ADVERTISEMENT

ಸಂಜೆಯ ಸ್ನ್ಯಾಕ್ಸ್‌ ಪಾವ್ ಭಾಜಿ, ವಡಾಪಾವ್‌

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2021, 19:30 IST
Last Updated 19 ಮಾರ್ಚ್ 2021, 19:30 IST
ಪಾವ್ ಭಾಜಿ
ಪಾವ್ ಭಾಜಿ   

ಪಾವ್ ಭಾಜಿ

ಬೇಕಾಗುವ ಸಾಮಗ್ರಿಗಳು: ಕ್ಯಾಪ್ಸಿಕಂ – ಮಧ್ಯಮ ಗಾತ್ರದ್ದು, ಹಸಿಮೆಣಸು – 1, ಬಟಾಣಿಕಾಳು – 4 ಚಮಚ (ನೆನೆಸಿ, ಬೇಯಿಸಿಕೊಂಡಿದ್ದು), ಆಲೂಗೆಡ್ಡೆ – 2 ಮಧ್ಯಮ ಗಾತ್ರದ್ದು (ಬೇಯಿಸಿ ಸ್ಮ್ಯಾಷ್ ಮಾಡಿದ್ದು), ಟೊಮೆಟೊ – 2 ಸಣ್ಣದಾಗಿ ಹೆಚ್ಚಿದ್ದು, ಕಸೂರಿಮೇಥಿ – 1/2 ಚಮಚ, ಉಪ್ಪು – ರುಚಿಗೆ, ಖಾರದಪುಡಿ – 1 ಚಮಚ, ಪಾವ್‌ಬಾಜಿ ಮಸಾಲ – 2 ಚಮಚ, ಶುಂಠಿ–ಬೆಳ್ಳುಳ್ಳಿ ಪೇಸ್ಟ್ – ಅರ್ಧ ಚಮಚ, ಬೆಣ್ಣೆ – 2 ಚಮಚ, ಎಣ್ಣೆ – 2 ಚಮಚ, ಈರುಳ್ಳಿ – ಮಧ್ಯಮ ಗಾತ್ರದ್ದು, ಕೊತ್ತಂಬರಿ ಸೊಪ್ಪು – ಸ್ವಲ್ಪ, ನೀರು.

