ADVERTISEMENT

ರಸಾಸ್ಪಾದ | ಅಷ್ಟಮಿ ಖಾದ್ಯ

ಶ್ರೀಕೃಷ್ಣ ಜನ್ಮಾಷ್ಟಮಿ ರೆಸಿಪಿಗಳು.

ವೇದಾವತಿ ಎಚ್.ಎಸ್.
Published 24 ಆಗಸ್ಟ್ 2024, 0:01 IST
Last Updated 24 ಆಗಸ್ಟ್ 2024, 0:01 IST
<div class="paragraphs"><p>ದಿಢೀರ್‌ ಉದ್ದಿನಬೇಳೆ ಚಕ್ಕುಲಿ</p></div>

ದಿಢೀರ್‌ ಉದ್ದಿನಬೇಳೆ ಚಕ್ಕುಲಿ

   

ದಿಢೀರ್ ಉದ್ದಿನಬೇಳೆ ಚಕ್ಕುಲಿ

ಬೇಕಾಗುವ ಸಾಮಗ್ರಿಗಳು:

ADVERTISEMENT

ಉದ್ದಿನಬೇಳೆ 1 ಕಪ್, ಜೀರಿಗೆ 1 ಟೇಬಲ್ ಚಮಚ, ಎಳ್ಳು 2 ಟೇಬಲ್ ಚಮಚ, ಹುರಿಗಡಲೆ 1/2 ಕಪ್, ಅಕ್ಕಿ ಹಿಟ್ಟು 3 ಕಪ್, ಅriಶಿನ ಪುಡಿ 1/2 ಟೀ ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಬೆಣ್ಣೆ 2 ಟೇಬಲ್ ಚಮಚ, ಕರಿಯಲು ಎಣ್ಣೆ.

ತಯಾರಿಸುವ ವಿಧಾನ:

ಉದ್ದಿನಬೇಳೆಯನ್ನು ಬಾಣಲೆಗೆ ಹಾಕಿ ಬಣ್ಣ ಬದಲಾಗಿ ಪರಿಮಳ ಬರುವರೆಗೆ ಹುರಿಯಿರಿ. ಜೀರಿಗೆಯನ್ನು ಬೆಚ್ಚಗೆ ಮಾಡಿ. ಎಳ್ಳು ಸಿಡಿಯುವವರೆಗೆ ಹುರಿಯಿರಿ. ಹುರಿದ ಉದ್ದನ್ನು ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ಪುಡಿ ಮಾಡಿಕೊಂಡು ಬಳಿಕ ಜರಡಿ ಹಿಡಿಯಿರಿ. ಹುರಿಗಡಲೆ, ಜೀರಿಗೆಯನ್ನು ಪುಡಿ ಮಾಡಿ ಜರಡಿ ಹಿಡಿಯಿರಿ. ನಂತರ ಅಕ್ಕಿ ಹಿಟ್ಟು, ಅರಶಿನ, ಹುರಿದ ಎಳ್ಳು, ಉಪ್ಪನ್ನು ಹಾಕಿ ಮಿಶ್ರಣ ಮಾಡಿ. ಬಳಿಕ ಬೆಣ್ಣೆಯನ್ನು ಬಿಸಿ ಮಾಡಿಕೊಂಡು ಹಿಟ್ಟಿಗೆ ಸೇರಿಸಿ ಎರಡು ನಿಮಿಷ ಕೈಯಿಂದ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಸ್ವಲ್ಪ ಸ್ವಲ್ಪವೇ ಬಿಸಿ ನೀರನ್ನು ಹಾಕಿಕೊಳ್ಳುತ್ತಾ ಹಿಟ್ಟನ್ನು ಕಲಸಿಕೊಳ್ಳಿ. ಹಿಟ್ಟು ಮೃದುವಾಗಿರಲಿ. ಬಳಿಕ ಚಕ್ಕುಲಿ ಒರಳಿಗೆ ಎಣ್ಣೆಯನ್ನು ಸವರಿಕೊಂಡು ಹಿಟ್ಟನ್ನು ಹಾಕಿ ನಿಧಾನವಾಗಿ ಒತ್ತಿ ಚಕ್ಕುಲಿ ತಯಾರಿಸಿಕೊಳ್ಳಿ. ಎಣ್ಣೆಯನ್ನು ಬಿಸಿ ಮಾಡಿಕೊಂಡು ತಯಾರಿಸಿದ ಚಕ್ಕುಲಿಯನ್ನು ಹಾಕಿ ಮಧ್ಯಮ ಉರಿಯಲ್ಲಿ ಎರಡೂ ಬದಿಯನ್ನು ಗರಿ ಗರಿಯಾಗುವರೆಗೆ ಬೇಯಸಿ.

****

ರಿಬ್ಬನ್ ಪಕೋಡ.

