ದಿಢೀರ್ ಗೋಧಿ ದೋಸೆ
ಬೇಕಾಗುವ ಸಾಮಗ್ರಿಗಳು: ಗೋಧಿಹಿಟ್ಟು – 2 ಕಪ್, ಚಿರೋಟಿ ರವೆ – 1/2 ಕಪ್, ಈರುಳ್ಳಿ – 2 ಚಿಕ್ಕದಾಗಿ ಹೆಚ್ಚಿದ್ದು, ಜೀರಿಗೆ – 1 ಟೀ ಚಮಚ, ಹಸಿಮೆಣಸಿನಕಾಯಿ – 2 ಚಿಕ್ಕದಾಗಿ ಹೆಚ್ಚಿದ್ದು, ಹಸಿ ಶುಂಠಿ – 1 ಟೀ ಚಮಚ, ಕರಿಬೇವು – 2 ಚಮಚ, ಕೊತ್ತಂಬರಿ ಸೊಪ್ಪು – 2 ಟೇಬಲ್ ಚಮಚ, ಮೊಸರು – 1 ಕಪ್, ಉಪ್ಪು – ರುಚಿಗೆ, ನೀರು – 4 ಕಪ್, ಕಾಯಿಸಲು – ಎಣ್ಣೆ/ ತುಪ್ಪ.
ತಯಾರಿಸುವ ವಿಧಾನ: ಬೌಲ್‌ನಲ್ಲಿ ಗೋಧಿಹಿಟ್ಟು, ಚಿರೋಟಿ ರವೆ, ಈರುಳ್ಳಿ, ಜೀರಿಗೆ, ಹಸಿಮೆಣಸಿನಕಾಯಿ, ಹಸಿ ಶುಂಠಿ, ಕರಿಬೇವು, ಕೊತ್ತಂಬರಿ ಸೊಪ್ಪು, ಮೊಸರು, ರುಚಿಗೆ ತಕ್ಕಷ್ಟು ಉಪ್ಪು, ನೀರನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಹತ್ತು ನಿಮಿಷ ಮುಚ್ಚಳ ಮುಚ್ಚಿ ಹಾಗೇ ಬಿಡಿ. ದೋಸೆ ತವಾವನ್ನು ಬಿಸಿ ಮಾಡಿ, ಹಿಟ್ಟನ್ನು ತವಾದ ಮೇಲೆ ಹರಡಿ.
ದೋಸೆಯ ಮೇಲೆ ತುಪ್ಪ ಅಥವಾ ಎಣ್ಣೆಯನ್ನು ಹಾಕಿ. ಮಧ್ಯಮ ಉರಿಯಲ್ಲಿ ಗರಿಗರಿಯಾಗುವವರೆಗೆ ಬೇಯಿಸಿ. ನಂತರ ಇನ್ನೊಂದು ಬದಿಯನ್ನೂ ತಿರುಗಿಸಿ ಬೇಯಿಸಿ. ರುಚಿಕರವಾದ ದೋಸೆಯನ್ನು ಚಟ್ನಿ, ಸಾಂಬಾರ್ ಜೊತೆಗೆ ಸವಿಯಿರಿ.
ಮಿಶ್ರ ಬೇಳೆಗಳ ದೋಸೆ
ಬೇಕಾಗುವ ಸಾಮಗ್ರಿಗಳು: ಉದ್ದಿನಬೇಳೆ – 1 ಕಪ್, ಹೆಸರುಬೇಳೆ – 1 ಕಪ್, ಮಸೂರ್ ದಾಲ್ – 1/2 ಕಪ್, ಹಸಿರು ಹೆಸರುಬೇಳೆ – 1/2 ಕಪ್, ಹಸಿಮೆಣಸಿನಕಾಯಿ – 2, ಕೊತ್ತಂಬರಿ ಸೊಪ್ಪು – ಒಂದು ಹಿಡಿ, ಉಪ್ಪು –ರುಚಿಗೆ ತಕ್ಕಷ್ಟು, ಕಾಯಿಸಲು – ಎಣ್ಣೆ/ ತುಪ್ಪ.
