ADVERTISEMENT

ರಸಾಸ್ವಾದ: ಆಲೂಗಡ್ಡೆ 65, ಅಣಬೆ ಬಿರಿಯಾನಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2024, 19:30 IST
Last Updated 4 ಅಕ್ಟೋಬರ್ 2024, 19:30 IST
   
ಅಸ್ಮತ್ ವಗ್ಗ

ಬೇಕಾಗುವ ಸಾಮಗ್ರಿಗಳು: ದೊಡ್ಡ ಆಲೂಗಡ್ಡೆ 4, ಬೆಳ್ಳುಳ್ಳಿ 8 ಎಸಳು, ಶುಂಠಿ 1/2 ಇಂಚು, ಮೆಣಸಿನಪುಡಿ 2 ಚಮಚ, ಕರಿಮೆಣಸಿನ ಪುಡಿ 1/2 ಚಮಚ, ಕರಿಬೇವು 3 ಎಸಳು, ಉಪ್ಪು ರುಚಿಗೆ ತಕ್ಕಷ್ಟು, 3 ಚಮಚ ಮೈದಾ, 3 ಚಮಚ ಅಕ್ಕಿಹಿಟ್ಟು ಅಥವಾ ಕಾರ್ನ್ ಫ್ಲೋರ್. 

ಮಾಡುವ ವಿಧಾನ: ಮೊದಲಿಗೆ ಆಲೂಗಡ್ಡೆಯ ಸಿಪ್ಪೆ ಸುಲಿದು, ಗ್ರೇಟರಿನ ದಪ್ಪ ಬದಿಯಲ್ಲಿ ತುರಿದುಕೊಂಡು ನೀರಿನಲ್ಲಿ ತೊಳೆಯಿರಿ. ಆಲೂಗಡ್ಡೆಯನ್ನು ಚೆನ್ನಾಗಿ ಸೋಸಿಟ್ಟುಕೊಳ್ಳಿ. ಸೋಸಿದ ಆಲೂಗಡ್ಡೆಗೆ ಚೆನ್ನಾಗಿ ಜಜ್ಜಿದ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕೆಂಪು ಮೆಣಸಿನಪುಡಿ, ಕಾಳುಮೆಣಸಿನ ಪುಡಿ, ಉಪ್ಪು, ಹೆಚ್ಚಿಕೊಂಡ ಕರಿಬೇವು ಹಾಕಿ ನೀರು ಹಾಕದೆ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಮೈದಾ ಹಿಟ್ಟು ಮತ್ತು ಅಕ್ಕಿ ಹಿಟ್ಟು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಚಿಕ್ಕ ಚಿಕ್ಕ ಪಕೋಡ ರೀತಿಯಲ್ಲಿ ಕೆಂಪಗೆ ಕರಿಯಿರಿ. ಟೊಮೇಟೊ ಕೆಚ್ ಅಪ್ ಜೊತೆಗೆ ಸವಿಯಲು ರುಚಿಯಾದ ಆಲೂಗಡ್ಡೆ 65 ರೆಡಿ. 

ಅಣಬೆ ಬಿರಿಯಾನಿ

ಬೇಕಾಗುವ ಸಾಮಗ್ರಿಗಳು: ಬಾಸ್ಮತಿ ಅಕ್ಕಿ 3/4 ಕೆಜಿ, ಅಣಬೆ 2 box (ಮಾರುಕಟ್ಟೆಯಲ್ಲಿ ಸಿಗುವ ಬಿಳಿ ಅಣಬೆ), ಮೊಸರು 1/2 ಕಪ್, ಈರುಳ್ಳಿ 1/2 ಕೆಜಿ, ಟೊಮೆಟೊ 4 ಮಧ್ಯಮ ಗಾತ್ರದ್ದು, ಕಾಯಿಮೆಣಸು 7ರಿಂದ 8, ಕೊತ್ತಂಬರಿ ಮತ್ತು ಪುದೀನಾ ಸೊಪ್ಪು ಒಂದೊಂದು ಮುಷ್ಠಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ 2 ಚಮಚ , ಕೆಂಪುಮೆಣಸಿನ ಪುಡಿ 3 ಚಮಚ ಕೊತ್ತಂಬರಿ ಪುಡಿ 1 ಚಮಚ, ಅರಿಶಿಣಪುಡಿ 1/2 ಚಮಚ, ಜೀರಿಗೆ ಪುಡಿ 1/4 ಚಮಚ, ಗರಂ ಮಸಾಲಾ ಪುಡಿ 1/2 ಚಮಚ,,ಚಕ್ಕೆ ಲವಂಗ 3 ಅಥವಾ 4 ತುಂಡು ಬಿರಿಯಾನಿ ಎಲೆ 1,,ಬಿರಿಯಾನಿ ಮಸಾಲಾ ಪುಡಿ (optional) 1 ಚಮಚ, ಎಣ್ಣೆ 1 ಕಪ್, ತುಪ್ಪ 1/4 ಕಪ್ , ಉಪ್ಪು ರುಚಿಗೆ ತಕ್ಕಷ್ಟು

