ADVERTISEMENT

ಯೂಟ್ಯೂಬ್‌, ಫೇಸ್‌ಬುಕ್‌ನಲ್ಲಿ ಪಾಕಪ್ರಾವೀಣ್ಯ: ಸುದರ್ಶನ್ ಬೆದ್ರಾಡಿ ಯಶಸ್ಸಿನ ಓಟ

ರೇಷ್ಮಾ
Published 15 ಫೆಬ್ರುವರಿ 2021, 14:16 IST
Last Updated 15 ಫೆಬ್ರುವರಿ 2021, 14:16 IST
ತಾಯಿಯೊಂದಿಗೆ ಅಡುಗೆ ತಯಾರಿಯಲ್ಲಿ ತೊಡಗಿರುವ ಸುದರ್ಶನ್ ಭಟ್‌
ತಾಯಿಯೊಂದಿಗೆ ಅಡುಗೆ ತಯಾರಿಯಲ್ಲಿ ತೊಡಗಿರುವ ಸುದರ್ಶನ್ ಭಟ್‌   

ಲಾಕ್‌ಡೌನ್ ಅವಧಿಯಲ್ಲಿ ಹಲವರೊಳಗಿದ್ದ ಸುಪ್ತ ಪ್ರತಿಭೆಗಳು ಅವರಿಗೇ ಅರಿವಿಲ್ಲದೆ ಹೊರ ಬಂದಿದ್ದವು. ಕೈತೋಟ ಮಾಡುವುದು, ಕುಸುರಿ ಕೆಲಸ, ಬಗೆ ಬಗೆ ರೆಸಿಪಿಗಳನ್ನು ತಯಾರಿಸುವುದು ಲಾಕ್‌ಡೌನ್ ಸಮಯದಲ್ಲಿ ಹಲವರ ದೈನಂದಿನ ಹವ್ಯಾಸವಾಗಿತ್ತು. ಹೀಗೆ ತಮಗಿದ್ದ ಅಡುಗೆ ಮಾಡುವ ಹವ್ಯಾಸವನ್ನೇ ಮುಂದುವರಿಸಿ ಯೂಟ್ಯೂಬ್‌ ಚಾನೆಲ್ ಮಾಡಿ ಆ ಮೂಲಕ ಕರ್ನಾಟಕದಾದ್ಯಂತ ಹೆಸರು ಗಳಿಸಿದ್ದಾರೆ ಕಾಸರಗೋಡಿನ ಸೀತಾಂಗೋಳಿಯ ಭಟ್ ಸಹೋದರರು.

ಸುದರ್ಶನ್‌ ಭಟ್ ಬೆದ್ರಾಡಿ ಹಾಗೂ ಮನೋಹರ್ ಭಟ್ ಬೆದ್ರಾಡಿ ಅವಳಿ ಸಹೋದರರ ಅಡುಗೆ ವಿಡಿಯೊಗಳನ್ನು ಬಹುಶಃ ನೋಡದವರು ಇಲ್ಲವೇ ಇಲ್ಲ ಎನ್ನಬಹುದು. ತಮ್ಮ ಮಾತು, ಹಾವಭಾವದ ಜೊತೆಗೆ ಸಾಂಪ್ರದಾಯಿಕ ರುಚಿಯ ಅಡುಗೆ ವಿಡಿಯೊಗಳ ಮೂಲಕ ಜನರ ಮುಂದೆ ಬರುವ ಇವರು ಈಗ ಕರ್ನಾಟಕದಾದ್ಯಂತ ಅಚ್ಚುಮೆಚ್ಚಾಗಿದ್ದಾರೆ. ಕೇವಲ ಅಡುಗೆ ವಿಡಿಯೊ ಮಾತ್ರವಲ್ಲದೇ ಕೃಷಿ, ತಂತ್ರಜ್ಞಾನ, ತುಳುನಾಡ ಸಂಸ್ಕೃತಿ, ಸಂಪ್ರದಾಯದ ಕುರಿತಾಗಿಯೂ ವಿಡಿಯೊಗಳನ್ನು ಮಾಡಿ ಯೂಟ್ಯೂಬ್‌, ಫೇಸ್‌ಬುಕ್‌ ಪುಟದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಯೂಟ್ಯೂಬ್‌ ಚಾನೆಲ್ ಯೋಚನೆಯ ಹಿಂದೆ..

