ವಿಟಮಿನ್ ’ಡಿ’ ಹೊಂದಿರುವ ಅಣಬೆ ಅಥವಾ ಮಶ್ರೂಮ್‌ನಿಂದ ಸೂಪು, ಸಾರು, ದೋಸೆ.. ಹೀಗೆ ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಬಹುದು. ಸುಲಭವಾಗಿ ಹಾಗೂ ಕಡಿಮೆ ಸಮಯದಲ್ಲಿ ಫಟಾಫಟ್ ಅಂತ ತಯಾರಿಸಬಹುದಾದ ಮೂರು ಮಶ್ರೂಮ್ ಖಾದ್ಯಗಳ ರೆಸಿಪಿಗಳನ್ನು ಇಲ್ಲಿ ಪರಿಚಯಿಸಿದ್ದಾರೆ ದೀಪಕ್ ಗೌಡ.
ಮಶ್ರೂಮ್ ಬಿರಿಯಾನಿ
ಬೇಕಾಗುವ ಸಾಮಗ್ರಿಗಳು: ಮಶ್ರೂಮ್ –ಎರಡು ಪ್ಯಾಕೆಟ್ (400 ಗ್ರಾಂ), ಅಕ್ಕಿ –ಅರ್ಧ ಕೆ.ಜಿ, ಸ್ಟಾರ್ ಮಸಾಲ ಹೂವು– 2, ಮರಾಠಿ ಮೊಗ್ಗು, ಶುಂಠಿ - ಬೆಳ್ಳುಳ್ಳಿ ಪೇಸ್ಟ್, ಕೊತ್ತಂಬರಿ ಸೊಪ್ಪು, ಪುದಿನ ಸೊಪ್ಪು, ಹಸಿ ಮೆಣಸಿನಕಾಯಿ – 10, ಕಾಳುಮೆಣಸು – 20, ಏಲಕ್ಕಿ – 2, ಲವಂಗ – 5, ಚಕ್ಕೆ – 2 ಇಂಚು ಉದ್ದದ್ದು, ಪಲಾವ್ ಎಲೆ – 2, ಮರಾಠಿ ಮೊಗ್ಗು – 2, ಕಸ್ತೂರಿ ಮೆಂತ್ಯ –ಒಂದು ಚಮಚ, ಈರುಳ್ಳಿ – 2, ಟೊಮೆಟೊ – 1, ಮೊಸರು –ನಾಲ್ಕು ಟೇಬಲ್ ಸ್ಪೂನ್, ಎಣ್ಣೆ –ನಾಲ್ಕು ಚಮಚ, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ: ಈರುಳ್ಳಿ, ಹಸಿಮೆಣಸಿನಕಾಯಿ, ಟೊಮೆಟೊ, ಕೊತ್ತಂಬರಿ ಮತ್ತು ಪುದಿನ ಕತ್ತರಿಸಿಟ್ಟುಕೊಳ್ಳಿ. ಚೆನ್ನಾಗಿ ತೊಳೆದ ಮಶ್ರೂಮ್, ನೀರು, ಅರಿಸಿನ ಪುಡಿ, ಸ್ವಲ್ಪ ಉಪ್ಪನ್ನು ಬೆರೆಸಿ ಕುಕರ್‌ನಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಿ. ಅಗಲವಾದ ತೆರೆದ ಪಾತ್ರೆಗೆ ಎಣ್ಣೆ ಮತ್ತು ತುಪ್ಪ ಸಮ ಪ್ರಮಾಣದಲ್ಲಿ ಹಾಕಿ. ಅದು ಬಿಸಿಯಾದ (ಕಾದ) ನಂತರ ಸಾಸಿವೆ ಸಿಡಿಸಿ ಚಕ್ಕೆ, ಲವಂಗ, ಪತ್ರೆ, ಪಲಾವ್ ಎಲೆ, ಮರಾಠಿ ಮೊಗ್ಗು, ಹಸಿ ಮೆಣಸಿನಕಾಯಿ, ಈರುಳ್ಳಿ ಹಾಕಿ ಕಂದು ಬಣ್ಣ ಬರುವರೆಗೆ ಹುರಿದುಕೊಳ್ಳಿ. ನಂತರ ಬೇಯಿಸಿದ ಮಶ್ರೂಮ್, ಶುಂಠಿ - ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಬಿರಿಯಾನಿ ಮಸಾಲೆ, ಖಾರದ ಪುಡಿ, ದನಿಯಾ ಪುಡಿ, ಅರಿಸಿನ ಪುಡಿ, ರುಬ್ಬಿದ ಕೊತ್ತಂಬರಿ ಮತ್ತು ಪುದಿನ, 2 ಕಪ್ ಮೊಸರು ಹಾಕಿ ಹಸಿ ವಾಸನೆ ಹೋಗುವತನಕ ಹುರಿದುಕೊಳ್ಳಿ. ನಂತರ ಟೊಮೆಟೊ ಹಾಕಿ ಮತ್ತೆ ಹುರಿಯಿರಿ. ಎಣ್ಣೆ ಬಿಡುವವರೆಗೂ ಕುದಿಸಿ. ಅಗತ್ಯಕ್ಕೆ ತಕ್ಕಷ್ಟು ನೀರನ್ನು ಬಳಸಿಕೊಳ್ಳಿ. ಅಕ್ಕಿಯನ್ನು ಈ ಮಿಶ್ರಣಕ್ಕೆ ಸೇರಿಸಿ ರುಚಿ ನೋಡಿ ಉಪ್ಪು, ಖಾರ ಕಡಿಮೆಯಿದ್ದನ್ನು ಸೇರಿಸಿ ಮುಚ್ಚಳ ಮುಚ್ಚಿ. ಕುಕರ್ ಅನ್ನು ಬೇಯಲು ಇಡಿ. 15 ರಿಂದ 20 ನಿಮಿಷದ ನಂತರ ಮುಚ್ಚಳ ತೆಗೆದು ಚೆನ್ನಾಗಿ ಮಿಶ್ರಣ ಮಾಡಿ. ಈಗ ಘಮ್ಮೆನ್ನುವ ಮಶ್ರೂಮ್ ಬಿರಿಯಾನಿ ಸೇವಿಸಲು ಸಿದ್ಧ.
****
ಮಶ್ರೂಮ್ ಗ್ರೇವಿ
ಬೇಕಾಗುವ ಸಾಮಗ್ರಿಗಳು: ಮಶ್ರೂಮ್ –ಎರಡು ಪ್ಯಾಕೆಟ್, ಈರುಳ್ಳಿ –2, ಟೊಮೆಟೊ– 4, ದನಿಯಾ ಪುಡಿ– ಎರಡು ಚಮಚ, ಗರಂ ಮಸಾಲ –ಒಂದು ಚಮಚ, ಅರಿಸಿನ ಪುಡಿ– ಒಂದು ಚಮಚ, ಶುಂಠಿ -ಬೆಳ್ಳುಳ್ಳಿ ಪೇಸ್ಟ್, ಕಸ್ತೂರಿ ಮೆಂತ್ಯ –ಒಂದು ಚಮಚ, ಸೋಂಪು ಕಾಳು –ಒಂದು ಚಮಚ ಚಕ್ಕೆ –2, ಲವಂಗ –2, ಸ್ಟಾರ್ ಮಸಾಲ ಹೂ– 2, ಅನಾನಸ್ ಮೊಗ್ಗು 2, ಏಲಕ್ಕಿ –2, ಎಣ್ಣೆ ನಾಲ್ಕು ಟೇಬಲ್ ಸ್ಪೂನ್, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ: ಪಾತ್ರೆಯಲ್ಲಿ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿಕೊಳ್ಳಬೇಕು. ಕಸ್ತೂರಿ ಮೆಂತ್ಯ, ಸೋಂಕು ಕಾಳು, ಚಕ್ಕೆ -ಲವಂಗ, ಸ್ಟಾರ್ ಮಸಾಲ ಹೂ, ಅನಾನಸ್ ಮೊಗ್ಗು, ಏಲಕ್ಕಿ ಸೇರಿಸಿ ಮಿಶ್ರಣ ಮಾಡಬೇಕು. ಬಳಿಕ ಹೆಚ್ಚಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು. ಬಳಿಕ ಟೊಮೆಟೊ, ಶುಂಠಿ -ಬೆಳ್ಳುಳ್ಳಿ ಪೇಸ್ಟ್ ಹಾಗೂ ಸ್ವಲ್ಪ ಉಪ್ಪು ಹಾಕಿಕೊಂಡು ಬೆರೆಸಿಕೊಡಬೇಕು. ನಂತರ ಮಸಾಲ ಪುಡಿಗಳನ್ನು ಸೇರಿಸಿ ಬೆರೆಸಿದ ನಂತರ ನೀರನ್ನು ಹಾಕಿಕೊಂಡು ಬಿಸಿಯಾಗಲು ಬಿಡಬೇಕು. ಇದಕ್ಕೆ ಕತ್ತರಿಸಿದ ಮಶ್ರೂಮ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. 10 ರಿಂದ 15 ನಿಮಿಷ ಬೇಯಲು ಬಿಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಉದುರಿಸಿ. ಈಗ ಮಶ್ರೂಮ್ ಗ್ರೇವಿ ಸಿದ್ಧ. ಚಪಾತಿ, ರೊಟ್ಟಿ ಅಷ್ಟೇ ಅಲ್ಲ, ಯಾವುದೇ ಖಾದ್ಯಗಳಿಗೂ ನೆಂಚಿಕೊಳ್ಳಲು ಚೆನ್ನಾಗಿರುತ್ತದೆ.
***
ಮಶ್ರೂಮ್ ಕಬಾಬ್
ಬೇಕಾಗುವ ಸಾಮಗ್ರಿಗಳು: ಮಶ್ರೂಮ್ – ಒಂದು ಪ್ಯಾಕೆಟ್ (200 ಗ್ರಾಂ), ಕಬಾಬ್ ಪೌಡರ್ –ಒಂದು ಪ್ಯಾಕೆಟ್, ಶುಂಠಿ– ಬೆಳ್ಳುಳ್ಳಿ ಪೇಸ್ಟ್, ಖಾರದಪುಡಿ –ಅರ್ಧ ಚಮಚ, ಚಿಕನ್ ಮಸಾಲ– ಅರ್ಧ ಚಮಚ, ಮೊಟ್ಟೆ –ಒಂದು, ರುಚಿಗೆ ತಕ್ಕಷ್ಟು ಉಪ್ಪು.ಸ್ವಲ್ಪ ಎಣ್ಣೆ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು ಬಳಿಕ ಇದಕ್ಕೆ ಮಶ್ರೂಮ್ ಸೇರಿಸಿ ಮಸಾಲೆ ಹಿಡಿಯುವವರೆಗೆ ಕೈಯಾಡಿಸಿ. 10ರಿಂದ 15 ನಿಮಿಷಗಳ ಕಾಲ ನೆನೆಸಿಡಬೇಕು.
ತಯಾರಿಸುವ ವಿಧಾನ: ಪಾತ್ರೆಯಲ್ಲಿ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಅದಕ್ಕೆ ನೆನೆಸಿಟ್ಟಿದ್ದ ಮಶ್ರೂಮ್ ಹಾಕಿ. ಅದು ಕೆಂಪು ಬಣ್ಣಕ್ಕೆ ತಿರುಗುವವರೆಗೂ ಬೇಯಿಸಬೇಕು. ಈಗ ಬಿಸಿ ಬಿಸಿಯಾದ ಅಣಬೆ ಕಬಾಬ್ ರೆಡಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.