ಹಂದಿಮಾಂಸದ ಸಾರು
ಬೇಕಾಗುವ ಸಾಮಗ್ರಿಗಳು: ಪೋರ್ಕ್ – 1ಕೆ.ಜಿ. (ಹೆಚ್ಚುಮಾಂಸ ಮತ್ತು ದಪ್ಪ ಕಡಿಮೆಯಿರುವ ಸ್ವಲ್ಪ ಚರ್ಬಿ), ಶುಂಠಿ – 2ಇಂಚು ಉದ್ದದ್ದು, ಬೆಳ್ಳುಳ್ಳಿ – 2ಉಂಡೆ, ಪುದೀನಸೊಪ್ಪು – ಸ್ವಲ್ಪ, ಕೊತ್ತಂಬರಿಪುಡಿ – 3ಚಮಚ, ಖಾರದ ಪುಡಿ – 3ಚಮಚ, ಅರಿಸಿನಪುಡಿ – ಸ್ವಲ್ಪ, ಗರಂ ಮಸಾಲೆ – 1ಚಮಚ, ಗಸೆಗಸೆ – 1ಚಮಚ, ಈರುಳ್ಳಿ – 3, ಟೊಮೆಟೊ – 2, ಕಾಯಿ ಅರ್ಧ ಹೋಳು, ಉಪ್ಪು ರುಚಿಗೆ ತಕ್ಕಷ್ಟು.
ತಯಾರಿಸುವ ವಿಧಾನ:ಈರುಳ್ಳಿ, ಟೊಮೆಟೊ, ಶುಂಠಿ-ಬೆಳ್ಳುಳ್ಳಿ, ಕಾಯಿ, ಗಸೆಗಸೆ, ಕೊತ್ತಂಬರಿ, ಪುದೀನ, ಗರಂಮಸಾಲೆ, ಕೊತ್ತಂಬರಿಪುಡಿ, ಖಾರದಪುಡಿ, ಅರಿಸಿನಪುಡಿ ಮತ್ತು ನೀರು ಹಾಕಿ ರುಬ್ಬಿಟ್ಟುಕೊಳ್ಳಿ.
ಚೆನ್ನಾಗಿ ತೊಳೆದ ಪೋರ್ಕ್ ಮತ್ತು ಉಪ್ಪನ್ನು ಕುಕ್ಕರ್‌ಗೆ ಹಾಕಿ ಮಾಂಸಕ್ಕೆ ಉಪ್ಪು ಹಿಡಿಯುವ ತನಕ ಸ್ವಲ್ಪ ಫ್ರೈ ಮಾಡಿ. ನಂತರ ರುಬ್ಬಿದ ಮಸಾಲೆ ಸ್ವಲ್ಪ ಪ್ರಮಾಣದಲ್ಲಿ ನೀರು ಹಾಕಿ ಚೆನ್ನಾಗಿ ಮಿಕ್ಸ್ ಆಗುವಂತೆ ತಿರುಗಿಸಿ ಕುಕ್ಕರ್ ಮುಚ್ಚಳ ಮುಚ್ಚಿ ಮುಕ್ಕಾಲು ಭಾಗ ಬೇಯಿಸಿ ನಂತರ ಮುಚ್ಚಳ ತೆಗೆದು ಚೆನ್ನಾಗಿ ಬೇಯಿಸಿ (ಒಗ್ಗರಣೆಗೆ ಎಣ್ಣೆಯ ಅವಶ್ಯಕತೆಯಿಲ್ಲ).