ADVERTISEMENT

ಸದ್ಯ ಎಲ್‌ಎಲ್‌ಬಿ ಮುಗಿಸಿ ಪ್ರಾಕ್ಟೀಸ್‌ನಲ್ಲಿ ತೊಡಗಿರುವ ಭಟ್ ಸಹೋದರರು ಪಿಯುಸಿ ದಿನಗಳಿಂದಲೂ ಬಿಡುವಿನ ವೇಳೆಯಲ್ಲಿ ಕೇಟರಿಂಗ್‌ ವೃತ್ತಿಯಲ್ಲಿ ತೊಡಗಿದ್ದರು. ಹೀಗಾಗಿ ಅಡುಗೆಯ ಮೇಲೆ ಒಲವಿತ್ತು. ಜೊತೆಗೆ ಸುದರ್ಶನ್ ಅವರ ಸಹೋದರ ಮನೋಹರ್ ಅವರಿಗೆ ವಿಡಿಯೊಗ್ರಫಿ ಹಾಗೂ ಫೋಟೊಗ್ರಫಿ ಮೇಲೆ ಆಸಕ್ತಿಯೂ ಇತ್ತು. ಲಾಕ್‌ಡೌನ್‌ ಸಮಯದಲ್ಲಿ ಸುಮ್ಮನೆ ಮನೆಯಲ್ಲಿ ಕುಳಿತಿದ್ದಾಗ ಅಡುಗೆಗೆ ಸಂಬಂಧಿಸಿದ ವಿಡಿಯೊ ಮಾಡುವ ಮನಸ್ಸು ಮಾಡಿದರು.

ಕುಟುಂಬದವರೊಂದಿಗೆ ಸುದರ್ಶನ್ ಭಟ್‌

ಕಳೆದ ವರ್ಷ ಏಪ್ರಿಲ್‌ 18ರಂದು ಮೊದಲ ಬಾರಿಗೆ ವಿಡಿಯೊ ಮಾಡಿದರು. ಮನೆಯ ತೋಟದಲ್ಲಿ ಬೆಳೆದ ಬಾಳೆಕಾಯಿ ಇತ್ತು. ಹೀಗಾಗಿ ಬಾಳೆಕಾಯಿ ಚಿಪ್ಸ್ ಮಾಡಿ ಯೂಟ್ಯೂಬ್‌ನಲ್ಲಿ ವಿಡಿಯೊ ಹರಿಬಿಟ್ಟರು. ಮೊದ ಮೊದಲು ಇವರ ವಿಡಿಯೊಗಳಿಗೆ ಅಷ್ಟೊಂದು ವ್ಯೂಸ್‌, ಲೈಕ್ ಬರುತ್ತಿರಲಿಲ್ಲ. ಆದರೆ ಸ್ನೇಹಿತರು, ಕುಟುಂಬದವರು ‘ಮುಂದೆ ಯಾವ ವಿಡಿಯೊ ಮಾಡುತ್ತೀಯಾ, ಯಾವ ರೆಸಿಪಿ?’ ಎಂದೆಲ್ಲಾ ಕೇಳುತ್ತಿದ್ದರು. ಬಗೆ ಬಗೆ ರೆಸಿಪಿ ವಿಡಿಯೊಗಳನ್ನು ಮಾಡಿ ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡುತ್ತಿದ್ದ ಇವರಿಗೆ ಸ್ನೇಹಿತರೊಬ್ಬರು ಫೇಸ್‌ಬುಕ್ ಪೇಜ್ ಕ್ರಿಯೇಟ್ ಮಾಡುವ ಐಡಿಯಾ ನೀಡಿದರು. ಹಾಗೆ ಫೇಸ್‌ಬುಕ್‌ನಲ್ಲೂ ವಿಡಿಯೊ ಹಾಕಲು ಆರಂಭಿಸಿದರು. ಮೊದ ಮೊದಲು ಸಾವಿರ, ಹತ್ತು ಸಾವಿರಕ್ಕೆ ಸೀಮಿತವಾಗಿದ್ದ ವಿಡಿಯೊ ವ್ಯೂಸ್‌ ಈಗ ಇಪ್ಪತ್ತು ಲಕ್ಷಕ್ಕೂ ಮೀರಿದೆ. ಇಲ್ಲಿಯವರೆಗೆ 80ಕ್ಕೂ ಹೆಚ್ಚು ವಿಡಿಯೊಗಳನ್ನು ಮಾಡಿ ಅಪ್‌ಲೋಡ್ ಮಾಡಿದ್ದಾರೆ ಈ ಅವಳಿ ಸಹೋದರರು.

