ADVERTISEMENT

ಬಲು ರುಚಿ ಬಂಡೂರು ಕುರಿ.. ಬಂಡೂರಿನಲ್ಲೇ ಇಲ್ಲ ಮಟನ್‌ ಸ್ಟಾಲ್‌!

ಬಂಡೂರು ತಳಿ ಕುರಿಗೆ ಭಾರೀ ಡಿಮ್ಯಾಂಡ್‌

ಅಭಿಲಾಷ್ ಎಸ್‌.ಡಿ.
Published 12 ಮೇ 2024, 0:43 IST
Last Updated 12 ಮೇ 2024, 0:43 IST
<div class="paragraphs"><p>ಬಂಡೂರು ಕುರಿ&nbsp;</p></div>

ಬಂಡೂರು ಕುರಿ 

   

ಬಂಡೂರು ಕುರಿ ಮಾಂಸದ ರುಚಿ ಬೇರೆ ತಳಿಯ ಕುರಿ, ಟಗರು, ಮೇಕೆಗಳಲ್ಲಿ ಸಿಗುವುದಿಲ್ಲ. ಏಕೆಂದರೆ, ಅವುಗಳಲ್ಲಿ ಕೊಬ್ಬು ಮಾಂಸದಿಂದ ಪ್ರತ್ಯೇಕವಾಗಿದ್ದರೆ ಬಂಡೂರು ಕುರಿಯಲ್ಲಿ ಮಾತ್ರ ಮಾಂಸದ ನಡುವಿನಲ್ಲಿಯೇ ತೆಳುವಾದ ಕೊಬ್ಬಿನ ಎಳೆ ಇರುತ್ತದೆ. ಆದ್ದರಿಂದಲೇ ಬಂಡೂರು ತಳಿ ಕುರಿಗೆ ಭಾರೀ ಡಿಮ್ಯಾಂಡ್‌.

ಅಂದಹಾಗೆ, ಈ ತಳಿಯ ಕುರಿಗಳಿಗೆ ಬಂಡೂರು ಹೆಸರು ಬರಲು ಕಾರಣವಿದೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಬಂಡೂರು ಇವುಗಳ ತವರು. ಈ ಕಾರಣಕ್ಕಾಗಿಯೇ ಬಂಡೂರು ಕುರಿ ಎಂದೇ ಪ್ರಸಿದ್ಧಿ ಪಡೆದಿದೆ.

ADVERTISEMENT

ಗಿಡ್ಡಕಾಲು, ಅಗಲ ದೇಹ, ಕುತ್ತಿಗೆಯಲ್ಲಿ ಗಂಟೆಯಂತಹ ಎರಡು ಕೊಳ್ಳು, ಮೈ ತುಂಬಾ ಸೊಂಪಾಗಿ ಬೆಳೆದ ಕೂದಲು–ಇವುಗಳಿಂದ ಈ ಕುರಿಗಳನ್ನು ಸುಲಭವಾಗಿ ಗುರುತಿಸಬಹುದು. ಮುಂದಿನಿಂದ ಮದುವಣಗಿತ್ತಿಯಂತೆ ಮುದ್ದಾಗಿ ಕಾಣುವ ಈ ಕುರಿಗಳು, ಹಿಂದಿನಿಂದ ನೋಡಿದರೆ ಇಂಗ್ಲಿಷ್‌ ವರ್ಣಮಾಲೆಯ ‘ಯು’ ಅಕ್ಷರದ ಉಲ್ಟ ಆಕಾರದಲ್ಲಿ ಕಾಣುತ್ತವೆ. ಮನುಷ್ಯರಿಗೆ ಬಲುಬೇಗ ಒಗ್ಗಿಕೊಳ್ಳುತ್ತವೆ. ಹೀಗಾಗಿ ಇವುಗಳನ್ನು ಸಾಕುವುದು ಸುಲಭ. ನಿತ್ಯ ಹುರುಳಿ, ಜೋಳದಂತಹ ಧಾನ್ಯಗಳು, ಒಣಹಣ್ಣುಗಳು, ಹಾಲಿನಂತಹ ಪೌಷ್ಟಿಕ ಆಹಾರ ನೀಡಿ ಪೊಗದಸ್ತಾಗಿ ಸಾಕುವವರೂ ಇದ್ದಾರೆ.

