ADVERTISEMENT

ಆಹಾರ: ಬಗೆ ಬಗೆಯ ಕಲ್ಲಂಗಡಿ ಸಿಹಿತಿನಿಸುಗಳನ್ನು ಮಾಡುವುದು ಹೇಗೆ?

ಪ್ರಜಾವಾಣಿ ವಿಶೇಷ
Published 27 ಮೇ 2023, 0:53 IST
Last Updated 27 ಮೇ 2023, 0:53 IST
ಕಲ್ಲಂಗಡಿ
ಕಲ್ಲಂಗಡಿ    

ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣಿನ ಬಳಕೆ ಜಾಸ್ತಿ. ಸಾಮಾನ್ಯವಾಗಿ ಹಣ್ಣನ್ನು ಬಳಸಿ ಅದರ ಸಿಪ್ಪೆಯನ್ನು ಬಿಸಾಕುತ್ತೇವೆ. ಕೆಲವರು ಪಲ್ಯ, ಸಾಂಬಾರ್, ದೋಸೆಗಳಲ್ಲಿ ಸಿಪ್ಪೆಯ ಬಿಳಿ ಭಾಗವನ್ನು ಬಳಸುತ್ತಾರೆ. ಈ ಸಿಪ್ಪೆಯ ಬಿಳಿ ಭಾಗದಿಂದ ಇನ್ನೂ ರುಚಿಕರ ಸಿಹಿ ತಿನಿಸುಗಳನ್ನು ತಯಾರಿಸಬಹುದು. ಅಂತಹ ಕೆಲವು ರೆಸಿಪಿಗಳನ್ನು ಸೌಖ್ಯ ಮೋಹನ್ ತಲಕಾಲುಕೊಪ್ಪ ಇಲ್ಲಿ ಪರಿಚಯಿಸಿದ್ದಾರೆ.

ಪಾನಕ

ಕಲ್ಲಂಗಡಿಯ ತಿರುಳಿನಿಂದ ಜ್ಯೂಸ್ ಮಾಡಿದರೆ, ತಿರುಳು ತೆಗೆದ ಮೇಲೆ ಉಳಿಯುವ ಸಿಪ್ಪೆಯ ಭಾಗದಿಂದಲೂ ವಿಶಿಷ್ಟ ಬಗೆಯ ಪಾನಕ ಮಾಡಬಹುದು.

ADVERTISEMENT

ಬೇಕಾಗುವ ಸಾಮಗ್ರಿ: ಕಲ್ಲಂಗಡಿ ಹಣ್ಣಿನ ಸಿಪ್ಪೆಯ ಬಿಳಿ ಭಾಗ ಒಂದು ಕಪ್, ಹಾಲು 2 ಕಪ್, ಬೆಲ್ಲ ಅರ್ಧ ಕಪ್, ಏಲಕ್ಕಿ 2

ತಯಾರಿಸುವ ವಿಧಾನ : ಮೊದಲು ಬಿಳಿ ಭಾಗವನ್ನು ಸಣ್ಣಗೆ ಕತ್ತರಿಸಿಕೊಳ್ಳಿ.ಅದಕ್ಕೆ ಏಲಕ್ಕಿ ಬೀಜ ಮತ್ತು ಬೆಲ್ಲವನ್ನು ಸೇರಿಸಿ ನುಣ್ಣಗೆ ರುಬ್ಬಿ. ರುಬ್ಬಿದ ಮಿಶ್ರಣಕ್ಕೆ ಹಾಲು ಸೇರಿಸಿ. ಹಾಲಿನ ಬದಲಾಗಿ ತೆಂಗಿನ ಹಾಲನ್ನು ಕೂಡ ಬಳಸಬಹುದು. ಫ್ರಿಜ್ ನಲ್ಲಿಟ್ಟು ತಣ್ಣನೆಯ ಪಾನಕವನ್ನು ಕುಡಿಯಬಹುದು.

ಹಲ್ವ

ಕಲ್ಲಂಗಡಿ ಹಣ್ಣು ತಿಂದ ಮೇಲೆ ಉಳಿಯುವ ಬಿಳಿ ಭಾಗದಲ್ಲಿ ಒಂದು ರೀತಿಯ ರುಚಿ ಇದೆ. ಆ ರುಚಿಗೆ ಮೌಲ್ಯವರ್ಧನೆ ಮಾಡಿದರೆ, ಹಲ್ವ ತಯಾರಾಗುತ್ತದೆ. 

ಬೇಕಾಗುವ ಸಾಮಗ್ರಿ: ಕಲ್ಲಂಗಡಿ ಹಣ್ಣಿನ ಬಿಳಿ ಭಾಗ 5ಕಪ್, ತುಪ್ಪ 4 ರಿಂದ 5 ಚಮಚ, ದ್ರಾಕ್ಷಿ-ಗೋಡಂಬಿ ಸ್ವಲ್ಪ, ಸಕ್ಕರೆ 2 ಕಪ್, ಕೇಸರಿ, ಏಲಕ್ಕಿ ಪುಡಿ.

