ನನ್ನ ಬಳಿ ಮಹಿಳೆಯೊಬ್ಬರು ಸಮಸ್ಯೆಯೊಂದನ್ನು ಹೊತ್ತು ಬಂದಿದ್ದರು. ಆಕೆ ವಕೀಲೆ. 36 ವಯಸ್ಸು. ಅವರ ಗರ್ಭಕೋಶದ ಒಳಪದರ (ಎಂಡೋಮೆಟ್ರಿಯಂ) ತೆಳುವಾಗಿದ್ದು, ಇದರಿಂದ ಮಕ್ಕಳನ್ನು ಪಡೆಯಲು ಸಾಧ್ಯವಾಗಿರಲಿಲ್ಲ. ಅವರಿಗೆ ಬಾಡಿಗೆ ತಾಯ್ತನದ ಮೊರೆ ಹೋಗಲು ತಿಳಿಸಲಾಗಿತ್ತು. ಆದರೆ ಆಶ್ಚರ್ಯವೆಂಬಂತೆ ಆಕೆ ನೈಸರ್ಗಿಕವಾಗಿ ಗರ್ಭ ಧರಿಸಿದರು. ಆರು ತಿಂಗಳ ನಂತರ ಅವರಿಗೆ ಎಕ್ಸ್‌ಪೆರಿಮೆಂಟಲ್ ಥೆರಪಿ ಚಿಕಿತ್ಸೆ ನೀಡಲಾಯಿತು. ಅದು ಅವರ ಎಂಡೋಮೆಟ್ರಿಯಂ ಸಮಸ್ಯೆಯನ್ನು ತಿರುಗಿಸಿತ್ತು. ಅವರು ಇದೀಗ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಎಂಡೋಮೆಟ್ರಿಯಂ ಗರ್ಭಧಾರಣೆ ಪ್ರಕ್ರಿಯೆಯಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜಿ (ಎಆರ್‌ಟಿ) ಚಿಕಿತ್ಸೆ ಪ್ರಕ್ರಿಯೆಯಲ್ಲಿ, ಎಂಡೋಮೆಟ್ರಿಯಲ್‌ಗಳ ಅಪಕ್ವ ಬೆಳವಣಿಗೆಯಿಂದಾಗಿ ಕೆಲವು ಸುತ್ತುಗಳ ಚಿಕಿತ್ಸೆ ಸಾಧ್ಯವಾಗುವುದಿಲ್ಲ.
ಭ್ರೂಣ ಅಳವಡಿಕೆಯು ಯಶಸ್ವಿಯಾಗಬೇಕಾದರೆ, ಭ್ರೂಣದ ಬೆಳವಣಿಗೆ ಜೊತೆಗೆ ಎಂಡೋಮೆಟ್ರಿಯಂ ಕೂಡ ಪಕ್ವವಾಗಿರಬೇಕಾಗುತ್ತದೆ. ವೈದ್ಯಕೀಯ ಅಭ್ಯಾಸದಲ್ಲಿ ಎಂಡೋಮೆಟ್ರಿಯಲ್ ಬೆಳವಣಿಗೆಯಿಂದಷ್ಟೇ ಭ್ರೂಣದ ಅಳವಡಿಕೆ ಯಶಸ್ವಿ ಸಾಧ್ಯವಾಗುತ್ತದೆ. ಐವಿಎಫ್‌ನ ಕೊನೆಯ ಹಂತದಲ್ಲಿ ಭ್ರೂಣದ ವರ್ಗಾವಣೆಗೆ ಎಂಡೋಮೆಟ್ರಿಯಲ್‌ನ ಪದರ 8 ಎಂ.ಎಂ. ಇರುವುದು ಕಡ್ಡಾಯ.
ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಿಕ್ ವಿಧಾನದಲ್ಲಿ ಗರ್ಭಕೋಶದ ತೆಳುವಾದ ಪದರವು ಚಿಕಿತ್ಸೆಗೆ ಸವಾಲಾಗುತ್ತವೆ. ಇದು ಭ್ರೂಣ ಅಳವಡಿಕೆಯ ಪ್ರಕ್ರಿಯೆಗೆ ತೊಡಕಾಗುತ್ತದೆ.
ಜೊತೆಗೆ ಈ ತೆಳುಪದರದ ಎಂಡೋಮೆಟ್ರಿಯಂನ ಚಿಕಿತ್ಸೆಗೆಂದು ಈಸ್ಟ್ರೋಜೆನ್, ಕಡಿಮೆ ಪ್ರಮಾಣ ಹೊಂದಿದ ಆಸ್ಪಿರಿನ್, ವಿಟಮಿನ್ ಇ ಮತ್ತು ವ್ಯಾಗಿನಲ್ ವಯಾಗ್ರ, ಎಲೆಕ್ಟ್ರೊ ಆಕ್ಯುಪಂಚರ್, ಗ್ರಾಮುಲೊಸೈಟ್ ಕೊಲೊನಿ ಸ್ಟಿಮುಲೇಷನ್ ಫ್ಯಾಕ್ಟರ್‌ನಂಥ ಹಲವು ತಂತ್ರಗಳನ್ನು ಅಭಿವೃದ್ಧಿಪಡಿಸಲಾಗಿದೆ.
ಆದರೆ ಈ ಚಿಕಿತ್ಸೆಗೆ ಸ್ಪಂದಿಸಿದ ಮಹಿಳೆಯರ ಸಂಖ್ಯೆಯೂ ಕಡಿಮೆಯಿದ್ದು, ಯಶಸ್ಸಿನ ಫಲಿತಾಂಶದ ಪ್ರಮಾಣ ಕಡಿಮೆಯೇ ಎನ್ನಬಹುದು.
ಪ್ಲೇಟ್‌ಲೆಟ್ ರಿಚ್ ಪ್ಲಾಸ್ಮಾ
ಪ್ಲೇಟ್‌ಲೆಟ್ ರಿಚ್ ಪ್ಲಾಸ್ಮಾ–ಪೆರಿಫೆರಲ್ ನಾಳದಿಂದ ತೆಗೆದ ರಕ್ತದಿಂದ ತಯಾರಿಸಲಾಗಿದ್ದು, ಇದನ್ನು ಆಸಿಡ್ ಸೈಟ್ರೇಟ್ ಡೆಕ್ಸ್‌ಟ್ರಾಸ್ ಸೊಲ್ಯೂಷನ್ ಎ ಹೆಪ್ಪುರೋಧಕ ಅಂಶದಲ್ಲಿ ಸಂಗ್ರಹಿಸಿಡಲಾಗುತ್ತದೆ. ರಕ್ತದ ಹಲವು ಅಂಗಗಳನ್ನು ವರ್ಗೀಕರಿಸುವ ಮೂಲಕ ಪ್ಲೇಟ್‌ಲೆಟ್‌ಗಳ ಸಂಖ್ಯೆಯನ್ನೂ ವೃದ್ಧಿಸುವ ಪ್ರಕ್ರಿಯೆ ನಡೆಯುತ್ತದೆ.
ಪಿಆರ್‌ಪಿ ಪದ್ಧತಿಯಲ್ಲಿ ಪ್ಲೇಟ್‌ಲೆಟ್‌ಗಳನ್ನು ಚುರುಕುಗೊಳಿಸುವ ಮೂಲಕ ಸೈಟೊಕೀನ್‌ಗಳು ಮತ್ತು ಬೆಳವಣಿಗೆಯ ಅಂಶಗಳು (ಜಿಎಫ್‌ಗಳು) ಜೈವಿಕ ಕ್ರಿಯೆಗೆ ಒಳಗಾಗಿ 10 ನಿಮಿಷದಲ್ಲಿ ಶೇಖರಣೆಗೊಳ್ಳುತ್ತವೆ. ಇದು ವ್ಯಾಸ್ಕುಲರ್ ಎಂಡೋಥೆಲಿಯಲ್ ಗ್ರೋತ್ ಫ್ಯಾಕ್ಟರ್ (VEGF), ಟ್ರಾನ್ಸ್‌ಫಾರ್ಮಿಂಗ್ ಗ್ರೋತ್ ಫ್ಯಾಕ್ಟರ್ (TGF), ಪ್ಲೇಟ್‌ಲೆಟ್ ಡಿರೈವ್ಡ್ ಗ್ರೋತ್ ಫ್ಯಾಕ್ಟರ್ (PDGF) ಹಾಗೂ ಎಪಿಡರ್ಮಲ್ ಗ್ರೋತ್ ಫ್ಯಾಕ್ಟರ್ (EGF)ನಂಥ ಬೆಳವಣಿಗೆಯ ಉಪಯುಕ್ತ ಅಂಶಗಳನ್ನು ಒಳಗೊಂಡಿರುತ್ತದೆ.
ಪ್ಲೇಟ್‌ಲೆಟ್ ರಿಚ್ ಪ್ಲಾಸ್ಮಾ ಗರ್ಭಧಾರಣೆಗೆ ಅವಕಾಶಗಳನ್ನೂ ನೀಡುತ್ತಿದೆ. ಮಣಿಪಾಲ್ ಫರ್ಟಿಲಿಟಿಯಲ್ಲಿ ಈ ಎಕ್ಸ್‌ಪೆರಿಮೆಂಟಲ್ ಥೆರಪಿಯನ್ನು ನೀಡುತ್ತಿದ್ದು, ಇತ್ತೀಚಿನ ಈ ತಂತ್ರಜ್ಞಾನ, ತೆಳು ಎಂಡೋಮೆಟ್ರಿಯಂನಂಥ ಸಮಸ್ಯೆ ಇರುವ ಮಹಿಳೆಯರೂ ಮಕ್ಕಳನ್ನು ಪಡೆಯುವಂತೆ ಮಾಡುತ್ತಿದೆ.