ಪೋರ್ಕ್ ಡ್ರೈ ಫ್ರೈ
ಬೇಕಾಗುವ ಸಾಮಗ್ರಿಗಳು: ಪೋರ್ಕ್ – 1ಕೆ.ಜಿ. (ಮಾಂಸ ಮತ್ತು ಚರ್ಬಿ), ಶುಂಠಿಪೇಸ್ಟ್ – 1ಚಮಚ, ಬೆಳ್ಳುಳ್ಳಿ – 3ಉಂಡೆ, ಕೊತ್ತಂಬರಿಸೊಪ್ಪು – ಸ್ವಲ್ಪ, ಪುದೀನಸೊಪ್ಪು – ಸ್ವಲ್ಪ, ಕರಿಬೇವು – 1ಕಡ್ಡಿ, ಖಾರದಪುಡಿ – 1ಚಮಚ, ಕೊತ್ತಂಬರಿಪುಡಿ – 6ಚಮಚ, ಅರಿಸಿನಪುಡಿ – 1/2ಚಮಚ, ಪೆಪ್ಪರ್‌ಪುಡಿ - 1ಚಮಚ, ಈರುಳ್ಳಿ - 3, ಹಸಿ ಮೆಣಸಿನಕಾಯಿ - 8, ನಿಂಬೆಹಣ್ಣು, ಎಣ್ಣೆ, ಸಾಸಿವೆ, ಉಪ್ಪು ರುಚಿಗೆ ತಕ್ಕಷ್ಟು.
ತಯಾರಿಸುವ ವಿಧಾನ: ಚೆನ್ನಾಗಿ ತೊಳೆದ ಪೋರ್ಕ್‍ಗೆ ಅರಿಸಿನಪುಡಿ, ಖಾರದಪುಡಿ ಮತ್ತು ಸ್ವಲ್ಪ ಉಪ್ಪನ್ನು ಬೆರೆಸಿ ಕುಕ್ಕರ್‌ನಲ್ಲಿ ಬೇಯಿಸಿ ಬಸಿದಿಟ್ಟುಕೊಳ್ಳಿ. ಕೊತ್ತಂಬರಿಪುಡಿಯನ್ನು ಕಾವಲಿ ಮೇಲೆ ಸಣ್ಣ ಉರಿಯಲ್ಲಿ ಸ್ವಲ್ಪ ಕಂದುಬಣ್ಣ ಬರುವವರೆಗೂ ಹುರಿದಿಟ್ಟುಕೊಳ್ಳಿ. ತೆರೆದ ಪಾತ್ರೆಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಸಿಡಿಸಿ ಜಜ್ಜಿದ ಬೆಳ್ಳುಳ್ಳಿ, ಕತ್ತರಿಸಿದ ಹಸಿಮೆಣಸಿನಕಾಯಿ ಮತ್ತು ಈರುಳ್ಳಿ ಹಾಕಿ ಕಂದುಬಣ್ಣ ಬರುವವರೆಗೆ ಫ್ರೈ ಮಾಡಿ. ಆಮೇಲೆ ಶುಂಠಿ ಪೇಸ್ಟ್, ಪುದೀನಸೊಪ್ಪು, ಬೆಂದ ಪೋರ್ಕ್, ಉಪ್ಪು, ಪೆಪ್ಪರ್‌ಪುಡಿ ಹಾಕಿ ಬೇಯಲು ಬಿಡಿ. ನಂತರ ಕತ್ತರಿಸಿದ ಕೊತ್ತಂಬರಿ ಮತ್ತು ಕರಿಬೇವಿನ ಸೊಪ್ಪನ್ನು ಹಾಕಿ ಸ್ವಲ್ಪ ಬೇಯಿಸಿ ನಂತರ ಸಣ್ಣ ಉರಿ ಮಾಡಿ ಹುರಿದ ಕೊತ್ತಂಬರಿಪುಡಿಯನ್ನು ಹಾಕಿ ಚೆನ್ನಾಗಿ ತಿರುಗಿಸುತ್ತೀರಿ, ಇದಾದ ಮೇಲೆ ನಿಂಬೆಹಣ್ಣಿನ ರಸವನ್ನು ಹಾಕಿ ತಿನ್ನಲು ಕೊಡಿ.
