ADVERTISEMENT

ಆಹಾರ: ಆರೋಗ್ಯಕರ ಉಂಡೆ, ಪುಡಿ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2024, 0:32 IST
Last Updated 23 ನವೆಂಬರ್ 2024, 0:32 IST
ಟೂ ಇನ್ ಒನ್ ಸೇವು ಮತ್ತು ರಿಬ್ಬನ್ ಪಕೋಡಾ
ಟೂ ಇನ್ ಒನ್ ಸೇವು ಮತ್ತು ರಿಬ್ಬನ್ ಪಕೋಡಾ   

ಬೇಸನ್ ಉಂಡೆ

ಸಾಮಗ್ರಿಗಳು: ಕಡಲೆ ಹಿಟ್ಟು 2ಲೋಟ, ತುಪ್ಪ 1/2ಲೋಟ, ಸಕ್ಕರೆ 2ಲೋಟ , ಗೋಡಂಬಿ ಸ್ವಲ್ಪ, ಮನೂಕ ಅಂದರೆ ಒಣ ದ್ರಾಕ್ಷಿ ಸ್ವಲ್ಪ ಏಲಕ್ಕಿಪುಡಿ.

ಮಾಡುವ ವಿಧಾನ: ಒಲೆಯ ಮೇಲೆ ಒಂದು ಅಗಲವಾದ ಬಾಣಲೆಯಲ್ಲಿ ಸ್ವಲ್ಪ ತುಪ್ಪ ಹಾಕಿ ಅದಕ್ಕೆ ಕಡಲೆ ಹಿಟ್ಟು ಹಾಕಿ ಮಧ್ಯಮ ಉರಿಯಲ್ಲಿ ಕೆಂಬಣ್ಣ ಬರುವವರೆಗೂ ಹುರಿಯಬೇಕು. 2 ಲೋಟ ಸಕ್ಕರೆಯನ್ನು ಮಿಕ್ಸಿ ಮಾಡಿಕೊಳ್ಳಿ ಹುರಿದ ಕಡಲೆ ಹಿಟ್ಟು ತಣ್ಣಗಾದ ಮೇಲೆ ಸಕ್ಕರೆ ಹಾಗೂ ಹುರಿದ ಗೋಡಂಬಿ, ದ್ರಾಕ್ಷಿ ಹಾಗೂ ಸ್ವಲ್ಪ ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಕಲಸಬೇಕು. ಆಮೇಲೆ ನಿಮಗೆ ಬೇಕಾದ ಗಾತ್ರದಲ್ಲಿ ಉಂಡೆ ಕಟ್ಟಿ. ಸ್ವಲ್ಪ ಸಮಯದಲ್ಲಿ ರುಚಿಯಾದ ಬೇಸನ್ ಉಂಡೆ ಸವಿಯಲು ಸಿದ್ಧ.

ADVERTISEMENT
ಬೇಸನ್ ಉಂಡೆ

ಪುಳಿಯೋಗರೆ ಪುಡಿ

ಬೇಕಾಗುವ ಸಾಮಗ್ರಿಗಳು: ಎಳ್ಳು1/4 ಗ್ರಾಂ ಶೇಂಗಾ 150ಗ್ರಾಂ ಹುಣಸೇಹಣ್ಣು ನಿಂಬೆ ಗಾತ್ರದ್ದು ಬೆಲ್ಲ ಸ್ವಲ್ಪ ಜೀರಿಗೆ ಒಂದು ಸಣ್ಣ ಚಮಚ ಮೆಣಸು ಒಂದು ಸಣ್ಣ ಚಮಚ ಹವೀಜ್ ಸ್ವಲ್ಪ ಕಡಲೆ ಬೆಳೆ ಒಂದು ಸಣ್ಣ ಲೋಟ ಉದ್ದಿನಬೇಳೆ ಒಂದು ಸಣ್ಣ ಲೋಟ ಖಾರಪುಡಿ ಅಥವಾ ಮೆಣಸಿನಕಾಯಿ ಇಂಗುಸ್ವಲ್ಪ ಉಪ್ಪು ರುಚಿಗೆ ತಕ್ಕಷ್ಟು ಮತ್ತು ಸ್ವಲ್ಪ ಅರಿಶಿನಪುಡಿ.