ರಿಬ್ಬನ್ ಪಕೋಡ

ಬೇಕಾಗುವ ಸಾಮಗ್ರಿಗಳು:

ಅಕ್ಕಿ ಹಿಟ್ಟು 1 ಕಪ್, ಹುರಿಗಡಲೆ 1/2 ಕಪ್, ಕಡಲೆಹಿಟ್ಟು 1/2 ಕಪ್, ಅಚ್ಚಖಾರದಪುಡಿ 1 ಟೀ ಚಮಚ, ಜೀರಿಗೆಪುಡಿ 1/2 ಟೀ ಚಮಚ, ಎಳ್ಳು 1 ಟೇಬಲ್ ಚಮಚ, ಇಂಗು 1/4 ಟೀ ಚಮಚ, ಬೆಣ್ಣೆ/ಎಣ್ಣೆ 2 ಟೇಬಲ್ ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಕರಿಯಲು ಎಣ್ಣೆ, ನೀರು ಹಿಟ್ಟು ಕಲಸಲು.

ತಯಾರಿಸುವ ವಿಧಾನ:

ಹುರಿಗಡಲೆಯನ್ನು ನುಣ್ಣಗೆ ಪುಡಿ ಮಾಡಿಕೊಳ್ಳಿ. ಬೌಲಿನಲ್ಲಿ ಅಕ್ಕಿಹಿಟ್ಟು, ಕಡಲೆಹಿಟ್ಟು, ಪುಡಿ ಮಾಡಿದ ಹುರಿಗಡಲೆ, ಅಚ್ಚಖಾರದ ಪುಡಿ, ಜೀರಿಗೆಪುಡಿ, ಅರಿಶಿನ, ಎಳ್ಳು, ಇಂಗು, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಮಿಶ್ರಣ ಮಾಡಿ. ಬೆಣ್ಣೆ ಅಥವಾ ಎಣ್ಣೆಯನ್ನು ಬಿಸಿ ಮಾಡಿ. ಮಿಶ್ರಣಕ್ಕೆ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ. ಹಿಟ್ಟಿಗೆ ಸ್ವಲ್ಪ ಸ್ವಲ್ಪವೇ ನೀರನ್ನು ಹಾಕಿಕೊಂಡು ಮೃದುವಾಗಿ ಕಲಸಿಕೊಳ್ಳಿ. ಚಕ್ಕಲಿ ಒರಳಿಗೆ ರಿಬ್ಬನ್ ಪ್ಲೇಟನ್ನು ಹಾಕಿ. ಎಣ್ಣೆಯನ್ನು ಸವರಿ. ಹಿಟ್ಟನ್ನು ಚಕ್ಕಲಿ ಒರಳಿಗೆ ಹಾಕಿ. ಎಣ್ಣೆಯನ್ನು ಮಧ್ಯಮ ಉರಿಯಲ್ಲಿ ಬಿಸಿ ಮಾಡಿಕೊಂಡು ಮೇಲೆನಿಂದ ರಿಬ್ಬನ್ ಪಕೋಡವನ್ನು ಒತ್ತಿ. ನಂತರ 2-3 ನಿಮಿಷಗಳವರೆಗೆ ಬೇಯಿಸಿ.ಬಳಿಕ ಇನ್ನೊಂದು ಬದಿಯನ್ನು ತಿರುಗಿಸಿ ಬೇಯಿಸಿ.ಗರಿಗರಿಯಾಗಿ ಕೆಂಬಣ್ಣ ಬಂದ ನಂತರ ಎಣ್ಣೆಯಿಂದ ತೆಗೆಯಿರಿ.

****

ಕೋಡುಬಳೆ.

ಕೋಡುಬಳೆ

ಬೇಕಾಗುವ ಸಾಮಗ್ರಿಗಳು:

ಚಿರೋಟಿ ರವೆ 1/4 ಕಪ್, ಮೈದಾ 1/4 ಕಪ್, ಅಕ್ಕಿ ಹಿಟ್ಟು 1 ಕಪ್, ಹುರಿಕಡಲೆ 1/4 ಕಪ್, ಒಣಕೊಬ್ಬರಿ ತುರಿ 1/2 ಕಪ್, ಅಜವಾನ 1 ಟೀ ಚಮಚ, 1/4 ಟೀ ಚಮಚ ಇಂಗು, 1 ಟೀ ಚಮಚ ಅಚ್ಚಖಾರದಪುಡಿ, ರುಚಿಗೆ ತಕ್ಕಷ್ಟು ಉಪ್ಪು, 10 ರಿಂದ 15 ಕರಿಬೇವು, ಬೆಣ್ಣೆ 2 ಟೇಬಲ್ ಚಮಚ, ನೀರು ಹಿಟ್ಟು ಕಲಸಲು, ಎಣ್ಣೆ ಕರಿಯಲು.

