ತಣ್ಣನೆಯ ಕುಳಿರ್ಗಾಳಿ, ಕಿವಿಯಂಚಿನಿಂದ ಕತ್ತು ತಾಕಿ, ಕೂದಲೆಲ್ಲ ಮೈ ಹೂಂ ನಾ ಚಿತ್ರದ ಸುಷ್ಮಿತಾ ಸೇನಳಂತೆ ಹಾರಾಡುವಾಗ...
ಓಹ್... ಅದೇನದು.. ಮೂಗಿನ ಹೊರಳೆಗಳೂ ತಬ್ಬುತ್ತಿವೆ, ಈರುಳ್ಳಿ–ಕೊತ್ತಂಬರಿ ಸೊಪ್ಪಿನ ಘಮದೊಂದಿಗೆ ನಿಂಬೆರಸದ ಹುಳಿಯೊಗರ ಮಾಧುರ್ಯ.. ತಣ್ಣನೆಯ ಗಾಳಿ, ಕ್ಷುದಾಗ್ನಿಗೆ ತಾಕಿದಾಗ ಕಾಲು, ಕಣ್ಣು ಅಕ್ಕಪಕ್ಕದ ಚಾಟು ಸೆಂಟರ್‌ಗಳನ್ನು ಹುಡುಕಿಕೊಂಡು ಹೊರಡುತ್ತವೆ.
ಬಾಣಲೆಯಲ್ಲಿ ಹದವಾಗಿ ಕಾದಿರುವ ಮರಳಲ್ಲಿ ಮೈ ಸುಡಿಸಿಕೊಳ್ಳುವ ಕಡಲೆಬೀಜಾ.. ಸೇಂಗಾ, ಬಾದಾಮಿಯಷ್ಟೇ ರುಚಿಯಾಗಿ, ಉಪ್ಪುಂಡು ಟಣ್... ಟಣ್... ಕಿಣ್... ಕಿಣ್.. ಎಂಬ ಕಿಣಿಕಿಣಿ ನಾದ, ತಣ್ಣಗಿನ ಅಂಗೈನಲ್ಲಿ ಬಿಸಿಬೆಚ್ಚನೆಯ ಕಾಳು ಹಾಕಿಕೊಂಡಾಗಲೇ ಸಮಾಧಾನ ಹುಟ್ಟುವುದು.
ವಾತಾವರಣ ಬದಲಾಯ್ತಲ್ಲ, ಹಣೆಯೆಲ್ಲ ನೋವಾಗುವಷ್ಟು ಶೀತ, ಮೂಗು ಕಟ್ಟಿಕೊಂಡು, ಮೂಗಿನ ತುದಿ ಕೆಂಪಾಗಿದ್ದರೆ, ಅರಿಶಿಣ, ಉಪ್ಪು ಮತ್ತು ಬೆಳ್ಳುಳ್ಳಿಯ ಸ್ವಾದ ಅಂಟಿಸಿಕೊಂಡ ಚುರುಮುರಿ ಸೇವಿಸಲು ಹಿತವಾಗಿರುತ್ತದೆ.
ಕರಿ ಕಲ್ಲಿದ್ದಲಿನ ಮೇಲೆ ಕೆಂಪು ಕೆಂಡದುಂಡೆಯ ಮೇಲೆ ಹೊಂಬಣ್ಣದ ಮುತ್ತಿನ ಸಾಲು, ಹಚ್ಚಹಸಿರ ಸಿಪ್ಪೆಯ ನಡುವೆ ಸುಡುತ್ತಿದ್ದರೆ ಈ ಹೊನ್ನ ಕಾಳಿಗಾಗಿ ಆಗಲೇ ಲಾಲಾರಸ ಚಿಮ್ಮುತ್ತಿರುತ್ತದೆ. ಸುಟ್ಟ ಜೋಳದ ಮೇಲೆ ಹಸಿಮೆಣಸಿನ ಚಟ್ನಿಯಲ್ಲಿ ಅದ್ದಿದ ನಿಂಬೆಹಣ್ಣು ಸವರುತ್ತಿದ್ದರೆ, ರುಚಿಮೊಗ್ಗುಗಳಲ್ಲಿಯೂ ಲಾಲಾರಸ ಲಾವಾದಂತೆಯೇ ಸಿಡಿಯತೊಡಗುತ್ತದೆ. ಹಸಿರು ಹೊದಿಕೆಯಲ್ಲಿಯೇ ತೆನೆ ಸುಟ್ಟು ಕೊಟ್ಟರೆ ಬಾಯಿಗೂ ಕಾಳಿಗೂ ಜುಗಲ್ಬಂದಿ ಶುರುವೆಂದೇ ಲೆಕ್ಕ.