ಮಾಡುವ ವಿಧಾನ: ಹುಣಸೇಹಣ್ಣು ಖಾರದಪುಡಿ ಮತ್ತು ಬೆಲ್ಲ ಬಿಟ್ಟು ಉಳಿದ ಎಲ್ಲವನ್ನೂ ಎಣ್ಣೆ ಹಾಕದೇ ಹಾಗೆ ಹುರಿದುಕೊಳ್ಳಬೇಕು. ಹುಣಸೇಹಣ್ಣನ್ನು ಸ್ವಲ್ಪ ಎಣ್ಣೆ ಹಾಕಿ ಹುರಿದು ಕೊಳ್ಳಬೇಕು. ಹಾಗೆಯೇ ಖಾರದ ಪುಡಿ ಅಥವಾ ಮೆಣಸಿನಕಾಯಿಯನ್ನು ಸ್ವಲ್ಪ ಎಣ್ಣೆ ಹಾಕಿ ಹುರಿದುಕೊಂಡು ಎಲ್ಲವನ್ನೂ ಮಿಕ್ಸಿಗೆ ಹಾಕಿ ಕೊಳ್ಳಬೇಕು. ಶೇಂಗಾದಲ್ಲಿ ಅರ್ಧ ಮಿಕ್ಸಿಗೆ ಹಾಕಿ ಉಳಿದರ್ಧ ಹಾಗೇ ಕಡೆಯಲ್ಲಿ ಹಾಕಿ ಕಲೆಸಿಕೊಳ್ಳಬೇಕು. ಹಾಗೆಯೇ ಎಳ್ಳನ್ನೂ ಅರ್ಧ ಮಿಕ್ಸಿಗೆ ಹಾಕಿ ಉಳಿದರ್ಧ ಹಾಗೆಯೇ ಕಲೆಸಿಕೊಳ್ಳಬೇಕು. ಮನೆಯಲ್ಲಿ ತಯಾರಿಸಿದ ಪುಳಿಯೋಗರೆ ಪುಡಿ ಆ್ಯಸಿಡಿಟಿ ಮಾಡೋದಿಲ್ಲ. ಬಿಡುವಾದಾಗ ತಯಾರಿಸಿಕೊಂಡರೆ ಮೂರು ನಾಲ್ಕು ತಿಂಗಳು ಆರಾಮಾಗಿ ಬಳಸಬಹುದು. ಇದರಿಂದ ಅವಲಕ್ಕಿಗೂ ಉಪಯೋಗಿಸಬಹುದು.  

ಪುಳಿಯೋಗರೆ ಪುಡಿ

ಟೂ ಇನ್ ಒನ್ ಸೇವು ಮತ್ತು ರಿಬ್ಬನ್ ಪಕೋಡಾ

ಸಾಮಗ್ರಿಗಳು: ಕಡಲೆಹಿಟ್ಟು 1/4ಕೆಜಿ ಎರಡು ದೊಡ್ಡ ಚಮಚ ಅಕ್ಕಿ ಹಿಟ್ಟು ರುಚಿಗೆ ತಕ್ಕಷ್ಟು ಖಾರಪುಡಿ ಉಪ್ಪುಸ್ವಲ್ಪ ಇಂಗು ಅರಿಶಿನಪುಡಿ ಅಜವಾನ ಪುಡಿ ಜೀರಿಗೆ ಸ್ವಲ್ಪ ಹಾಗೂ ಬಿಸಿ ಮಾಡಿದ ಎರಡು ಚಮಚ ಎಣ್ಣೆ