ಕುಟುಂಬದವರ ಸಹಕಾರ

‘ನನಗೆ ಅಡುಗೆ ಬಗ್ಗೆ ಆಸಕ್ತಿ ಇದ್ದಿದ್ದು ನಿಜ, ಆದರೆ ನಮ್ಮ ಮನೆಯವರ ಸಹಕಾರವಿಲ್ಲದೇ ಇದನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಮನೆಯಲ್ಲಿ ತಂದೆ–ತಾಯಿ, ತಮ್ಮ ಜೊತೆಗೆ ಅಕ್ಕ, ಅಕ್ಕನ ಮನೆಯವರು, ಮಾವಂದಿರು ಎಲ್ಲರೂ ನನಗೆ ತುಂಬಾನೇ ಸಹಾಯ ಮಾಡುತ್ತಾರೆ. ಸಾಂಪ್ರದಾಯಿಕ ಅಡುಗೆಗಳನ್ನು ತಯಾರಿಸುವ ವಿಧಾನವನ್ನು ತಾಯಿ, ಅಕ್ಕನಿಂದ ಕಲಿಯುತ್ತೇನೆ. ಒಟ್ಟಾರೆ ನನ್ನ ಒಂದೊಂದು ವಿಡಿಯೊದ ಹಿಂದೆಯೂ ಮನೆಯವರೆಲ್ಲರ ಸಹಕಾರ ಇರುತ್ತದೆ’ ಎಂದು ಖುಷಿಯಿಂದ ಹೇಳುತ್ತಾರೆ.

ಸಾಂಪ್ರದಾಯಿಕ ಖಾದ್ಯಗಳಿಗೆ ಒತ್ತು

ಲಾಕ್‌ಡೌನ್ ಬೇಸರ ಕಳೆಯಲು ಅಡುಗೆ ವಿಡಿಯೊ ಆರಂಭಿಸಿದ ಭಟ್ ಸಹೋದರರು ದಕ್ಷಿಣಕನ್ನಡದ ಸಾಂಪ್ರದಾಯಿಕ ರೆಸಿಪಿಗಳನ್ನು ಹೆಚ್ಚು ತಯಾರಿಸುತ್ತಾರೆ. ಹೆಸರು ಕೇಳಿರದ, ರುಚಿ ನೋಡಿರದ ಅನೇಕ ತಿನಿಸುಗಳನ್ನು ಪರಿಚಯಿಸಿದ್ದಾರೆ ಈ ಸಹೋದರರು. ಈ ಬಗ್ಗೆ ಹೇಳುವ ಸುದರ್ಶನ್‌ ‘ಹಿಂದಿನ ಸಾಂಪ್ರದಾಯಿಕ ತಿನಿಸುಗಳನ್ನು ತಯಾರಿಸುವವರು ಕಡಿಮೆ. ಎಲ್ಲರೂ ಸುಲಭವಾಗಿ ತಯಾರಿಸುವ ತಿಂಡಿಗಳನ್ನು ಮಾಡುತ್ತಾರೆ. ಹಾಗಾಗಿ ನಾವು ಜನರು ಕಲಿಯಲಿ ಎಂಬ ಕಾರಣಕ್ಕೆ ಸಾಂಪ್ರದಾಯಿಕ ರೆಸಿಪಿಗಳನ್ನು ಹೆಚ್ಚು ಹೆಚ್ಚು ತಯಾರಿಸುತ್ತೇವೆ’ ಎನ್ನುತ್ತಾರೆ.

