ಹೆಸರು ಬೇಳೆಯ ತಿನಿಸುಗಳು ದೇಹವನ್ನು ತಂಪಾಗಿಸುವ ಜೊತೆಗೆ, ಶಕ್ತಿಯನ್ನು ನೀಡುತ್ತವೆ. ಹಾಗಾಗಿಯೇ ಬೇಸಿಗೆ ವೇಳೆ ಈ ಬೇಳೆಯ ಹೆಚ್ಚು ಖಾದ್ಯಗಳನ್ನು ತಯಾರಿಸುತ್ತಾರೆ. ಇಂಥ ಹೆಸರುಬೇಳೆಯಿಂದ ಇನ್ನಷ್ಟು ವಿಶೇಷ ಖಾದ್ಯಗಳ ರೆಸಿಪಿಗಳನ್ನು ಪರಿಚಯಿಸುತ್ತಿದ್ದಾರೆ ಕೆ.ವಿ.ರಾಜಲಕ್ಷ್ಮಿ
***
ಹೆಸರುಬೇಳೆ ಹಲ್ವ
ಹೆಸರುಬೇಳೆಯಿಂದ ಪಾಯಸ ಮಾಡುವುದನ್ನು ಕೇಳಿದ್ದಿರಿ. ಇಲ್ಲಿ ಅದೇ ಹೆಸರುಬೇಳೆ ಬಳಸಿ, ಹಲ್ವಾ ಕೂಡ ತಯಾರಿಸಬಹುದು. ಹೇಗೆ ಅಂತೀರಾ ? ಇಲ್ಲಿದೆ ನೋಡಿ ರೆಸಿಪಿ.
ಬೇಕಾಗುವ ಸಾಮಗ್ರಿ
ಬೇಯಿಸಿದ ಹೆಸರು ಬೇಳೆ 1/2 ಕಪ್ , ಬೆಲ್ಲದ ಪುಡಿ 1/2 ಕಪ್, ಗೋಡಂಬಿ 5 ರಿಂದ 6, ತುಪ್ಪ 1/2 ಕಪ್.
ಮಾಡುವ ವಿಧಾನ
ಬಾಣಲೆಗೆ ಒಂದು ಚಮಚ ತುಪ್ಪ ಹಾಕಿ. ಅದಕ್ಕೆ ಬೇಯಿಸಿದ ಹೆಸರು ಬೇಳೆಯನ್ನು ಒಂದೆರಡು ನಿಮಿಷ ಮಗುಚಿ. ನಂತರ ಬೆಲ್ಲದ ಪುಡಿ ಬೆರೆಸಿ. ಸಣ್ಣ ಉರಿಯಲ್ಲಿ, ಸ್ವಲ್ಪ ಸ್ವಲ್ಪವಾಗಿ ತುಪ್ಪ ಸೇರಿಸುತ್ತ, ತಳಹಿಡಿಯ ದಂತೆ ಮಗುಚುತ್ತಿರಿ. ಮಿಶ್ರಣ ಹಲ್ವದ ಹದಕ್ಕೆ ಬಂದ ಕೂಡಲೇ ಬೇರೊಂದು ಪಾತ್ರೆಗೆ ವರ್ಗಾಯಿಸಿ. ಗೋಡಂಬಿ ತುಂಡುಗಳಿಂದ ಅಲಂಕರಿಸಿ. ಈಗ ಹೆಸರುಬೇಳೆ ಹಲ್ವಾ ಸವಿಯಲು ಸಿದ್ಧ.
***
ರವಿಚಂದ್ರ
ರವಿಚಂದ್ರ ಸಿನಿಮಾದ ಹೆಸರೇ ಇರಬಹುದು. ಹೆಸರುಬೇಳೆಯ ಖಾದ್ಯವೊಂದಕ್ಕೆ ಅದೇ ಹೆಸರು ಇಟ್ಟಿದ್ದಾರೆ. ಈ ಸಿಹಿ ತಿನಿಸಿನ ಆಕಾರ ರವಿ ಮತ್ತು ಚಂದ್ರ ಎರಡನ್ನೂ ಹೋಲಬಹುದೇನೋ. ಅದೇನೆ ಇರಲಿ, ಈಗ ರವಿಚಂದ್ರ ತಯಾರಿಸಲು ಸಿದ್ಧರಾಗಿ. ರೆಸಿಪಿ ಇಲ್ಲಿದೆ, ನೋಡಿ;
ಬೇಕಾಗುವ ಸಾಮಗ್ರಿ
ಹಾಲಿನ ಪುಡಿ 1 ಕಪ್, ಹುರಿದ ಗೋಧಿ ಹಿಟ್ಟು 1/2 ಕಪ್, ಸಕ್ಕರೆ ಒಂದೂವರೆ ಕಪ್, ಗೋಡಂಬಿ ರುಚಿಗೆ ತಕ್ಕಷ್ಟು, ತುಪ್ಪ ಸ್ವಲ್ಪ.