ಹೊಸ ಅಂಗಾಂಶದ ರಚನೆ ಹಾಗೂ ರಕ್ತನಾಳಗಳ ರಚನೆಗೆ ದೇಹವನ್ನು ಅಣಿಮಾಡುವುದು ಈ ಪ್ರಕ್ರಿಯೆ ಹಿಂದಿನ ತಂತ್ರ. ಗರ್ಭಾಶಯಕ್ಕೆ ಇಂಜೆಕ್ಟ್ ಮಾಡುವ ಮೂಲಕ ಕೋಶಗಳನ್ನು ಪ್ರಚೋದಿಸುತ್ತದೆ, ಇದು ಎಂಡೋಮೆಟ್ರಿಯಲ್ ಪುನರುತ್ಪಾದನೆಗೆ ಸಹಕಾರಿಯಾಗುತ್ತದೆ.
ತೆಳು ಎಂಡೋಮೆಟ್ರಿಯಂ ಪದರದ ಸಮಸ್ಯೆ ಹೊಂದಿರುವ ಮಹಿಳೆಯರಿಗೆ ಈ ಚಿಕಿತ್ಸೆ ಫಲಕಾರಿಯಾಗಬಲ್ಲದು. ಅತ್ಯಲ್ಪ ಋತುಚಕ್ರ ಹೊಂದಿರುವವರಿಗೆ, ಗಂಭೀರ ಸಮಸ್ಯೆಯುಳ್ಳ ಗರ್ಭಕೋಶದ ಪದರ–ಅಶರ್ಮಾನ್ ಸಿಂಡ್ರೋಮ್‌ಗೆ ಈ ಚಿಕಿತ್ಸೆ ಫಲಕಾರಿ.
ಗರ್ಭಕೋಶದ ಪದರ ಹಾಗೂ ದೋಷಗಳ ಸಾಧ್ಯತೆಯನ್ನು ಕಂಡುಕೊಂಡ ನಂತರ ಹಿಸ್ಟಿರೊಸ್ಕೊಪಿ ಸಮಯದಲ್ಲಿ ಇಂಜೆಕ್ಷನ್ ನೀಡಲಾಗುವುದು. ಈ ಥೆರಪಿ ಸುರಕ್ಷಿತ ಹಾಗೂ ವೆಚ್ಚವೂ ಕಡಿಮೆ, ನೈಸರ್ಗಿಕವೂ ಹೌದು. ಈ ಚಿಕಿತ್ಸೆಗೆಂದು ಸಿಂಥೆಟಿಕ್ ಅಂಶ ಬಳಸಿಕೊಳ್ಳುವ ಬದಲು ತಮ್ಮದೇ ಕೋಶಗಳನ್ನು ಬಳಸಿಕೊಳ್ಳುವುದರಿಂದ ರಕ್ತಸಂಬಂಧಿ ಸೋಂಕುಗಳಾದ ಹೆಪಟಿಟಿಸ್ ಹಾಗೂ ಎಚ್‌ಐವಿ ಹರಡುವ ಅಪಾಯವೂ ಇರುವುದಿಲ್ಲ.
ಫಲಿತಾಂಶ: ಈ ವಿಧಾನದಿಂದ ಉತ್ತಮ ಫಲಿತಾಂಶ ಲಭ್ಯವಿದ್ದರೂ ಖಾತರಿಯಿಲ್ಲ. ಬಾಡಿಗ ತಾಯ್ತನದ ಕಡೆ ಹೊರಳುವವರು ಇದೀಗ ಈ ಆಯ್ಕೆಯನ್ನು ಆರಿಸಿಕೊಳ್ಳುತ್ತಿದ್ದಾರೆ. ವೈದ್ಯರ ಬಳಿ ನಿಮ್ಮ ಈ ಸಮಸ್ಯೆಗೆ ಈ ಚಿಕಿತ್ಸೆಯ ಸಾಧ್ಯಸಾಧ್ಯತೆಯ ಕುರಿತು ಚರ್ಚಿಸುವುದೂ ಮುಖ್ಯವಾಗುತ್ತದೆ.
ಹೆಚ್ಚಿನ ಮಾಹಿತಿಗೆ: 9482798700
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.