ಮಾಡುವ ವಿಧಾನ: ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಸ್ವಲ್ಪ ಸ್ವಲ್ಪ ನೀರನ್ನು ಹಾಕುತ್ತಾ ಚಕ್ಕುಲಿ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಬೇಕು.ಚಕ್ಕಲಿ ಪಾತ್ರೆ ತೆಗೆದುಕೊಂಡು ಅದರಲ್ಲಿ ಸೇವು ಹಾಕುವ ಬಿಲ್ಲೆ ತೆಗೆದುಕೊಂಡು ಹಿಟ್ಟನ್ನು ತುಂಬಿಕೊಂಡು ನೇರವಾಗಿ ಕಾದ ಎಣ್ಣೆಯಲ್ಲಿ ಹಾಕಬೇಕು.ಅದೇ ಹಿಟ್ಟನ್ನು ತೆಗೆದುಕೊಂಡು ಚೌಕಾಕಾರದ ಬಿಲ್ಲೆ ಹಾಕಿ ನೇರವಾಗಿ ಎಣ್ಣೆಯಲ್ಲಿ ಹಾಕಿ ಕರಿಯ ಬೇಕು ಈಗ ರಿಬ್ಬನ್ ಪಕೋಡಾ ಸಿದ್ಧ. ಒಂದೇ ಹಿಟ್ಟಿನಲ್ಲಿ ಒಟ್ಟಿಗೆ ಎರಡು ತಿಂಡಿಗಳನ್ನು ತಯಾರಿಸಬಹುದು. ಮಕ್ಕಳು ಇಷ್ಟಪಟ್ಟು ತಿನ್ನುವರು ಕೇವಲ ಅರ್ಧ ಗಂಟೆಯಲ್ಲಿ ಎರಡು ತರಹದ ತಿಂಡಿ ತಯಾರಿಸಬಹುದು. ಅದೂ ಮಕ್ಕಳಿಗೆ ಇಷ್ಟವಾಗುವಂತೆ ರುಚಿ ಶುಚಿಯಾಗಿ ಬೇಕರಿ ತರಹದ ತಿಂಡಿ ತಯಾರಿಸಬಹುದು.

ಆಲ್ ಇನ್ ಒನ್ ಮಸಾಲಾ

ರ್ಸಾಮಗ್ರಿಗಳು: ಕೊತ್ತಂಬರಿ ಬೀಜ ಅಥವಾ ಹವೀಜ್ 1/4ಕೆ.ಜಿ 10ಗ್ರಾಂ ಮೆಣಸು 10 ಗ್ರಾಂ ಕಲ್ಲಹೂ 10 ಗ್ರಾಂ ಪತ್ರಿ 10 ಗ್ರಾಂ ದಾಲ್ಚಿನ್ನಿ 10 ಗ್ರಾಂ ಮರಾಠಾ ಮಗ್ಗಿ 10 ಗ್ರಾಂ ಜೀರಿಗಿ ಸ್ವಲ್ಪ ಇಂಗು 1/4ಕೆಜಿ ಒಣ ಮೆಣಸಿನಕಾಯಿ ಮತ್ತು ಒಂದು ಚಮಚ ಉದ್ದಿನಬೇಳೆ.

ಮಾಡುವ ವಿಧಾನ: ಎಲ್ಲಾ ಸಾಮಗ್ರಿಗಳನ್ನು ಪ್ರತ್ಯೇಕವಾಗಿ ಸ್ವಲ್ಪ ಎಣ್ಣೆ ಹಾಕಿ ಹುರಿಯಬೇಕು. ಹವೀಜ್ ಹುರಿಯಲು ಸಮಯಬೇಕಾಗುತ್ತದೆ. ಮೆಣಸಿನಕಾಯಿಯನ್ನು ಕಡೆಗೆ ಹುರಿದುಕೊಳ್ಳಬೇಕು ನಂತರ ಎಲ್ಲವನ್ನೂ ಮಿಕ್ಸಿಗೆ ಹಾಕಿ ಪೌಡರ್ ಮಾಡಿಕೊಳ್ಳಬೇಕು. ಇದು ಒಂದನ್ನು ನಾವು ತಯಾರಿಸಿಟ್ಟುಕೊಂಡರೆ ಸಾಕು. ನಾವು ಇದನ್ನು ಇಡ್ಲಿ ಸಾಂಬಾರಿಗೆ ಬಳಸಬಹುದು.ಅಲ್ಲದೇ ಎಲ್ಲಾ ಭಾತಗಳಿಗೂ ಅಂದರೆ ಬಿಸಿಬೇಳೆ ಭಾತ್ ಟೊಮೆಟೊ ಭಾತ್ ವಾಂಗಿಭಾತ್ ಕ್ಯಾಬೇಜ್ ಭಾತ್ ಮತ್ತು ಬಿಸಿಬೇಳೆ ಅವಲಕ್ಕಿಗೂ ಇದನ್ನು ಉಪಯೋಗಿಸ ಬಹುದು. ಹೀಗೆ ನಾವು ಮನೆಯಲ್ಲಿಯೇ ರುಚಿ ಶುಚಿಯಾಗಿ ಮಸಾಲಾ ಪೌಡರನ್ನು ತಯಾರಿಸಿಕೊಳ್ಳೋಣ.

ಆಲ್ ಇನ್ ಒನ್ ಮಸಾಲಾ ಪೌಡರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.