ADVERTISEMENT

ನಳಪಾಕ: ಬಾಳೆಕಾಯಿ ರೋಸ್ಟ್‌ ಸಮೋಸ, ನಗ್ಗೆಟ್ಸ್

ಸೌಖ್ಯ ಮೋಹನ್
Published 3 ಡಿಸೆಂಬರ್ 2021, 19:30 IST
Last Updated 3 ಡಿಸೆಂಬರ್ 2021, 19:30 IST
   

ರೋಸ್ಟ್
ಬೇಕಾಗುವ ಸಾಮಗ್ರಿಗಳು:
ಬಾಳೆಕಾಯಿ 2-3, ಅಕ್ಕಿಹಿಟ್ಟು 3-4 ಚಮಚ, ಖಾರದಪುಡಿ – ಎರಡು ಚಮಚ, ಕಾರ್ನ್‌ಫ್ಲೋರ್ - 3 ರಿಂದ 4 ಚಮಚ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕರಿಯಲು ಎಣ್ಣೆ, ಹಸಿಮೆಣಸು 4ರಿಂದ 5, ಬೆಳ್ಳುಳ್ಳಿ 5ರಿಂದ 6, ಈರುಳ್ಳಿ – ಅರ್ಧ, ಟೊಮೆಟೊ ಸಾಸ್ ಮತ್ತು ಸೋಯಾ ಸಾಸ್ ಸ್ವಲ್ಪ.

ತಯಾರಿಸುವ ವಿಧಾನ: ಬಾಳೆಕಾಯಿ ಬೇಯಿಸಿ ಮೇಲಿನ ಸಿಪ್ಪೆ ತೆಗೆದುಕೊಂಡು ಮಧ್ಯಕ್ಕೆ ಉದ್ದವಾಗಿ ಕತ್ತರಿಸಿ. ಅಕ್ಕಿಹಿಟ್ಟು, ಉಪ್ಪು, ಮೆಣಸಿನಪುಡಿ, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್, ಕಾರ್ನ್‌ಫ್ಲೋರ್‌ಗೆ ನೀರು ಹಾಕಿ ಗಂಟಿಲ್ಲದಂತೆ ಕಲೆಸಿ. ಅದರಲ್ಲಿ ಕತ್ತರಿಸಿದ ಬಾಳೆಕಾಯಿ ಹಾಕಿ. ಎಣ್ಣೆಯಲ್ಲಿ ಕರಿಯಿರಿ. ಇನ್ನೊಂದು ಬಾಣಲೆಯಲ್ಲಿಸ್ವಲ್ಪ ಎಣ್ಣೆ ಹಾಕಿ ಉದ್ದುದ್ದಕ್ಕೆ ಕತ್ತರಿಸಿದ ಹಸಿಮೆಣಸು, ಬೆಳ್ಳುಳ್ಳಿ ಹಾಕಿ ಹುರಿಯಿರಿ. ಟೊಮೆಟೊ ಸಾಸ್ ಮತ್ತು ಚಿಟಿಕೆ ಉಪ್ಪು ಸೇರಿಸಿ ಹುರಿಯಿರಿ (ಸೋಯಾ ಸಾಸ್ ಕೂಡಾ ಜೊತೆಗೆ ಸೇರಿಸಬಹುದು). ನಂತರ ಕರಿದ ಬಾಳೆಕಾಯಿ ಸೇರಿಸಿ. ರೋಸ್ಟ್ ಆಗುವವರೆಗೆ ಹುರಿಯಿರಿ.

***

ADVERTISEMENT

ಸಮೋಸ
ಬೇಕಾಗುವ ಸಾಮಗ್ರಿಗಳು:
ಗೋಧಿಹಿಟ್ಟು – 2 ಕಪ್‌, ಓಂ ಕಾಳು – ಕಾಲು ಚಮಚ, ಉಪ್ಪು – ರುಚಿಗೆ, ತುಪ್ಪ – 4 ಚಮಚ

ಹೂರಣಕ್ಕೆ: ಬಾಳೆಕಾಯಿ ನಾಲ್ಕೈದು, ಹಸಿರು ಬಟಾಣಿ ಅರ್ಧ ಕಪ್, ಉಪ್ಪು, ಎಣ್ಣೆ ನಾಲ್ಕು ಚಮಚ, ಜೀರಿಗೆ, ಜೀರಿಗೆ ಪುಡಿ, ಅರಿಸಿನ ಪುಡಿ, ಕೊತ್ತಂಬರಿ ಪುಡಿ, ಗರಂಮಸಾಲ, ಖಾರದಪುಡಿ ಎಲ್ಲವೂ ಸ್ವಲ್ಪ, ಕರಿಯಲು ಎಣ್ಣೆ.

