಒಂದು ಕಪ್ ಮೆಂತೆಸೊಪ್ಪು ಅಥವಾ ಪಾಲಕ್‌ ಸೊಪ್ಪನ್ನು ಹಾಕಬೇಕು‌. ಚಮಚ ದನಿಯಾ‌ ಪುಡಿ ಅರ್ಧಚಮಚ ಅರಿಶನ ಮತ್ತು ರುಚಿಗೆ ತಕ್ಕಷ್ಟು‌ ಉಪ್ಪು ಹಾಕಿ ಸ್ವಲ್ಪ ಸ್ವಲ್ಪನೆ ನೀರು ಹಾಕಿಕೊಳ್ಳುತ್ತ ನಾದಿಕೊಳ್ಳಬೇಕು. ನಾದಿದ ಹಿಟ್ಟನ್ನು  ಸಣ್ಣ ಸಣ್ಣ ಉಂಡೆ ಮಾಡಿ‌ಕೊಳ್ಳಬೇಕು. ನಂತರ ಒಂದು ಬಟರ್ ಪೇಪರ್‌ ಮೇಲೆ ಎಣ್ಣೆ ಹಚ್ಚಿ ಒಂದೊಂದಾಗೆ ತಾಲಿಪಟ್ಟನ್ನು‌ ಕೈಯಿಂದ ತಟ್ಟಬೇಕು.  ತವಾ ಬಿಸಿಗಿಟ್ಟು‌ ತಾಲಿಪಟ್ಟನ್ನು  ಎಣ್ಣೆ ಹಚ್ಚಿ ಬೇಯಿಸಿಕೊಂಡರೆ ಮೊಸರಿನ ಜೊತೆ ತಿನ್ನಬಹುದು. 

ಮಾವಿನ ಕಾಯಿ ಚಟ್ನಿ

ಮಾವಿನಕಾಯಿ ಚಟ್ನಿ

ಬೇಕಾಗುವ ಸಾಮಗ್ರಿಗಳು: ಮಾವಿನಕಾಯಿ ಒಂದು ಕಪ್‌ ನೆನೆಸಿದ ಕಡಲೆ ಬೇಳೆ ನಾಲ್ಕು  ಬೆಳ್ಳುಳ್ಳಿ ಬೇಳೆ ಎರಡು ಮೆನಸಿನಕಾಯಿ ಕರಿಬೇವು ಕೊತ್ತಂಬರಿ‌ ಸೊಪ್ಪು ಜೀರಿಗೆ ಉಪ್ಪು ಮತ್ತು ಬೆಲ್ಲ.

ಮಾಡುವ ವಿಧಾನ: ಮೊದಲಿಗೆ ಅರ್ಧ ಮಾವಿನ ಕಾಯಿಯನ್ನು ಚಿಕ್ಕದಾಗಿ ಹೆಚ್ಚಿಕೊಂಡಿಟ್ಟುಕೊಳ್ಳಬೇಕು  ನಂತರ ಮಿಕ್ಸಿ ಜಾರ್‌ ಗೆ‌ ಒಂದು ಬಟ್ಟಲು ನೆನೆಸಿದ ಕಡಲೆಬೇಳೆ‌ ಹೆಚ್ಚಿಟ್ಟುಕೊಂಡ ಮಾವಿನಕಾಯಿ‌ ಹೋಳುಗಳನ್ನು ಹಾಕಿ ಅದಕ್ಕೆ ಮೂರರಿಂದ ನಾಲ್ಕು ಬೆಳ್ಳುಳ್ಳಿ ಬೇಳೆ ಅರ್ದ‌ ಚಮಚ‌ ಜೀರಿಗೆ‌ ಸ್ವಲ್ಪ ಕರಿಬೇವು‌ ಮತ್ತು ಕೊತ್ತಂಬರಿ ಸೊಪ್ಪು ಎರಡು ಹಸಿಮೆಣಸಿನ ಕಾಯಿ ಹಾಗೂ ರುಚಿಗೆ ತಕ್ಕಷ್ಟು‌ಉಪ್ಪು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು. ಅಗತ್ಯ ಬಿದ್ದರೆ ಸ್ವಲ್ಪ ಪ್ರಮಾಣದ ನೀರು‌ ಸೇರಿಸಿ‌ ಮತ್ತೊಂದು ಬಾರಿ‌ ರುಬ್ಬಿ ಬಟ್ಟಲಿಗೆ ತೆಗೆದಿಟ್ಟುಕೊಂಡರೆ ಮಾವಿನಕಾಯಿ ಚಟ್ನಿ ತಿನ್ನಲು ಸಿದ್ದವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.