ಹಂದಿಮಾಂಸದ ಸಾರು
ಬೇಕಾಗುವ ಸಾಮಗ್ರಿಗಳು: ಪೋರ್ಕ್ – 1 ಕೆ.ಜಿ, ಶುಂಠಿ – 1 ಇಂಚು, ಬೆಳ್ಳುಳ್ಳಿ – 2 ಉಂಡೆ, ಕೊತ್ತಂಬರಿ – ಸ್ವಲ್ಪ, ಪುದಿನ ಸೊಪ್ಪು – ಸ್ವಲ್ಪ, ಧನಿಯಾ ಪುಡಿ – 3 ಚಮಚ, ಖಾರದ ಪುಡಿ – 3 ಚಮಚ, ಅರಿಸಿನ ಪುಡಿ – ಸ್ವಲ್ಪ, ಚಕ್ಕೆ– 2 ಇಂಚು ಉದ್ದದ್ದು, ಲವಂಗ – 5, ಮೆಣಸು – 10, ಪತ್ರೆ – ಸ್ವಲ್ಪ, ಜಾಯಿಕಾಯಿ – ಸ್ವಲ್ಪ, ಗಸೆಗಸೆ – ಸ್ವಲ್ಪ, ಈರುಳ್ಳಿ – 3, ಟೊಮೆಟೊ – 1, ಕಾಯಿ – ಅರ್ಧ ಹೋಳು, ಉಪ್ಪು ರುಚಿಗೆ ತಕ್ಕಷ್ಟು.
ತಯಾರಿಸುವ ವಿಧಾನ: ಈರುಳ್ಳಿ ಖಾರಕ್ಕೆ: ಈರುಳ್ಳಿ, ಕೊತ್ತಂಬರಿ, ಪುದಿನ, ಅರಿಸಿನ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ರುಬ್ಬಿಟ್ಟುಕೊಳ್ಳಿ.
ಖಾರ ಮಸಾಲೆಗೆ: ಟೊಮೆಟೊ, ಧನಿಯಾಪುಡಿ, ಖಾರದ ಪುಡಿ ಹಾಕಿ ರುಬ್ಬಿಟ್ಟುಕೊಳ್ಳಿ.
ಕಾಯಿ ಮಸಾಲೆಗೆ: ಕಾಯಿ, ಚಕ್ಕೆ, ಲವಂಗ, ಪತ್ರೆ, ಜಾಯಿಕಾಯಿ, ಗಸೆಗಸೆ ಹಾಕಿ ರುಬ್ಬಿಟ್ಟುಕೊಳ್ಳಿ.
ಕುಕ್ಕರ್‌ಗೆ ಚೆನ್ನಾಗಿ ತೊಳೆದ ಪೋರ್ಕ್ ಮತ್ತು ಉಪ್ಪನ್ನು ಹಾಕಿ ಮಾಂಸಕ್ಕೆ ಉಪ್ಪು ಹಿಡಿಯುವ ತನಕ ಫ್ರೈ ಮಾಡಿದ ನಂತರ ಈರುಳ್ಳಿ ಖಾರ ಹಾಕಿ, ಸ್ವಲ್ಪ ಪ್ರಮಾಣದಲ್ಲಿ ನೀರು ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ ಮುಕ್ಕಾಲು ಭಾಗ ಬೇಯಿಸಿ ನಂತರ ಮುಚ್ಚಳ ತೆಗೆದು ಖಾರ ಮಸಾಲೆ ಹಾಕಿ ಹಸಿ ವಾಸನೆ ಹೋಗುವ ತನಕ ಬೇಯಿಸಿದ ಮೇಲೆ ಕಾಯಿ ಮಸಾಲೆ ಹಾಕಿ ಚೆನ್ನಾಗಿ ಬೇಯಿಸಿ (ಒಗ್ಗರಣೆಗೆ ಎಣ್ಣೆಯ ಅವಶ್ಯಕತೆಯಿಲ್ಲ).