ಹಿತೋಷ್ಣವೆನಿಸುವ ಬಿಸಿ, ಅದರೊಳಗೆ ಕರಿಮೆಣಸು, ಚಕ್ಕೆ ಲವಂಗಗಳ ಹದವಾದ ಮಿಶ್ರಣ. ಸಾಕೆನಿಸುವಷ್ಟು ಶುಂಠಿ ಮತ್ತು ಕೊತ್ತಂಬರಿ ಇರುವ ಮಸಾಲೆ ಕೈಬೀಸಿ ಕರೆಯುತ್ತದೆ. ಬದುಕಿದು ನಶ್ವರ ಎಂದ್ಹೇಳುವ ಪಾನಿಪುರಿಗಳು ಅದರೊಳಗೆ ನಮ್ಮ ಭ್ರಮೆ ಮುರಿಯುವಂತೆ ಮುರಿದುಕೊಂಡು ಬೀಳುತ್ತವೆ. ಮಳೆ ಹನಿ ಉದುರಿದಂತೆಯೇ ಶೇವನ್ನು ಉದುರಿಸಿ, ಹೆಚ್ಚಿದ ಈರುಳ್ಳಿ, ಹೆರೆದ ಕ್ಯಾರೆಟ್ಟು, ಸೌತೆಕಾಯಿ ನಮ್ಮ ಆಕಾಶಗಂಗೆಯ ಸ್ವರೂಪವನ್ನು ಹೋಲುವಂತೆ ಉದುರುಸಿಕೊಂಡಿರುವ ತಟ್ಟೆ ಕೈಗೆ ಬಂದರೆ ಆ ಬಿಸಿ, ಗಂಟಲಿನಿಂದ ಹೊಟ್ಟೆಗುಂಟ ಇಳಿಯುವ ಅನುಭವ ನಮ್ಮದು. ಚೂರು ಖಾರವೆನಿಸಿದರೆ ಕಣ್ಣೀರು, ಮೂಗೊಳಗೂ ಸೋರಿಸಿಕೊಂಡು, ಏರಿಸಿಕೊಂಡು ಹೊಟ್ಟೆಗೆ ಇವನ್ನು ಇಳಿಸಿಕೊಳ್ಳುತ್ತೇವೆ. ಆಹಹಾ.. ಆ ಮಸಾಲಾ ಪುರಿ, ಚಳಿಯೋಡಿಸುವ ಬಿಸಿಬಿಸಿ ಕಟ್ಲೆಟ್ ಮತ್ತು ಹೊಟ್ಟೆ ಒಡೆಸಿಕೊಂಡು, ಸಿಹಿ ಚಟ್ನಿ, ಮೊಸರು ತುಂಬಿಸಿಕೊಳ್ಳುವ ಕಚೋರಿ ಮತ್ತು ಸಮೋಸಾಗಳು ಇಳಿಸಂಜೆಯ ಚಳಿಯನ್ನು ಇನ್ನಷ್ಟು ರಂಗೀಲಾ ಮಾಡುತ್ತವೆ. ಕೋರ್ಟ್ ಬಳಿಯ ಶರ್ಮಾಚಾಟ್ ನಾಲ್ಕು ದಶಕಗಳಿಂದ ಬೆಂಗಳೂರಿಗರಿಗೆ ಉತ್ತರಪ್ರದೇಶದ ಚಾಟುಗಳ ರುಚಿಯುಣಿಸುತ್ತಿದೆ.
ಇನ್ನೊಂದಿದೆ... ನೋಡಿದಾಗಲೆಲ್ಲ ಹೇಮಾಮಾಲಿನಿಯ ಚನಾ ಚೂರು ಗರಂ.. ಬಾಬು.. ಹಾಡು ನೆನಪಿಸುವ ಸುಂದರಿ. ತಿಳಿಹಳದಿ ಬಣ್ಣದ ಹುರಿಗಡಲೆಯ ಹಲಪಿಗಳಿವು. ಹೆಚ್ಚಿದ ಕೊಚ್ಚಿದ ಈರುಳ್ಳಿ, ಹಸಿಮೆಣಸು, ನಿಂಬೆಹಣ್ಣಿನ ಹದವಾದ ಮಿಶ್ರಣದೊಂದಿಗೆ ನಮ್ಮ ಅಂಗೈಗೆ ಬರುವ ಇವು ನಾಲಗೆಯನ್ನು ನಾಳಕ್ಕೆ ತಾಕಿಸಿ ‘ನಣ್ಣ‘ ಎಂಬ ಉದ್ಗಾರ ಹೊರಡಿಸುವಂತೆ ಆಗುತ್ತದೆ.
