ಮಹಿಳೆಯರ ರಜೋನಿವೃತ್ತಿಯ (ಋತುಬಂಧ) ಬಗ್ಗೆ ಸಾಕಷ್ಟು ಚರ್ಚೆ- ಚಿಂತನೆಗಳು ನಡೆಯುತ್ತವೆ. ಆದರೆ, ಅದೇ ರೀತಿ ಪುರುಷರಲ್ಲೂ ಸಂಭವಿಸುವ ಒಂದು ಸ್ಥಿತಿ ಆಂಡ್ರೋಪಾಸ್. ಈ ಬಗ್ಗೆ ಹಿಂದಿನಿಂದಲೂ ಮೌನವೇ ಉತ್ತರವಾಗಿ ಬಂದಿದೆ. ಇತ್ತೀಚಿನ ದಿನಗಳಲ್ಲಿ ಪುರುಷರು ಬಹಳ ಬೇಗ ಆಂಡ್ರೋಪಾಸ್ ಸಂಬಂಧಿ ಸಮಸ್ಯೆಗಳಿಗೆ ಗುರಿಯಾಗುತ್ತಿದ್ದಾರೆ.
ಬದಲಾದ ಜೀವನ ಶೈಲಿ, ಒತ್ತಡದ ಬದುಕು, ಮಾಲಿನ್ಯ, ದೈಹಿಕ ಶ್ರಮದ ಕೊರತೆ ಮುಂತಾದ ಕಾರಣಗಳು ಪುರುಷರನ್ನು ಆಂಡ್ರೋಪಾಸ್ನತ್ತ ನೂಕುತ್ತಿವೆ. ಈ ಬಗ್ಗೆ ಗಮನ ಹರಿಸಲೇಬೇಕಾದ ಸಮಯ ಇದು...
ಮೊದಲು 50ರ ಆಸುಪಾಸಿನಲ್ಲಿ ಮಾತ್ರ ಪುರುಷರು ಆಂಡ್ರೋಪಾಸ್ ಲಕ್ಷಣಗಳನ್ನು ಅನುಭವಿಸುತ್ತಿದ್ದರು. ಆದರೆ ಈಚೆಗೆ ಜೀವನಶೈಲಿಗೆ ಸಂಬಂಧಿಸಿದ ತೊಡರುಗಳಿಂದಾಗಿ 30ರಲ್ಲೇ ಈ ಪ್ರಕ್ರಿಯೆಗೆ ಒಳಗಾಗುತ್ತಿದ್ದಾರೆ.
ಆಂಡ್ರೋಪಾಸ್ ಬಗ್ಗೆ ವಿವರಿಸಿ
ಲೈಂಗಿಕ ನಿಶ್ಶಕ್ತಿ, ಸ್ನಾಯು ಸೆಳೆತ, ಬೊಜ್ಜು, ಮನಃಸ್ಥಿತಿಯಲ್ಲಿ ದಿಢೀರ್ ಬದಲಾವಣೆ... ಇದೆಲ್ಲ ಆಂಡ್ರೋಪಾಸ್ ಚಿಹ್ನೆಗಳು. ಪುರುಷರ ಪ್ರಾಥಮಿಕ ಲೈಂಗಿಕ ಹಾರ್ಮೋನ್ ಟೆಸ್ಟೋಸ್ಟೆರಾನ್ನಲ್ಲಿ ಇಳಿಮುಖವಾದಾಗ ಈ ಎಲ್ಲ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ಪುರುಷರು ಕೂಡ ಕೆಲವು ಮನೋ-ದೈಹಿಕ ತೊಡಕುಗಳಿಗೆ ಗುರಿಯಾಗುತ್ತಾರೆ.
ಇದು ಸ್ತ್ರೀಯರ ರಜೋನಿವೃತ್ತಿಯಷ್ಟೇ ಸ್ವಾಭಾವಿಕ ಪ್ರಕ್ರಿಯೆ. ಆದಾಗ್ಯೂ ಇದರ ಲಕ್ಷಣ ಹಾಗೂ ಪರಿಹಾರ ಕ್ರಮಗಳ ಬಗ್ಗೆ ತಿಳಿದುಕೊಂಡಲ್ಲಿ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಬಹುದು.
