ಬಂಗುಡೆ ಫಿಶ್ ಕರಿ
ಬೇಕಾಗುವ ಸಾಮಗ್ರಿಗಳು: ಬಂಗುಡೆ ಮೀನು – 4, ಶುಂಠಿ – 1 ಇಂಚು ಉದ್ದದ್ದು, ಬೆಳ್ಳುಳ್ಳಿ – 1/2 ಉಂಡೆ, ಕೊತ್ತಂಬರಿ – ಸ್ವಲ್ಪ, ಗರಂಮಸಾಲೆ – ಸ್ವಲ್ಪ, ಧನಿಯಾಪುಡಿ – 2 ಚಮಚ, ಖಾರದಪುಡಿ – 2 ಚಮಚ, ಅರಿಸಿನಪುಡಿ – ಸ್ವಲ್ಪ, ಈರುಳ್ಳಿ – 3, ಟೊಮೆಟೊ – 2, ಹುಣಸೆಹಣ್ಣು – 1 ಕಪ್, ಗಸೆಗಸೆ – ಸ್ವಲ್ಪ, ತೆಂಗಿನ ಕಾಯಿ – 1/2 ಹೋಳು, ಎಣ್ಣೆ, ತುಪ್ಪ (ಡಾಲ್ಡಾ) ಸ್ವಲ್ಪ, ಹರಳುಪ್ಪು ರುಚಿಗೆ ತಕ್ಕಷ್ಟು.
ತಯಾರಿಸುವ ವಿಧಾನ: ಚೆನ್ನಾಗಿ ತೊಳೆದ ಮೀನಿಗೆ ಸ್ವಲ್ಪ ಖಾರದಪುಡಿ, ಸ್ವಲ್ಪ ಹುಣಸೆಹುಳಿ, ಉಪ್ಪನ್ನು ಹಾಕಿ ಕಲೆಸಿ ಎರಡು ಗಂಟೆ ರೆಫ್ರಿಜರೇಟರ್‌ನಲ್ಲಿಡಿ. ಧನಿಯಾಪುಡಿ, ಖಾರದಪುಡಿ, ಶುಂಠಿ, ಬೆಳ್ಳುಳ್ಳಿ, ಗರಂಮಸಾಲೆ, ಗಸೆಗಸೆ, ಅರಿಸಿನಪುಡಿ, ಈರುಳ್ಳಿ, ಟೊಮೆಟೊ, ಕೊತ್ತಂಬರಿ, ತೆಂಗಿನ ಕಾಯಿ ತುರಿಯನ್ನು ನುಣ್ಣಗೆ ರುಬ್ಬಿಟ್ಟುಕೊಳ್ಳಿ. ತೆರೆದ ಪಾತ್ರೆಗೆ ರುಬ್ಬಿದ ಮಿಶ್ರಣ, ಕಿವುಚಿದ ಹುಣಸೆಹುಳಿ ಮತ್ತು ಉಪ್ಪು ಹಾಕಿ ಕುದಿಸಿ. ಸಾರು ಚೆನ್ನಾಗಿ ಬೆಂದ ಮೇಲೆ ರೆಫ್ರಿಜರೇಟರ್‌ನಲ್ಲಿಟ್ಟಿದ್ದ ಮೀನು, ಎಣ್ಣೆ ಮತ್ತು ಡಾಲ್ಡಾ ಹಾಕಿ ಎರಡು ನಿಮಿಷ ಬೇಯಿಸಿ. ಬೇಕೆಂದರೆ ಕೊತ್ತಂಬರಿ ಸೊಪ್ಪನ್ನು ಕತ್ತರಿಸಿ ಉದುರಿಸಿ.
