ADVERTISEMENT

ವಿವಿಧ ಜ್ಯೂಸ್; ಆರೋಗ್ಯಕರವಾಗಿ ಬೇಸಿಗೆ ಎದುರಿಸಿ

ಮಾನಸ ಬಿ.ಆರ್‌
Published 27 ಫೆಬ್ರುವರಿ 2019, 13:41 IST
Last Updated 27 ಫೆಬ್ರುವರಿ 2019, 13:41 IST
ಬಾದಾಮಿ ಕೀರು
ಬಾದಾಮಿ ಕೀರು   

ಬಿರು ಬೇಸಿಗೆಯನ್ನು ಎದುರಿಸಬೇಕಾದರೆ ಸರಿಯಾದ ತಯಾರಿ ಅಗತ್ಯ. ಮಕ್ಕಳು, ವಯಸ್ಸಾದವರು, ಮಹಿಳೆಯರು ಎಲ್ಲರೂ ಬೇಸಿಗೆಯಲ್ಲಿ ಆರೋಗ್ಯಕರವಾದ ಆಹಾರದ ಕ್ರಮ ಅನುಸರಿಸುವುದು ಮುಖ್ಯ.

ದೇಹಕ್ಕೆ ತಂಪು ಹಾಗೂ ಪುಷ್ಟಿ ನೀಡುವ ಬಾದಾಮಿ ಬಳಕೆ ಕೂಡ ಹೆಚ್ಚಬೇಕು. ಹಣ್ಣುಗಳನ್ನು ಹೆಚ್ಚು ಬಳಸಬೇಕು. ಜೊತೆಗೆ ದೇಹದಲ್ಲಿ ನೀರಿನ ಅಂಶ ಹೆಚ್ಚಾಗುವಂತೆ ನೋಡಿಕೊಳ್ಳಬೇಕು. ಹೆಸರುಕಾಳು, ದಾಳಿಂಬೆ ಹೆಚ್ಚು ಬಳಸುವುದು ಒಳ್ಳೆಯದು.

ಬೇಸಿಗೆಯಲ್ಲಿ ಸವಿಯಬಹುದಾದ ರುಚಿಕರ ಹಾಗೂ ಆರೋಗ್ಯಕರವಾದ ಕೆಲವು ರೆಸಿಪಿಗಳು ಇಲ್ಲಿವೆ. ಟ್ರೈ ಮಾಡಿ ..

ADVERTISEMENT

ಬಾದಾಮಿ ಕೀರು: ಒಂದು ಕಪ್‌ ಬಾದಾಮಿಯನ್ನು ಒಂದು ತಾಸು ನೆನಸಿಡಿ. ಸಿಪ್ಪೆ ತೆಗೆದು ನುಣ್ಣಗೆ ಮಿಕ್ಸಿ ಮಾಡಿಕೊಳ್ಳಿ. ಬಾಣಲಿಗೆ ಎರಡು ಚಮಚ ತುಪ್ಪ ಹಾಕಿ, ಅದು ಕಾದ ಬಳಿಕ ಗೋಡಂಬಿ ಹಾಗೂ ದ್ರಾಕ್ಷಿಯನ್ನು ಹಾಕಿ ಹುರಿದುಕೊಂಡು ಎತ್ತಿಟ್ಟುಕೊಳ್ಳಿ. ಬಾಣಲಿಯಲ್ಲಿರುವ ತುಪ್ಪಕ್ಕೆ ಐದು ಕಪ್‌ ಹಾಲು ಹಾಗೂ ಸ್ವಲ್ಪ ಕೇಸರಿಯನ್ನು ಹಾಕಿ 15 ನಿಮಿಷ ಚೆನ್ನಾಗಿ ಕುದಿಸಿ. ಮಿಕ್ಸಿಗೆ ಹಾಕಿದ್ದ ಬಾದಾಮಿಯನ್ನು ಹಾಕಿ ಐದು ನಿಮಿಷ ಕುದಿಸಿ. ಈ ನಡುವೆ ಇನ್ನೊಂದು ಬಾಣಲಿಯಲ್ಲಿ ಬೆಣ್ಣೆ ಹಾಕಿ, ಕಾದ ನಂತರ ಹಾಲಿನ ಪೌಡರ್‌ ಹಾಕಿ ಕೋವಾ ರೀತಿಯಲ್ಲಿ ಪುಡಿ ಪುಡಿಯಾಗುವವರೆಗೂ ಬಿಡಿ. ತಣ್ಣಗಾದ ನಂತರ ಅದನ್ನು ಕುದಿಯುತ್ತಿರುವ ಹಾಲು ಹಾಗೂ ಬಾದಾಮಿ ಮಿಶ್ರಣಕ್ಕೆ ಸೇರಿಸಿ ಮೂರು ನಿಮಿಷ ಕುದಿಸಿ. ಬಳಿಕ ಸಕ್ಕರೆ, ಏಲಕ್ಕಿ ಪುಡಿ, ಕರಿದ ಗೋಡಂಬಿ, ದ್ರಾಕ್ಷಿಯನ್ನು ಹಾಕಿ 5 ನಿಮಿಷ ಸಿಮ್‌ನಲ್ಲೇ ಬಿಡಿ. ಈಗ ಬಾದಾಮಿ ಕೀರು ಸವಿಯಲು ಸಿದ್ಧ...