ಪೋರ್ಕ್ ರೋಸ್ಟ್
ಬೇಕಾಗುವ ಸಾಮಗ್ರಿಗಳು: ಪೋರ್ಕ್ – 1ಕೆ.ಜಿ. (ಮಾಂಸ ಮತ್ತು ಚರ್ಬಿ), ಶುಂಠಿ – 2ಇಂಚು ಉದ್ದ, ಬೆಳ್ಳುಳ್ಳಿ – 3ಉಂಡೆ, ಕೊತ್ತಂಬರಿ ಸೊಪ್ಪು – 1ಕಪ್, ಪುದೀನಸೊಪ್ಪು – 1ಕಪ್, ಖಾರದ ಪುಡಿ – 2ಚಮಚ, ಕೊತ್ತಂಬರಿಪುಡಿ – 6ಚಮಚ, ಅರಿಸಿನಪುಡಿ – ಸ್ವಲ್ಪ, ಪೆಪ್ಪರ್ ಪುಡಿ – 1ಚಮಚ, ಈರುಳ್ಳಿ – 2, ಹಸಿ ಮೆಣಸಿನಕಾಯಿ – 8, ಟೊಮೊಟೊ – 1, ನಿಂಬೆಹಣ್ಣು, ಎಣ್ಣೆ, ಸಾಸಿವೆ, ಉಪ್ಪು ರುಚಿಗೆ ತಕ್ಕಷ್ಟು.
ತಯಾರಿಸುವ ವಿಧಾನ:ಚೆನ್ನಾಗಿ ತೊಳೆದ ಪೋರ್ಕ್‍ಗೆ ಅರಿಸಿನಪುಡಿ, ಖಾರದ ಪುಡಿ ಮತ್ತು ಸ್ವಲ್ಪ ಉಪ್ಪನ್ನು ಬೆರೆಸಿ ನೀರು ಹಾಕದೆ ಕುಕ್ಕರ್‌ನಲ್ಲಿ ಬೇಯಿಸಿಕೊಳ್ಳಿ.ಕೊತ್ತಂಬರಿಪುಡಿಯನ್ನು ಕಾವಲಿ ಮೇಲೆ ಸಣ್ಣ ಉರಿಯಲ್ಲಿ ಸ್ವಲ್ಪ ಕಪ್ಪುಬಣ್ಣ ಬರುವವರೆಗೂ ಹುರಿದಿಟ್ಟುಕೊಳ್ಳಿ.
ತೆರೆದ ಪಾತ್ರೆಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಸಿಡಿಸಿ ಜಜ್ಜಿದ ಹಸಿಮೆಣಸಿನಕಾಯಿ, ಜಜ್ಜಿದ ಬೆಳ್ಳುಳ್ಳಿ ಮತ್ತು ಈರುಳ್ಳಿ ಹಾಕಿ ಕಂದುಬಣ್ಣ ಬರುವವರೆಗೆ ಫ್ರೈ ಮಾಡಿ. ನಂತರ ಜಜ್ಜಿದ ಶುಂಠಿ, ಟೊಮೆಟೊ ಉದ್ದುದ್ದ ಕತ್ತರಿಸಿದ ಕೊತ್ತಂಬರಿ ಮತ್ತು ಪುದೀನಸೊಪ್ಪನ್ನು ಹಾಕಿದ ನಂತರ ಬೆಂದ ಪೋರ್ಕ್ ಮಾತ್ರ ಹಾಕಿ (ಬೆಂದ ನೀರನ್ನು ಹಾಕಬೇಡಿ), ಉಪ್ಪು, ಪೆಪ್ಪರ್‌ಪುಡಿ ಹಾಕಿ, ಸ್ವಲ್ಪ ಖಾರದ ಪುಡಿ ಹಾಕಿ ಬೇಯಲು ಬಿಡಿ.
ಬೆಂದ ನಂತರ ಸಣ್ಣ ಉರಿ ಮಾಡಿ ಹುರಿದ ಕೊತ್ತಂಬರಿ ಪುಡಿ ಹಾಕಿ ಚೆನ್ನಾಗಿ ತಿರುಗಿಸುತ್ತೀರಿ, ಇದಾದ ಮೇಲೆ ಅರ್ಧ ಹೋಳು ನಿಂಬೆಹಣ್ಣಿನ ರಸವನ್ನು ಹಾಕಿ ಮುಚ್ಚಳ ಮುಚ್ಚಿ ಒಂದೆರೆಡು ನಿಮಿಷ ಬೇಯಿಸಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.