ತಯಾರಿಸುವ ವಿಧಾನ: ಪಾತ್ರೆಯೊಂದಕ್ಕೆ ಹೆಚ್ಚಿಕೊಂಡ ಕ್ಯಾಪ್ಸಿಕಂ, ಹಸಿಮೆಣಸು ಹಾಕಿ ಒಂದೂವರೆ ನಿಮಿಷ ಬಾಡಿಸಿಕೊಂಡು ಬಟಾಣಿಕಾಳು ಸೇರಿಸಿ. ಅದಕ್ಕೆ ಸ್ಮ್ಯಾಶ್‌ ಮಾಡಿದ ಆಲೂಗೆಡ್ಡೆ, ಹೆಚ್ಚಿದ ಟೊಮೆಟೊ, ಸ್ವಲ್ಪ ಕಸೂರಿಮೇಥಿ, ಉಪ್ಪು ಸೇರಿಸಿ ಮಿಶ್ರಣ ಮಾಡಿಕೊಳ್ಳಬೇಕು. ಆ ಮಿಶ್ರಣಕ್ಕೆ ಖಾರದಪುಡಿ, ಪಾವ್‌ಭಾಜಿ ಮಸಾಲ, ಶುಂಠಿ–ಬೆಳ್ಳುಳ್ಳಿ ಪೇಸ್ಟ್‌, 2 ಚಮಚ ಬೆಣ್ಣೆ ಈ ಎಲ್ಲವನ್ನೂ ಹಾಕಿ ನೀರು ಸೇರಿಸದೇ ಸ್ಮ್ಯಾಷರ್‌ನಿಂದ ಸ್ಮ್ಯಾಷ್‌ ಮಾಡಿಕೊಳ್ಳಿ. ಕನಿಷ್ಠ 10 ನಿಮಿಷಗಳ ಕಾಲ ಎಲ್ಲವೂ ಚೆನ್ನಾಗಿ ಪೇಸ್ಟ್ ಆಗುವವರೆಗೂ ಸ್ಮ್ಯಾಷ್ ಮಾಡಿ ಬೇರೆ ಪಾತ್ರೆಯಲ್ಲಿ ತೆಗೆದಿಟ್ಟುಕೊಳ್ಳಬೇಕು. ಈಗ ತವಾ ಇರಿಸಿ ಬಿಸಿಯಾದ ಮೇಲೆ ಎಣ್ಣೆ ಹಾಗೂ ಬೆಣ್ಣೆ ಹಾಕಿ ಕರಗಿದ ಮೇಲೆ ಮಧ್ಯಮ ಗಾತ್ರದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಕಸೂರಿಮೇಥಿ, ಅರ್ಧ ಚಮಚ ಪಾವ್‌ಭಾಜಿ ಪುಡಿ, ಅರ್ಧ ಚಮಚ ಖಾರದಪುಡಿ, ಸ್ವಲ್ಪ ಉಪ್ಪು ಸೇರಿಸಿ ಈರುಳ್ಳಿ ಸ್ವಲ್ಪ ಮೆತ್ತಗಾಗುವವರೆಗೂ ಬೇಯಿಸಿಕೊಳ್ಳಬೇಕು. ಅದಕ್ಕೆ ಮೊದಲೇ ಮಾಡಿಟ್ಟುಕೊಂಡಿರುವ ಮಿಶ್ರಣ ಸೇರಿಸಿ. ಬೇಕಾದಷ್ಟು ನೀರು ಸೇರಿಸಿ ಮಿಶ್ರಣ ಮಾಡಿ, ಕುದಿಸಬೇಕು. ತವಾದ ಮೇಲೆ ಬೆಣ್ಣೆ ಹಾಕಿ ಕರಗಿದ ಮೇಲೆ ಸ್ವಲ್ಪ ಕೊತ್ತಂಬರಿ ಸೊಪ್ಪು, ಪಾವ್‌ಭಾಜಿ ಮಸಾಲ ಸೇರಿಸಿ ಅದರ ಮೇಲೆ ಕತ್ತರಿಸಿದ ಪಾವ್ ಇಟ್ಟು ಒಂದು ನಿಮಿಷ ರೋಸ್ಟ್ ಮಾಡಿಕೊಳ್ಳಬೇಕು. ಈಗ ಬಿಸಿಯಾದ ರುಚಿಯಾದ ಪಾವ್‌ಭಾಜಿ ಸವಿಯಲು ಸಿದ್ಧ.

ADVERTISEMENT

**


ವಡಾಪಾವ್‌

ಬೇಕಾಗುವ ಸಾಮಗ್ರಿಗಳು: ಶುಂಠಿ – 2 ಇಂಚು, ಬೆಳ್ಳುಳ್ಳಿ – 10 ಎಸಳು, ಹಸಿಮೆಣಸು – 7, ಎಣ್ಣೆ – ಸ್ವಲ್ಪ, ಸಾಸಿವೆ, ಇಂಗು– ಚಿಟಿಕೆ, ಜೀರಿಗೆ – 1 ಚಮಚ, ಅರಿಸಿನ ಪುಡಿ – ಚಿಟಿಕೆ, ಆಲೂಗೆಡ್ಡೆ – ಬೇಯಿಸಿ ಸ್ಮ್ಯಾಷ್ ಮಾಡಿಕೊಂಡಿದ್ದು, ಉಪ್ಪು – ರುಚಿಗೆ ತಕ್ಕಷ್ಟು, ಕಡಲೆಹಿಟ್ಟು – 1 ಕಪ್‌, ಖಾರದಪುಡಿ – 1 ಚಮಚ, ನೀರು – ಅಗತ್ಯಕ್ಕೆ ತಕ್ಕಷ್ಟು, ಪುದಿನಸೊಪ್ಪು– 1 ಕಪ್‌, ಹುಣಸೆಹಣ್ಣು – ಸ್ವಲ್ಪ, ಪಾವ್‌ ಬನ್‌ – ಬೇಕಾದಷ್ಟು.