**
ಪೋರ್ಕ್ ಚಿಲ್ಲಿ ಡ್ರೈ ಫ್ರೈ
ಬೇಕಾಗುವ ಸಾಮಗ್ರಿಗಳು: ಪೋರ್ಕ್ – 1 ಕೆ.ಜಿ(ಮಾಂಸ ಮತ್ತು ಚರ್ಬಿ), ಶುಂಠಿ – 3 ಇಂಚು, ಬೆಳ್ಳುಳ್ಳಿ – 3 ಉಂಡೆ, ಪುದಿನಸೊಪ್ಪು – ಸ್ವಲ್ಪ, ಕೊತ್ತಂಬರಿ ಸೊಪ್ಪು – ಸ್ವಲ್ಪ, ಗರಂಮಸಾಲೆ – 1 ಚಮಚ, ಖಾರದ ಪುಡಿ – 2 ಚಮಚ, ಧನಿಯಾ ಪುಡಿ – 6 ಚಮಚ, ಅರಿಸಿನಪುಡಿ – ಸ್ವಲ್ಪ, ಮೆಣಸು – 1/2 ಚಮಚ, ಈರುಳ್ಳಿ – 3, ಟೊಮೆಟೊ – 1, ಹಸಿ ಮೆಣಸಿನಕಾಯಿ – 10, ನಿಂಬೆಹಣ್ಣು – 1, ಎಣ್ಣೆ, ಉಪ್ಪು – ರುಚಿಗೆ ತಕ್ಕಷ್ಟು.
ತಯಾರಿಸುವ ವಿಧಾನ: ಚೆನ್ನಾಗಿ ತೊಳೆದ ಪೋರ್ಕ್ಗೆ ಅರಿಸಿನ ಪುಡಿ, ಕತ್ತರಿಸಿದ ಟೊಮೆಟೊ, ಸ್ವಲ್ಪ ಖಾರದಪುಡಿ ಮತ್ತು ಸ್ವಲ್ಪ ಉಪ್ಪನ್ನು ಬೆರೆಸಿ ಕುಕ್ಕರ್‌ನಲ್ಲಿ ಬೇಯಿಸಿ ಬಸಿದಿಟ್ಟುಕೊಳ್ಳಿ.
ಧನಿಯಾಪುಡಿ, ಖಾರದಪುಡಿ, ಗರಂಮಸಾಲೆಯನ್ನು ಕಾವಲಿ ಮೇಲೆ ಸಣ್ಣ ಉರಿಯಲ್ಲಿ ಸ್ವಲ್ಪ ಕಪ್ಪು ಬಣ್ಣ ಬರುವವರೆಗೂ ಹುರಿದಿಟ್ಟುಕೊಳ್ಳಿ.
ಕತ್ತರಿಸಿದ ಈರುಳ್ಳಿ, ಕತ್ತರಿಸಿದ ಕೊತ್ತಂಬರಿ-ಪುದಿನ, ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ, ಹುರಿದ ಮೆಣಸನ್ನು ದಪ್ಪ ದಪ್ಪವಾಗಿ ಜಜ್ಜಿಕೊಳ್ಳಿ.
ತೆರೆದ ಪಾತ್ರೆಗೆ ಎಣ್ಣೆ ಹಾಕಿ ಕಾದ ನಂತರ ಜಜ್ಜಿದ ಹಸಿಮೆಣಸಿನಕಾಯಿ, ಈರುಳ್ಳಿ, ಬೆಳ್ಳುಳ್ಳಿ, ಕೊತ್ತಂಬರಿ, ಪುದಿನ ಹಾಕಿ ಸಣ್ಣ ಉರಿಯಲ್ಲಿ ಫ್ರೈ ಮಾಡಿದ ಮೇಲೆ ಬೇಯಿಸಿದ ಪೋರ್ಕ್, ಉಪ್ಪು, ಜಜ್ಜಿದ ಶುಂಠಿ, ಜಜ್ಜಿದ ಮೆಣಸು, ಮಾಂಸ ಬೆಂದಿರುವ ನೀರು ಸ್ವಲ್ಪ ಹಾಕಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ ಬೇಯಿಸಿ. ಮಾಂಸಕ್ಕೆ ಉಪ್ಪು ಖಾರ ಹಿಡಿದ ನಂತರ ನೀರಿಲ್ಲದಂತೆ ಡ್ರೈ ಆಗುವ ತನಕ ಬೇಯಿಸಿ. ಕೊನೆಗೆ ಹುರಿದ ಪುಡಿಯನ್ನು ಹಾಕಿ ಚೆನ್ನಾಗಿ ಮಾಂಸಕ್ಕೆ ಹಿಡಿಯುವಂತೆ ತಿರುಗಿಸಿ. ಆರಿದ ನಂತರ ನಿಂಬೆರಸ ಹಾಕಿ.