ಹಾಲು ಕುಡಿಯುವ ಮೂರು ತಿಂಗಳ ಮರಿಗೆ ಕನಿಷ್ಠ ₹ 12 ರಿಂದ ₹ 15 ಸಾವಿರ ಬೆಲೆ ಇದ್ದರೆ, 20 ರಿಂದ 25 ಕೆ.ಜಿ. ತೂಗುವ ಕುರಿಗಳಿಗೆ ₹ 50 ರಿಂದ ₹ 60 ಸಾವಿರ ಬೆಲೆ ಇದೆ.  ದೇವಿಪುರದ ರೈತ ಸಣ್ಣಪ್ಪ, ಬಂಡೂರು ಕುರಿಯೊಂದನ್ನು ₹ 1.90 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ. ಈ ತಳಿಯ ಕುರಿ ಸಾಕಾಣಿಕೆ ಲಾಭದಾಯಕ. ಆದ್ದರಿಂದ ಬಂಡೂರು ಕುರಿಯನ್ನೇ ಸಾಕುವ ಟ್ರೆಂಡ್‌ ಹೆಚ್ಚಾಗುತ್ತಿದೆ. ವಿದ್ಯಾವಂತ ಯುವಕರು ಹೆಚ್ಚು ಕುರಿಗಳನ್ನು ಒಟ್ಟಿಗೆ ಸಾಕಲು ಮುಂದಾಗುತ್ತಿರುವುದರಿಂದ ಹುಂಡಿ (ಸಾಕುವ ಜಾಗ) ಸ್ವರೂಪವೂ ಬದಲಾಗುತ್ತಿದೆ. ಆಧುನಿಕತೆಗೆ ತಕ್ಕಂತೆ, ಅಟ್ಟಣಿಗೆಯ ಮೇಲೆ ಸಾಕುವ ಕ್ರಮವನ್ನು ಅನುಸರಿಸಲಾಗುತ್ತಿದೆ. ಗೊಬ್ಬರವೆಲ್ಲ ಕೆಳಗೆ ಬೀಳುವುದರಿಂದ ನಿರ್ವಹಣೆ ಸುಲಭವಾಗಿದೆ. ಗಲೀಜಾಗುವುದು, ರೋಗಗಳು ಬಾರದಂತೆ ತಡೆಯಲು ಇದರಿಂದ ಸಾಧ್ಯ. 

ಕಿರುಗಾವಲು ಸಂತೆ 

ಕೋವಿಡ್‌ ಕಾಲಘಟ್ಟದಲ್ಲಿ ನಗರ ತೊರೆದು ಊರಿಗೆ ಮರಳಿರುವವರು ಹೈನುಗಾರಿಕೆ, ಮುಖ್ಯವಾಗಿ ಬಂಡೂರಿನ ಬೆನ್ನೇರಿದ್ದಾರೆ. ಬಕ್ರೀದ್‌ ಹಬ್ಬದ ಸಮಯಕ್ಕಾದರೂ ಮಾರಾಟ ಮಾಡಬಹುದು ಎಂಬ ಭರವಸೆ ಇರುವುದರಿಂದ ಮಂಡ್ಯ ಜಿಲ್ಲೆಯ ಹೆಚ್ಚಿನವರು ಮನೆಯಲ್ಲಿ ಒಂದಾದರೂ  ಬಂಡೂರು ಟಗರು ಕಟ್ಟುತ್ತಿದ್ದಾರೆ.

