ADVERTISEMENT

ಸಿಗಡಿ ಘೀ ರೋಸ್ಟ್‌, ಸುಕ್ಕದ ಗಮ್ಮತ್ತು

ಪವಿತ್ರಾ ರಾಘವೇಂದ್ರ ಶೆಟ್ಟಿ
Published 13 ಡಿಸೆಂಬರ್ 2019, 19:30 IST
Last Updated 13 ಡಿಸೆಂಬರ್ 2019, 19:30 IST
ಸಿಗಡಿ ಘೀ ರೋಸ್ಟ್‌
ಸಿಗಡಿ ಘೀ ರೋಸ್ಟ್‌   

ಸಿಗಡಿ ಘೀ ರೋಸ್ಟ್

ಬೇಕಾಗುವ ಸಾಮಗ್ರಿಗಳು ಹಾಗೂ ತಯಾರಿಸುವ ವಿಧಾನ: ಮೊದಲಿಗೆ ಅರ್ಧ ಕೆಜಿ ಸಿಗಡಿ ತೆಗೆದುಕೊಂಡು ಅದರ ಮೇಲಿನ ಸಿಪ್ಪೆಯನ್ನು ತೆಗೆದು ತೊಳೆದಿಟ್ಟುಕೊಳ್ಳಿ. ನಂತರ ಒಂದು ಬೌಲ್‌ಗೆ 2 ದೊಡ್ಡ ಚಮಚದಷ್ಟು ಮೊಸರು, 1ಟೀ ಚಮಚದಷ್ಟು ಅರಿಸಿನ, 2 ಟೀ ಚಮಚದಷ್ಟು ಖಾರದಪುಡಿ, ಸ್ವಲ್ಪ ಉಪ್ಪು, 1 ಟೇಬಲ್ ಚಮಚದಷ್ಟು ನಿಂಬೆರಸ ಹಾಕಿ ಅದಕ್ಕೆ ತೊಳೆದಿಟ್ಟುಕೊಂಡ ಸಿಗಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಅರ್ಧ ಗಂಟೆ ಹಾಗೇ ಇಟ್ಟು ಬಿಡಿ. ಇದು ಚೆನ್ನಾಗಿ ಮ್ಯಾರಿನೇಟ್ ಆಗಲಿ.

ಇನ್ನು ಮಸಾಲೆಗೆ ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ 5 ಬ್ಯಾಡಗಿ ಮೆಣಸು, 1 ಟೀ ಚಮಚ ಜೀರಿಗೆ, ¼ ಟೀ ಚಮಚ ಸಾಸಿವೆ, 6 ಕಾಳು ಮೆಂತ್ಯೆ, 2 ಟೀ ಚಮಚ ಕೊತ್ತಂಬರಿ ಕಾಳು, 8 ಕಾಳಿನಷ್ಟು ಕಾಳುಮೆಣಸು ಹಾಕಿ ಪರಿಮಳ ಬರುವವರೆಗೆ ಹುರಿದಿಟ್ಟುಕೊಳ್ಳಿ. ಹುರಿದ ಮಸಾಲೆ ತಣ್ಣಗಾದ ಮೇಲೆ ಅದನ್ನು ಮಿಕ್ಸಿ ಜಾರಿಗೆ ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಿ. ನಂತರ ಅದಕ್ಕೆ 5 ಎಸಳು ಬೆಳ್ಳುಳ್ಳಿ, 1 ಚಮಚದಷ್ಟು ಹುಣಸೆಹಣ್ಣಿನ ರಸ, ಸ್ವಲ್ಪ ನೀರು ಹಾಕಿ ನಯವಾಗಿ ರುಬ್ಬಿಕೊಳ್ಳಿ.