ತಯಾರಿಸುವ ವಿಧಾನ: ಮಿಕ್ಸಿಜಾರಿಗೆ ಒಂದು ಇಂಚು ಶುಂಠಿ, ಹಸಿಮೆಣಸು ಮೂರು ಹಾಗೂ 4 ರಿಂದ 5 ಎಸಳು ಬೆಳ್ಳುಳ್ಳಿ ಹಾಕಿ ತರಿಯಾಗಿ ರುಬ್ಬಿಕೊಳ್ಳಬೇಕು. ಪಾತ್ರೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ, ಇಂಗು, ಜೀರಿಗೆ, ರುಬ್ಬಿಕೊಂಡ ಪೇಸ್ಟ್‌ ಹಾಕಿ 2 ನಿಮಿಷ ಮಧ್ಯಮ ಉರಿಯಲ್ಲಿ ಹುರಿದುಕೊಳ್ಳಬೇಕು. ಅದಕ್ಕೆ ಸ್ವಲ್ಪ ಅರಿಸಿನ ಪುಡಿ, ಬೇಯಿಸಿ ಸ್ಮ್ಯಾಷ್ ಮಾಡಿದ ಆಲೂಗೆಡ್ಡೆ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ 2 ನಿಮಿಷ ಮಿಶ್ರಣ ಮಾಡಿಕೊಳ್ಳಬೇಕು. ಅದನ್ನು ತಣ್ಣಗಾಗಲು ಬಿಡಿ. ಈಗ ಕಪ್‌ಗೆ ಕಡಲೆಹಿಟ್ಟು, ಉಪ್ಪು, ಖಾರದಪುಡಿ, ಸೋಡಾಪುಡಿ ಹಾಗೂ ಸ್ವಲ್ಪ ನೀರು ಹಾಕಿ ಬೋಂಡಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಬೇಕು. ಈಗ ಆಲೂಗೆಡ್ಡೆ ಮಿಶ್ರಣವನ್ನು ಉಂಡೆ ಕಟ್ಟಿ ಆ ಉಂಡೆಯನ್ನು ಕಡಲೆಹಿಟ್ಟಿನಲ್ಲಿ ಅದ್ದಿ ಎಣ್ಣೆಯಲ್ಲಿ ಕರಿದುಕೊಳ್ಳಬೇಕು. ಮಿಕ್ಸಿ ಜಾರಿಗೆ 1 ಕಟ್ಟು ಪುದಿನ ಸೊಪ್ಪು, ಎರಡು ಹಸಿಮೆಣಸು, 5 ಎಸಳು ಬೆಳ್ಳುಳ್ಳಿ, 1 ಇಂಚು ಶುಂಠಿ, ಹುಣಸೆಹಣ್ಣು, ಉಪ್ಪು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ಈಗ ಬೆಣ್ಣೆಯಲ್ಲಿ ಪಾವ್ ಬಿಸಿ ಮಾಡಿಕೊಂಡು ಪಾವ್ ಒಳಗೆ ಪುದಿನ ಚಟ್ನಿ ಹಚ್ಚಿ ಕರಿದ ಆಲೂಗೆಡ್ಡೆ ಬೊಂಡ ಇರಿಸಿದರೆ ವಡಾಪಾವ್ ತಿನ್ನಲು ಸಿದ್ಧ.

