ಹುಡುಗಿಗೆ ಪರೀಕ್ಷೆಯಲ್ಲಿ 99 ಅಂಕ ಸಿಕ್ಕಿದ್ರೂ ತೃಪ್ತಿಯಿಲ್ಲ. ‘ಇನ್ನೊಂದು ಅಂಕ ಕೊಟ್ಟಿದ್ರೆ ಇವ್ರ ಗಂಟು ಹೋಗ್ತಿತ್ತಾ’ ಅಂತ ಗೊಣಗ್ತಾಳೆ. ಅದೇ ಹುಡುಗನಿಗೆ 36 ಅಂಕ ಬಂದರೆ ‘ಮೌಲ್ಯಮಾಪನ’ ಮಾಡ್ದೋನು ದೇವ್ರು ಕಣೋ ಮಗಾ’ ಅಂತ ಖುಷಿಯಿಂದ ಹೇಳ್ಕಂಡು ಓಡಾಡ್ತಾನೆ! ಹುಡುಗ ಹುಡುಗಿಯರ ಸಾಮಾನ್ಯ ಮನೋಭಾವನೆಯನ್ನು ನವಿರಾಗಿ ತೆರೆದಿಡುವ ಈ ಮಾತನ್ನು ಎಲ್ಲೋ ಓದಿದ್ದು ನೆನಪಾಗುತ್ತಿರುವ ಈ ಹೊತ್ತಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿ.ಯು.ಸಿ. ಫಲಿತಾಂಶ ಘೋಷಣೆಯ ದಿನ ಹತ್ತಿರವಾಗುತ್ತಿದೆ.
ಪರೀಕ್ಷೆಯಷ್ಟೇ ಅಲ್ಲ, ಫಲಿತಾಂಶದ ದಿನ ಸಮೀಪಿಸುತ್ತಿರುವಂತೆಯೂ ವಿದ್ಯಾರ್ಥಿಗಳು, ಪೋಷಕರ ಆತಂಕ ಏರತೊಡಗುತ್ತದೆ! ಹುಡುಗರಿಗೆ ಹೋಲಿಸಿದರೆ ಹುಡುಗಿಯರ ಮನಃಸ್ಥಿತಿ ತುಂಬಾ ಸೂಕ್ಷ್ಮ. ಹಾಗಾಗಿ ಫಲಿತಾಂಶ ಏನಾಗುವುದೋ ಎಂಬ ಭಯವೂ ಅವರಲ್ಲಿ ಜಾಸ್ತಿ. ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವಲ್ಲಿ ಈ ಪರೀಕ್ಷೆಗಳಿಗಿರುವ ಅತಿ ಮಹತ್ವವೇ ಒತ್ತಡ, ಭಯಕ್ಕೆ ಕಾರಣವಾಗುತ್ತಿರುವುದಂತೂ ಸತ್ಯ. ಈ ಮಾನಸಿಕ ಒತ್ತಡ, ಆತಂಕ ಎದುರಿಸಲಾಗದೆ ಅನಾಹುತ ಮಾಡಿಕೊಳ್ಳುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವುದು ನಿಜಕ್ಕೂ ಕಳವಳಕಾರಿ.
ಪರೀಕ್ಷೆಯಲ್ಲಿ ಪಾಸಾಗಿಲ್ಲವೆಂದೋ, ಇಲ್ಲ ನಿರೀಕ್ಷಿಸಿದಷ್ಟು ಅಂಕ ಬರಲಿಲ್ಲವೆಂದೋ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಏರುತ್ತಿದೆ. ಇನ್ನು ಕೆಲವರು ಫಲಿತಾಂಶ ಬರುವ ಮುಂಚೆಯೇ ಒಂದು ವೇಳೆ ಫೇಲಾದರೆ ಎಂದು ಹೆದರಿ ಜೀವ ತೆಗೆದುಕೊಳ್ಳುವುದುಂಟು. ನಂತರ ಇವರ ಫಲಿತಾಂಶ ಹೊರ ಬಂದಾಗ ಉತ್ತಮ ಅಂಕಗಳಿಸಿರುವ ಉದಾಹರಣೆಗಳೂ ನಮ್ಮ ಕಣ್ಣ ಮುಂದಿವೆ. ಫಲಿತಾಂಶ ಬಂದ ನಂತರ ಆತ್ಮಹತ್ಯೆ, ಮನೆ ಬಿಟ್ಟು ಓಡಿ ಹೋಗುವಂತಹ ಸುದ್ಧಿಗಳು ಈಗ ಪತ್ರಿಕೆಗಳಲ್ಲಿ ಸಾಮಾನ್ಯವಾಗಿವೆ.