ADVERTISEMENT

ಗ್ಯಾಸ್ ಮೇಲೆ ತವಾ ಇಟ್ಟು ಅದಕ್ಕೆ 3 ಚಮಚ ತುಪ್ಪ ಹಾಕಿ. ತುಪ್ಪ ಕರಗಿದ ನಂತರ ಅದಕ್ಕೆ ಮ್ಯಾರಿನೇಟ್ ಮಾಡಿಟ್ಟುಕೊಂಡ ಸಿಗಡಿ ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ಸಿಗಡಿ ಹದವಾಗಿ ಬೆಂದ ನಂತರ ಅದಕ್ಕೆ ರುಬ್ಬಿಟ್ಟುಕೊಂಡ ಮಸಾಲೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಉಪ್ಪು ಬೇಕಿದ್ದರೆ ತುಸು ಸೇರಿಸಿಕೊಂಡು ಮಸಾಲೆ ಸರಿಯಾಗಿ ಬೇಯುವವರೆಗೂ ಕೈಯಾಡಿಸಿ. ನಂತರ ಅದಕ್ಕೆ 4 -5 ಎಸಳು ಕರಿಬೇವು ಸೊಪ್ಪು ಹಾಕಿದರೆ ಸಿಗಡಿ ಘೀ ರೋಸ್ಟ್ ಸಿದ್ಧ.

ಸಿಗಡಿ ಬಿರಿಯಾನಿ

ಬೇಕಾಗುವ ಸಾಮಗ್ರಿಗಳು: ಅರ್ಧ ಕೆಜಿಯಷ್ಟು ಸಿಗಡಿಯನ್ನು ಸರಿಯಾಗಿ ಕ್ಲೀನ್ ಮಾಡಿಟ್ಟುಕೊಳ್ಳಿ. ನಂತರ ಒಂದು ಬೌಲ್‌ಗೆ 3 ಚಮಚದಷ್ಟು ಮೊಸರು, ½ ಚಮಚ ಅಚ್ಚ ಖಾರದ ಪುಡಿ, 1 ಚಮಚ ಬಿರಿಯಾನಿ ಮಸಾಲಾ, ½ ಟೀ ಸ್ಪೂನ್ ಅರಿಸಿನ, ½ ಚಮಚದಷ್ಟು ಗರಂ ಮಸಾಲಾ, ½ ಚಮಚದಷ್ಟು ಕೊತ್ತಂಬರಿ ಪುಡಿ, 1 ಚಮಚದಷ್ಟು ಉಪ್ಪು, ½ ನಿಂಬೆರಸ, ಸ್ವಲ್ಪ ಪುದಿನಾ ಸೊಪ್ಪು, ಸ್ವಲ್ಪ ಕೊತ್ತಂಬರಿ ಸೊಪ್ಪು, 1 ಹಸಿಮೆಣಸು ಅಡ್ಡ ಸೀಳಿದ್ದು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಕ್ಲೀನ್ ಮಾಡಿಟ್ಟುಕೊಂಡ ಸಿಗಡಿ ಹಾಕಿ 1 ಗಂಟೆ ನೆನೆಸಿಟ್ಟುಕೊಳ್ಳಿ.

‌ತಯಾರಿಸುವ ವಿಧಾನ: ದಪ್ಪ ತಳದ ಅಗಲವಾದ ಪಾತ್ರೆಯನ್ನು ಒಲೆಯ ಮೇಲಿಟ್ಟು ಅದಕ್ಕೆ 4 ಟೇಬಲ್ ಚಮಚ ಎಣ್ಣೆ, 3 ಟೇಬಲ್ ಚಮಚದನಷ್ಟು ತುಪ್ಪ ಹಾಕಿ. ನಂತರ ಅದಕ್ಕೆ ಚಕ್ಕೆ 3 ಲವಂಗ, 2 ಏಲಕ್ಕಿ, ಬಿರಿಯಾನಿ ಎಲೆ ಹಾಕಿ. ನಂತರ 2 ಹದ ಗಾತ್ರದ ಈರುಳ್ಳಿಯನ್ನು ಕತ್ತರಿಸಿ ಹಾಕಿ. ಈರುಳ್ಳಿ ಕಂದು ಬಣ್ಣಕ್ಕೆ ತಿರುಗಿದಾಗ ಮ್ಯಾರಿನೇಟ್ ಮಾಡಿಟ್ಟುಕೊಂಡ ಸಿಗಡಿ ಹಾಕಿ. ಬೇಕಿದ್ದರೆ ತುಸು ಉಪ್ಪು, ಸ್ವಲ್ಪ ನೀರು ಸೇರಿಸಿ 10 ನಿಮಿಷಗಳ ಕಾಲ ಬೇಯಿಸಿಕೊಂಡು ನಂತರ ಗ್ಯಾಸ್ ಆಫ್ ಮಾಡಿ.