ಹೆಸರುಕಾಳು ಜ್ಯೂಸ್‌: ಒಂದು ಸಣ್ಣ ಕಪ್‌ ಹೆಸರುಕಾಳನ್ನು ಚೆನ್ನಾಗಿ ಎರಡು ಬಾರಿ ತೊಳೆಯಿರಿ. ಬಟ್ಟೆಯ ಮೇಲೆ ಹಾಕಿ ನೀರು ಕಡಿಮೆಯಾಗುವಂತೆ ನೋಡಿಕೊಳ್ಳಿ, ಬಳಿಕ ಬಾಣಲಿ ಮೇಲೆ ಒಂದೆರಡು ನಿಮಿಷ ಸ್ವಲ್ಪ ಹುರಿಯಿರಿ (ಹೆಚ್ಚು ಹುರಿದರೆ ರುಚಿ ಕೆಟ್ಟು ಹೋಗುತ್ತದೆ). ಹುರಿದ ಹೆಸರುಕಾಳಿನ ಜೊತೆ ಏಲಕ್ಕಿ ಸೇರಿಸಿ ತರಿ ತರಿಯಾಗಿ (ನುಣ್ಣಗೆ ಮಾಡಬಾರದು) ಮಿಕ್ಸಿ ಮಾಡಿಕೊಳ್ಳಿ. ಇನ್ನೊಮ್ಮೆ ಮಿಕ್ಸಿಗೆ ಬೆಲ್ಲವನ್ನು (ಜೋನಿ ಬೆಲ್ಲ ಹಾಕಿದರೆ ಒಳ್ಳೆಯದು) ಹಾಕಿ.

ಎರಡೂ ಮಿಶ್ರಣವನ್ನು ಬೌಲ್‌ನಲ್ಲಿ ಸೇರಿಸಿಕೊಳ್ಳಿ. ಜಾಲರದಲ್ಲಿ ಆ ಮಿಶ್ರಣವನ್ನು ಸೋಸಿಕೊಳ್ಳಿ. ಹದಕ್ಕೆ ತಕ್ಕಷ್ಟು ನೀರನ್ನು ಹಾಕಿಕೊಂಡು ಸವಿಯಬಹುದು. ಇದೇ ವಿಧಾನದಲ್ಲಿ ಸೌತೆಕಾಯಿ ಬೀಜದ ಜ್ಯೂಸ್ ಕೂಡ ಮಾಡಬಹುದು. ಆದರೆ ಸೌತೆಕಾಯಿ ಬೀಜಗಳನ್ನು ಬಾಣಲಿಯಲ್ಲಿ ಹುರಿಯುವ ಅಗತ್ಯವಿಲ್ಲ.

ರಾಗಿ ಜ್ಯೂಸ್‌: ರಾಗಿಕಾಳನ್ನು ಸ್ವಲ್ಪ ಹುರಿದು ಬೆಲ್ಲ ಹಾಗೂ ಏಲಕ್ಕಿಯೊಂದಿಗೆ ಮಿಕ್ಸಿ ಮಾಡಿಕೊಳ್ಳು. ತೆಳುವಾದ ಬಿಳಿ ಬಟ್ಟೆಯಲ್ಲಿ ಸೋಸಿಕೊಂಡು ಬೇಕಾದಷ್ಟು ನೀರು ಸೇರಿಸಿಕೊಂಡು ಕುಡಿಯಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.