ಎಸ್ಸೆಸ್ಸೆಲ್ಸಿ, ಪಿ.ಯು.ಸಿಯಲ್ಲಿ ಫೇಲಾಗುವುದು ದೊಡ್ಡ ಅವಮಾನವೆಂದು ಭಾವಿಸಿ ಜೀವಹಾನಿ ಮಾಡಿಕೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ಹೋಲಿಸಿದರೆ, ಮುಂದಿನ ಹಂತಗಳಲ್ಲಿ ಅಂದರೆ ಪದವಿ, ಸ್ನಾತಕೋತ್ತರ ಪದವಿ, ಕೆ.ಎ.ಎಸ್., ಐ.ಎ.ಎಸ್., ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಿ ಆತ್ಮಹತ್ಯೆಗೆ ಶರಣಾಗುವರ ಸಂಖ್ಯೆ ತುಂಬಾ ವಿರಳ. ಇದಕ್ಕೆ ಕಾರಣವೂ ಸ್ಪಷ್ಟ. ಎಸ್ಸೆಸ್ಸೆಲ್ಸಿ, ಪಿ.ಯು.ಸಿ ಜೀವನದ ಮಹತ್ತರ ಘಟ್ಟಗಳು.
ಇಲ್ಲಿ ಉತ್ತಮ ಫಲಿತಾಂಶ ಬಾರದಿದ್ದರೆ ಭವಿಷ್ಯಕ್ಕೆ ತೊಂದರೆಯೆಂದು ಹೆಚ್ಚು ಅಂಕಗಳಿಸುವಂತೆ ಪೋಷಕರು ಮಕ್ಕಳಿಗೆ ಒತ್ತಡ ಹೇರುವರು. ಜೊತೆಗೆ ಈ ಹಂತದಲ್ಲಿ ಮಕ್ಕಳು ಹದಿಹರಯದವರಾಗಿದ್ದು ಅವರ ಮಾನಸಿಕ ಬೆಳವಣಿಗೆ ಪೂರ್ಣಗೊಂಡಿರುವುದಿಲ್ಲ. ಮನಸ್ಸು ಪಕ್ವವಾಗಿರುವುದಿಲ್ಲ. ಸರಿ- ತಪ್ಪು, ಒಳಿತು-ಕೆಡುಕುಗಳ ಬಗ್ಗೆ ತಿಳುವಳಿಕೆಯೂ ಇರುವುದಿಲ್ಲ. ಕೆಲವರು ನಿರಾಸೆ, ಬೈಗುಳ, ಕೋಪ ತಡೆಯಲಾಗದೆ ಜೀವವನ್ನೇ ಬಲಿಕೊಡುವ ದುಸ್ಸಾಹಸಕ್ಕೆ ಇಳಿಯುವರು.
