ADVERTISEMENT

ಈದ್‌ ಸಂಭ್ರಮಕ್ಕೆ ವರ್ಕಿ ಮೀಠಾ, ಮಟನ್ ಸುಖಾಪಾಲ್‌

​ಪ್ರಜಾವಾಣಿ ವಾರ್ತೆ
Published 23 ಮೇ 2020, 2:09 IST
Last Updated 23 ಮೇ 2020, 2:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಾಕ್‌ಡೌನ್‌ ಮಧ್ಯೆಯೇ ರಂಜಾನ್ ಮಾಸ ಆರಂಭವಾಗಿ ಹಬ್ಬದ ಸಂಭ್ರಮ ಎದುರುಗೊಂಡಿದೆ. ಹಬ್ಬವೆಂದಾಗ ಬಗೆ ಬಗೆಯ ಖಾದ್ಯಗಳು ಸಾಮಾನ್ಯ. ರಂಜಾನ್ ಸಂಭ್ರಮಕ್ಕೆ ಒಂದೊಂದು ಕಡೆ ಒಂದೊಂದು ರೀತಿಯ ಖಾದ್ಯಗಳನ್ನು ತಯಾರಿಸುತ್ತಾರೆ. ಬಿರಿಯಾನಿ, ಕಬಾಬ್, ಮೀಠಾ(ಸಿಹಿ) ಅಂತೂ ಸಾಮಾನ್ಯ. ಅದರಲ್ಲಿಯೂ ಮೈಸೂರು ಸಾಂಪ್ರದಾಯಿಕ ನಗರಿ. ಅಡುಗೆಯಲ್ಲೂ ಸಂಪ್ರದಾಯದ ರುಚಿ ಉಳಿಸುವುದು ಇಲ್ಲಿನ ಜನರ ವೈಖರಿ. ರಂಜಾನ್‌ಗೆ ಮೈಸೂರು ಸ್ಪೆಷಲ್ ದಮ್ ಬಿರಿಯಾನಿ, ವರ್ಕಿ ಮೀಠಾ (ಸುರುಳಿ ಬಟಾರ್) ಮತ್ತು ಮಟನ್ ಸುಖಾಪಾಲ್ ತಯಾರಿಸುವ ವಿಧಾನವನ್ನು ವಿವರಿಸಿದ್ದಾರೆ ಆಯೇಷಾ ಆಫ್ರತ್‌

***

ಮೈಸೂರು ದಮ್ ಬಿರಿಯಾನಿ

ADVERTISEMENT

ಬೇಕಾಗುವ ಸಾಮಗ್ರಿಗಳು:ಚಿಕನ್ - 1 ಕೆ.ಜಿ.,ಅಕ್ಕಿ - 1 ಕೆ.ಜಿ., ಈರುಳ್ಳಿ- 3/4 ಕೆ.ಜಿ., ಟೊಮೊಟೊ- 1/2 ಕೆ.ಜಿ., ಶುಂಠಿ ಬೆಳ್ಳುಳ್ಳಿ ಪೇಸ್ಟ್- 100 ಗ್ರಾಂ, ಸಾಜೀರ-5 ಗ್ರಾಂ, ಏಲಕ್ಕಿ- 4-5, ಲವಂಗ- 8-9 ಚಕ್ಕೆ- 3-4, ಕಸ್ತೂರಿ ಮೇಥಿ- 5 ಗ್ರಾಂ, ಮೆಂತೆ ಸೊಪ್ಪು-2 ಕಟ್ಟು, ಪುದಿನ -1 ಕಟ್ಟು, ಕೊತ್ತಂಬರಿ ಸೊಪ್ಪು- 1 ಕಟ್ಟು, ಮೊಸರು- 1/4 ಲೀಟರ್, ಎಣ್ಣೆ- 150 ಮಿಲಿ ಲೀಟರ್‌, ತುಪ್ಪ- 50 ಗ್ರಾಂ, ಲೆಮನ್‌ ಹಳದಿ ಬಣ್ಣ- 1/4 ಟೀ ಚಮಚ, ಅರಿಸಿನ- 2 ಟೀ ಚಮಚ, ಲಿಂಬೆಹಣ್ಣು -1, ಉಪ್ಪು - ರುಚಿಗೆ ತಕ್ಕಷ್ಟು, ಮೆಣಸಿನ ಹುಡಿ - 2 ಚಮಚ, ಹಸಿ ಮೆಣಸಿನಕಾಯಿ - 2 -3

