ಬಿಸಿಲಿನ ಝಳದಿಂದ ಬಾಯಾರಿಕೆ, ಬಳಲಿಕೆ ಅಧಿಕ. ಈ ದಣಿವು ನಿವಾರಿಸಿಕೊಳ್ಳಲು ನಮ್ಮ ಹಿರಿಯರು ಮನೆಯಲ್ಲಿರುವ ಸಾಮಗ್ರಿಗಳನ್ನೇ ಬಳಸಿ ವೈವಿಧ್ಯಮಯ ಜ್ಯೂಸ್ ಅಥವಾ ಪಾನಕಗಳನ್ನು ತಯಾರಿಸುತ್ತಿದ್ದರು. ಈ ಪಾನಕದ ಸೇವನೆ ಕೇವಲ ದಾಹ ನೀಗಿಸುವುದಷ್ಟೇ ಅಲ್ಲದೇ, ದೇಹಾರೋಗ್ಯವನ್ನೂ ವೃದ್ಧಿಸುತ್ತವೆ. ಬೇಸಿಗೆ ಕಾಲದಲ್ಲಿ ಪಾನಕದ ಸೇವನೆಯಿಂದ ಬಿಸಿಲಿನಿಂದ ಬರುವ ರೋಗಗಳನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ. ಅಂಥ ಪಾನಕಗಳ ತಯಾರಿಸುವ ವಿಧಾನ ಇಲ್ಲಿದೆ;
ಅಮೃತ ಪಾನಕ
ಬೇಕಾಗುವ ಸಾಮಗ್ರಿಗಳು: ಮಾಗಿದ (ಹಳೆಯ) ಹುಣಸೆಹಣ್ಣು – ನಿಂಬೆ ಗಾತ್ರದಷ್ಟು, ಕಾಳುಮೆಣಸಿನ ಪುಡಿ – ಚಿಟಿಕೆ, ಬೆಲ್ಲ (ಅಗತ್ಯವಿದ್ದಷ್ಟು), ಉಪ್ಪು ಚಿಟಿಕೆ.
ತಯಾರಿಸುವ ವಿಧಾನ: ಹುಣಸೆಹಣ್ಣನ್ನು ನೆನೆಸಿ ಆನಂತರ ಅದನ್ನು ಕಿವುಚಿ ಚರಟ–ರಸ ಬೇರೆ ಬೇರೆ ಮಾಡಿ. ನಿಮಗೆ ಎಷ್ಟು ಹುಳಿ ಮತ್ತು ಸಿಹಿ ಬೇಕು ಅದಕ್ಕನುಗುಣವಾಗಿ ನೀರನ್ನು ಸೇರಿಸಿ ಬೆಲ್ಲವನ್ನು ಮಿಶ್ರಣ ಮಾಡಿ. ಚಿಟಿಕೆ ಉಪ್ಪನ್ನು ಸೇರಿಸಿ. ಶೀತ ಪ್ರಕೃತಿಯವರು ಅಥವಾ ಖಾರ ಇಷ್ಟ ಪಡುವರು ಕಾಳುಮೆಣಸಿನ ಪುಡಿಯನ್ನು ಸೇರಿಸಿಕೊಳ್ಳಬಹುದು. ಇಷ್ಟು ಮಾಡಿದರೆ ಪಾನಕ ಸಿದ್ದ. ಇದು ಪಿತ್ತಹರ, ಪಿತ್ತದ ವಾಂತಿಗೂ, ಪಿತ್ತದಿಂದ ತಲೆನೋವು ಬಂದಾಗ ಇದನ್ನು ತಯಾರಿಸಿ ಸೇವಿಸಿದರೆ ಉಪಶಮನವಾಗುತ್ತದೆ.
ಹೆಸರುಬೇಳೆ ಪಾನಕ
ಬೇಕಾಗುವ ಸಾಮಗ್ರಿಗಳು: ಹೆಸರುಬೇಳೆ – ಅರ್ಧ ಕಪ್, ಬೆಲ್ಲ ಮುಕ್ಕಾಲು ಕಪ್/ಪುಡಿ ಮಾಡಿದ್ದು, ತೆಂಗಿನಕಾಯಿ ತುರಿ ಅರ್ಧ ಕಪ್/ಆಗಲೇ ತುರಿದ ತುರಿ, ಏಲಕ್ಕಿ ಬೀಜ ನಾಲ್ಕು, ನೀರು ನಾಲ್ಕು ಕಪ್, ನಿಂಬೆರಸ ಸ್ವಲ್ಪ.