**


ಸಮೋಸ

ಬೇಕಾಗುವ ಸಾಮಗ್ರಿಗಳು: ಮೈದಾಹಿಟ್ಟು – 2 ಕಪ್‌, ಉಪ್ಪು – ರುಚಿಗೆ, ಅಜ್ವಾನ – ಕಾಲು ಚಮಚ, ಎಣ್ಣೆ – 1–2 ಲೀಟರ್‌, ನೀರು – ಅಗತ್ಯವಿದ್ದಷ್ಟು, ಹಸಿಮೆಣಸು – 4 ರಿಂದ 5, ಬೆಳ್ಳುಳ್ಳಿ – 4 ರಿಂದ 5, ಈರುಳ್ಳಿ – 1 ಸಣ್ಣದಾಗಿ ಹೆಚ್ಚಿದ್ದು, ಆಲೂಗೆಡ್ಡೆ – ಸ್ಮ್ಯಾಷ್ ಮಾಡಿದ್ದು 4 ರಿಂದ 5, ಅರಿಸಿನ ಪುಡಿ – ಚಿಟಿಕೆ, ಖಾರದಪುಡಿ – 1 ಚಮಚ, ಗರಂ ಮಸಾಲ – ಅರ್ಧ ಚಮಚ, ಆಮ್ಚೂರ್ ಪುಡಿ – ಮುಕ್ಕಾಲು ಚಮಚ, ಚಾಟ್‌ ಮಸಾಲ – ಮುಕ್ಕಾಲು ಚಮಚ, ನೆನೆಸಿ ಬೇಯಿಸಿದ ಬಟಾಣಿ – 4 ಚಮಚ, ಕೊತ್ತಂಬರಿ ಸೊಪ್ಪು– ಸ್ವಲ್ಪ.

ತಯಾರಿಸುವ ವಿಧಾನ: ದೊಡ್ಡ ಬೌಲ್‌ನಲ್ಲಿ ಎರಡು ಕಪ್ ಮೈದಾಹಿಟ್ಟು ಹಾಕಿ, ಅರ್ಧ ಚಮಚ ಉಪ್ಪು, ಕಾಲು ಚಮಚ ಅಜ್ವಾನ, 4 ಟೇಬಲ್ ಚಮಚ ಎಣ್ಣೆ ಹಾಗೂ ಸ್ವಲ್ಪ ನೀರು ಸೇರಿಸಿ ಹಿಟ್ಟನ್ನು ಗಟ್ಟಿಯಾಗಿ ಕಲೆಸಿಕೊಂಡು ಅರ್ಧ ಗಂಟೆ ಇಡಬೇಕು. ಪಾತ್ರೆಗೆ 2 ಚಮಚ ಎಣ್ಣೆ ಹಾಕಿ ಬಿಸಿಯಾದ ಮೇಲೆ ಹೆಚ್ಚಿದ ಹಸಿಮೆಣಸು, ಜಜ್ಜಿದ ಬೆಳ್ಳುಳ್ಳಿ, ಸಣ್ಣದಾಗಿ ಹೆಚ್ಚಿದ ಈರುಳ್ಳಿ, ಸ್ಮ್ಯಾಷ್ ಮಾಡಿಟ್ಟುಕೊಂಡ ಆಲೂಗೆಡ್ಡೆ, ಕಾಲು ಚಮಚ ಅರಿಸಿನ, ಖಾರದಪುಡಿ, –ಗರಂಮಸಾಲೆ, ಆಮ್ಚೂರ್‌ ಪುಡಿ, ಚಾಟ್‌ ಮಸಾಲ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ ಬೇಯಿಸಿದ ಬಟಾಣಿ ಕಾಳು ಸೇರಿಸಿ, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ ಸಮೋಸ ಮಸಾಲೆ ರೆಡಿ ಆಗುತ್ತದೆ. ನಂತರ ಮೊದಲೇ ನಾದಿಟ್ಟುಕೊಂಡ ಹಿಟ್ಟಿನಿಂದ ದೊಡ್ಡ ಉಂಡೆ ಮಾಡಿ ಪೂರಿ ಆಕಾರಕ್ಕೆ ಲಟ್ಟಿಸಿಕೊಳ್ಳಿ. ಒಂದು ಪೂರಿಯನ್ನು ಸಮ ಭಾಗ ಅರ್ಧ ಮಾಡಿಕೊಳ್ಳಿ, ಅದನ್ನು ಕೋನ್‌ ಆಕಾರಕ್ಕೆ ಮಡಿಸಿ ಮಸಾಲೆ ಸೇರಿಸಿ ಎಲ್ಲಿಯೂ ತೂತಾಗದಂತೆ ಮಡಿಸಿ ಎಣ್ಣೆಯಲ್ಲಿ ಕರಿಯಿರಿ. ಈಗ ರುಚಿಯಾದ ಸಮೋಸ ತಿನ್ನಲು ರೆಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.