ಸರಿಯಾದ ಮಾರ್ಗದರ್ಶನದಿಂದ ಇಂತಹ ಅವಘಡಗಳನ್ನು ತಪ್ಪಿಸಬಹುದು. ಕೆಲವು ದೇಶಗಳಲ್ಲಿ ವಿದ್ಯಾರ್ಥಿಗಳು ಅನುತ್ತೀರ್ಣರಾದರೆ ಫೇಲ್ ಬದಲಿಗೆ ‘ಫಲಿತಾಂಶವನ್ನು ಮುಂದೂಡಲಾಗಿದೆ’ ಎಂದು ಘೋಷಿಸುತ್ತಾರೆ. ಇದು ಉತ್ತಮ ಕ್ರಮ. ಇಲ್ಲಿ ಮಕ್ಕಳು ಮಾನಸಿಕವಾಗಿ ಕುಗ್ಗುವುದಿಲ್ಲ. ಪರೀಕ್ಷೆಗಳೆಲ್ಲಾ ಮುಗಿದು ಮಕ್ಕಳ ಜೊತೆಗೆ ಪೋಷಕರು ನಿರಾಳರಾಗಿ ರಜೆಯ ಮಜವನ್ನು ಸವಿಯುತ್ತಿರುವ ಸಮಯವಿದು. ವರ್ತಮಾನ ಪತ್ರಿಕೆ/ಟೀವಿಯಲ್ಲಿ ಪರೀಕ್ಷಾ ಫಲಿತಾಂಶದ ದಿನಾಂಕ ಪ್ರಕಟಗೊಳ್ಳುತ್ತಿದ್ದಂತೆ ಇಬ್ಬರೂ ಒತ್ತಡಕ್ಕೊಳಗಾಗುವರು.
ಇಂದು ಎಷ್ಟೇ ಅಂಕಗಳಿಸಿದರೂ ಉತ್ತಮ ಕಾಲೇಜಿನಲ್ಲಿ, ಬಯಕೆಯ ಕೋರ್ಸ್‌ಗೆ ಪ್ರವೇಶ ಪಡೆಯುವುದು ತುಂಬಾ ಕಷ್ಟ. ಅಂಕ ಗಳಿಕೆ ಹಾಗು ಸೀಟು ಗಿಟ್ಟಿಸಿಕೊಳ್ಳುವಲ್ಲಿ ಬಾರಿ ಪೈಪೋಟಿಯಿದೆ. ಒಳ್ಳೆಯ ಅಂಕ ಪಡೆದು, ಹೆಸರು ಮಾಡಿದ ಕಾಲೇಜಿನಲ್ಲಿ ಸೀಟು ದೊರೆಯುವವರೆಗೂ ಈ ಒತ್ತಡ ಮುಂದುವರೆಯುತ್ತದೆ. ವೃತ್ತಿ ಶಿಕ್ಷಣದಂತಹ ಕೋರ್ಸ್‌ಗಳಲ್ಲಂತೂ ಈ ಒತ್ತಡ ಇನ್ನೂ ಜಾಸ್ತಿ. ಹಾಗಂತ ಮಕ್ಕಳ ಮೇಲೆ ಅಂಕಗಳಿಸಲು ಒತ್ತಡ ಹಾಕಿದರೆ ಉತ್ತಮ ಫಲಿತಾಂಶ ಬಾರದಿದ್ದಾಗ ನಿರಾಸೆಗೊಂಡು ಅನಾಹುತ ಮಾಡಿಕೊಳ್ಳುವರು.
ಪರೀಕ್ಷೆಗೂ ಮುನ್ನ ಸಾಕಷ್ಟು ಶ್ರಮ ಹಾಕಿ ಉತ್ತಮ ಅಂಕಗಳಿಸುವ ಪ್ರಯತ್ನ ಮಾಡಬೇಕು. ಪರೀಕ್ಷೆ ಮುಗಿದ ನಂತರ ಫಲಿತಾಂಶದ ಬಗ್ಗೆ ತಲೆ ಕೆಡಿಸಿಕೊಳ್ಳದೆ ಬಂದದ್ದನ್ನು ಬಂದಂತೆ ಸ್ವೀಕರಿಸುವ ಸಕಾರಾತ್ಮಕ ಮನೋಭಾವನೆಯನ್ನು ಮಕ್ಕಳಲ್ಲಿ ಬೆಳೆಸುವ ಜವಾಬ್ದಾರಿ ಪೋಷಕರದು. ಮಕ್ಕಳಿಗೆ ಯಾವುದೇ ರೀತಿಯ ಒತ್ತಡವನ್ನು ಹಾಕದೆ, ಬೇರೊಬ್ಬರೊಂದಿಗೆ ಹೋಲಿಸದೆ, ದಡ್ಡರೆಂದು ಹೀಯಾಳಿಸದೆ, ರಿಸಲ್ಟ್ ನೋಡಿ ತಾವೇ ನಿರಾಶೆ ವ್ಯಕ್ತಪಡಿಸುವುದು, ಬೈಯುವಂತಹ ಕೆಲಸ ಮಾಡಬಾರದು.