ADVERTISEMENT

ಮಾಡುವ ವಿಧಾನ: ದೊಡ್ಡ ಪಾತ್ರೆಯಲ್ಲಿ ಎಣ್ಣೆ ಬಿಸಿಮಾಡಿ ಇಡಿ ಗರಂ ಮಸಾಲೆಯನ್ನು ಸಣ್ಣ ಉರಿಯಲ್ಲಿ ಹುರಿಯಿರಿ. ಈರುಳ್ಳಿಯನ್ನು ಉದ್ದಕ್ಕೆ ಕತ್ತರಿಸಿ ಬಿಸಿ ಮಾಡಿದ ಎಣ್ಣೆಗೆ ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ. ಟೊಮ್ಯಾಟೋವನ್ನು ಮಿಕ್ಸಿಯಲ್ಲಿ ಅರೆದು ಪೇಸ್ಟ್ ಮಾಡಿಡಿ. ಹುರಿದ ಈರುಳ್ಳಿಯಲ್ಲಿ 1/4 ಭಾಗದಷ್ಟು ತೆಗೆದಿಡಿ. ಪಾತ್ರೆಯಲ್ಲಿ ಉಳಿದಿರುವ ಈರುಳ್ಳಿಗೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಮಂದ ಉರಿಯಲ್ಲಿ 2 ನಿಮಿಷ ಮಿಕ್ಸ್ ಮಾಡಿ. ಗ್ಯಾಸ್ ಆಫ್ ಮಾಡಿ ತೊಳೆದು ಕತ್ತರಿಸಿದ ಅಣಬೆ, ಅರೆದಿಟ್ಟ ಟೊಮೇಟೊ ಪೇಸ್ಟ್, ಮೊಸರು, ಚಿಕ್ಕದಾಗಿ ಕತ್ತರಿಸಿದ ಕಾಯಿಮೆಣಸು, ಮೆಣಸಿನಪುಡಿ, ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ಅರಶಿಣ, ಗರಂ ಮಸಾಲ ಪುಡಿ, ಉಪ್ಪು ಸೇರಿಸಿ ಮಿಕ್ಸ್ ಮಾಡಿ. ನಂತರ ಮಧ್ಯಮ ಉರಿಯಲ್ಲಿ ಬೇಯಲು ಬಿಡಿ. ಪಾತ್ರೆಯೊಂದರಲ್ಲಿ ಬಾಸ್ಮತಿ ಅಕ್ಕಿಯನ್ನು ಅರ್ಧ ಗಂಟೆ ನೆನೆಯಲು ಬಿಡಿ. ಗ್ಯಾಸ್ ನಲ್ಲಿ ಮತ್ತೊಂದು ಪಾತ್ರೆಯಲ್ಲಿ ನೀರು ಕುದಿಯಲು ಬಿಡಿ. ನೀರಿಗೆ ಒಂದೆರಡು ಚಮಚ ಎಣ್ಣೆ, ಅರ್ಧ ಲಿಂಬೆರಸ, ಸ್ವಲ್ಪ ಜೀರಿಗೆ, ಒಂದೆರಡು ಕಾಯಿಮೆಣಸು ಹಾಕಿ. ನಂತರ ನೆನೆಸಿಟ್ಟ ಅಕ್ಕಿಯನ್ನು ಕುದಿಯುವ ನೀರಿಗೆ ಹಾಕಿ ಬೇಯಲು ಬಿಡಿ. 90ರಷ್ಟು ಬೆಂದ ನಂತರ ನೀರನ್ನು ಬಸಿಯಿರಿ. ಈ ಅನ್ನವನ್ನು ಬೇಯಿಸಿಟ್ಟ ಮಸಾಲೆಯ ಮೇಲೆ ಹಾಕಿ, ಅದರ ಮೇಲೆ ಮೊದಲೇ ತೆಗೆದಿಟ್ಟ ಹುರಿದ ಈರುಳ್ಳಿ, ತುಪ್ಪದಲ್ಲಿ ಹುರಿದ ಗೋಡಂಬಿ ಒಣ ದ್ರಾಕ್ಷಿ ಹಾಕಿ ಗಾರ್ನಿಶ್ ಮಾಡಿ. ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಹತ್ತು ನಿಮಿಷ ಬೇಯಿಸಿ. ಈಗ ಬೆಂದ ಬಿರಿಯಾನಿಯ ಮೇಲೆ ಬಿರಿಯಾನಿ ಮಸಾಲೆ, ಉಳಿದ ತುಪ್ಪ ಹಾಕಿ ಅನ್ನ ಹಾಗೂ ಮಸಾಲೆಯನ್ನು ಮಿಕ್ಸ್ ಮಾಡಿ. ರುಚಿಯಾದ ಅಣಬೆ ಬಿರಿಯಾನಿ ಮೊಸರುಬಜ್ಜಿ ಜೊತೆಯಲ್ಲಿ ಸವಿಯಲು ಸಿದ್ದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.