ADVERTISEMENT

ದೀಪಾವಳಿ ಹಬ್ಬಕ್ಕೆ ಹಾಲಿನಪುಡಿ ಹೋಳಿಗೆ

ವೇದಾವತಿ ಎಚ್.ಎಸ್.
Published 29 ಅಕ್ಟೋಬರ್ 2021, 19:31 IST
Last Updated 29 ಅಕ್ಟೋಬರ್ 2021, 19:31 IST
   

ಹಾಲಿನಪುಡಿ ಹೋಳಿಗೆ
ಬೇಕಾಗುವ ಸಾಮಗ್ರಿಗಳು
ಹೂರಣ ತಯಾರಿಸಲು: ತೆಂಗಿನತುರಿ – 1 ಕಪ್‌, ಸಕ್ಕರೆ ಪುಡಿ – ಅರ್ಧ ಕಪ್‌, ಹಾಲಿನ ಪುಡಿ– ಅರ್ಧ ಕಪ್‌, ಏಲಕ್ಕಿ ಪುಡಿ – ಅರ್ಧ ಟೀ ಚಮಚ.

ಮಿಕ್ಸಿ ಜಾರಿಗೆ ಆಗಲೇ ತುರಿದ ತೆಂಗಿನಕಾಯಿಯ ಬಿಳಿ ಭಾಗ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ನಂತರ ಬೌಲಿಗೆ ತೆಂಗಿನತುರಿ, ಸಕ್ಕರೆಪುಡಿ, ಹಾಲಿನಪುಡಿ, ಏಲಕ್ಕಿ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣ ಉಂಡೆ ಕಟ್ಟುವ ಹದವಿರಬೇಕು. ಗಟ್ಟಿ ಎನಿಸಿದರೆ ಸ್ವಲ್ಪ ಹಾಲನ್ನು ಹಾಕಿ ಕಲೆಸಿಕೊಳ್ಳಿ. ತಯಾರಿಸಿಕೊಂಡ ಹೂರಣದಿಂದ ನಿಮಗೆ ಬೇಕಾದ ಗಾತ್ರಕ್ಕೆ ಉಂಡೆ ಕಟ್ಟಿಕೊಳ್ಳಿ.

ಹಾಲಿನಪುಡಿ ಹೋಳಿಗೆ

ಕಣಕ ತಯಾರಿಸಲು: ಮೈದಾಹಿಟ್ಟು – 1 ಕಪ್, ಅರಿಸಿನ ಪುಡಿ – ಅರ್ಧ ಟೀ ಚಮಚ, ತುಪ್ಪ– 1 ಟೀ ಚಮಚ, ಉಪ್ಪು – ಕಾಲು ಟೀ ಚಮಚ, ಎಣ್ಣೆ – 2 ಟೇಬಲ್ ಚಮಚ, ನೀರು.

ADVERTISEMENT

ಬೌಲ್‌ಗೆ ಮೈದಾಹಿಟ್ಟು, ಅರಿಸಿನಪುಡಿ, ಉಪ್ಪು, ತುಪ್ಪ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಸ್ವಲ್ಪ ಸ್ವಲ್ಪವೇ ನೀರನ್ನು ಹಾಕಿ ಹಿಟ್ಟನ್ನು ಕಲೆಸಿ. ಐದು ನಿಮಿಷ ಹಿಟ್ಟನ್ನು ನಾದಿಕೊಳ್ಳಿ. ಹಿಟ್ಟು ಮೃದುವಾಗಿರಲಿ. ಕಲೆಸಿದ ಹಿಟ್ಟಿನ ಮೇಲೆ ಎಣ್ಣೆಯನ್ನು ಹಾಕಿ. ಪುನಃ ಹಿಟ್ಟನ್ನು ನಾದಿಕೊಳ್ಳಿ. 2 ಗಂಟೆ ಮುಚ್ಚಿಡಿ. ನಂತರ ಹತ್ತು ನಿಮಿಷ ಚೆನ್ನಾಗಿ ನಾದಿಕೊಳ್ಳಿ. ಹಿಟ್ಟಿನ ಮೇಲೆ 2 ಟೇಬಲ್ ಚಮಚ ಎಣ್ಣೆಯನ್ನು ಹಾಕಿ.