ತಯಾರಿಸುವ ವಿಧಾನ: ಹೆಸರುಬೇಳೆಯನ್ನು ಒಂದು ಗಂಟೆ ನೀರಿನಲ್ಲಿ ನೆನೆಸಿಡಿ. ನೆನೆಸಿ ತೊಳೆದುಕೊಂಡ ಹೆಸರುಬೇಳೆಗೆ, ಬೆಲ್ಲ, ತೆಂಗಿನಕಾಯಿ ತುರಿ, ಏಲಕ್ಕಿ ಬೀಜ ಮತ್ತು ಸ್ವಲ್ಪ ನೀರು ಹಾಕಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿಕೊಂಡ ಮಿಶ್ರಣವನ್ನು ಜರಡಿಯಲ್ಲಿ ಸೋಸಿ ಕೊಳ್ಳಿ. ಸೋಸಿ ಕೊಂಡು ಬಂದ ಚರಟವನ್ನು ಪುನಃ ಮಿಕ್ಸಿಯಲ್ಲಿ ಸ್ವಲ್ಪ ನೀರು ಹಾಕಿ ರುಬ್ಬಿ ಕೊಳ್ಳಿ. ಪುನಃ ಸೋಸಿ. ಬೇಕಿದ್ದರೆ ಕೊನೆಯಲ್ಲಿ ಒಂದು ಟೀ ಚಮಚ ನಿಂಬೆರಸ ಹಾಕಿ ಮಿಶ್ರಣ ಮಾಡಿ. ರುಚಿಯಾದ ಹೆಸರುಬೇಳೆ ಪಾನಕ ತಯಾರಿಸಿ ಸವಿಯಿರಿ. ಇದು ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಮೈ ತುರಿಕೆ, ಪಿತ್ತಕ್ಕೆ ಒಳ್ಳೆಯ ಪಾನಕ.
ಖರ್ಜೂರ ಪಾನಕ
ಬೇಕಾಗುವ ಸಾಮಗ್ರಿಗಳು: ಬೀಜ ತೆಗೆದ ಖರ್ಜೂರ – 1 ಕಪ್, ಹುಣಸೆಹಣ್ಣಿನ ಗಟ್ಟಿ ರಸ – 1ಟೀ ಚಮಚ, ಉಪ್ಪು ಚಿಟಿಕೆ, ಬೆಲ್ಲ ಸಿಹಿ ಎಷ್ಟು ಬೇಕು ಅಷ್ಟು, ಕಾಳುಮೆಣಸಿನ ಪುಡಿ ಚಿಟಿಕೆ, ನೀರು ಅರ್ಧ ಲೀಟರ್.
ತಯಾರಿಸುವ ವಿಧಾನ: ಖರ್ಜೂರವನ್ನು ಸಣ್ಣಗೆ ಕತ್ತರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಈ ಮಿಶ್ರಣಕ್ಕೆ ಹುಣಸೆರಸ ಮತ್ತು ಬೆಲ್ಲವನ್ನು ಸೇರಿಸಿ. ನೀರನ್ನು ಹಾಕಿ ಪುನಃ ನುಣ್ಣಗೆ ರುಬ್ಬಿಕೊಳ್ಳಿ. ಕುಡಿಯುವಾಗ ಚಿಟಿಕೆ ಕಾಳುಮೆಣಸು ಮತ್ತು ಚಿಟಿಕೆ ಉಪ್ಪುನ್ನು ಹಾಕಿ ಕುಡಿಯಿರಿ. ಶಕ್ತಿವರ್ಧಕ ಪಾನಕ ಇದಾಗಿದೆ.
ಶುಂಠಿ ಪಾನಕ
ಬೇಕಾಗುವ ಸಾಮಗ್ರಿಗಳು: ಒಂದು ತುಂಡು(ಒಂದಿಂಚು) ಜಜ್ಜಿದ ಶುಂಠಿ ರಸ, ಕಾಳುಮೆಣಸಿನ ಪುಡಿ 1ಟೀ ಚಮಚ, ನಿಂಬೆರಸ 2 ರಿಂದ 3ಟೀ ಚಮಚ, ಬೆಲ್ಲ ಸಿಹಿ ಎಷ್ಟು ಬೇಕು ಅಷ್ಟು.
ತಯಾರಿಸುವ ವಿಧಾನ: ಒಂದು ಪಾತ್ರೆಯಲ್ಲಿ ಶುಂಠಿ ರಸ, ಕಾಳುಮೆಣಸಿನ ಪುಡಿ, ನಿಂಬೆರಸ, ಪುಡಿ ಮಾಡಿದ ಬೆಲ್ಲವನ್ನು ಹಾಕಿ ಅದಕ್ಕೆ 2 ರಿಂದ 3 ಕಪ್ ನೀರನ್ನು ಸೇರಿಸಿ ಚನ್ನಾಗಿ ಮಿಶ್ರಣ ಮಾಡಿ ಕುಡಿಯಲು ಕೊಡಿ. ಈ ಪಾನಕವು ನಾಲಿಗೆಗೆ ರುಚಿಯನ್ನು ಹೆಚ್ಚಿಸುತ್ತದೆ. ಹಾಗೇಯೇ ಗಂಟಲು ಕೆರೆತಕ್ಕೆ ಶುಂಠಿಯ ಗರಮ್ ಪಾನಕ ಚೇತೋಹಾರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.