ADVERTISEMENT

ನಿಫಾ ವೈರಾಣು: ಇರಲಿ ಗಮನ

ಕೆ.ಸಿ.ರಘು
Published 25 ಮೇ 2018, 19:30 IST
Last Updated 25 ಮೇ 2018, 19:30 IST
ನಿಫಾ ವೈರಾಣು: ಇರಲಿ ಗಮನ
ನಿಫಾ ವೈರಾಣು: ಇರಲಿ ಗಮನ   

‘ಸಾಜಿಸ್‍ಯಟ್ಟಾ, ನನ್ನ ಕಥೆ ಇನ್ನೇನು ಮುಗಿಯಿತು. ಕ್ಷಮಿಸು, ದಯಮಾಡಿ ಮಕ್ಕಳನ್ನು ಚೆನ್ನಾಗಿ ನೋಡಿಕೋ. ಕುಂಜುನನ್ನು ಗಲ್ಫ್‌ಗೆ ಕರೆದುಕೊಂಡು ಹೋಗು. ‌‌‌‌ನನ್ನ ತಂದೆಯ ಹಾಗೆ ಒಂಟಿಯಾಗಿರಬೇಡ. ನಿನ್ನ ಪ್ರೀತಿಯ ಉಮ್ಮ’. ಹೀಗೆ ಕೇರಳಾದ ದಾದಿ ಲಿನಿ, ನಿಫಾ ವೈರಸ್ ರೋಗಾಣುವಿನಿಂದ ಅಸುನೀಗುವ ಮೊದಲು ಚೀಟಿಯಲ್ಲಿ ತನ್ನ ಗಂಡನಿಗೆ ಬರೆದಿಟ್ಟಿದ್ದಳು. ಲಿನಿ ತನ್ನ ಜ್ವರವನ್ನು ಲೆಕ್ಕಿಸದೆ ನಿಫಾ ವೈರಸ್ ಸೋಂಕಿನಿಂದ ನರಳುತಿದ್ದ ಕೋಯಿಕ್ಕೋಡ್‌ ಆಸ್ಪತ್ರೆಯಲ್ಲಿಯ ರೋಗಿಗಳನ್ನು ಶುಶ್ರೂಷೆ ಮಾಡುತ್ತಾ ತಾನು ಸೋಂಕು ತಗುಲಿಸಿಕೊಂಡು ಮೃತಪಟ್ಟಳು.

‘ನಿಫಾ’ ವೈರಾಣು ಹಣ್ಣು ತಿನ್ನುವ ಬಾವಲಿಯಿಂದ ಹರಡುತ್ತದೆ ಎಂದು ಹೇಳಲಾಗುತ್ತಿದೆ. ಬಾವಲಿಯಿಂದ ಸಾಮಾನ್ಯವಾಗಿ ಈ ವೈರಾಣು ಹಂದಿಗಳಿಗೆ ಹರಡಿ ಅವುಗಳಿಂದ ಮನುಷ್ಯರಿಗೆ ಹರಡುತ್ತದೆ ಅಥವಾ ನೇರವಾಗಿ ಬಾವುಲಿ ಕಚ್ಚಿ ರಸ ಹೀರಿ ಬಿಟ್ಟ ಹಣ್ಣು ಮತ್ತು ಬಾವಲಿ ಮಲ, ಮೂತ್ರ ತಗುಲಿದ ಆಹಾರವನ್ನು ಸೇವಿಸಿದಾಗಲೂ ಈ ವೈರಾಣು ಮನುಷ್ಯರಿಗೆ ತಗುಲಬಹುದು. ನಂತರ ಮನುಷ್ಯರಿಂದ ಮನುಷ್ಯರಿಗೆ ಹರಡಬಹುದಾಗಿದೆ. ಈವರೆಗಿನ ಮಾಹಿತಿ ಮತ್ತು ಅನುಭವದ ಪ್ರಕಾರ ಇದು ಕೆಲವೇ ಸ್ಥಳಗಳಲ್ಲಿ ಕಾಣಿಸಿಕೊಂಡು ಸಂಪರ್ಕಕ್ಕೆ ಬಂದ ಸುತ್ತಮುತ್ತಲಿನ ಜನಕ್ಕೆ ಸೋಂಕು ತಗುಲಿಸಿ ಇದುವರೆಗೂ ಜಗತ್ತಿನಲ್ಲಿ ಸುಮಾರು 250ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ. ಮೊದಲ ಬಾರಿಗೆ 1998ರಲ್ಲಿ ಮಲೇಷ್ಯಾದ ‘ನಿಫಾ’ ಎಂಬ ಜಾಗದಲ್ಲಿ ಬಾವಲಿಯಿಂದ ಹಂದಿಗಳಿಗೆ ತಗುಲಿ ನಂತರ ಮನುಷ್ಯರಿಗೆ ಹರಡಿ 100 ಜನರನ್ನು ಬಲಿ ತೆಗೆದುಕೊಂಡಿತು. ಆಗ 10 ಲಕ್ಷ ಹಂದಿಗಳನ್ನು ಅಲ್ಲಿ ರೋಗ ತಡೆಗಟ್ಟಲು ಕೊಲ್ಲಲಾಯಿತು. ಈ ಸೊಂಕು ತಗುಲಿದ ಶೇ 70 ಜನರು ಬದುಕುವುದಿಲ್ಲ. ಈ ಕಾಯಿಲೆಗೆ ಔಷಧವಾಗಲಿ ಅಥವಾ ಲಸಿಕೆಯಾಗಲಿ ಇದುವರೆಗೆ ಕಂಡುಹಿಡಿದಿಲ್ಲ.