ತಯಾರಿಸುವ ವಿಧಾನ: ಹೂರಣದ ಗಾತ್ರದಷ್ಟೇ ಕಣಕವನ್ನು ತೆಗೆದುಕೊಳ್ಳಿ. ಕಣಕವನ್ನು ಬಟ್ಟಲಾಕಾರ ತಯಾರಿಸಿಕೊಂಡು ಹೂರಣವನ್ನು ಮಧ್ಯದಲ್ಲಿಡಿ. ಕಣಕವನ್ನು ಹೂರಣದಿಂದ ಗಟ್ಟಿಯಾಗಿ ಮುಚ್ಚಿ. ಹೆಚ್ಚಾಗಿರುವ ಕಣಕವನ್ನು ತೆಗೆಯಿರಿ. ನಂತರ ಬೈಡಿಂಗ್ ಪೇಪರ್‌/ ಬಾಳೆಎಲೆಗೆ ಎಣ್ಣೆಯನ್ನು ಹಾಕಿಕೊಳ್ಳಿ. ತಯಾರಿಸಿದ ಹೋಳಿಗೆ ಉಂಡೆಯನ್ನು ಇಟ್ಟು ಕೈಯಲ್ಲಿ ಸ್ವಲ್ಪ ತಟ್ಟಿ ನಂತರ ಲಟ್ಟಣಿಗೆಯಿಂದ ನಿಧಾನವಾಗಿ ಲಟ್ಟಿಸಿಕೊಳ್ಳಿ. ತವಾ ಬಿಸಿ ಮಾಡಿತುಪ್ಪ/ಎಣ್ಣೆಯನ್ನು ಹಾಕಿ. ಲಟ್ಟಿಸಿಕೊಂಡ ಹೋಳಿಗೆಯನ್ನು ಅದರ ಮೇಲೆ ಹಾಕಿ. ಹೋಳಿಗೆ ಮೇಲೆ ಎರಡೂಬದಿಗೂ ತುಪ್ಪ/ಎಣ್ಣೆಯನ್ನು ಹಾಕಿ. ಮಧ್ಯಮ ಉರಿಯಲ್ಲಿಎರಡೂ ಬದಿಯನ್ನು ಬೇಯಿಸಿ, ಸವಿಯಿರಿ.

***

ಅಕ್ಕಿಹಿಟ್ಟಿನ ನಿಪ್ಪಟ್ಟು
ಬೇಕಾಗುವ ಸಾಮಗ್ರಿಗಳು: ಉದ್ದಿನಬೇಳೆ – 2 ಟೀ ಚಮಚ, ಹುರಿಗಡಲೆ – 2 ಟೀ ಚಮಚ, ಅಕ್ಕಿಹಿಟ್ಟು– 2 ಕಪ್‌, ಅಚ್ಚಖಾರದ ಪುಡಿ – 1 ಟೀ ಚಮಚ, ಜೀರಿಗೆ – 1 ಟೀ ಚಮಚ, ಎಳ್ಳು– 1 ಟೀ ಚಮಚ, ಇಂಗು – ಅರ್ಧ ಟೀ ಚಮಚ, ರುಚಿಗೆ ತಕ್ಕಷ್ಟು ಉಪ್ಪು, 1 ಗಂಟೆ ನೀರಿನಲ್ಲಿ ನೆನೆಸಿಟ್ಟ ಕಡಲೆಬೇಳೆ – 2 ಟೇಬಲ್ ಚಮಚ, ಚಿಕ್ಕದಾಗಿ ಕತ್ತರಿಸಿದ ಕರಿಬೇವು – 10, ಬಿಸಿ ಎಣ್ಣೆ – 2 ಟೇಬಲ್ ಚಮಚ, ನೀರು, ಕರಿಯಲು ಎಣ್ಣೆ.