ಬಿರಿಯಾನಿ ಅನ್ನ ಮಾಡುವ ವಿಧಾನ

ಒಂದು ಅಗಲಾದ ಪಾತ್ರೆಯನ್ನು ಗ್ಯಾಸ್ ಮೇಲಿಟ್ಟು ಅದಕ್ಕೆ 8 ಗ್ಲಾಸ್ ನೀರು ಹಾಕಿ. ಅದು ಕುದಿ ಬಂದ ನಂತರ ಅದಕ್ಕೆ 2 ಏಲಕ್ಕಿ, 2 ಲವಂಗ, ಬಿರಿಯಾನಿ ಎಲೆ ಹಾಕಿ. ಆಮೇಲೆ ಅದಕ್ಕೆ ನೆನೆಸಿಟ್ಟುಕೊಂಡ ಬಿರಿಯಾನಿ ಅಕ್ಕಿ 2 ಲೋಟ ಹಾಕಿ. ಅದಕ್ಕೆ ಒಂದು ಚಮಚ ತುಪ್ಪ ಸೇರಿಸಿ(ಬಿರಿಯಾನಿ ಅಕ್ಕಿಯನ್ನು ಅರ್ಧ ಗಂಟೆ ಮೊದಲೇ ನೆನೆಸಿಟ್ಟುಕೊಂಡಿರಿ) ಅನ್ನ ಶೇ 80ರಷ್ಟು ಬೆಂದ ನಂತರ ಗ್ಯಾಸ್ ಆಫ್ ಮಾಡಿ. ಅನ್ನವನ್ನು ಬಸಿದಿಟ್ಟುಕೊಳ್ಳಿ.

ನಂತರ ಮಾಡಿಟ್ಟುಕೊಂಡ ಸಿಗಡಿ ಮಿಶ್ರಣದ ಮೇಲೆ ಈ ಬಸಿದಿಟ್ಟುಕೊಂಡ ಅನ್ನವನ್ನು ಚೆನ್ನಾಗಿ ಹರಡಿ. ಅದರ ಮೇಲೆ ಕೊತ್ತಂಬರಿ ಸೊಪ್ಪು, ಪುದಿನಾ ಸೊಪ್ಪು, ಅರ್ಧ ನಿಂಬೆರಸ, ಒಂದು ಚಮಚ ತುಪ್ಪ ಹಾಕಿ ಮುಚ್ಚಳ ಮುಚ್ಚಿ.

ಗ್ಯಾಸ್ ಮೇಲೆ ಸಣ್ಣ ಉರಿಯೊಂದಿಗೆ ಒಂದು ತವಾ ಇಡಿ. ತವಾ ಬಿಸಿಯಾದ ಮೇಲೆ ಈ ಬಿರಿಯಾನಿ ಮಿಶ್ರಣದ ಪಾತ್ರೆಯನ್ನು ಇಡಿ. ಪಾತ್ರೆಯ ಮೇಲೆ ಭಾರವಾದ ವಸ್ತುವನ್ನು ಇಡಿ. (ಉದಾ:ಶುಂಠಿ, ಬೆಳ್ಳುಳ್ಳಿ ಜಜ್ಜುವ ಕಲ್ಲು) ಹದ ಉರಿಯಲ್ಲಿ 20 ನಿಮಿಷಗಳಷ್ಟು ಕಾಲ ಬೇಯಿಸಿಕೊಂಡರೆ ಸಿಗಡಿ ಬಿರಿಯಾನಿ ಸಿದ್ಧ.