ತಯಾರಿಸುವ ವಿಧಾನ:

ಚಿರೋಟಿ ರವೆ, ಮೈದಾ, ಅಕ್ಕಿಹಿಟ್ಟು ಇವುಗಳನ್ನು ಬೆಚ್ಚಗಾಗುವರೆಗೆ ಹುರಿಯಿರಿ. ಹುರಿಗಡಲೆ, ಒಣಕೊಬ್ಬರಿ, ಅಜವಾನ, ಇಂಗು ಅಚ್ಚಖಾರದಪುಡಿ, ಉಪ್ಪು, ಕರಿಬೇವು ಇವುಗಳನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ಬಾಣಲೆಗೆ ಹಿಟ್ಟುಗಳನ್ನು ಮತ್ತು ಪುಡಿ ಮಾಡಿಕೊಂಡ ಮಿಶ್ರಣವನ್ನು ಸೇರಿಸಿ. ಈ ಮಿಶ್ರಣಕ್ಕೆ ಬೆಣ್ಣೆಯನ್ನು ಹಾಕಿ ಚೆನ್ನಾಗಿ ಕಲಸಿ. ಬಳಿಕ ಹಿಟ್ಟಿಗೆ ಸ್ವಲ್ಪ ಸ್ವಲ್ಪವೇ ನೀರನ್ನು ಹಾಕಿಕೊಳ್ಳುತ್ತಾ ಗಟ್ಟಿಯಾಗಿ ಕಲಸಿಕೊಳ್ಳಿ. ಗಟ್ಟಿಯಾಗಿರುವ ಹಿಟ್ಟು ಮೃದುವಾಗುವರೆಗೆ 10 ನಿಮಿಷ ಚೆನ್ನಾಗಿ ನಾದಿಕೊಳ್ಳಿ. ಬಳಿಕ ಚಿಕ್ಕ ಚಿಕ್ಕ ಉಂಡೆಗಳನ್ನು ತಯಾರಿಸಿಕೊಂಡು ಅದನ್ನು ನಾದಿಕೊಂಡು ಬಳೆಯಾಕಾರ ಮಾಡಿಕೊಳ್ಳಿ. ತಯಾರಿಸಿಕೊಂಡ ಕೋಡುಬಳೆಯನ್ನು ಬಿಸಿ ಎಣ್ಣೆಯಲ್ಲಿ ಎರಡೂ ಬದಿಯೂ ಕೆಂಬಣ್ಣ ಬರುವರೆಗೆ ಕರೆಯಿರಿ.

****

ಅವಲಕ್ಕಿ ಉಂಡೆ.

ಅವಲಕ್ಕಿ ಉಂಡೆ

ಬೇಕಾಗುವ ಸಾಮಗ್ರಿಗಳು:

ಗಟ್ಟಿ ಅವಲಕ್ಕಿ 2 ಕಪ್, ಬೆಲ್ಲದ ಪುಡಿ 3/4 ಕಪ್, ಒಣಕೊಬ್ಬರಿ ತುರಿ 1/2 ಕಪ್, ಏಲಕ್ಕಿ ಪುಡಿ ಕಾಲು ಚಮಚ, ಕತ್ತರಿಸಿದ ಗೋಡಂಬಿ 10, ಕತ್ತರಿಸಿದ ಬಾದಾಮಿ 10, ದ್ರಾಕ್ಷಿ 10, ತುಪ್ಪ 4 ಟೇಬಲ್ ಚಮಚ.

ತಯಾರಿಸುವ ವಿಧಾನ:

ಅವಲಕ್ಕಿಯನ್ನು ಬಾಣಲೆಯಲ್ಲಿ ಹಾಕಿ ಸಣ್ಣ ಉರಿಯಲ್ಲಿ ಗರಿ ಗರಿಯಾಗುವರೆಗೆ ಹುರಿದುಕೊಳ್ಳಿ. ಬಳಿಕ ಹಾಕಿ ಆರಲು ಬಿಡಿ. ಆರಿದ ನಂತರ ಮಿಕ್ಸಿಯಲ್ಲಿ ರವೆ ರೀತಿಯಲ್ಲಿ ಪುಡಿಯನ್ನು ಮಾಡಿ. ಪುಡಿಮಾಡಿದ ಅಲವಕ್ಕಿ ಜೊತೆಗೆ ಬೆಲ್ಲ, ಒಣಕೊಬ್ಬರಿ ಮತ್ತು ಏಲಕ್ಕಿಪುಡಿಯನ್ನು ಸೇರಿಸಿ ಮಿಕ್ಸಿಯಲ್ಲಿ ಒಂದು ಸಲ ಪುಡಿ ಮಾಡಿ. ಈಗ ಮಿಶ್ರಣವು ಚಿರೋಟಿ ರವೆಯ ರೀತಿಯಲ್ಲಿ ಆಗಿರುತ್ತದೆ. ಕೈಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ ಗೋಡಂಬಿ, ಬಾದಾಮಿಯನ್ನು ಚಿಕ್ಕದಾಗಿ ಕತ್ತರಿಸಿ ಹಾಕಿ. ನಂತರ ಓಣ ದ್ರಾಕ್ಷಿಯನ್ನು ಹಾಕಿ ಬಣ್ಣ ಬದಲಾಗುವರೆಗೆ ಹುರಿಯಿರಿ. ಬಳಿಕ ಪುಡಿ ಮಾಡಿಕೊಂಡ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ನಿಮಗೆ ಬೇಕಾದ ಗಾತ್ರದಲ್ಲಿ ಉಂಡೆಗಳನ್ನು ಕಟ್ಟಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.