ಬಂಗುಡೆ ಮೀನಿನ ಫ್ರೈ
ಬೇಕಾಗುವ ಪದಾರ್ಥಗಳು: ಬಂಗುಡೆ ಮೀನು – 2, ಕಡಲೆಹಿಟ್ಟು – 2 ಚಮಚ, ಖಾರದಪುಡಿ – 1 ಚಮಚ, ಗರಂಮಸಾಲೆ – ಸ್ವಲ್ಪ, ಪೆಪ್ಪರ್‌ಪುಡಿ – ಸ್ವಲ್ಪ, ಅಕ್ಕಿಹಿಟ್ಟು – 1 ಚಮಚ, ಹುಣಸೆಹುಳಿ – ಸ್ವಲ್ಪ,
ಉಪ್ಪು – ರುಚಿಗೆ ತಕ್ಕಷ್ಟು.
ತಯಾರಿಸುವ ವಿಧಾನ:ಒಂದು ಪಾತ್ರೆಗೆ ಕಡಲೆಹಿಟ್ಟು, ಅಕ್ಕಿಹಿಟ್ಟು, ಖಾರದಪುಡಿ, ಗರಂಮಸಾಲೆ, ಪೆಪ್ಪರ್‌ಪುಡಿ, ಉಪ್ಪನ್ನು ಹಾಕಿ ನೀರನ್ನು ಬೆರಸದೆ ಹುಣಸೆಹುಳಿಯಲ್ಲಿ ಕಲೆಸಿ. ಮೀನನ್ನು ಸೀಳಿ ಮಸಾಲೆ ಚೆನ್ನಾಗಿ ಹಿಡಿಯುವಂತೆ ಸವರಿ ನಾಲ್ಕು ಗಂಟೆ ರೆಫ್ರಿಜರೇಟರ್‌ನಲ್ಲಿಡಿ.
ತವಾಗೆ ಎಣ್ಣೆ ಹಾಕಿ ಖಾದ ನಂತರ ಮೀನನ್ನು ತವಾದಮೇಲಿಟ್ಟು ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿತಿರುಗಿಸುತ್ತಾ ಚೆನ್ನಾಗಿ ಬೇಯಿಸಿ.
ಬಟರ್ ಫಿಶ್ ಕರಿ
ಬೇಕಾಗುವ ಸಾಮಗ್ರಿಗಳು: ಮೀನು – 1 ಕೆ.ಜಿ, ಶುಂಠಿ – 3 ಇಂಚು ಉದ್ದದ್ದು, ಕೊತ್ತಂಬರಿ – ಸ್ವಲ್ಪ, ಗರಂಮಸಾಲೆ – ಒಂದೂವರೆ ಚಮಚ (ಮನೆಯಲ್ಲಿ ತಯಾರಿಸಿದ್ದು), ಧನಿಯಾಪುಡಿ – 3 ಚಮಚ, ಖಾರದಪುಡಿ – 4ಚಮಚ, ಹುರಿಗಡಲೆ – ಸ್ವಲ್ಪ, ಚಕ್ಕೆ – 1ಇಂಚು ಉದ್ದದ್ದು, ಕಾಳುಮೆಣಸು – 5, ಏಲಕ್ಕಿ – 2, ಲವಂಗ – 3, ಗಸೆಗಸೆ – ಸ್ವಲ್ಪ, ಅರಿಸಿನಪುಡಿ – ಸ್ವಲ್ಪ, ಈರುಳ್ಳಿ – 4, ಟೊಮೆಟೊ – 3, ಹುಣಸೆಹುಳಿ – 1ಕಪ್, ತೆಂಗಿನ ಕಾಯಿ – 1/2 ಹೋಳು, ಎಣ್ಣೆ, ಬೆಣ್ಣೆ – 150ಗ್ರಾಂ, ಉಪ್ಪು ರುಚಿಗೆ ತಕ್ಕಷ್ಟು.
