ನಾನು ಮೊದಲ ಬಾರಿಗೆ ಅಡುಗೆ ಮನೆ ಪ್ರವೇಶಿಸಿದ್ದು ಯಾವಾಗ ಅಂತ ಸರಿಯಾಗಿ ನೆನಪಿನಲ್ಲಿ ಇಲ್ಲ. ಆದರೆ, ಮೂರು–ನಾಲ್ಕನೆಯ ತರಗತಿ ಹೊತ್ತಿಗೆ ಆಮ್ಲೆಟ್, ಚಪಾತಿ ಮಾಡಲು ಬರುತ್ತಿತ್ತು. ಅಮ್ಮನಿಗೆ ಅಡುಗೆ ಕೆಲಸಕ್ಕೆ ಸಹಾಯ ಮಾಡುತ್ತಿದ್ದೆ. ಪಿಯುಸಿಗೆ ಬಂದಾಗ ನನಗೆ ಪಾಸ್ತಾ ತುಂಬಾ ಇಷ್ಟವಾಗಿತ್ತು. ಆಗ ಅದನ್ನು ಮಾಡೋದನ್ನು ಕಲಿತೆ.
ನಿಜ ಹೇಳಬೇಕೆಂದರೆ ನಮ್ಮನೆಯಲ್ಲಿ ಅಪ್ಪ–ಅಮ್ಮ ಮತ್ತು ತಮ್ಮ ಮೂವರೂ ಪಾಕಪ್ರವೀಣರು. ನನಗೆ ಅಡುಗೆ ಮಾಡಲು ಇಷ್ಟವಿದ್ದರೂ ಅಡುಗೆ ಮಾಡಲು ಅವಕಾಶ ಸಿಕ್ಕಿದ್ದು ಕಮ್ಮಿಯೇ. ಅಮ್ಮ ಕರಾವಳಿಯ ಸಾಂಪ್ರಾಯಿಕ ಅಡುಗೆಯಲ್ಲಿ ಪರಿಣತರಾಗಿದ್ದರೆ, ಅಪ್ಪ ಸದಾ ಪ್ರಯೋಗಶೀಲ. ಇನ್ನು ತಮ್ಮ ಶೆಫ್ ಆಗಬೇಕೆಂಬ ಕನಸಿನಲ್ಲಿ ಅಬುಧಾಬಿಯಲ್ಲಿ ಶೆಫ್ ಕೋರ್ಸ್ ಮಾಡುತ್ತಿದ್ದಾನೆ. ಕೆಲಕಾಲ ಶಾಂಗ್ರೀಲಾ ಹೋಟೆಲ್‌ನಲ್ಲೂ ಕೆಲಸ ಮಾಡಿದ್ದಾನೆ.
ಪಾಸ್ತಾ ಬಿಟ್ಟರೆ ನನಗೆ ಸೀಫುಡ್ (ಸಮುದ್ರ ಆಹಾರ) ಅಂದರೆ ತುಂಬಾ ಇಷ್ಟ. ಅದರಲ್ಲೂ ಫಿಶ್ ಮಸಾಲ ಫ್ರೈ, ಫಿಶ್ ರವಾ ಮಸಾಲ ಫ್ರೈ ಇಷ್ಟವಾಗುತ್ತದೆ. ಸ್ನೇಹಿತರು ಅಥವಾ ಸಂಬಂಧಿಕರಿಗೆ ಚನಾ ಮಸಾಲ, ಮೆಡಿಟರೇನಿಯನ್ ಡಿಷ್ ಮಾಡಿಕೊಡ್ತೀನಿ. ಅಪ್ಪ–ಅಮ್ಮನಿಗೆ ನಾನು ಮಾಡುವ ಪಾಸ್ತಾ ಮತ್ತು ರಸಂ ಅಂದ್ರೆ ತುಂಬಾ ಇಷ್ಟ. ಈ ರಸಂ ಅನ್ನು ನಾನು ನನ್ನ ಸ್ನೇಹಿತೆಯ ಅಮ್ಮನಿಂದ ಕಲಿತದ್ದು.
ಬಾಲ್ಯದಲ್ಲಿ ಅಪ್ಪನಿಂದಾಗಿ ಮುದ್ದೆಯ ರುಚಿ ಕಂಡಿದ್ದೆ. ಆಗೆಲ್ಲಾ ಅದನ್ನು ನುಂಗಬೇಕು. ಜಗಿಯಬಾರದು ಅಂತ ಅಪ್ಪ ಹೇಳುತ್ತಿದ್ದಾಗ ಅದು ಗಂಟಲಿಗೆ ಸಿಕ್ಕಿಹಾಕಿಕೊಳ್ಳದಂತೆ ನುಂಗುವುದು ಹೇಗಪ್ಪಾ ಅಂತ ಭಯಪಡುತ್ತಿದ್ದೆ. ಆಗೆಲ್ಲಾ ಮುದ್ದೆ ಚಿಕನ್ ಚಾಪ್ಸ್ ಸಾಥ್ ಇರುತ್ತಿತ್ತು. ಸಿನಿಮಾ ರಂಗಕ್ಕೆ ಬಂದ ಮೇಲೆ ಶೂಟಿಂಗ್ ಸೆಟ್‌ಗಳಲ್ಲಿ ರಾಗಿಮುದ್ದೆ ಮತ್ತು ಉಪ್ಸಾರು ಪರಿಚಯವಾಯಿತು. ಅದರ ರುಚಿಗೆ ಮಾರುಹೋಗಿ ರಾಗಿ ಮುದ್ದೆ ಮಾಡೋದನ್ನು ಕಲಿತೆ. ಆರಂಭದಲ್ಲಿ ಮುದ್ದೆ ಗಂಟಾಗುವುದು, ಸೀದು ಹೋಗುವುದು ಆಗುತ್ತಿತ್ತು. ಈಗ ಚೆನ್ನಾಗಿ ಮುದ್ದೆ ಮಾಡೋದನ್ನು ಕಲಿತಿದ್ದೇನೆ.
