ADVERTISEMENT

ಆಹಾರ: ವಿವಿಧ ರೀತಿಯ ಗರಿ ಗರಿ ಪಕೋಡ ಮಾಡುವುದು ಹೇಗೆ?

ಕೆ.ವಿ.ರಾಜಲಕ್ಷ್ಮಿ
Published 5 ಜುಲೈ 2024, 19:21 IST
Last Updated 5 ಜುಲೈ 2024, 19:21 IST
   

ಕೊತ್ತಂಬರಿ ವಡೆ: ಬೇಕಾಗುವ ಸಾಮಗ್ರಿ:   ಹೆಸರುಬೇಳೆ 1/2 ಕಪ್, ಕಡಲೆಬೇಳೆ 1/4ಕಪ್,ಸಣ್ಣಗೆ ಕತ್ತರಿಸಿದ ಎಳೆ ಕೊತ್ತಂಬರಿ  ಸೊಪ್ಪು 1 ಕಪ್, ಒಣಮೆಣಸಿನಕಾಯಿ 6-8, ಹಸಿಶುಂಠಿ ಸಣ್ಣ ತುಂಡು,ರುಚಿಗೆ ತಕ್ಕಷ್ಟು ಉಪ್ಪು. 

ಮಾಡುವ ವಿಧಾನ: ಹೆಸರುಬೇಳೆ,ಕಡಲೇಬೇಳೆಗಳನ್ನು ಎರಡು ಗಂಟೆ ನೆನೆಸಿ. ನಂತರ ನೀರು ಬಸಿದು ಒಣಮೆಣಸಿನಕಾಯಿ,ಶುಂಠಿ,ಉಪ್ಪು , ಸೇರಿಸಿ  ತರಿತರಿಯಾಗಿ ರುಬ್ಬಿಕೊಂಡು,ಕೊತ್ತಂಬರಿ ಸೊಪ್ಪಿನೊಂದಿಗೆ ಚೆನ್ನಾಗಿ ಕಲೆಸಿ.  ನಂತರ  ವಡೆಯಾಕಾರದಲ್ಲಿ ತಟ್ಟಿ ಎಣ್ಣೆಯಲ್ಲಿ ಕರಿಯಿರಿ.

ಸಬಸ್ಸಿಗೆ ಪಕೋಡ 
ಬೇಕಾಗುವ ಸಾಮಗ್ರಿ: ಸಣ್ಣಗೆ ಕತ್ತರಿಸಿದ ಎಳೆ ಸಬ್ಬಸಿಗೆ ಸೊಪ್ಪು 1 ಕಪ್, ಈರುಳ್ಳಿ 1/2 ಕಪ್, ಕಡಲೆ ಹಿಟ್ಟು 1 ಕಪ್, ಅಕ್ಕಿ ಹಿಟ್ಟು ಎರಡು ಚಮಚ, ರುಚಿಗೆ ತಕ್ಕಂತೆ ಅಚ್ಚಮೆಣಸಿನ ಪುಡಿ,ಉಪ್ಪು, ಚಿಟಿಕೆ ಇಂಗು.  
ಮಾಡುವ ವಿಧಾನ:  ಅಕ್ಕಿಹಿಟ್ಟು ,ಕಡಲೆಹಿಟ್ಟು,ಅಚ್ಚ ಮೆಣಸಿನಪುಡಿ,ಉಪ್ಪು,ಇಂಗು  ಇವೆಲ್ಲವನ್ನೂ ಸ್ವಲ್ಪ ನೀರು ಹಾಕಿ ಕಲೆಸಿಕೊಂಡು ನಂತರ  ಸಬ್ಬಸಿಗೆ ಸೊಪ್ಪು ,ಈರುಳ್ಳಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.ಅಣಿಯಾದ ಹಿಟ್ಟನ್ನು ಚಿಕ್ಕಚಿಕ್ಕ ಗಾತ್ರದಲ್ಲಿ ಎಣ್ಣೆಯಲ್ಲಿ ಮಧ್ಯಮ ಉರಿಯಲ್ಲಿ ಕರಿಯಿರಿ.

ADVERTISEMENT


ಸಿಹಿ ಗೆಣಸಿನ ಫ್ರೈ
ಬೇಕಾಗುವ ಸಾಮಗ್ರಿ: ಸಿಪ್ಪೆ ಸುಲಿದು ಮಧ್ಯಮ ಸೈಜಿಗೆ ತುಂಡರಿಸಿದ ಗೆಣಸು 10-15, ಸಣ್ಣಗೆ ಕತ್ತರಿಸಿದ ಸ್ಪ್ರಿಂಗ್ ಆನಿಯನ್ (ಈರುಳ್ಳಿ ಸೊಪ್ಪು) ಎಸಳುಗಳು ಒಂದು ಹಿಡಿ, ರುಚಿಗೆ ತಕ್ಕಷ್ಟು ಚಾಟ್ ಮಸಾಲ, ಉಪ್ಪು.

ಮಾಡುವ ವಿಧಾನ: ಬಾಣಲಿಯಲ್ಲಿ ಎಣ್ಣೆ ಹಾಕಿ ಬಿಸಿಯಾಗುತ್ತಲೇ ಗೆಣಸು, ಈರುಳ್ಳಿ ಎಸಳುಗಳನ್ನು ಹಾಕಿ ಎರಡು  ನಿಮಿಷ ಬಾಡಿಸಿ ನಂತರ ಚಾಟ್ ಮಸಾಲಾ ಉಪ್ಪು ಸೇರಿಸಿ, ತುಸು ನೀರು ಚಿಮುಕಿಸಿ ಮುಚ್ಚಳ ಮುಚ್ಚಿ ಐದು ನಿಮಿಷ ಬೇಯಿಸಿ.

ಸಿಹಿ ಗೆಣಸಿನ ಫ್ರೈ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.