ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ಆಡುವ ಆಟಗಳಲ್ಲಿ ಸೋತರೆ ತಕ್ಷಣವೇ ಹೊಸ ಆಟವನ್ನು ಪ್ರಾರಂಭಿಸಬಹುದು. ಆದರೆ ಜೀವನದ ಆಟ ಹಾಗಲ್ಲ. ಇಲ್ಲಿ ಪ್ರತಿಯೊಂದು ಸೋಲಿಗೂ ಬೆಲೆ ತೆರಲೇಬೇಕು. ಆ ಬೆಲೆ ಏನಾದರೂ ಆಗಿರಬಹುದು; ಸಮಯ, ಹಣ, ನಂಬಿಕೆ, ಮರ್ಯಾದೆ ಹೀಗೆ. ಕೆಲವು ಸೋಲಿನ ಹೊಡೆತಗಳು ನಮ್ಮನ್ನು ಮಗುಚಿ ಬೀಳಿಸಿ ಹೋಗಿರುತ್ತವೆ. ಚೇತರಿಸಿಕೊಳ್ಳುವ ಮೊದಲು ಅದೆಷ್ಟು ಯಾತನೆ, ಅವಮಾನ ಅನುಭವಿಸುತ್ತೇವೆ! ಕೆಲವರಂತೂ ಒಮ್ಮೆ ಸೋಲುಂಡರೆ ಮತ್ತೆಂದೂ ಯಾವ ಸಾಹಸಕ್ಕೂ ಕೈ ಹಾಕದೆ, ತಮ್ಮ ಅಷ್ಟೂ ಕ್ರಿಯಾಶೀಲತೆಯನ್ನು ಕೊಂದು ಸುಮ್ಮನಾಗಿಬಿಡುತ್ತಾರೆ.
ಹಲವರು ಈಗಾಗಲೇ ಮಗುಚಿ ಬಿದ್ದಿರುವ ತಮ್ಮ ಯಶಸ್ಸಿನ ಕಟ್ಟಡದ ಬಗ್ಗೆಯೇ ಇಲ್ಲದ ಕನಸನ್ನು ಕಾಣುತೊಡಗುತ್ತಾರೆ. ‘ಛೇ! ನಾನು ಹಾಗೆ ಮಾಡದೇ ಹೀಗೆ ಮಾಡಿದ್ದಿದ್ದರೆ ಗೆಲ್ಲುತ್ತಿದ್ದೆ’ ಎಂದು ಸೋತಾಗ ಹಲುಬುವವರಿದ್ದಾರೆ. ಯೋಚಿಸಿದರೆ ತಿಳಿಯುತ್ತದೆ, ಯಾವುದೇ ಸಂದರ್ಭವೂ ಮತ್ತೊಮ್ಮೆ ಘಟಿಸಲಾರದು. ಆದರೂ ನಮಗೆ ಕೆಲವೊಮ್ಮೆ ಸೋಲನ್ನು ಅಷ್ಟು ಸುಲಭವಾಗಿ ಅರಗಿಸಿಕೊಳ್ಳಲು ಸಾಧ್ಯವಾಗುವುದೇ ಇಲ್ಲ.
ನಮಗೆ ಸೋಲುಂಟಾದಾಗ ನಮ್ಮ ಸೋಲು ಗೆಲುವಿನ ಮೆಟ್ಟಿಲು ಎಂಬುದನ್ನು ಮರೆಯಬಾರದು. ಆದರೆ ನಾವು ಅದನ್ನು ಮರೆತು ಚಿಂತೆಯೆಂಬ ಕತ್ತಲನ್ನು ಸೇರಿ ಮಾನಸಿಕ ಕ್ಲೇಶಕ್ಕೊಳಗಾಗುತ್ತೇವೆ. ಈ ಚಿಂತೆ ನಮ್ಮನ್ನು ಸೋಲಿನ ಕೂಪಕ್ಕೆ ತಳ್ಳುತ್ತದೆ ಎನ್ನುವ ವಿವೇಚನಶಕ್ತಿಯನ್ನೇ ಕಳೆದುಕೊಳ್ಳುತ್ತೇವೆ. ಆದ್ದರಿಂದ ಸೋಲುಂಟಾದಾಗ ಮಾಡಬೇಕಾದುದ್ದಿಷ್ಟೇ: ’ಸೋಲಿನಲ್ಲೂ ನಗುವವರನ್ನೂ ಎಂದಿಗೂ ಸೋಲಿಸಲಾಗದು’ – ಈ ವಾಕ್ಯವನ್ನು ಪದೇ ಪದೇ ಮನಸ್ಸಿಗೆ ತಂದುಕೊಳ್ಳಬೇಕು.