ಮುದ್ದೆ ತಿನ್ನಬೇಕು ಅಂತ ಅನಿಸಿದಾಗಲೆಲ್ಲಾ ಮುದ್ದೆ ಮಾಡಿಕೊಂಡು ತಿನ್ತೀನಿ. ಮಂಗಳೂರಿನ ಕಡೆಯವರಿಗೆ ಸಾಮಾನ್ಯವಾಗಿ ಮುದ್ದೆ ಅಷ್ಟು ಇಷ್ವವಾಗಲ್ಲ. ಆದರೆ, ನನಗೆ ಮುದ್ದೆ–ಉಪ್ಸಾರು ಅಂದ್ರೆ ಇಷ್ಟ. ಅಂತೆಯೇ ಕೋರಿರೊಟ್ಟಿ ಮತ್ತು ಗಸಿ ಕೂಡಾ ಇಷ್ಟವಾಗುತ್ತೆ. ನನಗೆ ಗಸಿ ಮಾಡಲು ಬರೋದಿಲ್ಲ. ನನ್ನ ತಮ್ಮ ಚೆನ್ನಾಗಿ ಮಾಡ್ತಾನೆ. ಸಾಂಪ್ರದಾಯಿಕ ಅಡುಗೆಗೆ ಅಮ್ಮನ ಕೈರುಚಿ, ಪ್ರಯೋಗಶೀಲ ರೆಸಿಪಿಗೆ ಅಪ್ಪನ ಕೈರುಚಿಗೆ ಮಾರು ಹೋಗ್ತೀನಿ.
ಬೇಳೆ–ಟೊಮೆಟೊ ರಸಂ
ಬೇಕಾಗುವ ಸಾಮಾಗ್ರಿ: ಒಂದು ಮುಷ್ಟಿಯಷ್ಟು ತೊಗರಿಬೇಳೆ. ನಿಂಬೆಹಣ್ಣಿನ ಗಾತ್ರದಷ್ಟು ಹುಣಸೇಹಣ್ಣು, ಒಂದು ಹಣ್ಣಾದ ಟೊಮೆಟೊ, ಒಗ್ಗರಣೆಗೆ ಜೀರಿಗೆ, ಸಾಸಿವೆ, ಬೆಳ್ಳುಳ್ಳಿ, ಕಾಳುಮೆಣಸು, ಕರಿಬೇವು, ಚಿಟಿಕೆ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು, ಸಣ್ಣ ಚಮಚದಷ್ಟು ಹಸಿ ಶುಂಠಿ.
ಮಾಡುವ ವಿಧಾನ: ಒಂದು ಮುಷ್ಟಿಯಷ್ಟು ತೊಗರಿಬೇಳೆಯನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿಡಿ. ಅದು ಬಿಸಿ ಇರುವಾಗಲೇ ಬೇಳೆಯನ್ನು ನೀರಿನಿಂದ ಪ್ರತ್ಯೇಕಿಸಿ. ಬೇಯಿಸಿದ ಬೇಳೆಯ ನೀರಿಗೆ ಒಂದು ಟೊಮೆಟೊ ಮತ್ತು ಹುಣಸೇಹಣ್ಣನ್ನು ಹಾಕಿಡಿ. ಒಗ್ಗರಣೆಗೆ ಸ್ವಲ್ಪ ಎಣ್ಣೆ ಹಾಕಿಕೊಂಡು ಅದರಲ್ಲಿ ಜೀರಿಗೆ, ಸಾಸಿವೆ ಸಿಡಿಸಿ, ಕಾಳುಮೆಣಸು ಮತ್ತು ಬೆಳ್ಳುಳ್ಳಿಯನ್ನು ಜಜ್ಜಿ ಹಾಕಿ. ನಂತರ ಅರಿಶಿಣ ಪುಡಿ, ಉಪ್ಪು, ಉದ್ದಕ್ಕೆ ಸೀಳಿದ ಒಂದೆರಡು ಹಸಿಮೆಣಸಿನಕಾಯಿ ಹಾಕಿ. ಈ ಒಗ್ಗರಣೆಗೆ ಬೇಳೆನೀರನ್ನು ಹಾಕಿ 10–12 ನಿಮಿಷ ಕುದಿಸಿ. ಅದಕ್ಕೆ ಶುಂಠಿಯನ್ನು ಸಣ್ಣದಾಗಿ ಕತ್ತರಿಸಿ ಹಾಕಿ. ಬೇಯಿಸಿದ ಬೇಳೆ ಇಷ್ಟವಾಗುವವರಿಗೆ ಅದನ್ನು ಹಾಕಿಕೊಳ್ಳಬಹುದು. ಅನ್ನದ ಜತೆಗೆ ಕಲಸಿಕೊಂಡು ತಿನ್ನಲು ಚೆನ್ನಾಗಿರುತ್ತದೆ. ಕುಡಿಯಲೂಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.