ಫೇಸ್‌ಬುಕ್‌ನಿಂದ ವೈರಲ್‌

ಯೂಟ್ಯೂಬ್‌ನಲ್ಲಿ ವಿಡಿಯೊ ಹಾಕಲು ಆರಂಭಿಸಿ ಒಂದು ತಿಂಗಳು ಕಳೆದ ಮೇಲೆ ಫೇಸ್‌ಬುಕ್‌ನಲ್ಲಿ ವಿಡಿಯೊ ಹಾಕಲು ಆರಂಭಿಸಿದರು. ಫೇಸ್‌ಬುಕ್‌ನಲ್ಲಿ ಇವರು ಹಾಕಿದ ಮೊದಲ ವಿಡಿಯೊ ಹಲಸಿನ ಬೀಜದ ಹಲ್ವಾ. ಆ ವಿಡಿಯೊ ತುಂಬಾನೇ ವೈರಲ್ ಆಗಿತ್ತು. ಜನ ತುಂಬಾನೇ ಮೆಚ್ಚಿಕೊಂಡರು. ನಂತರ ಮೊದಲು ಯೂಟ್ಯೂಬ್‌ನಲ್ಲಿ ಹಾಕಿದ ವಿಡಿಯೊಗಳನ್ನೇ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದರು. ಫೇಸ್‌ಬುಕ್‌ನಲ್ಲಿ ವಿಡಿಯೊ ಅಪ್‌ಲೋಡ್‌ ಆರಂಭಿಸಿದ ಮೇಲೆ ಇವರ ವಿಡಿಯೊಗಳು ಹೆಚ್ಚು ವೈರಲ್ ಆಗಲು ಆರಂಭಿಸಿದವು.

ಕೃಷಿಗೆ ಸಂಬಂಧಿಸಿ ವಿಡಿಯೊ

ಅಡುಗೆ ವಿಡಿಯೊದೊಂದಿಗೆ ಕೃಷಿಗೆ ಸಂಬಂಧಿಸಿದ ವಿಡಿಯೊಗಳನ್ನೂ ಮಾಡುತ್ತಾರೆ. ಜೇನುಕೃಷಿ, ಭತ್ತದ ಕೃಷಿ, ಅಡಿಕೆ ಕೊಯ್ಲು ಮುಂತಾದವಕ್ಕೆ ಸಂಬಂಧಿಸಿದ ವಿಡಿಯೊಗಳನ್ನು ಮಾಡುತ್ತಾರೆ. ಆ ಮೂಲಕ ದಕ್ಷಿಣಕನ್ನಡ ಭಾಗದ ಜನ ಜೀವನ ಹಾಗೂ ಕೃಷಿ ಕಾಯಕಗಳನ್ನು ಪರಿಚಯಿಸುವ ಹಂಬಲವೂ ಇವರದ್ದು.

ಜನ ಮೆಚ್ಚಲು ಭಾಷೆಯೂ ಕಾರಣ

‘ನನ್ನ ವಿಡಿಯೊಗಳನ್ನು ಜನ ಮೆಚ್ಚಲು ನಾಲ್ಕು ಮುಖ್ಯ ಕಾರಣಗಳಿವೆ ಎನ್ನಬಹುದು. ಹುಡುಗ ಅಡುಗೆ ಮಾಡುತ್ತಿದ್ದಾನೆ ಎನ್ನುವುದು ಒಂದು ಕಾರಣವಾದರೆ, ನಾವು ನೈಸರ್ಗಿಕ ಪದಾರ್ಥಗಳಿಂದ ಸ್ಥಳೀಯ ಖಾದ್ಯಗಳನ್ನು ತಯಾರಿಸುತ್ತೇವೆ. ಈಗ ಸಾಮಾನ್ಯವಾಗಿ ಯೂಟ್ಯೂಬ್ ಚಾನೆಲ್ ಮಾಡಬೇಕು ಎಂದರೆ ಮಾರ್ಡನ್‌ ಆಗಿ ಅಡುಗೆಮನೆಯನ್ನು ಸೆಟ್ ಮಾಡಿಕೊಂಡು ಮಾಡುತ್ತಾರೆ. ಆದರೆ ನಾವು ಹಳ್ಳಿಯ ಶೈಲಿಯಲ್ಲಿಯೇ ಮಾಡುತ್ತೇವೆ. ನಮ್ಮಲ್ಲಿಯೇ ಬೆಳೆದ ನೈಸರ್ಗಿಕ ಹಸಿರು ತರಕಾರಿಯಿಂದ ಖಾದ್ಯಗಳನ್ನು ತಯಾರಿಸಿದ್ದೇವೆ. ಇದರೊಂದಿಗೆ ನಾವು ಮಾತನಾಡುವ ಶೈಲಿಯೂ ಜನರಿಗೆ ಇಷ್ಟವಾಗುತ್ತದೆ. ಒಟ್ಟಾರೆ ಇದೆಲ್ಲವೂ ಜನ ನಮ್ಮನ್ನು ಮೆಚ್ಚುವಂತೆ ಮಾಡಿದೆ ಎನ್ನುವುದೇ ಖುಷಿ’ ಎನ್ನುತ್ತಾರೆ ಅವರು.