ತಯಾರಿಸುವ ವಿಧಾನ: ಮೊದಲು ಹಸಿರು ಬಟಾಣಿಯನ್ನು ನೆನೆಸಿಡಿ. ಬಾಳೆಕಾಯಿ ಹಾಗೂ ಹಸಿರು ಬಟಾಣಿಯನ್ನು ಕುಕ್ಕರಿನಲ್ಲಿ ಮೆತ್ತಗೆ ಬೇಯಿಸಿ. ಗೋಧಿಹಿಟ್ಟಿಗೆ ಓಂಕಾಳು, ಉಪ್ಪು, ಮೂರು ಚಮಚ ತುಪ್ಪ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಆಮೇಲೆ ಅಗತ್ಯವಿದ್ದಷ್ಟು ನೀರನ್ನು ಹಾಕಿ ಚಪಾತಿ ಹಿಟ್ಟಿಗಿಂತಲೂ ಗಟ್ಟಿಯಾಗಿ ಚೆನ್ನಾಗಿ ಕಲೆಸಿಡಿ. ಮೇಲಿನಿಂದ ಒಂದು ಚಮಚ ತುಪ್ಪ ಹಾಕಿ ಚೆನ್ನಾಗಿ ನಾದಿ ಮುಚ್ಚಿಡಿ. ಇನ್ನೊಂದು ಬಾಣಲೆಯಲ್ಲಿ ಒಗ್ಗರಣೆಗೆ ಇಟ್ಟು ಬೇಯಿಸಿ, ಜಜ್ಜಿದ ಬಾಳೆಕಾಯಿ, ಬೇಯಿಸಿದ ಬಟಾಣಿ ಸೇರಿಸಿ. ಆಮೇಲೆ ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಹೂರಣ ತಯಾರಿಸಿಟ್ಟುಕೊಳ್ಳಿ. ಚೆನ್ನಾಗಿ ನಾದಿದ ಹಿಟ್ಟನ್ನು ಲಟ್ಟಿಸಿ ತ್ರಿಕೋನಾಕಾರ ಬರುವಂತೆ ಮಡಿಸಿ. ಅದರೊಳಗೆ ಹೂರಣ ತುಂಬಿಸಿ ಎಲ್ಲಾ ಕಡೆಯಿಂದಲೂ ಬಂದ್ ಮಾಡಿ. ಮಧ್ಯಮ ಉರಿಯಲ್ಲಿ ಕರಿಯಿರಿ. ಮೈದಾ ಬದಲು ಗೋಧಿಹಿಟ್ಟು ಬಳಸಿದರೆ ಉತ್ತಮ. ಆರೋಗ್ಯಕ್ಕೂ ಒಳ್ಳೆಯದು.

***

ನಗ್ಗೆಟ್ಸ್
ಬೇಕಾಗುವ ಸಾಮಗ್ರಿಗಳು:
ಬಾಳೆಕಾಯಿ – ಎರಡು-ಮೂರು, ಚೀಸ್/ಪನ್ನೀರ್ – ಸ್ವಲ್ಪ, ಉಪ್ಪು, ಚಿಲ್ಲಿಫ್ಲೇಕ್ಸ್, ಟೊಮೆಟೊ ಸಾಸ್, ಚಿಲ್ಲಿ ಸಾಸ್, ರವೆ ಎರಡು ಚಮಚ, ಕಾರ್ನ್‌ ಫ್ಲೋರ್‌ – ಅರ್ಧ ಕಪ್‌, ಬ್ರೆಡ್‌ ಪುಡಿ – ಅರ್ಧ ಕಪ್‌, ಕರಿಯಲು ಎಣ್ಣೆ

ತಯಾರಿಸುವ ವಿಧಾನ: ಬಾಳೆಕಾಯಿಯನ್ನು ಒಂದು ಚಮಚ ಎಣ್ಣೆ ಮತ್ತು ಉಪ್ಪು ಹಾಕಿ ಬೇಯಿಸಿಕೊಳ್ಳಿ. ಸಿಪ್ಪೆ ತೆಗೆದು ಚೆನ್ನಾಗಿ ನುರಿಯಿರಿ. ಅದಕ್ಕೆ ತುರಿದ ಚೀಸ್/ಪನ್ನೀರ್ ಹಾಕಿ. ಸ್ವಲ್ಪವೇ ಉಪ್ಪು, ಚಿಲ್ಲಿಫ್ಲೇಕ್ಸ್, ಟೊಮೆಟೊ ಸಾಸ್, ಚಿಲ್ಲಿ ಸಾಸ್ ಹಾಕಿ ಕಲೆಸಿ. ಅಗತ್ಯವೆನಿಸಿದರೆ ಎರಡು ಚಮಚ ರವೆ ಸೇರಿಸಿ. ಚಿಕ್ಕ ಉಂಡೆ ಮಾಡಿ ಚಿತ್ರದಲ್ಲಿ ತೋರಿಸಿರುವ ಆಕಾರದಲ್ಲಿ ಮಾಡಿ ನೀರಿನಲ್ಲಿ ಕಲೆಸಿದ ಕಾರ್ನ್‌ಫ್ಲೋರ್‌ನಲ್ಲಿ ಅದ್ದಿ. ಆಮೇಲೆ ಬ್ರೆಡ್‌ಪುಡಿಯಲ್ಲಿ ಹೊರಳಿಸಿ ಚೆನ್ನಾಗಿ ಎರಡೂ ಕಡೆ ಅಂಟಿದ ನಂತರ ಮಧ್ಯಮ ಉರಿಯಲ್ಲಿ ಕರಿಯಿರಿ. ಇದು ತಿನ್ನಲು ಬೋಂಡಾಕ್ಕಿಂತ ಬೇರೆಯದೇ ರುಚಿ ಇರುತ್ತದೆ. ಮಕ್ಕಳಿಗೆ ಇಷ್ಟವಾಗುತ್ತದೆ. ಸಾಸ್ ಅಥವಾ ಹಸಿರು ಚಟ್ನಿಯೊಂದಿಗೆ ಸವಿಯಿರಿ.