ಈ ತಳಿಯ ಕುರಿಗಳ ಸಾಕಣೆಯನ್ನು ಪ್ರೋತ್ಸಾಹಿಸಲು ಸರ್ಕಾರ ಮುಂದಾಗಿದೆ. ರಾಷ್ಟ್ರೀಯ ಜಾನುವಾರು ಮಿಷನ್‌ (ಎನ್‌ಎಲ್‌ಎಂ) ಅಡಿಯಲ್ಲಿ, ಯಾವುದೇ ತಳಿಯ ಕುರಿಗಳನ್ನು ಹೊಂದಿರುವವರಿಗೆ ಉಚಿತವಾಗಿ ಬಂಡೂರು ಟಗರು ನೀಡುವ ಹಾಗೂ ಅದರ ಫಲಾನುಭವಿಗಳಿಂದ ಭವಿಷ್ಯದಲ್ಲಿ ಹಣ ಕೊಟ್ಟು ಮರಿಗಳನ್ನು ಖರೀದಿಸುವ ಯೋಜನೆ ಕೈಗೊಂಡಿದೆ. ಮಳವಳ್ಳಿ ತಾಲ್ಲೂಕಿನ ಧನಗೂರಿನಲ್ಲಿರುವ ‘ಬಂಡೂರು ಕುರಿ ಸಂವರ್ಧನಾ ಕೇಂದ್ರದ ಮೂಲಕ ₹4,000 ದರದಲ್ಲಿ ಟಗರು ಮರಿಗಳನ್ನು ನೀಡಲಾಗುತ್ತಿದೆ. ಹಸು-ಎಮ್ಮೆಗಳಿಗೆ ಕೃತಕ ಗರ್ಭಧಾರಣೆ ಮಾಡುತ್ತಿರುವಂತೆ ಶುದ್ಧ ಬಂಡೂರು ಟಗರಿನ ವೀರ್ಯ ಸಂಗ್ರಹಿಸಿ, ಕುರಿಗಳಿಗೂ ಕೃತಕ ಗರ್ಭಧಾರಣೆ ಮಾಡಲಾಗುತ್ತಿದೆ.

ದೇಹದ ಆಕಾರ ಅಥವಾ ವರ್ತನೆಯನ್ನು ಗಮನಿಸಿ ಬಂಡೂರು ಕುರಿಯಲ್ಲಿ ಹಲವು ಉಪತಳಿಗಳನ್ನು ರೈತರು ಗುರುತಿಸುತ್ತಾರೆ. ಸಂಕೋಚ ಅಥವಾ ಬೆದರುವ ಕುರಿಗಳಿಗೆ ಹುಚ್ಚು ಕುರಿ ಎನ್ನುತ್ತಾರೆ. ಹಾಗೆಯೇ, ಕಪನಿ, ಕರಗಿ, ದೊಡ್ಡಿ, ಸೀರಿ, ಕೊನ್ನಾರೆ, ಹೊಟ್ಟೆನೋವು.., ಹೀಗೆ ಹಲವನ್ನು ಉಲ್ಲೇಖಿಸುತ್ತಾರೆ. ‘ಇವೆಲ್ಲವೂ ಆಯಾ ಪ್ರದೇಶದ ರೈತರು ಇಟ್ಟುಕೊಂಡಿರುವ ಹೆಸರಗಳೇ ಹೊರತು ಯಾವುದೇ ಉಪತಳಿಯನ್ನು ವೈಜ್ಞಾನಿಕವಾಗಿ ಗುರುತಿಸಿಲ್ಲ’ ಎಂದು ಬಂಡೂರು ಕುರಿ ಸಂವರ್ಧನಾ ಕೇಂದ್ರದ ಉಪ ನಿರ್ದೇಶಕ ಪಿ.ರಮೇಶ್‌ ಹೇಳುತ್ತಾರೆ.

ಪಿ.ರಮೇಶ್‌, ಉಪ ನಿರ್ದೇಶಕ, ಬಂಡೂರು ಕುರಿ ಸಂವರ್ಧನಾ ಕೇಂದ್ರ -ಧನಗೂರು

ಖ್ಯಾತ ಕಿರುಗಾವಲು ಸಂತೆ
ಪ್ರತಿ ಶನಿವಾರ ನಡೆಯುವ ತಾಲ್ಲೂಕಿನ ಕಿರುಗಾವಲು ಸಂತೆಯಲ್ಲಿ ಬಂಡೂರು ಕುರಿ ಮಾರಾಟವೇ ಪ್ರಮುಖವಾಗಿರುತ್ತದೆ. ರಾಜ್ಯದ ನಾನಾ ಭಾಗಗಳಿಂದ ಬರುವ ರೈತರು ಕುರಿ ಮತ್ತು ಮೇಕೆಗಳ ಖರೀದಿಗೆ ಮುಗಿಬೀಳುತ್ತಾರೆ. ಇಲ್ಲಿನ ವಾಹಿವಾಟು ಪ್ರತಿವಾರ ₹30 ರಿಂದ ₹40 ಲಕ್ಷಕ್ಕೂ ಅಧಿಕ. ಇಲ್ಲಿಗೆ ಬಂಡೂರು ಕುರಿ ಖರೀದಿಗಾಗಿಯೇ ಬರುವವರು ಹೆಚ್ಚು.