ತಯಾರಿಸುವ ವಿಧಾನ: ದೊಡ್ಡ ಪಾತ್ರೆಗೆ ಎಣ್ಣೆ ಹಾಗೂ ತುಪ್ಪ ಹಾಕಿ ಹಾಕಿ ಬಿಸಿಯಾದ ಮೇಲೆತಲಾ 3 ರಿಂದ 4 ಚಕ್ಕೆ, ಲವಂಗ, ಏಲಕ್ಕಿ ಹಾಕಿ. ನಂತರ ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ. ಅದಕ್ಕೆ ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಹಾಕಿ ಕೈ ಆಡಿಸಿ. ಕಸ್ತೂರಿ ಮೇಥಿ ಹಾಕಿ ಸಾಜೀರ ಜಜ್ಜಿ ಹಾಕಿ.

ಇನ್ನೊಂದು ಪಾತ್ರೆಗೆ ಚಿಕನ್, ಕತ್ತರಿಸಿದ ಟೊಮೆಟೊ, ಮೆಣಸಿನ ಹುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಇಡಿ. ಈರುಳ್ಳಿ ಕಂದು ಬಣ್ಣಕ್ಕೆ ತಿರುಗಿದಾಗ ಅದಕ್ಕೆ ಪುದಿನ, ಕೊತ್ತಂಬರಿ ಸೊಪ್ಪು, ಮೆಂತೆ ಸೊಪ್ಪು ಹಾಕಿ. ನಂತರ ಚಿಕನ್‌ ಮಿಶ್ರಣವನ್ನು ಹಾಕಿ ಚೆನ್ನಾಗಿ ತಿರುಗಿಸಿ. ಅದಕ್ಕೆ ಲಿಂಬೆ ರಸ, ಮೆಣಸಿನ ಹುಡಿ, ಅರಿಸಿನ ಹುಡಿ ಸೇರಿಸಿ. ಇನ್ನೊಂದು ಪಾತ್ರೆಯಲ್ಲಿ ನೀರು ಕಾಯಲು ಇಟ್ಟು ಅದಕ್ಕೆ 1 ಚಕ್ಕೆ, 3 ಲವಂಗ, 2 ಏಲಕ್ಕಿ ಹಾಕಿ ಲೆಮನ್‌ ಹಳದಿ ಬಣ್ಣ ಹಾಕಿ ಕುದಿಯುವಾಗ ಅಕ್ಕಿ ಹಾಕಿ.