***

ಚಾಟ್ ಮಸಾಲ
ಬೇಕಾಗುವ ಸಾಮಗ್ರಿಗಳು
: ಬಾಳೆಕಾಯಿ ದೊಡ್ಡದು – 2, ಹಸಿರುಚಟ್ನಿ – ಅರ್ಧ ಕಪ್, ಕೆಂಪು ಚಟ್ನಿ, ಸಿಹಿ ಚಟ್ನಿ (ಕರ್ಜೂರ ಮತ್ತು ಹುಣಸೆಹಣ್ಣು ಸೇರಿಸಿದ್ದು), ಉಪ್ಪು, ಅರಿಸಿನಪುಡಿ, ಈರುಳ್ಳಿ ಒಂದು, ಟೊಮೆಟೊ ಒಂದು, ಕ್ಯಾರೆಟ್ ಒಂದು, ಕಾಯಿತುರಿ ಎರಡು ಚಮಚ, ಕೊತ್ತಂಬರಿ ಸೊಪ್ಪು, ನಿಂಬೆರಸ, ಸಣ್ಣ ಚೌಚೌ (ಖಾರಾಸೇವ್)

ತಯಾರಿಸುವ ವಿಧಾನ: ಮೊದಲು ಬಾಳೆಕಾಯಿ ಸಿಪ್ಪೆ ತೆಗೆದು ಉದ್ದವಾಗಿ ಸ್ಲೈಸ್ ಮಾಡಿಕೊಳ್ಳಿ (ಚಿಪ್ಸ್‌ಗಿಂತ ಸ್ವಲ್ಪ ದಪ್ಪ ಇರಬೇಕು). ಅದನ್ನು ಉಪ್ಪು ನೀರಿನಲ್ಲಿ ಅದ್ದಿಡಿ. ನಂತರ ಗರಿಗರಿಯಾಗಿ ಕರಿಯಿರಿ. ಹಸಿರು ಚಟ್ನಿ, ಕೆಂಪು ಚಟ್ನಿ, ಸಿಹಿಚಟ್ನಿಯನ್ನು ಮಿಶ್ರಣ ಮಾಡಿಕೊಳ್ಳಿ. ಅದರಲ್ಲಿ ಬಾಳೆಕಾಯಿ ಚಿಪ್ಸ್ ಅನ್ನು ಅದ್ದಿ. ಅದಕ್ಕೆ ಚೆನ್ನಾಗಿ ಮಸಾಲೆ ಹಿಡಿದುಕೊಳ್ಳಬೇಕು. ನಂತರ ಅದನ್ನು ದೊಡ್ಡ ತಟ್ಟೆಯಲ್ಲಿಟ್ಟು ಅದರ ಮೇಲೆ ಸಣ್ಣಗೆ ಕತ್ತರಿಸಿದ ಈರುಳ್ಳಿ, ಟೊಮೆಟೊ ಹಾಕಿ ತುರಿದ ಕ್ಯಾರೆಟ್ ಹಾಕಿ. ಕೊತ್ತಂಬರಿ ಸೊಪ್ಪು, ಕಾಯಿತುರಿ ಉದುರಿಸಿ. ಮೇಲಿನಿಂದ ಸಣ್ಣ ಚೌ ಚೌ (ಖಾರಾಸೇವ್) ಹಾಕಿ. ಎರಡು ಚಮಚ ಕಾಯಿತುರಿಯನ್ನು ಉದುರಿಸಿ. ಕೊನೆಯಲ್ಲಿ ಟೊಮಟೊ ಸಾಸ್ ಹಾಕಿ ತಕ್ಷಣವೇ ತಿನ್ನಲು ಕೊಡಿ. ಮಕ್ಕಳು ಇದನ್ನು ಇಷ್ಟಪಟ್ಟು ತಿನ್ನುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.