ಗಸಿ

ಬೇಕಾಗುವ ಸಾಮಗ್ರಿಗಳು: ½ ಕೆಜಿ ಸಿಗಡಿಯನ್ನು ಚೆನ್ನಾಗಿ ಕ್ಲೀನ್ ಮಾಡಿಟ್ಟುಕೊಳ್ಳಿ. ನಂತರ ಒಂದು ಬಾಣಲೆಗೆ 2 ಚಮಚ ದಷ್ಟು ಕೊತ್ತಂಬರಿ ಕಾಳು, ½ ಚಮಚ ಜೀರಿಗೆ, 8– 10 ಕಾಳು ಮೆಂತ್ಯೆ, ½ ಟೀ ಚಮಚದಷ್ಟು ಓಮದ ಕಾಳು ಹಾಕಿ ಹುರಿದಿಟ್ಟುಕೊಳ್ಳಿ. ನಂತರ ಅದೇ ಬಾಣಲೆಗೆ 4ರಿಂದ 5 ರಷ್ಟು ಬ್ಯಾಡಗಿ ಮೆಣಸನ್ನು ಹಾಕಿ ಹುರಿದಿಟ್ಟುಕೊಳ್ಳಿ. ಹುರಿದಿಟ್ಟುಕೊಂಡ ಪದಾರ್ಥಗಳು ತಣ್ಣಗಾದ ಮೇಲೆ ಒಂದು ಮಿಕ್ಸಿ ಜಾರಿಗೆ ಇದನ್ನೆಲ್ಲಾ ಹಾಕಿ. 4 ಎಸಳು ಬೆಳ್ಳುಳ್ಳಿ, ಒಂದು ಸಣ್ಣ ಈರುಳ್ಳಿ, ನಿಂಬೆಹಣ್ಣಿನ ಗಾತ್ರದ ಹುಣಸೆಹಣ್ಣಿನ ರಸ ಹಾಕಿ ನಯವಾಗಿ ರುಬ್ಬಿಟ್ಟುಕೊಳ್ಳಿ. ರುಬ್ಬಿಕೊಂಡ ಮಿಶ್ರಣವನ್ನು ಒಂದು ದಪ್ಪ ತಳದ ಪಾತ್ರೆಗೆ ಹಾಕಿ ಅದಕ್ಕೆ ಒಂದು ಹದ ಗಾತ್ರದ ಈರುಳ್ಳಿಯನ್ನು ಕತ್ತರಿಸಿ ಹಾಕಿ. ಹಾಗೆಯೇ ಒಂದು ಹಸಿಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಕರಿಬೇವಿನ ಎಸಳು 4ರಿಂದ 5 ಹಾಕಿ. ಮಿಶ್ರಣ ದಪ್ಪಗಾಗಿದ್ದರೆ ತುಸು ನೀರು ಸೇರಿಸಿ ಕುದಿಸಿಕೊಳ್ಳಿ. ಈ ಮಿಶ್ರಣಕ್ಕೆ ಸಿಗಡಿಯನ್ನು ಹಾಕಿ ಚೆನ್ನಾಗಿ ಕುದಿಸಿದರೆ ಸಿಗಡಿ ಗಸಿ ರೆಡಿ.