ಬರಲಿದೆ ಪ್ಯಾಕೆಟ್‌ ಮಾಂಸ

ಶುದ್ಧ ಬಂಡೂರು ಮಾಂಸಕ್ಕೆಂದೇ ಪ್ರತ್ಯೇಕ ಮಾರಾಟ ಮಳಿಗೆಗಳು ಅಥವಾ ಕೇಂದ್ರಗಳು ಇಲ್ಲದಿರುವುದು ವ್ಯಾಪಾರಕ್ಕೂ ಹಿನ್ನಡೆಯಾಗಿದೆ. ದುಬಾರಿ ಬೆಲೆ ನೀಡಿದರೂ, ಉತ್ಕೃಷ್ಟ ಮಾಂಸ ಸಿಗುವ ಬಗ್ಗೆ ಗ್ರಾಹಕರಿಗೆ ಅನುಮಾನವಿದೆ. ಇವನ್ನೆಲ್ಲ ಗಂಭೀರವಾಗಿ ‍ಪರಿಗಣಿಸಿರುವ ಸರ್ಕಾರ, ಬಂಡೂರು ಕುರಿ ಮಾಂಸ ಮಾರಾಟವನ್ನು ಉತ್ತೇಜಿಸಲು ಚಿಂತನೆ ನಡೆಸುತ್ತಿದೆ. ನಂದಿನ ಹಾಲಿನ ಕೇಂದ್ರಗಳಂತೆ ಮಾಂಸ ಮಾರಾಟಕ್ಕೂ ಕೇಂದ್ರಗಳನ್ನು ತೆರೆಯಲು ಯೋಚಿಸುತ್ತಿದೆ. ಹಾಗೆ ಏನಾದರೂ ಆದರೆ, ರಾಜ್ಯದೆಲ್ಲೆಡೆ ಬಂಡೂರು ಕುರಿ ಮಾಂಸ ಪ್ಯಾಕೆಟ್ ರೂಪದಲ್ಲಿ ಸಿಗಲಿದೆ. ದೇಶದಾದ್ಯಂತ ಮಾರುಕಟ್ಟೆ‌ ವಿಸ್ತರಣೆಯಾಗಲಿದೆ.

ಈ ತಳಿಯ ಹೆಣ್ಣು ಕುರಿಗಳನ್ನು ಮುಖ್ಯವಾಗಿ ಸಂತಾನೋತ್ಪತ್ತಿಗೆ ಹಾಗೂ ಟಗರುಗಳನ್ನು ಮಾಂಸದ ದೃಷ್ಟಿಯಿಂದ ಸಾಕಲಾಗುತ್ತದೆ. ಟಗರುಗಳು ಸರಾಸರಿ 30 ರಿಂದ 45 ಕೆ.ಜಿ ವರೆಗೆ ಮತ್ತು ಹೆಣ್ಣು ಕುರಿಗಳು 20 ರಿಂದ 35 ಕೆ.ಜಿ ವರೆಗೆ ತೂಗುತ್ತವೆ. 15 ತಿಂಗಳ ನಂತರದ ಕುರಿ ಅಥವಾ ಟಗರಿನ ಮಾಂಸ ಅತ್ಯಂತ ರುಚಿಕಟ್ಟಾಗಿರುತ್ತದೆ.

ಬಂಡೂರು ಕುರಿ ಮಾಂಸದ ರುಚಿ ನೋಡಿದವರು ‘ಬಂಡೂರು’ ಎನ್ನುವ ಹೆಸರು ಕಿವಿ ಮೇಲೆ ಬೀಳುತ್ತಿದ್ದಂತೆ ಬಾಯಲ್ಲಿ ನೀರೂರುವುದನ್ನು ತಡೆಯಲು ಸಾಧ್ಯವೇ ಇಲ್ಲ.