ಇವೆಲ್ಲವೂ ಒಂದು ತೂಕವಾದರೆ, ನಮ್ಮ ಬಾಲ್ಯಕ್ಕೆ ಮರಳಿ ಕರೆದೊಯ್ಯುವ ತಿನಿಸಿದು. ನೋಡಿದಾಕ್ಷಣ ನಮ್ಮ ಕೈಬೆರಳುಗಳೆಲ್ಲ ನೇರ ಆಗುತ್ತವೆ. ತಿಳಿಹಳದಿ ಬಣ್ಣದ ಬೋಟಿ ಸಹ ಯೌವ್ವನಾವಸ್ಥೆಗೆ ಕಾಲಿರಿಸಿದಂತೆ, ಬಣ್ಣಬಣ್ಣದ ಅಲಂಕಾರ ಮಾಡಿಸಿಕೊಂಡು ನಮ್ಮ ಅಂಗೈಗೆ ಬಂದಾಗ.. ಕಮ್ಮನೆಯ ಇಂಗಿನ ಒಗ್ಗರಣೆ ಇರುವ, ಒಡೆದು ಹೋಳಾಗಿ, ಕಾಂಗ್ರೆಸ್ ಹೆಸರಿನಲ್ಲಿ ಕಂಗೊಳಿಸುವ ಸೇಂಗಾಬೀಜಗಳು, ಹಚ್ಚಹಸಿರು ಬಾಳೆಲೆಯ ಮೇಲೆ ಎಳೆತರಳೆ ಮೈಚೆಲ್ಲಿದಂತೆ ಹೋಳಾಗಿ ಸೀಳಿದ ಬೋಟಿಯ ಮೇಲೆ ಶೇವು, ಕ್ಯಾರೆಟ್ ಜೊತೆ ಹರಡಿ ನೀಡಿದರೆ.. ಬುವಿಯ ಮೇಲೆ ಸ್ವರ್ಗ ಎಂದಿದ್ದರೆ ಅದು, ಇಲ್ಲಿಯೇ.. ಇಲ್ಲಿಯೇ.. ಇಲ್ಲಿಯೇ ಎಂಬ ಕವಿಯ ಸಾಲುಗಳನ್ನು ನೆನಪಿಸಿಕೊಳ್ಳುವಂತೆ ಮಾಡುವ ತಿನಿಸಿದು. ಹೈಕೋರ್ಟ್ ಬಳಿಯ ಕಬ್ಬಾಳಮ್ಮ ಚಾಟ್ಸ್ ಕೇಂದ್ರಕ್ಕೆ ಬಂದರಂತೂ ಬೆರಳತುದಿಗಳನ್ನು ಚೀಪುತ್ತಲೇ, ಪೈನಾಪಲ್ ಚಾಟ್, ಬೋಟಿಚಾಟ್‌ಗಳ ಜೊತೆಗೆ ಇತರ ಚಾಟ್‌ಗಳನ್ನೂ ಸವಿಯಬಹುದಾಗಿದೆ.
ಬಿಸಿಎಣ್ಣೆ ಕಮರು, ಮೂಗಿಗೆ ಅಡರಿದರೆ ಸಾಕು, ಹೆಜ್ಜೆಗಳು ಹಾದಿ ಮರೆತಂತೆ, ಮಾಯಾವಿ ಅತ್ತಲೇ ಸೆಳೆದಂತೆ ಮಳೆಗಾಲದಲ್ಲಿ ಕರೆದೊಯ್ಯುತ್ತವೆ. ಬಿಸಿ ಬಜ್ಜಿ ಪಕೋಡಾಗಳಿದ್ದರಂತೂ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಎಂಬಂತೆ ತಣ್ಣನೆಯ ಮಳೆಯಲ್ಲಿ ಕೊಡೆ ಬಿಚ್ಚಿಕೊಂಡು, ಬಿಸಿಬಿಸಿ ಬಜ್ಜಿ ಬೋಂಡಾಗಳನ್ನು ಕಟ್ಟಿಸಿಕೊಂಡು, ಲಗುಬಗೆಯ ಹೆಜ್ಜೆಯಿಡುತ್ತ ಮನೆಗೆ ಧಾವಿಸುವ ಸಂಭ್ರಮವೇ ಬೇರೆ. ಹಾಗೆ ಪುಡಿಕೆ ಕಟ್ಟುವವರೆಗೂ ಜೀವ ತಡೆಯುವುದಾದರೂ ಹೇಗೆ? ಹಸಿರು ಚಟ್ನಿಯಲ್ಲಿ ಭಜ್ಜಿಯ ಗುಣಗಾನ ಭಜಿಸುತ್ತ, ತಿಂದು, ಹಾಳೆಗೆ ಕೈ ಒರೆಸಿ, ಖಾರಕ್ಕೆ ಸೊರ್ ಎಂದು ಮೂಗೇರಿಸಿ, ಕಟ್ಟಿಸಿಕೊಂಡ ಪೊಟ್ಟಣ ಕೊಳ್ಳುವ ಖುಷಿಯೇ ಬೇರೆ.
ಬದುಕು ಬಲು ಹಗುರವೆನಿಸುವುದು, ಈ ರುಚಿರುಚಿಯಾದ ಚಾಟುಗಳನ್ನು ಸವಿದಾಗ.. ಬದುಕು ಸವೆಸುವುದು ಇವುಗಳನ್ನು ಸವಿಯುತ್ತಲೇ ಎಂದುಕೊಳ್ಳುತ್ತ, ಹೊರಡುವಾಗ ಖಾರವುಂಡ ತುಟಿಗಳು ಚಂದದ ಹಾಡುಗಳನ್ನು ಗುನುಗಲಾರಂಭಿಸುತ್ತವೆ.
v
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.