**
ಪೋರ್ಕ್ ಚಾಪ್ಸ್
ಬೇಕಾಗುವ ಸಾಮಗ್ರಿಗಳು:ಪೋರ್ಕ್ – 1/2 ಕೆ.ಜಿ (ಮಾಂಸ ಮತ್ತು ಚರ್ಬಿ), ಶುಂಠಿ – 2 ಇಂಚು, ಬೆಳ್ಳುಳ್ಳಿ – 2 ಉಂಡೆ, ಕೊತ್ತಂಬರಿ – ಸ್ವಲ್ಪ, ಪುದಿನಸೊಪ್ಪು – ಸ್ವಲ್ಪ, ಧನಿಯಾಪುಡಿ – 2 ಚಮಚ, ಹಸಿರು ಮೆಣಸಿನಕಾಯಿ – 6, ಅರಿಸಿನ ಪುಡಿ – ಸ್ವಲ್ಪ, ಮೆಣಸು – 10, ಲವಂಗ – 10, ಏಲಕ್ಕಿ – 1, ಹುರಿಕಡ್ಲೆ – ಸ್ವಲ್ಪ, ಜಾಯಿಕಾಯಿ – 1 ಸಣ್ಣ ಚೂರು, ಪತ್ರೆ – 1 ಹೂ, ಗಸೆಗಸೆ – ಸ್ವಲ್ಪ, ಚಕ್ಕೆ – 2 ಸಣ್ಣ ತುಂಡುಗಳು, ಈರುಳ್ಳಿ – 2, ಟೊಮೆಟೊ – 1, ಕಾಯಿ – 1/4 ಹೋಳು, ಉಪ್ಪು – ರುಚಿಗೆ ತಕ್ಕಷ್ಟು.
ತಯಾರಿಸುವ ವಿಧಾನ: ಈರುಳ್ಳಿ ಖಾರಕ್ಕೆ: ಈರುಳ್ಳಿ, ಕೊತ್ತಂಬರಿ, ಪುದಿನ, ಹಸಿಮೆಣಸಿನಕಾಯಿ, ಅರಿಸಿನ ಪುಡಿ, ಶುಂಠಿ, ಬೆಳ್ಳುಳ್ಳಿ, ಕಡಿಮೆ ನೀರು ಹಾಕಿ ದಪ್ಪದಪ್ಪವಾಗಿ ರುಬ್ಬಿಟ್ಟುಕೊಳ್ಳಿ.
ಮಸಾಲೆಗೆ: ಮೆಣಸು, ಕಾಯಿ, ಲವಂಗ, ಚಕ್ಕೆ, ಏಲಕ್ಕಿ, ಹುರಿಕಡ್ಲೆ, ಜಾಯಿಕಾಯಿ, ಪತ್ರೆ, ಗಸೆಗಸೆ, ಟೊಮೆಟೊ, ಧನಿಯಾಪುಡಿಗೆ ಕಡಿಮೆ ನೀರು ಹಾಕಿ ನುಣ್ಣಗೆ ರುಬ್ಬಿಟ್ಟುಕೊಳ್ಳಿ.
ಚೆನ್ನಾಗಿ ತೊಳೆದ ಪೋರ್ಕ್ ಅನ್ನು ಕುಕ್ಕರ್‌ನಲ್ಲಿ ಹಾಕಿ ಉಪ್ಪನ್ನು ಬೆರೆಸಿ ಸ್ವಲ್ಪ ಫ್ರೈ ಆದ ನಂತರ ಈರುಳ್ಳಿ ಖಾರ ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ ಮುಕ್ಕಾಲು ಭಾಗ ಮಾಂಸ ಬೇಯಿಸಿ ಆರಿದ ನಂತರ ಮುಚ್ಚಳ ತೆಗೆದು ಮಸಾಲೆ ಸೇರಿಸಿ ಚೆನ್ನಾಗಿ ಬೇಯಿಸಿ (ಒಗ್ಗರಣೆಗೆ ಎಣ್ಣೆಯ ಅವಶ್ಯಕತೆಯಿಲ್ಲ).