ಶೇ 60ರಷ್ಟು ಬೆಂದ ಅಕ್ಕಿಯನ್ನು ತೆಗೆದು ನೀರು ಬಸಿದು ತಕ್ಷಣ ಮಸಾಲೆ ಮೇಲೆ ಹರಡಿ. ಮೇಲೆ ಕೊತ್ತಂಬರಿ ಸೊಪ್ಪು ಹಾಕಿ ಮಧ್ಯೆ ಸೌಟಿನಿಂದ ತೂತು ಮಾಡಿ ಸ್ವಲ್ಪ ತುಪ್ಪ ಹಾಕಿ. ಗಾಳಿ ಹೊರಹೋಗದಂತೆ ಗಟ್ಟಿಯಾಗಿ ಮುಚ್ಚಳ ಮುಚ್ಚಿ ದೊಡ್ಡ ಉರಿಯಲ್ಲಿ 5 ನಿಮಿಷ ಬೇಯಿಸಿ. ನಂತರ ಉರಿ ಸಣ್ಣದು ಮಾಡಿ 10 ನಿಮಿಷ ಬೇಯಿಸಿ. ಗ್ಯಾಸ್ ಬಂದ್ ಮಾಡಿದ ಮೇಲೆ 10 ನಿಮಿಷ ಹಾಗೆಯೇ ಬಿಡಿ . ನಂತರ ತೆರೆದು ಚೆನ್ನಾಗಿ ಮಿಕ್ಸ್ ಮಾಡಿ ಬಿಸಿಯಾಗಿ ದಾಲ್, ಮೊಸರು ಬಜ್ಜಿ , ಅಥವಾ ಪುದಿನ ಚಟ್ನಿಯೊಂದಿಗೆ ಬಡಿಸಿ.

ವರ್ಕಿ ಮೀಠಾ

ಬೇಕಾಗುವ ಸಾಮಗ್ರಿಗಳು: ವರ್ಕಿ – 25 ತುಂಡು, ಹಾಲು – 2 ಲೀಟರ್, ಸಕ್ಕರೆ – ಒಂದೂಕಾಲು ಕೆ.ಜಿ., ಏಲಕ್ಕಿ – 10 ಗ್ರಾಂ, ಗೋಡಂಬಿ – 50 ಗ್ರಾಂ, ಬಾದಾಮಿ – 10 ಗ್ರಾಂ, ಸಿರೆಂಜಿ – 50 ಗ್ರಾಂ, ತುಪ್ಪ – 1/4 ಕೆ.ಜಿ., ಮಿಲ್ಕ್ ಮೇಡ್ – 1 ಡಬ್ಬ, ಸಿಹಿ ಖೋವ – 1/2 ಕೆ.ಜಿ.

ತಯಾರಿಸುವ ವಿಧಾನ: ಸಕ್ಕರೆ ಮತ್ತು ಖೋವವನ್ನು ಒಂದು ಪಾತ್ರೆಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಡಿ. ಇನ್ನೊಂದು ಪಾತ್ರೆಗೆ ಹಾಲು ಹಾಕಿ ಒಲೆ ಮೇಲೆ ಇಟ್ಟು ಕುದಿಯಲು ಬಿಡಿ. ಅದಕ್ಕೆ ಸಕ್ಕರೆ ಮತ್ತು ಖೋವ ಮಿಶ್ರಣವನ್ನು ಹಾಕಿ. ವರ್ಕಿಯನ್ನು ಚೆನ್ನಾಗಿ ಜಜ್ಜಿ ಪುಡಿ ಮಾಡಿ. ಸ್ವಲ್ಪ ದಪ್ಪಗೆ ಇರಲಿ. ಹಾಲು ಕುದಿಯುವಾಗ ವರ್ಕಿ ಹಾಕಿ ಚೆನ್ನಾಗಿ ಕೈ ಆಡಿಸಿ. ಅದಕ್ಕೆ ಮಿಲ್ಕ್ ಮೇಡ್ ಏಲಕ್ಕಿ ಪುಡಿ ಹಾಕಿ ಕೈ ಆಡಿಸುತ್ತಾ ಇರಬೇಕು. ನಂತರ 100 ಗ್ರಾಮ್ ತುಪ್ಪ ಹಾಕಿ ಚೆನ್ನಾಗಿ ಕುದಿಸಿ ಪಾಯಸದ ಹದಕ್ಕೆ ಬಂದಾಗ ಗ್ಯಾಸ್ ಆಫ್ ಮಾಡಿ. ನಂತರ ಒಂದು ಪ್ಯಾನ್‌ಗೆ 150 ಗ್ರಾಂ ತುಪ್ಪ ಹಾಕಿ ಅದಕ್ಕೆ ಗೋಡಂಬಿ, ಬಾದಾಮಿ, ಸಿರೆಂಜಿಯನ್ನು ಹುರಿದು ಪಾಯಸಕ್ಕೆ ಸೇರಿಸಿ.