50 ವರ್ಷ ಮೇಲ್ಪಟ್ಟ ವಯೋಮಾನದ ಶೇ 30ರಷ್ಟು ಪುರುಷರು ಈ ಕೆಳಗಿನ ಸ್ಥಿತಿಗಳನ್ನು ಎದುರಿಸುತ್ತಾರೆ ಎಂದು ಅಧ್ಯಯನವೊಂದು ವರದಿ ಮಾಡಿದೆ-
ಲೈಂಗಿಕ ಆಸಕ್ತಿಯಲ್ಲಿ ಇಳಿಕೆ- ಶೇ 91
ಲೈಂಗಿಕ ಸಾಮರ್ಥ್ಯ ಇಳಿಕೆ- ಶೇ 89
ನಿಮಿರುವಿಕೆ ತೊಂದರೆ- ಶೇ 79
ಜೋಂಪು ಹೋಗುವುದು- ಶೇ 70
ವಿಷಾದ ಅಥವಾ ಮುಂಗೋಪ ಚಿತ್ತ- ಶೇ 68
ಧಾರಣ ಶಕ್ತಿ ಇಳಿಮುಖ ಶೇ 66
ಕಾರ್ಯಕ್ಷಮತೆ ಕುಗ್ಗುವಿಕೆ ಶೇ 51
ಇದರಿಂದ ಪುರುಷರ ಸಂತಾನೋತ್ಪತ್ತಿ ಸಾಮರ್ಥ್ಯ ತಗ್ಗುತ್ತದೆಯೇ?
ಈ ಹಂತದಲ್ಲಿ ವೀರ್ಯ ಉತ್ಪಾದನೆ ಕ್ರಮೇಣ ಕಡಿಮೆ ಆಗುವುದು ನಿಜ. ಆದರೆ, ಸಂತಾನೋತ್ಪತ್ತಿ ನಿಂತೇ ಹೋಗುತ್ತದೆ ಎಂದು ಅರ್ಥವಲ್ಲ. ಆಂಡ್ರೋಪಾಸ್ ತಲುಪಿದ ನಂತರವೂ 90 ವರ್ಷದವರೆಗೂ ಸಂತಾನೋತ್ಪತ್ತಿ ಸಾಮರ್ಥ್ಯವನ್ನು ಉಳಿಸಿಕೊಂಡವರೂ ಇದ್ದಾರೆ.
ಆಂಡ್ರೋಪಾಸ್ಗೆ ಕಾರಣಗಳು ಯಾವುವು?
ಪುರುಷರ ಈ ಸ್ಥಿತಿಗೆ ಮಹಿಳೆಯರಿಗೆ ಇರುವಂತೆ ನಿರ್ದಿಷ್ಟವಾದ ಲಕ್ಷಣಗಳು ಅಥವಾ ಕಾರಣಗಳು ಇಲ್ಲ. ಕೇವಲ ವಯಸ್ಸಿನ ಕಾರಣದಿಂದ ಪುರುಷ ಆಂಡ್ರೋಪಾಸ್ ತಲುಪುತ್ತಾನೆ ಎಂದರೆ ಅದೊಂದು ಆರೋಗ್ಯಕರ ಬದಲಾವಣೆಯಷ್ಟೆ. ಆದರೆ ಅನೇಕ ಸಂದರ್ಭಗಳಲ್ಲಿ ಇತರ ಅಂಶಗಳೂ ಆಂಡ್ರೋಪಾಸ್ಗೆ ಕಾರಣವಾಗುತ್ತವೆ. ಅವುಗಳೆಂದರೆ-
* ಮಸ್ತಿಷ್ಕನಿಮ್ನಾಂಗ ಜಡತೆ (hypothalamic sluggishness)
* ಹಾರ್ಮೋನ್ ನ್ಯೂನತೆಗಳು
* ವಿಪರೀತ ಮದ್ಯ ಸೇವನೆ, ಧೂಮಪಾನ
* ಸ್ಥೂಲಕಾಯ
* ಕೆಲವು ಔಷಧಗಳು
* ಕೆಲವು ಪ್ರಕಾರದ ಶಸ್ತ್ರಚಿಕಿತ್ಸೆಗಳು
ಆಂಡ್ರೋಪಾಸ್ ಲಕ್ಷಣಗಳೇನು?
* ಲೈಂಗಿಕ ಆಸಕ್ತಿಯಲ್ಲಿ ಕೊರತೆ
* ನಿದ್ರಾಹೀನತೆ
* ದುರ್ಬಲ ಮೂಳೆಗಳು
* ಸ್ನಾಯು ಶಕ್ತಿ ನಷ್ಟ
* ದೇಹದ ಮೇಲ್ಭಾಗ ಮತ್ತು ಕೇಂದ್ರ ಭಾಗದಲ್ಲಿ ಕೊಬ್ಬು ಹೆಚ್ಚಳ
* ವರ್ತನೆಯ ಬದಲಾವಣೆಗಳು
* ಹೃದಯ ರಕ್ತನಾಳಗಳ ಅಪಾಯ
ತಪಾಸಣೆ ಮತ್ತು ಚಿಕಿತ್ಸೆಗಳೇನು?