ಬಾಳೆಹಣ್ಣಿನ ಹಲ್ವಾ ಹಾಗೂ ಮರಗೆಣಸಿನ ಹಪ್ಪಳಕ್ಕೆ ಹೆಚ್ಚು ವ್ಯೂಸ್‌

ತಾಯಿಯೊಂದಿಗೆ ಅಡುಗೆ ತಯಾರಿಯಲ್ಲಿ ತೊಡಗಿರುವ ಸುದರ್ಶನ್ ಭಟ್‌

ಈ ಅವಳಿ ಸಹೋದರರು ಮಾಡಿದ ಬಾಳೆಹಣ್ಣಿನ ಹಲ್ವಾವನ್ನು ಯೂಟ್ಯೂಬ್‌ನಲ್ಲಿ ಬಹಳ ಜನ ನೋಡಿ ಮೆಚ್ಚಿ ಲೈಕ್ಸ್ ನೀಡಿದ್ದಾರೆ. ಇದನ್ನು 10 ಲಕ್ಷಕ್ಕೂ ಅಧಿಕ ಮಂದಿ ನೋಡಿದ್ದಾರೆ. ಫೇಸ್‌ಬುಕ್‌ನಲ್ಲಿ ಮರಗೆಣಸಿನ ಹಪ್ಪಳದ ವಿಡಿಯೊಗೆ ಹೆಚ್ಚು ವ್ಯೂಸ್‌ ಬಂದಿತ್ತು. ಆ ವಿಡಿಯೊ ಅಪ್‌ಲೋಡ್ ಮಾಡಿದ ಮೂರೇ ದಿನಗಳಲ್ಲಿ 10 ಲಕ್ಷಕ್ಕೂ ಹೆಚ್ಚು ವ್ಯೂಸ್‌ ಬಂತು ಎನ್ನುವ ಸಂತಸ ಇವರದ್ದು.

ಜನರೇ ಸ್ಫೂರ್ತಿ

‘ಸಾಧಾರಣ ಹಳ್ಳಿಯವರಾದ ನಮ್ಮನ್ನು ಜನ ಗುರುತಿಸಿ ಮಾತನಾಡಿಸುವಂತೆ ಮಾಡಿದ್ದು ನಮ್ಮ ಅಡುಗೆ ವಿಡಿಯೊಗಳು. ಅದರೊಂದಿಗೆ ಜನ ಕಮೆಂಟ್ ಮೂಲಕ ‘ಹಾಗೆ ಮಾಡಿ, ಹೀಗೆ ಮಾಡಿ, ಆ ರೆಸಿಪಿ ಮಾಡಿ, ಈ ರೆಸಿಪಿ ಚೆನ್ನಾಗಿದೆ’ ಎಂದೆಲ್ಲಾ ತಿಳಿಸುತ್ತಾರೆ. ನಮಗೆ ಇನ್ನಷ್ಟು ಮಾಡಬೇಕು ಎನ್ನುವ ಹಂಬಲ ಹುಟ್ಟಲು ವೀಕ್ಷಕರೂ ಕಾರಣ. ಸದ್ಯ ನಮ್ಮ ಚಾನೆಲ್‌ನ ವೀಕ್ಷಕರೇ ನಮ್ಮ ಬೆಳವಣಿಗೆಗೆ ಸ್ಫೂರ್ತಿ’ ಎಂದು ತುಂಬು ಮನಸ್ಸಿನಿಂದ ಹೇಳುತ್ತಾರೆ ಸುದರ್ಶನ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.