ಸೋಲಿನ ಬೆನ್ನಲ್ಲೇ ಮತ್ತೊಂದು ಗೆಲುವಿಗೆ ಅಣಿಯಾಗಬೇಕು. ಹೆಚ್ಚಿನ ಸಂದರ್ಭಗಳಲ್ಲಿ ಮುಂದಿನ ಗೆಲುವನ್ನು ನಿಶ್ಚಯ ಮಾಡುವ ಭರದಲ್ಲಿ ಹಟಕ್ಕೆ ಬೀಳುವ ಮನಸ್ಸು ಯೋಜನೆಗೆ ಬದಲಾಗಿ ಕನಸಿನಲ್ಲಿಯೇ ಮುಂದಿನ ಯಶಸ್ಸು ಎಂಬ ಕಲ್ಪನೆಯನ್ನು ಅದೆಷ್ಟು ಸುಂದರವಾಗಿ ಕಟ್ಟಿಕೊಳ್ಳುತ್ತದೆ?! ಮುಂದೆ ದೊಡ್ಡದೊಂದು ಯಶಸ್ಸು ನಮಗಾಗಿಯೇ ರತ್ನಗಂಬಳಿ ಹಾಸಿ ಕಾದಿರುವಂತೆ ಕಲ್ಪಿಸಿಕೊಳ್ಳುತ್ತೇವೆ. ಈ ಕಲ್ಪನೆ ಅಥವಾ ಕನಸು ನಮ್ಮನ್ನು ಮತ್ತೊಂದು ಸೋಲಿಗೆ ದೂಡುವ ಅವಕಾಶ ಇರುತ್ತದೆ. ಈ ಸಮಯದಲ್ಲಿ ಕೊಂಚವಾದರೂ ವಾಸ್ತವವನ್ನು ವಿವೇಚಿಸದೆ ಹೋದರೆ ಬದುಕಿಗೆ ಮತ್ತೊಂದು ಹೊಡೆತ ಗ್ಯಾರಂಟಿ.
ಹಾಗೆಂದು ಮುಂದಿನ ಯಶಸ್ಸಿನ ಕನಸು ಕಾಣಬಾರದೆ? ಈ ಪ್ರಶ್ನೆ ಸಹಜ. ಖಂಡಿತ ಹಾಗೇನಿಲ್ಲ. ಸೋಲಿನ ದವಡೆಯಲ್ಲಿರುವ ಮನುಷ್ಯನಿಗೆ ಸಮಾಧಾನ ನೀಡುವ ಏಕೈಕ ದಾರಿಯೇ ಕನಸು ಕಾಣುವುದು. ಸುಳ್ಳಾದ ಒಂದು ಸುಭದ್ರ ಯಶಸ್ಸಿನ ಕೋಟೆಯನ್ನು ನಿರ್ಮಿಸಿಕೊಳ್ಳಬಹುದು. ಆದರೆ ಜಗತ್ತಿನ ಕ್ರೂರಿಯಾದ ವಾಸ್ತವ ಎಂಬುದೊಂದಿದೆಯಲ್ಲ ಅದು ನಮ್ಮನ್ನು ಎಷ್ಟೆಲ್ಲ ಜನರ ನಡುವೆಯೂ ನಗ್ನರನ್ನಾಗಿಸಿಬಿಡುತ್ತದೆ.
ಸೋಲು ಎದುರಾದ ಬಳಿಕ ‘ಹೀಗಾಗಿ ಹೋಯಿತಲ್ಲ?’ ಎಂದು ಚಿಂತಿಸುವುದಕ್ಕಿಂತ ‘ಏಕೆ ಹೀಗಾಯ್ತು?’ ಎಂದು ಯೋಚಿಸಿದರೆ ಒಳ್ಳೆಯದು. ಆದರೆ ಆಗಿಹೋಗಿರುವ ಒಂದು ಸೋಲನ್ನೇ ಹಿಡಿದು ಜೋತಾಡುತ್ತಿದ್ದರೆ ಹೇಗೆ? ಅದರ ಬಗ್ಗೆ ಮತ್ತೆ ಮತ್ತೆ ತಲೆಬಿಸಿ ಮಾಡಿಕೊಂಡು ಪ್ರಯೋಜನವೇನು?
ಸೋಲು, ಗೆಲುವು, ಕನಸು, ಕಲ್ಪನೆ, ವಾಸ್ತವ – ಇವೆಲ್ಲವೂ ಮನುಷ್ಯನ ಜೊತೆಗೇ ಬರುವ ಜೊತೆಗಾರರು. ಇವುಗಳಲ್ಲಿ ಯಾವುದು ಯಾರಿಗೆ ಹೇಗೆ ಸಿಗುತ್ತದೆಯೋ ಗೊತ್ತಿಲ್ಲ. ಆದರೆ ಸೋತಾಗ ಗೆಲುವಿನ ಆಸೆ ಬಿಡದೆ, ಗೆದ್ದಾಗ ಹೆಮ್ಮೆಯಿಂದ ಬೀರದೆ, ಗೆಲುವಿನ ಕನಸನ್ನೇ ಕಾಣುತ್ತಾ ವಾಸ್ತವವನ್ನು ಅರಿಯದೇ ಕಲ್ಪನೆಯಲ್ಲೇ ಜೀವನ ಸಾಗಿಸುವುದು ಸರಿಯಲ್ಲ. ಈ ಎಲ್ಲವನ್ನೂ ಅರ್ಥ ಮಾಡಿಕೊಂಡು ಬಾಳಿದರೆ ಗೆಲುವು ಕಟ್ಟಿಟ್ಟ ಬುತ್ತಿ. ಕಲ್ಪನೆ, ವಾಸ್ತವದ ನಡುವೆ ಸೋಲು ಮತ್ತು ಯಶಸ್ಸು ಎರಡೂ ಸಿಗುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.