ಮಾಡುವ ವಿಧಾನ
ದಪ್ಪತಳದ ಪಾತ್ರೆಗೆ ಸಕ್ಕರೆ ಮತ್ತು ಅದು ಕರಗುವಷ್ಟು ಮಾತ್ರ ನೀರು ಹಾಕಿ. ಸಣ್ಣ ಉರಿಯಲ್ಲಿ ಬಿಸಿ ಮಾಡಿ. ಸಕ್ಕರೆ ಪಾಕ ಬರುವಾಗ ಹಾಲಿನ ಪುಡಿ, ಹುರಿದ ಗೋಧಿ ಹಿಟ್ಟು ಹಾಕಿ, ಕೈಯಾಡಿಸುತ್ತಿರಿ. ಅವಶ್ಯಕತೆಗೆ ತಕ್ಕಂತೆ ತುಪ್ಪ ಹಾಕಿ ಚೆನ್ನಾಗಿ ಮಗುಚಿ.
ಇನ್ನೊಂದೆಡೆ ತಟ್ಟೆಗೆ ತುಪ್ಪವನ್ನು ಸವರಿ ಇಡಿ. ಸ್ಟೌ ಮೇಲಿಟ್ಟ ಪಾತ್ರೆಯಲ್ಲಿ ಮಿಶ್ರಣ ಬಿಟ್ಟು ಬರುತ್ತಿದ್ದಂತೆ, ಅದನ್ನು ತುಪ್ಪ ಸವರಿದ ತಟ್ಟೆಗೆ ಸುರಿಯಿರಿ. ಬಿಸಿಯಿದ್ದಾಗಲೇ ಸ್ವಲ್ಪ ಸ್ವಲ್ಪ ಮಿಶ್ರಣ ತೆಗೆದುಕೊಂಡು ಅಂಗೈನಲ್ಲಿ ವೃತ್ತಾಕಾರವಾಗಿ ತಟ್ಟಿ. ನಂತರ ಸಣ್ಣ ಮುಚ್ಚಳದಿಂದ ಮತ್ತೊಂದು ವೃತ್ತದಂತೆ ಮೆದುವಾಗಿ ಗುರುತು ಹಾಕಿ. ಮಧ್ಯೆ ಗೋಡಂಬಿಯನ್ನು ಇಡಿ. ನೋಡಲು ಆಕರ್ಷಕವಾದ, ರುಚಿಯಾದ ರವಿಚಂದ್ರ ಸಿದ್ದ.
***
ಸ್ಟಾರ್ ಪೇಡ
ಹಾಲಿನಿಂದ ಮಾಡುವ ‘ದೂದ್‌ಪೇಡ‘ ಗೊತ್ತು. ಧಾರವಾಡದ ಮಿಶ್ರ ಪೇಡವೂ ಪರಿಚಯ. ಆದರೆ, ಇದು ಹೆಸರು ಬೇಳೆಯ ಸ್ಟಾರ್ ಪೇಡ. ನಕ್ಷತ್ರದ ಆಕಾರದಲ್ಲಿರುವ ಈ ಸಿಹಿತಿನಿಸಿನ ರುಚಿಯೂ ವಿಭಿನ್ನ. ಪೇಡ ತಯಾರಿಸಿ, ರುಚಿ ನೋಡಿ.
ಬೇಕಾಗುವ ಸಾಮಗ್ರಿ
ಹುರಿಗಡಲೆ ಪುಡಿ ಕಾಲು ಕಪ್, ಹುರಿದ ಅಕ್ಕಿ ಹಿಟ್ಟು ಎರಡು ಚಮಚ, ಬಾದಾಮಿ ಪುಡಿ ಒಂದು ಚಮಚ, ಸಕ್ಕರೆ ಅರ್ಧ ಕಪ್, ತುಪ್ಪ ಸ್ವಲ್ಪ ಅಥವಾ ಅಗತ್ಯಕ್ಕೆ ತಕ್ಕಷ್ಟು.
ಮಾಡುವ ವಿಧಾನ
ದಪ್ಪ ತಳದ ಬಾಣಲೆಗೆ ಸಕ್ಕರೆ ಹಾಗೂ ಸ್ವಲ್ಪ ನೀರು ಹಾಕಿ ಸಣ್ಣ ಉರಿಯಲ್ಲಿ ಬಿಸಿ ಮಾಡಿ ಕರಗಿಸಿ. ನೊರೆ ಬರುವ ಹಂತದಲ್ಲಿ ಹುರಿಗಡಲೆ, ಹಾಲಿನ ಪುಡಿ, ಬಾದಾಮಿ ಪುಡಿ, ಅಗತ್ಯವಿದ್ದಷ್ಟು ತುಪ್ಪ ಹಾಕಿ ಚೆನ್ನಾಗಿ ಕೈಯಾಡಿಸುತ್ತಿರಿ. ಮಿಶ್ರಣ ಪಾತ್ರೆ ಬಿಟ್ಟು ಬರುತ್ತಿದ್ದಂತೆ, ಜಿಡ್ಡು ಸವರಿದ ತಟ್ಟೆಗೆ ಸುರಿಯಿರಿ. ಸ್ವಲ್ಪ ತಣಿದ ಮೇಲೆ ಸ್ಟಾರ್ ಅಚ್ಚಿನಲ್ಲಿ ಕತ್ತರಿಸಿ. ಸ್ಟಾರ್ ಪೇಡ ಸವಿಯಲು ಸಿದ್ದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.