ತಯಾರಿಸುವ ವಿಧಾನ: ಉದ್ದಿನಬೇಳೆ, ಹೆಸರುಬೇಳೆ, ಮಸೂರ್ ದಾಲ್, ಹಸಿರು ಹೆಸರುಬೇಳೆಯನ್ನು ಬೌಲ್‌ನಲ್ಲಿ ಹಾಕಿ. ಆರು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ನಂತರ ನೀರನ್ನು ತೆಗೆಯಿರಿ. ಮಿಕ್ಸಿಯಲ್ಲಿ ಬೇಳೆಗಳನ್ನು ಹಾಕಿ, ರುಬ್ಬಿಕೊಳ್ಳಲು ಬೇಕಾಗುವಷ್ಟು ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಹಿಟ್ಟನ್ನು ಬೌಲ್‌ಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
ಹಿಟ್ಟು ಮಸಾಲೆ ಹಿಟ್ಟಿನ ಹದವಿರಲಿ. ತವಾ ಬಿಸಿ ಮಾಡಿ, ಹಿಟ್ಟನ್ನು ತವಾದ ಮೇಲೆ ಎಷ್ಟು ತೆಳುವಾಗಿ ಸಾಧ್ಯವೋ ಅಷ್ಟು ತೆಳುವಾಗಿ ಹರಡಿ. ದೋಸೆಯ ಮೇಲೆ ತುಪ್ಪ/ ಎಣ್ಣೆಯನ್ನು ಹಾಕಿ. ದೋಸೆಯು ಗರಿಗರಿಯಾಗಿ ಬಣ್ಣ ಬದಲಾಗುವವರೆಗೆ ಬೇಯಿಸಿ. ರುಚಿಕರವಾದ ಮತ್ತು ಆರೋಗ್ಯಕರವಾದ ದೋಸೆಯನ್ನು ಚಟ್ನಿ, ಕರಿ, ಸಾಂಬಾರಿನೊಂದಿಗೆ ಸವಿಯಿರಿ.
ಈರುಳ್ಳಿ ಪನೀರ್ ಉತ್ತಪ್ಪಂ
ಬೇಕಾಗುವ ಸಾಮಗ್ರಿಗಳು: ದೋಸೆಹಿಟ್ಟು – 2 ಲೀಟರ್, ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ – 4, ಮಧ್ಯಮ ಗಾತ್ರದ ಕ್ಯಾರೆಟ್ ತುರಿ – 2, ಪನೀರ್ – 200 ಗ್ರಾಂ, ಕ್ಯಾಪ್ಸಿಕಂ – 1 ಚಿಕ್ಕದಾಗಿ ಹೆಚ್ಚಿದ್ದು, ಕೊತ್ತಂಬರಿ ಸೊಪ್ಪು – ಒಂದು ಹಿಡಿ, ಹಸಿಮೆಣಸಿನಕಾಯಿ– 4, ಹಸಿ ಶುಂಠಿ – 1 ಟೇಬಲ್ ಚಮಚ, ಕರಿಬೇವು – 5 ರಿಂದ 6, ಉಪ್ಪು – 1 ಟೀ ಚಮಚ, ಕಾಳುಮೆಣಸು – 1/2 ಟೀ ಚಮಚ, ಕಾಯಿಸಲು ತುಪ್ಪ/ ಎಣ್ಣೆ.
ತಯಾರಿಸುವ ವಿಧಾನ: ಬೌಲ್‌ಗೆ ಹೆಚ್ಚಿದ ಈರುಳ್ಳಿ, ಕ್ಯಾರೆಟ್ ತುರಿ, ತುರಿದ ಪನೀರ್, ಚಿಕ್ಕದಾಗಿ ಹೆಚ್ಚಿದ ಕ್ಯಾಪ್ಸಿಕಂ, ಒಂದು ಹಿಡಿ ಕೊತ್ತಂಬರಿ ಸೊಪ್ಪು, ಕತ್ತರಿಸಿದ ಹಸಿಮೆಣಸಿನಕಾಯಿ, ಹೆಚ್ಚಿದ ಹಸಿ ಶುಂಠಿ, ಚೂರು ಮಾಡಿದ ಕರಿಬೇವು, ಉಪ್ಪು, ಕಾಳುಮೆಣಸಿನ ಪುಡಿ ಇವು ಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
ತವಾವನ್ನು ಬಿಸಿ ಮಾಡಿ. ದೋಸೆಹಿಟ್ಟನ್ನು ದಪ್ಪವಾಗಿ ಹರಡಿ. ದೋಸೆಯ ಮೇಲೆ ಈರುಳ್ಳಿ, ಪನೀರ್ ಮಿಶ್ರಣವನ್ನು ಹಾಕಿ. ನಂತರ ತುಪ್ಪ/ಎಣ್ಣೆಯನ್ನು ಅದರ ಮೇಲೆ ಹಾಕಿ. 2–3 ನಿಮಿಷಗಳ ಕಾಲ ಮುಚ್ಚಳ ಮುಚ್ಚಿ ಬೇಯಿಸಿ. ನಂತರ ಮುಚ್ಚಳವನ್ನು ತೆಗೆದು ಇನ್ನೊಂದು ಬದಿಯನ್ನು ಒಂದು ನಿಮಿಷ ಬೇಯಿಸಿ. ರುಚಿಕರವಾದ ಈರುಳ್ಳಿ ಪನೀರ್ ಉತ್ತಪ್ಪಂ ತಯಾರಿಸಿ ಸವಿಯಿರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.