ತಯಾರಿಸುವ ವಿಧಾನ: ಮೊದಲು ಕಲ್ಲಂಗಡಿ ಹಣ್ಣಿನ ಬಿಳಿಯ ಭಾಗವನ್ನು ತುರಿದುಕೊಳ್ಳಿ. ಅದರ ನೀರಿನ ಭಾಗವನ್ನು ಹಿಂಡಿ ತೆಗೆದು ಬಾಣಲೆಯಲ್ಲಿ ಹಾಕಿ ಮಗುಚಿ. ಆಗ ಬೆಂದಂತಾಗುತ್ತದೆ. ಚಿಟಿಕೆ ಉಪ್ಪು ಸೇರಿಸಿ ಎರಡು ಚಮಚ ತುಪ್ಪ ಸೇರಿಸಿ ಹುರಿಯಿರಿ. ನಂತರ ಅದು ತೆಳು ಜೇನುತುಪ್ಪದ ಬಣ್ಣಕ್ಕೆ ತಿರುಗುತ್ತದೆ. ಅದಕ್ಕೆ ಸಕ್ಕರೆಯನ್ನು ಹಾಕಿ ಚೆನ್ನಾಗಿ ತಿರುಗಿಸಿ. ಇದು ಸರಿಯಾಗಿ ಪಾಕ ಬಂದು ಗಟ್ಟಿಯಾಗಬೇಕು. ಆಮೇಲೆ ದ್ರಾಕ್ಷಿ ಗೋಡಂಬಿಯನ್ನು ತುಪ್ಪದಲ್ಲಿ ಹುರಿದುಕೊಂಡು ಅದಕ್ಕೆ ಹಾಕಿ ಚೆನ್ನಾಗಿ ಮಿಶ್ರ ಮಾಡಿ ಇಳಿಸಿ. ಏಲಕ್ಕಿ ಪುಡಿ ಅಥವಾ ಕೇಸರಿಯನ್ನು ಸೇರಿಸಿಕೊಳ್ಳಬಹುದು. ಹಲ್ವ ರೆಡಿ.

ಬರ್ಫಿ

ಬೇಕಾಗುವ ಸಾಮಗ್ರಿ: ಕಲ್ಲಂಗಡಿ ಹಣ್ಣಿನ ಸಿಪ್ಪೆಯ ಬಿಳಿ ಭಾಗದ ತುರಿ 2ಕಪ್, ತೆಂಗಿನ ತುರಿ 1ಕಪ್, ರವೆ ಅರ್ಧ ಕಪ್, ಸಕ್ಕರೆ ಎರಡು ಕಪ್, ತುಪ್ಪ 2-3ಚಮಚ

ವಿಧಾನ : ಮೊದಲು ಬಿಳಿ ಭಾಗದ ತುರಿಯನ್ನು ಬಾಣಲೆಗೆ ಹಾಕಿ ನೀರು ಇಂಗಿಸಿ. ನಂತರ ಸಕ್ಕರೆ ಹಾಕಿ ಚೆನ್ನಾಗಿ ಮಗುಚಿ. ಪಾಕ ಬಂದು ಗಟ್ಟಿಯಾಗಬೇಕು. ಮಧ್ಯ ತುಪ್ಪ ಸೇರಿಸಿ. ಸ್ವಲ್ಪ ಗಟ್ಟಿಯಾಗುತ್ತಿದ್ದಂತೆ ರವೆಯನ್ನು ಚೆನ್ನಾಗಿ ಹುರಿದು ಮಿಶ್ರಣ ಮಾಡಿ. ತಳ ಬಿಡುವ ಹಂತಕ್ಕೆ ಬಂದಾಗ ಒಂದು ಚಮಚ ತುಪ್ಪ ಸೇರಿಸಿ. ಒಂದು ಪ್ಲೇಟಿಗೆ ಹಾಕಿ ತಣಿದ  ಕತ್ತರಿಸಿ.

ಕಡುಬು

ಬೇಕಾಗುವ ಸಾಮಗ್ರಿ:

ರವೆ 2 ಕಪ್, ಕಲ್ಲಂಗಡಿ ಹಣ್ಣಿನ ಬಿಳಿ ಭಾಗದ ತುರಿ ಎರಡು ಕಪ್, ಉಪ್ಪು, ಬೆಲ್ಲ ಸಿಹಿಗೆ, ಬಾಳೆ ಎಲೆ, ತುಪ್ಪ/ ಬೆಣ್ಣೆ

ತಯಾರಿಸುವ ವಿಧಾನ: ಮೊದಲು ರವೆಯನ್ನು ಚೆನ್ನಾಗಿ ಹುರಿದುಕೊಂಡು ತಣಿಯಲು ಬಿಡಿ. ಕಲ್ಲಂಗಡಿ ಹಣ್ಣಿನ ತುರಿದ ಭಾಗವನ್ನು ಸ್ವಲ್ಪ ಉಪ್ಪು ಮತ್ತು ಬೆಲ್ಲ ಹಾಕಿ ಬೇಯಿಸಿ. ನಂತರ ರವೆಗೆ ನೀರು ಹಾಕಿ ನೆನೆಸಿದ ರವೆಯನ್ನು ಬೇಯುತ್ತಿರುವ ತುರಿಗೆ ಹಾಕಿ ಮುದ್ದೆಯಾಗುವವರೆಗೂ ತೊಳೆಸಿ. ನಂತರ ಮುಚ್ಚಿಡಿ. ಆಮೇಲೆ ಸ್ವಲ್ಪ ತೆಗೆದುಕೊಂಡು ಬಾಳೆಲೆಯ ಮೇಲೆ ಹರಡಿ  ಮಡಚಿ ಉಗಿಯಲ್ಲಿ ಬೇಯಿಸಿ. ಇಡ್ಲಿ ಬೇಯಿಸಿದ ಹಾಗೆ. ನಂತರ ಬೆಣ್ಣೆ ಅಥವಾ  ತುಪ್ಪದೊಂದಿಗೆ ತಿನ್ನಲು ಕೊಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.