ಈ ರೋಗ ತಗುಲಿದವರನ್ನು ಸಾಮಾನ್ಯ ಶುಶ್ರೂಷೆ, ಶುದ್ಧ ವಾತಾವರಣ, ಸ್ವಚ್ಛತೆ, ಉತ್ತಣ ಪೌಷ್ಟಿಕ ಆಹಾರದಿಂದ ನೋಡಿಕೊಳ್ಳಬೇಕಾಗಿದೆ. ‘ರಿಬಾವಿರಾನ್’ ಮಾತ್ರೆ ಸ್ವಲ್ಪ ಮಟ್ಟಿಗೆ ಸಹಾಯಕಾರಿಯಾಗಬಹುದು ಎಂದು ಪರಿಗಣಿಸಲಾಗಿದೆ. ಮೊನೊಕ್ಲೊನಲ್ ಅ್ಯಂಟಿಬಾಡಿಸ್‍ನಿಂದ ತಯಾರಾದ ಲಸಿಕೆಯನ್ನು ಪ್ರಾಣಿಗಳ ಹಂತದಲ್ಲಿ ಪರೀಕ್ಷಿಸಲಾಗುತ್ತಿದೆ. ಈ ಮೊದಲು ಬಾಂಗ್ಲಾದೇಶ ಮತ್ತು ನಮ್ಮ ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಕಂಡು ಬಂದಿದ್ದು ಸುಮಾರು 50 ಮಂದಿ ಕಳೆದ ದಶಕದಲ್ಲಿ ಸಾವನ್ನಪ್ಪಿದ್ದಾರೆ. ಇಲ್ಲಿ ಕೆಲವರು ತಾಳೆಮರ ಅಥವಾ ಬಗುನಿಮರದ ಸೇಂದಿ ಕುಡಿದು ಸೋಂಕು ತಗುಲಿಸಿಕೊಂಡಿದ್ದರು. ಮರದಲ್ಲಿ ಮಡಿಕೆ ಕಟ್ಟಿ ಸೇಂದಿ ಇಳಿಸುವ ಪದ್ಧತಿಯಲ್ಲಿ ಸೇಂದಿಗೆ ಬಾವಲಿ ಹಿಕ್ಕೆ ಅಥವಾ ಮೂತ್ರ ಬಿದ್ದು ಅದರಿಂದ ಸೋಂಕು ಹರಡಿತ್ತು. ಅಮೆರಿಕದ ಹೆಸರಾಂತ ವೈದ್ಯಕೀಯ ಸಂಶೋಧನಾ ಕೇಂದ್ರ ಸಿ.ಡಿ.ಸಿ. ಪ್ರಕಾರ ಬಾಂಗ್ಲಾದಲ್ಲಿ ಪ್ರತಿ ವರ್ಷ ಈ ರೋಗ ಬಂದು ಹೋಗುತ್ತಿದೆ. ‌‌ಸ್ಥಳಿಯವಾಗಿ ಅಲ್ಪ ಕಾಲ ಉಲ್ಪಣಗೊಂಡು ಬಳಿಕ ಇದು ಮಾಯವಾಗುತ್ತಿದೆ ಎನ್ನಬಹುದು. ಆದರೂ ಈ ಸೋಂಕು ಮನುಷ್ಯನಿಂದ ಮನುಷ್ಯರಿಗೆ ಹರಡುವ ರೋಗವಾಗಿರುವುದರಿಂದ ಮತ್ತು ಔಷಧವಿಲ್ಲದ ರೋಗವಾಗಿರುವುದರಿಂದ ಅತ್ಯಂತ ಎಚ್ಚರಿಕೆ ಮತ್ತು ಜಾಗರೂಕತೆಯಿಂದ ಇರುವ ಎಲ್ಲ ರೀತಿಯ ವೈಜ್ಞಾನಿಕ ಸಾಧನ ಸಲಕರಣೆಯಿಂದ ಇದನ್ನು ಸ್ಥಳೀಯವಾಗಿ ಹತೋಟಿಯಲ್ಲಿಟ್ಟು ಹರಡದಂತೆ ನೋಡಿಕೊಳ್ಳಬೇಕಾಗಿದೆ.