ಕಿರುಗಾವಲು ಸಂತೆಯಲ್ಲಿ ಮೂರು ತಿಂಗಳ ಬಂಡೂರು ಕುರಿ ಮರಿಗಳು  ಚಿತ್ರಗಳು: ಕೆ.ಟಿ.ಲಿಂಗರಾಜು ತಳಗವಾದಿ

ಬಂಡೂರಿನಲ್ಲೇ ಇಲ್ಲ ಮಟನ್‌ ಸ್ಟಾಲ್‌!

ಬೇರೆ ಮಾಂಸಕ್ಕಿಂತ ಭಿನ್ನ ರುಚಿಯನ್ನು ಹೊಂದಿರುವುದು ಬಂಡೂರು ಕುರಿಯ ಹೆಗ್ಗಳಿಕೆ. ಇತರ ಜಾತಿಯ ಕುರಿ ಅಥವಾ ಮೇಕೆಯಲ್ಲಿ ಕುತ್ತಿಗೆಯಿಂದ ಹೊಟ್ಟೆಯ ಭಾಗದವರೆಗೆ ಒಂದೇ ಕಡೆ ಕೊಬ್ಬು ಶೇಖರಣೆಯಾಗಿರುತ್ತದೆ. ಆದರೆ, ಬಂಡೂರು ಕುರಿ ಹಾಗಲ್ಲ. ಮಾಂಸದ ಪ್ರತಿ ಪದರದಲ್ಲಿಯೂ ಎಳೆ ಎಳೆಯಾಗಿ ಕೊಬ್ಬು ಹಂಚಿಕೆಯಾಗಿರುತ್ತದೆ. ಈ ವೈಶಿಷ್ಟ್ಯವೇ ಇದರ ಮಾಂಸದ ಉತ್ಕೃಷ್ಟತೆಗೆ ಕಾರಣವಾಗಿದೆ.

ಆದಾಗ್ಯೂ, ಈ ಕುರಿಯ ಮಾಂಸದಂಗಡಿಗಳು, ಬಂಡೂರು ಅಥವಾ ಬನ್ನೂರು ಭಾಗದಲ್ಲೇ ಹೆಚ್ಚಾಗಿ ಕಾಣಸಿಗುವುದಿಲ್ಲ. ಪ್ರತಿ ಕೆ.ಜಿ.ಗೆ ಸಾವಿರಕ್ಕೂ ಹೆಚ್ಚಿನ ಬೆಲೆ ಇರುವ ಕಾರಣ, ವ್ಯವಹಾರ ಅಷ್ಟಾಗಿ ನಡೆಯುವುದಿಲ್ಲ ಎಂಬುದು ಸ್ಥಳೀಯ ವರ್ತಕರ ಮಾತು.

ಮೂವತ್ತು ವರ್ಷಗಳಿಂದಲೂ ಸಾಂಪ್ರದಾಯಿಕ ಶೈಲಿಯ ಹುಂಡಿಯಲ್ಲೇ ಕುರಿ ಸಾಕುತ್ತಿದ್ದೇವೆ. ಹೊಲ-ಗದ್ದೆಗೆ ಅತ್ಯುತ್ತಮವಾದ ಗೊಬ್ಬರ ಇದರಿಂದಲೇ ಸಿಗುತ್ತಿದೆ. ಕೃಷಿಯ ಇನ್ನಿತರ ಮೂಲಗಳನ್ನು ಬಿಟ್ಟು ವರ್ಷಕ್ಕೆ ಏನಿಲ್ಲವೆಂದರೂ ಎರಡೂವರೆಯಿಂದ ಮೂರು ಲಕ್ಷ ಹಣವನ್ನು ಕುರಿಗಳಿಂದಲೇ ಗಳಿಸುತ್ತಿದ್ದೇನೆ.
–ಚಿಕ್ಕರಾಜು, ಸಾಹಳ್ಳಿ ಗ್ರಾಮದ  ರೈತ

ಚಿಕ್ಕರಾಜು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.