ಈ ಮೇಲಿನ ಲಕ್ಷಣಗಳು ಕಂಡುಬಂದಾಗ ವೈದ್ಯರನ್ನು ಕಾಣಬೇಕು. ಆಗ ಟೆಸ್ಟೋಸ್ಟೆರಾನ್ ಹಾರ್ಮೋನ್ ಪರಿಶೀಲಿಸಲು ರಕ್ತ ಪರೀಕ್ಷೆ ನಡೆಸಲಾಗುತ್ತದೆ. ನಂತರ ಈ ಬದಲಾವಣೆ ಸ್ವಾಭಾವಿಕವೇ ಅಥವಾ ಅಸ್ವಾಭಾವಿಕವೇ ಎಂಬುದನ್ನು ವೈದ್ಯರು ನಿರ್ಧರಿಸುತ್ತಾರೆ.
ಇಳಿಮುಖವಾದ ಟೆಸ್ಟೋಸ್ಟೆರಾನ್ನ್ನು ಸುಸ್ಥಿತಿಗೆ ತರುವುದು ಹೇಗೆ? ಇತರ ಪರಿಹಾರ, ಚಿಕಿತ್ಸೆ ಏನಿದೆ?
ಟೆಸ್ಟೋಸ್ಟೆರಾನ್ ಬದಲಿ ಚಿಕಿತ್ಸೆಯನ್ನು ಹೆಚ್ಚು ಪರಿಣಾಮಕಾರಿ ಎಂದು ಗುರುತಿಸಲಾಗಿದೆ. ಅನೇಕ ಪ್ರಕರಣಗಳಲ್ಲಿ ಈ ಚಿಕಿತ್ಸೆ ಆಂಡ್ರೋಪಾಸ್ ಲಕ್ಷಣಗಳನ್ನು ನಿರ್ವಹಿಸುವುದರ ಜೊತೆಗೆ ಜೀವನದ ಗುಣಮಟ್ಟವನ್ನು ಕಾಪಾಡುವಲ್ಲಿ ನೆರವಾಗಿದೆ.
ಟೆಸ್ಟೋಸ್ಟೆರಾನ್ ಚಿಕಿತ್ಸೆಯನ್ನು ವಿವಿಧ ಪ್ರಕಾರಗಳಲ್ಲಿ ನೀಡಬಹುದು. ಅದು ಚರ್ಮದ ಪಟ್ಟಿಗಳು, ಮಾತ್ರೆಗಳು, ಜೆಲ್ ಹಾಗೂ ಇಂಜೆಕ್ಷನ್ ರೂಪಗಳಲ್ಲಿ ಲಭ್ಯ ಇದೆ.
ಈ ಚಿಕಿತ್ಸೆಯಿಂದ ಏನಾದರೂ ಅಪಾಯಗಳಿವೆಯೇ?
ಹೌದು, ಕೆಲವು ವೈದ್ಯಕೀಯ ಸ್ಥಿತಿಯಲ್ಲಿ ಇರುವವರಿಗೆ ಇದು ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆ ಇರುತ್ತದೆ. ಪ್ರಾಸ್ಟೇಟ್ (ಜನನೇಂದ್ರಿಯ ಗ್ರಂಥಿ) ಅಥವಾ ಸ್ತನ ಕ್ಯಾನ್ಸರ್, ಹೃದಯ ಸಂಬಂಧಿ ಅಥವಾ ಮೂತ್ರಪಿಂಡ ಸಮಸ್ಯೆಗಳಿಂದ ಬಳಲುವವರಿಗೆ ಈ ಚಿಕಿತ್ಸೆ ಅಡ್ಡ ಪರಿಣಾಮಗಳನ್ನು ಬೀರಬಹುದು.
ಮುಂಜಾಗ್ರತೆ ಹೇಗೆ?
ಮೊದಲು ಜೀವನಶೈಲಿಯಲ್ಲಿ ಬದಲಾವಣೆ ತರುವುದು ಮುಖ್ಯ. ಪೌಷ್ಟಿಕ ಆಹಾರ, ವ್ಯಾಯಾಮ, ದೈಹಿಕ ಚಟುವಟಿಕೆ, ಒತ್ತಡದಿಂದ ಬಿಡುಗಡೆ ಮುಂತಾದ ಬದಲಾವಣೆಗಳಿಂದ ಆರೋಗ್ಯಕರ ಜೀವನ ನಡೆಸಬಹುದು.
-ಡಾ. ಎಂ.ಬಿ.ರಾಮಮೂರ್ತಿ. ಸಮುದಾಯ ಆರೋಗ್ಯ ಸೇವೆ .
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.