ವೀಳ್ಯದೆಲೆ ಲಡ್ಡು

ತಯಾರಿಸುವ ವಿಧಾನ: ಉದ್ದಿನಬೇಳೆಯನ್ನು ಬಾಣಲೆಗೆ ಹಾಕಿ ಪರಿಮಳ ಬರುವವರೆಗೆ ಹುರಿಯಿರಿ. ಮಿಕ್ಸಿ ಜಾರಿಗೆ ಹುರಿದ ಉದ್ದಿನಬೇಳೆ, ಹುರಿಗಡಲೆ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ಬೌಲಿಗೆ ಅಕ್ಕಿಹಿಟ್ಟು, ಅಚ್ಚಖಾರದ ಪುಡಿ, ಜೀರಿಗೆ, ಎಳ್ಳು, ಇಂಗು, ರುಚಿಗೆ ತಕ್ಕಷ್ಟು ಉಪ್ಪು, ಪುಡಿ ಮಾಡಿದ ಉದ್ದಿನಬೇಳೆ ಮತ್ತು ಹುರಿಗಡಲೆ, ನೆನೆಸಿಟ್ಟ ಕಡಲೆಬೇಳೆ, ಕರಿಬೇವು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಬಿಸಿ ಮಾಡಿದ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಸ್ವಲ್ಪ ಸ್ವಲ್ಪ ನೀರನ್ನು ಹಾಕಿಕೊಂಡು ಹಿಟ್ಟನ್ನು ಮೃದುವಾಗಿ ಕಲೆಸಿಕೊಳ್ಳಿ. ಹಿಟ್ಟಿನಿಂದ ಚಿಕ್ಕ ಚಿಕ್ಕ ಉಂಡೆಗಳನ್ನು ತಯಾರಿಸಿಕೊಳ್ಳಿ. ಬಟರ್‌ ಪೇಪರ್‌/ಪ್ಲಾಸ್ಟಿಕ್ ಪೇಪರಿಗೆ ಎಣ್ಣೆಯನ್ನು ಸವರಿಕೊಳ್ಳಿ. ಉಂಡೆಗಳನ್ನು ತೆಳುವಾಗಿ ತಟ್ಟಿಕೊಳ್ಳಿ. ಬೇಕಿದ್ದರೆ ಚಿಕ್ಕ ಬಟ್ಟಲಿನಲ್ಲಿ ವೃತ್ತಾಕಾರವಾಗಿ ಕತ್ತರಿಸಿಕೊಳ್ಳಿ. ಎಣ್ಣೆಯನ್ನು ಬಿಸಿ ಮಾಡಿಕೊಂಡು ಬಿಸಿ ಎಣ್ಣೆಗೆ ತಟ್ಟಿಕೊಂಡ ಅಕ್ಕಿ ಹಿಟ್ಟಿನ ಮಸಾಲೆ ನಿಪ್ಪಟ್ಟನ್ನು ಹಾಕಿ. ಮಧ್ಯಮ ಉರಿಯಲ್ಲಿ ಎರಡೂ ಬದಿಯನ್ನು ಕೆಂಬಣ್ಣ ಬರುವವರೆಗೆ ಬೇಯಿಸಿ. ನಂತರ ಎಣ್ಣೆಯಿಂದ ತೆಗೆಯಿರಿ.

***

ವೀಳ್ಯದೆಲೆ ಉಂಡೆ
ಬೇಕಾಗುವ ಸಾಮಗ್ರಿಗಳು: ವೀಳ್ಯದೆಲೆ 10 ರಿಂದ 15, ಕಂಡೆನ್ಸ್ಡ್ ಮಿಲ್ಕ್ 300 ಗ್ರಾಂ, ಡೆಸಿಕೇಟೆಡ್ ಕೋಕೊನಟ್ ಪೌಡರ್‌– 200 ಗ್ರಾಂ, ಹಾಲು – 6 ಟೇಬಲ್ ಚಮಚ, ಏಲಕ್ಕಿ ಪುಡಿ – ಅರ್ಧ ಟೀ ಚಮಚ, ಟೂಟಿ ಫ್ರೂಟಿ – 2 ಟೇಬಲ್ ಚಮಚ, ಸೋಂಪು – 1 ಟೀ ಚಮಚ, ಚಿಕ್ಕದಾಗಿ ಕತ್ತರಿಸಿದ ಗೋಡಂಬಿ– 5, ಪಿಸ್ತಾ – 5 ಮತ್ತು ಬಾದಾಮಿ – 5, ಗುಲ್ಕನ್ – 2 ಟೇಬಲ್ ಚಮಚ