ಸಿಗಡಿ ಸುಕ್ಕ

ಸಿಗಡಿಯನ್ನು ಚೆನ್ನಾಗಿ ತೊಳೆದು ಅದಕ್ಕೆ ಸ್ವಲ್ಪ ಖಾರದ ಪುಡಿ, ಉಪ್ಪು, 1 ಟೀ ಸ್ಪೂನ್ ಅರಿಸಿನ, 1 ಟೇಬಲ್ ಸ್ಪೂನ್ ನಿಂಬೆರಸ ಹಾಕಿ ಮ್ಯಾರಿನೇಟ್ ಮಾಡಿಟ್ಟುಕೊಳ್ಳಿ. ನಂತರ ಒಂದು ಬಾಣಲೆಯನ್ನು ಒಲೆಯ ಮೇಲಿಟ್ಟು ಅದಕ್ಕೆ 2 ಚಮಚ ಕೊತ್ತಂಬರಿ ಕಾಳು, ½ ಚಮಚ ಜೀರಿಗೆ, 6 ಕಾಳು ಮೆಂತ್ಯೆ, ½ ಚಮಚ ಕಾಳು ಮೆಣಸು, ½ ಟೀ ಸ್ಪೂನ್ ಓಮದ ಕಾಳು ಹಾಕಿ ಹುರಿದಿಟ್ಟುಕೊಳ್ಳಿ. ನಂತರ ಅದೇ ಬಾಣಲೆಗೆ 5-6 ಬ್ಯಾಡಗಿ ಮೆಣಸು ಹಾಕಿ ಹುರಿಯಿರಿ. ಇದನ್ನೆಲ್ಲಾ ಒಂದು ಮಿಕ್ಸಿ ಜಾರಿಗೆ ಹಾಕಿ 6 ಎಸಳು ಬೆಳ್ಳುಳ್ಳಿ, 1 ನೆಲ್ಲಿಕಾಯಿ ಗಾತ್ರದಷ್ಟು ಹುಣಸೆ ಹಣ್ಣು ಹಾಕಿ ರುಬ್ಬಿಕೊಳ್ಳಿ. ನೀರು ಸೇರಿಸಬೇಡಿ. ನಂತರ ಒಂದು ಬಾಣಲೆಗೆ 4 ದೊಡ್ಡ ಚಮಚದಷ್ಟು ಎಣ್ಣೆ ಹಾಕಿ ಅದು ಬಿಸಿಯಾದ ಮೇಲೆ ಸಿಗಡಿಯನ್ನು ಹಾಕಿ ಹುರಿಯಿರಿ. ಸಿಗಡಿ ಬೆಂದ ನಂತರ ಅದನ್ನು ಒಂದು ತಟ್ಟೆಗೆ ತೆಗೆದಿಟ್ಟುಕೊಳ್ಳಿ.

ನಂತರ ಒಂದು ಅಗಲವಾದ ಪಾತ್ರೆಗೆ 3 ಚಮಚದಷ್ಟು ಎಣ್ಣೆ ಹಾಕಿ. ಅದು ಬಿಸಿಯಾದ ಮೇಲೆ 1 ಚಮಚದಷ್ಟು ಸಾಸಿವೆ ಹಾಕಿ. ಸಾಸಿವೆ ಸಿಡಿದಾಗ, 4 ಎಸಳು ಜಜ್ಜಿದ ಬೆಳ್ಳುಳ್ಳಿ, 1 ದೊಡ್ಡ ಗಾತ್ರದ ಈರುಳ್ಳಿ ಕತ್ತರಿಸಿ ಹಾಕಿ. 8 ಎಸಳು ಕರಿಬೇವಿನ ಎಲೆ ಹಾಕಿ. ಈರುಳ್ಳಿ ತುಸು ಕೆಂಪಾದ ಮೇಲೆ ಹುರಿದಿಟ್ಟುಕೊಂಡ ಸಿಗಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇದಕ್ಕೆ ಮಿಕ್ಸಿ ಜಾರಿನಲ್ಲಿದ್ದ ಮಸಾಲೆ ಸೇರಿಸಿ 5 ನಿಮಿಷಗಳ ಕಾಲ ಚೆನ್ನಾಗಿ ಕೈಯಾಡಿಸುತ್ತಾ ಇರಿ. ಆಮೇಲೆ ½ ಕಪ್‌ನಷ್ಟು ತೆಂಗಿನಕಾಯಿ ತುರಿ ಸೇರಿಸಿ ಚೆನ್ನಾಗಿ ಕೈಯಾಡಿಸಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿದರೆ ಸಿಗಡಿ ಸುಕ್ಕಾ ತಯಾರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.