ಮಟನ್ ಸುಖಾಪಾಲ್‌

ಬೇಕಾಗುವ ಸಾಮಗ್ರಿಗಳು: ಮಟನ್ -1 ಕೆ.ಜಿ., ಶುಂಠಿ–ಬೆಳ್ಳುಳ್ಳಿ ಪೇಸ್ಟ್-3 ಟೇಬಲ್ ಚಮಚ, ಮೆಣಸಿನಪುಡಿ - 4 ಟೇಬಲ್ ಚಮಚ, ಟೊಮೆಟೊ - 1/4 ಕೆ.ಜಿ., ಅರಿಸಿನ- 1 1/2 ಟೀ ಚಮಚ, ಎಣ್ಣೆ - 200ಮಿಲಿ ಲೀಟರ್‌, ಕೊತ್ತಂಬರಿ ಸೊಪ್ಪು - 1 ಕಟ್ಟು, ಉಪ್ಪು – ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ: ಮಟನ್ ತುಂಡುಗಳು ತೆಳ್ಳಗಿರಲಿ. ಮುಳ್ಳುಗಳಿದ್ದರೆ ಜಜ್ಜಿಕೊಳ್ಳಿ. ಕುಕ್ಕರ್‌ಗೆ ಮಟನ್ ಹಾಕಿ ಅದಕ್ಕೆ ಉಪ್ಪು, ಅರಿಸಿನ ಸೇರಿಸಿ ಮಧ್ಯಮ ಉರಿಯಲ್ಲಿ 4 ವಿಷಲ್ ತೆಗೆದು ಇಡಿ. ಟೊಮೆಟೊವನ್ನು ಮಿಕ್ಸಿಯಲ್ಲಿ ಅರೆದು ಇಟ್ಟುಕೊಳ್ಳಿ. ದೊಡ್ಡ ಪ್ಯಾನ್‌ಗೆ ಎಣ್ಣೆ ಹಾಕಿ ಬೇಯಿಸಿದ ಮಾಂಸ ಹಾಕಿ ದೂರ ದೂರಕ್ಕೆ ಹರಡಿ. ಅದಕ್ಕೆ ಶುಂಠಿ–ಬೆಳ್ಳುಳ್ಳಿ ಪೇಸ್ಟ್, ಮೆಣಸಿನ ಹುಡಿ, ಅರಿಸಿನ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಅರೆದ ಟೊಮೆಟೊ ಸೇರಿಸಿ ಚೆನ್ನಾಗಿ ತಿರುಗಿಸಿ. ಆಗಾಗ ಎಣ್ಣೆ ಸೇರಿಸುತ್ತಾ ಕೈ ಆಡಿಸುತ್ತಿರಿ. ಮಾಂಸ ದೂರ ದೂರಕ್ಕೆ ಇದ್ದು ಚೆನ್ನಾಗಿ ಹುರಿದುಕೊಳ್ಳಬೇಕು. ಉಲ್ಟಾ ಪಲ್ಟಾ ಮಾಡಿ ಎಣ್ಣೆ ಸೇರಿಸುತ್ತಾ ಕಾಯಿಸಿರಿ. ಗ್ರೇವಿ ಬೇಕಾದಲ್ಲಿ ಗ್ಯಾಸ್ ಆಫ್ ಮಾಡಿ. ಡ್ರೈ ಬೇಕಾದರೆ ಮಸಾಲೆ ಚೆನ್ನಾಗಿ ಆರಲಿ. ಚಪಾತಿ, ದೋಸೆ, ಪರೋಟ ಜೊತೆ ತಿನ್ನಲು ಚೆನ್ನಾಗಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.