ಅಕ್ಕಿಹಿಟ್ಟಿನ ತಟ್ಟಿ

ತಯಾರಿಸುವ ವಿಧಾನ: ಮಿಕ್ಸಿ ಜಾರಿಗೆ ವೀಳ್ಯದೆಲೆಯನ್ನು ಕತ್ತರಿಸಿ ಹಾಕಿ. ಜೊತೆಗೆ ಕಂಡೆನ್ಸ್ಡ್ ಮಿಲ್ಕ್ ಹಾಕಿ ನುಣ್ಣಗೆ ಪೇಸ್ಟ್ ತಯಾರಿಸಿಕೊಳ್ಳಿ. ಬಾಣಲೆಗೆ ಡೆಸಿಕೇಟೆಡ್ ಕೋಕೊನಟ್, ರುಬ್ಬಿಕೊಂಡ ಮಿಶ್ರಣ, ಹಾಲನ್ನು ಹಾಕಿ ಬೆರೆಸಿಕೊಳ್ಳಿ. ಐದು ನಿಮಿಷ ಮಧ್ಯಮ ಉರಿಯಲ್ಲಿ ಮಗುಚಿ. ಗಟ್ಟಿಯಾಗುತ್ತಾ ಬಂದಾಗ ಏಲಕ್ಕಿ ಪುಡಿಯನ್ನು ಹಾಕಿ ಮಿಶ್ರಣ ಮಾಡಿ. ಉಂಡೆ ತಯಾರಿಸುವ ಹದ ಬಂದಾಗ ಒಲೆಯನ್ನು ಆರಿಸಿ. ಬೌಲಿನಲ್ಲಿ ಟೂಟಿ ಫ್ರೂಟಿ, ಸೋಂಪು, ಗೋಡಂಬಿ, ಪಿಸ್ತಾ, ಬಾದಾಮಿ ಚೂರುಗಳು ಮತ್ತು ಗುಲ್ಕನ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ತಯಾರಿಸಿದ ಕೋಕೊನಟ್ ವೀಳ್ಯದೆಲೆ ಮಿಶ್ರಣವನ್ನು ನಿಂಬೆಗಾತ್ರದ ಉಂಡೆಯನ್ನು ತಯಾರಿಸಿಕೊಳ್ಳಿ. ಉಂಡೆಯನ್ನು ಕೈಯಲ್ಲಿ ತಟ್ಟಿ ಅದರ ಮಧ್ಯದಲ್ಲಿ ಸ್ವಲ್ಪ ಗುಲ್ಕನ್ ಮಿಶ್ರಣ ತೆಗೆದುಕೊಂಡು ಗಟ್ಟಿಯಾಗಿ ಮುಚ್ಚಿ ಉಂಡೆ ತಯಾರಿಸಿಕೊಳ್ಳಿ. ತಯಾರಿಸಿದ ಉಂಡೆಗಳನ್ನು ಡೆಸಿಕೇಟೆಡ್ ಕೋಕೊನಟ್‌ನಲ್ಲಿ ಉರುಳಿಸಿ. ಆರೋಗ್ಯಕರವಾದ ಮತ್ತು ರುಚಿಕರವಾದ ವೀಳ್ಯದೆಲೆ ಉಂಡೆ ಸವಿಯಲು ಸಿದ್ಧ.

(ಲೇಖಕಿ: ‘ಮನೆ ಅಡುಗೆ ವಿಥ್‌ ವೇದಾ’ ಯೂಟ್ಯೂಬ್ ಚಾನೆಲ್ ನಿರ್ವಾಹಕಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.