ತಯಾರಿಸುವ ವಿಧಾನ:ವಿನಿಗರ್, ಅರಿಸಿನ ಪುಡಿ ಮತ್ತು ಉಪ್ಪು ಹಾಕಿ ಮೀನನ್ನು ತೊಳೆದುಕೊಳ್ಳಿ. ಧನಿಯಾಪುಡಿ, ಖಾರದಪುಡಿ, ಶುಂಠಿ, ಗರಂಮಸಾಲೆ, ಚಕ್ಕೆ, ಏಲಕ್ಕಿ, ಲವಂಗ, ಮೆಣಸು, ಅರಿಸಿನಪುಡಿ, ಈರುಳ್ಳಿ, ಟೊಮೆಟೊ, ಕೊತ್ತಂಬರಿ, ಹುರಿಗಡಲೆ, ಗಸೆಗಸೆ, ತೆಂಗಿನ ತುರಿಯನ್ನು ರುಬ್ಬಿಟ್ಟುಕೊಳ್ಳಿ.
ತೆರೆದ ಪಾತ್ರೆಗೆ ಹುಣಸೆಹುಳಿ, ರುಬ್ಬಿದ ಮಸಾಲೆ, ಎಣ್ಣೆ ಮತ್ತು ಉಪ್ಪನ್ನು ಹಾಕಿ ಕುದಿಸಿ, ಸ್ವಲ್ಪ ಸಮಯದ ನಂತರ ಕುದಿಯುವ ಮಿಶ್ರಣದ ರುಚಿ ನೋಡಿ (ಉಪ್ಪು, ಹುಳಿ ಮತ್ತು ಖಾರ ಸರಿಯಾದ ಪ್ರಮಾಣದಲ್ಲಿರದಿದ್ದರೆ ಸಾರು ರುಚಿ ಇರುವುದಿಲ್ಲ). ಸಾರು ಚೆನ್ನಾಗಿ ಬೆಂದ ಮೇಲೆ ಮೀನು ಮತ್ತು ಬೆಣ್ಣೆ ಹಾಕಿ ಎರಡು ನಿಮಿಷ ಬೇಯಿಸಿ. ಬೇಕೆಂದರೆ ಕೊತ್ತಂಬರಿ ಸೊಪ್ಪನ್ನು ಕತ್ತರಿಸಿ ಉದುರಿಸಿ.
ಮೀನಿನ ರೆಡ್ ತವಾ ಫ್ರೈ
ಬೇಕಾಗುವ ಪದಾರ್ಥಗಳು: ಮೀನು – 4 ತುಂಡು, ಕಡಲೆಹಿಟ್ಟು – 1 ಚಮಚ, ಖಾರದಪುಡಿ – 2, ಶುಂಠಿ-ಬೆಳ್ಳುಳ್ಳಿ ಪೇಸ್ಟ್ – ಸ್ವಲ್ಪ, ಜೋಳದಹಿಟ್ಟು – ಸ್ವಲ್ಪ, ಹುಣಸೆಹುಳಿ – 2 ಚಮಚ, ಉಪ್ಪು – ರುಚಿಗೆ ತಕ್ಕಷ್ಟು.
ತಯಾರಿಸುವ ವಿಧಾನ:ಚೆನ್ನಾಗಿ ತೊಳೆದ ಮೀನಿಗೆ ಕಡಲೆಹಿಟ್ಟು, ಜೋಳದಹಿಟ್ಟು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಉಪ್ಪನ್ನು ಹಾಕಿ ನೀರನ್ನು ಬೆರೆಸದೆ ಹುಣಸೆಹುಳಿಯಲ್ಲಿ ಕಲೆಸಿ ಅರ್ಧ ಗಂಟೆ ರೆಫ್ರಿಜರೇಟರ್‌ನಲ್ಲಿಡಿ. ಫ್ರೈ ಪ್ಯಾನ್‍ಗೆ ಎಣ್ಣೆ ಹಾಕಿ ಕಾದ ನಂತರ ಮೀನನ್ನು ಇಟ್ಟು ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಎರಡು ಕಡೆ ತಿರುಗಿಸುತ್ತಾ ಚೆನ್ನಾಗಿ ಬೇಯಿಸಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.