ADVERTISEMENT

ಈ ರೋಗಾಣುವನ್ನು ಹರಡದಂತೆ ತಡೆಗಟ್ಟಲು ವಹಿಸುವ ಜೈವಿಕ ರಕ್ಷಣಾವಿಧಿಯನ್ನು ಅತ್ಯಂತ ಹೆಚ್ಚಿನ ಮಟ್ಟದ ನಾಲ್ಕನೇ ಹಂತ (biosecurity level - 4) ಎಂದು ಪರಿಗಣಿಸಲಾಗಿದೆ. ಆದರೆ ಮೊನ್ನೆ ಕೇರಳದ ಚಂಗರೊತ್ತು ಎಂಬಲ್ಲಿನ ಸಲೀಹ್‌ ಎಂಬುವವರು ಸಾವಿಗೀಡಾದಾಗ ಅವರ ಮನೆಯ ಹಿಂಬದಿಯಲ್ಲಿ ಬಾವಿಯಲ್ಲಿದ್ದ ಬಾವಲಿಯಿಂದ ರೋಗ ಹರಡಿರಬಹುದೆಂದು ದೃಢಪಡಿಸಲು ಅಲ್ಲಿ ಬಾವಲಿ ಹಿಡಿಯಲು ಜನ ಧರಿಸಿದ್ದ ಕೇವಲ ಮೂಗಿನ ಮಾಸ್ಕ್ ಮತ್ತು ಕೈಗೆ ಗ್ಲವ್ಸ್‌ ನೋಡಿದರೆ ಈ ವೈರಾಣುವಿನ ತೀವ್ರತೆಯಾಗಲೀ ಸೂಕ್ಷ್ಮತೆಯಾಗಲಿ ನಮ್ಮಲ್ಲಿ ತಿಳಿದಿಲ್ಲವೆನ್ನಬಹುದು. ಸೋಂಕು ತಗುಲಿರುವ ಕೇರಳದ ಊರಿನಿಂದ ಸುಮಾರು 250ಕಿ.ಮೀ. ದೂರದ ಮಂಗಳೂರಿನಲ್ಲೂ ಸೋಂಕು ತಗುಲಿರಬಹುದೆಂದು ಶಂಕಿಸಲಾಗುತ್ತಿದೆ. ಮಾನವನ ನಿತ್ಯ ಸುತ್ತಾಟ, ವಿಶ್ವಪರ್ಯಟನೆಗಳು ರೋಗ ಹರಡುವುದಕ್ಕೆ ಕಾರಣವಾಗುತ್ತಿದೆ.

ವೈರಾಣು ತನ್ನ ಜೈವಿಕ ಆಕಾರದಲ್ಲಿ ಮೊದಲಿಗಿಂತ ಬದಲಾವಣೆಯಾಗಿದೆಯೇ ಎನ್ನುವುದನ್ನು ದೃಢಪಡಿಸಿಕೊಳ್ಳಬೇಕಾಗಿದೆ. ಅಲ್ಲದೇ ಸಹಸ್ರಾರು ವರ್ಷಗಳ ಕಾಲ ಬಾವುಲಿಯೊಂದಿಗೆ ಅನ್ಯೋನ್ಯವಾಗಿ ಜೀವಕೋಶದ ಆಂತರ್ಯದಲ್ಲಿ ಹೊಂದಾಣಿಕೆಯಿಂದ ಬದುಕಿದ್ದ ನಿಫಾ ವೈರಾಣು ಹರಡಲು ಸುತ್ತಲಿನ ಪ್ರಕೃತಿನಾಶವೇ ಕಾರಣ ಎನ್ನಲಾಗುತ್ತಿದೆ. ಭಯಾನಕ ಎಬೋಲಾ, ಹೆಂಡ್ರಾ ಎಂಬ ವೈರಾಣು ಕೂಡ ಹರಡುವುದಕ್ಕೂ ಬಾವಲಿಗಳು ಕಾರಣವಾಗುತ್ತಿವೆ. ಎಡ್ಸ್ ವೈರಾಣು ಕೂಡ ಕಾಡಿನಿಂದ ಮಂಗನಿಂದ ಹರಡಿತು ಎಂದು ಹೇಳುವುದುಂಟು. ಪರಿಸರ ಮತ್ತು ಪ್ರಕೃತಿಯ ಬೆಸುಗೆಯು ಕೊಂಡಿ ಕಳಚಿ, ಹುದುಗಿದ್ದ ಹೆಡೆಯನ್ನು ನಾವು ತುಳಿದಿದ್ದೇವೆಯೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.