**
ಪೋರ್ಕ್ ಫ್ರೈ
ಬೇಕಾಗುವ ಸಾಮಗ್ರಿಗಳು: ಪೋರ್ಕ್ – 1 ಕೆ.ಜಿ (ಮಾಂಸ ಮತ್ತು ಚರ್ಬಿ), ಶುಂಠಿ – 2 ಇಂಚು, ಬೆಳ್ಳುಳ್ಳಿ – 2 ಉಂಡೆ, ಕೊತ್ತಂಬರಿ ಸೊಪ್ಪು – ಸ್ವಲ್ಪ, ಪುದಿನಸೊಪ್ಪು – ಸ್ವಲ್ಪ, ಕರಿಬೇವು – 1 ಕಡ್ಡಿ, ಖಾರದ ಪುಡಿ – 2 ಚಮಚ, ಧನಿಯಾಪುಡಿ – 6 ಚಮಚ, ಅರಿಸಿನ ಪುಡಿ – ಸ್ವಲ್ಪ, ಕಸೂರಿ ಮೇಥಿ – 1 ಚಮಚ, ಗರಂಮಸಾಲೆ – 1 ಚಮಚ, ಪೆಪ್ಪರ್ ಪುಡಿ – 1 ಚಮಚ, ಈರುಳ್ಳಿ – 2, ಟೊಮೆಟೊ – 1, ಹಸಿ ಮೆಣಸಿನಕಾಯಿ – 8, ಸೋಯಾ ಸಾಸ್ – ಸ್ವಲ್ಪ, ನಿಂಬೆಹಣ್ಣು – 1, ಎಣ್ಣೆ, ಸಾಸಿವೆ, ಉಪ್ಪು ರುಚಿಗೆ ತಕ್ಕಷ್ಟು.
ತಯಾರಿಸುವ ವಿಧಾನ: ಚೆನ್ನಾಗಿ ತೊಳೆದ ಪೋರ್ಕ್ಗೆ ಅರಿಸಿನ ಪುಡಿ, ಖಾರದಪುಡಿ ಮತ್ತು ಸ್ವಲ್ಪ ಉಪ್ಪನ್ನು ಬೆರೆಸಿ ಕುಕ್ಕರ್‌ನಲ್ಲಿ ಬೇಯಿಸಿಕೊಳ್ಳಿ.
ಧನಿಯಾಪುಡಿಯನ್ನು ಕಾವಲಿ ಮೇಲೆ ಸಣ್ಣ ಉರಿಯಲ್ಲಿ ಸ್ವಲ್ಪಕಪ್ಪು ಬಣ್ಣ ಬರುವವರೆಗೂ ಹುರಿದಿಟ್ಟುಕೊಳ್ಳಿ.
ಶುಂಠಿ, ಬೆಳ್ಳುಳ್ಳಿ, ಪುದಿನ, ಹಸಿಮೆಣಸಿನಕಾಯಿಯನ್ನು ನೀರು ಹಾಕದೆ ರುಬ್ಬಿಕೊಳ್ಳಿ. ಕೊತ್ತಂಬರಿ, 1 ಈರುಳ್ಳಿಯನ್ನು ಉದ್ದದ್ದು 1 ಈರುಳ್ಳಿಯನ್ನು ಸಣ್ಣಗೆ ಕತ್ತರಿಸಿಕೊಳ್ಳಿ.
ಫ್ರೈ ಪ್ಯಾನ್‍ಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಸಿಡಿಸಿ ಈರುಳ್ಳಿ ಹಾಕಿ ಸ್ವಲ್ಪ ಫ್ರೈ ಮಾಡಿದ ಮೇಲೆ ರುಬ್ಬಿದ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವ ತನಕ ಬೇಯಿಸಿದ ಮೇಲೆ ಟೊಮೆಟೊ, ಕರಿಬೇವು, ಸೋಯಾ ಸಾಸ್ ಹಾಕಿ ಸ್ವಲ್ಪ ಸಮಯದ ನಂತರ ಬೆಂದ ಪೋರ್ಕ್ ಮಾತ್ರ ಹಾಕಿ (ಬೆಂದ ನೀರನ್ನು ಹಾಕಬೇಡಿ), ಉಪ್ಪು, ಖಾರದಪುಡಿ, ಪೆಪ್ಪರ್ ಪುಡಿ, ಗರಂಮಸಾಲೆ, ಕೊತ್ತಂಬರಿ, ಕಸೂರಿ ಮೇಥಿ ಹಾಕಿ ಸ್ವಲ್ಪ ಬೇಯಿಸಿದ ನಂತರ ಸಣ್ಣ ಉರಿಮಾಡಿ ಹುರಿದ ಧನಿಯಾಪುಡಿ ಹಾಕಿ ಚೆನ್ನಾಗಿ ತಿರುಗಿಸಿ, ಇದಾದ ಮೇಲೆ ನಿಂಬೆಹಣ್ಣಿನ ರಸವನ್ನು ಹಾಕಿ ತಿನ್ನಲು ಕೊಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.