ಫಲಿತಾಂಶದ ದಿನ ಮಕ್ಕಳನ್ನು ಒಂಟಿಯಾಗಿ ಬಿಡದೆ ಪೋಷಕರು ಜೊತೆಯಲ್ಲಿದ್ದು ವಿಶ್ವಾಸ ತುಂಬುವುದು ಒಳ್ಳೆಯದು. ಇಂದು ಶಾಲಾ, ಕಾಲೇಜುಗಳಲ್ಲಿ ಫಲಿತಾಂಶ ಘೋಷಣೆಯಾಗುವ ಮೊದಲೇ ವೆಬ್‌ಸೈಟ್‌ಗಳಲ್ಲಿ ಫಲಿತಾಂಶ ಹಾಕುತ್ತಾರೆ. ಮನೆಯಲ್ಲೇ ಅಂತರ್ಜಾಲದ ಸಂಪರ್ಕವಿದ್ದರೆ ಮೊಬೈಲ್, ಕಂಪ್ಯೂಟರ್‌ಗಳಲ್ಲಿ ಫಲಿತಾಂಶ ನೋಡಬಹುದು. ಇದು ಮಕ್ಕಳೊಟ್ಟಿಗೆ ಪೋಷಕರೂ ಫಲಿತಾಂಶ ವೀಕ್ಷಿಸಲು ಸಹಕಾರಿ. ನಿರೀಕ್ಷಿಸಿದ ಫಲಿತಾಂಶ ಬರದಿದ್ದಲ್ಲಿ ಮಕ್ಕಳು ಕುಗ್ಗುವಂತೆ ವರ್ತಿಸದೆ ಸಕಾರಾತ್ಮಕವಾದ ಮಾತುಗಳನ್ನಾಡಿ ಪ್ರೋತ್ಸಾಹಿಸಬೇಕು.
ಒಂದು ವೇಳೆ ಅನುತ್ತೀರ್ಣರಾಗಿದ್ದರೆ ಅವರಿಗೆ ಆತ್ಮಸ್ಥೈರ್ಯ ತುಂಬಿ ಮುಂದಿನ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದುವಂತೆ ಪ್ರೇರೇಪಿಸಬೇಕು. ಅವರ ದುಃಖ, ಆಕ್ರೋಶಗಳನ್ನು ತಾಳ್ಮೆಯಿಂದ ಆಲಿಸಿ ಸಮಾಧಾನಿಸಬೇಕು. ಈ ಅವಧಿಯಲ್ಲಿ ಮಕ್ಕಳು ಯಾರೊಟ್ಟಿಗೂ ಮಾತನಾಡದೆ ಒಮ್ಮೆಲೆ ಮಂಕಾದರೆ, ಖಿನ್ನರಾದರೆ ಅವರನ್ನು ಒಂಟಿಯಾಗಿ ಬಿಡದೆ ಜೊತೆಯಲ್ಲಿರುವುದು ಒಳ್ಳೆಯದು. ಮಕ್ಕಳೇ, ಈ ಜೀವ ಅಮೂಲ್ಯ.
ಪ್ರೀತಿಯಿಂದ ಹೆತ್ತು ಹೊತ್ತು ಸಾಕಿ ಸಲಹಿದ ತಂದೆತಾಯಿಗಳಿಗೆ ಆತ್ಮಹತ್ಯೆಯ ಆಘಾತ ನೀಡಬೇಡಿ. ಒಂದು ಕ್ಷಣ ಹೆತ್ತವರ ಸ್ಥಾನದಲ್ಲಿ ನಿಂತು ನೋಡಿ, ನಿಮ್ಮನ್ನು ಕಳೆದುಕೊಂಡು ಜೀವನಪೂರ್ತಿ ಎಂತಹ ನೋವನ್ನು ಅನುಭವಿಸುವರು ಎಂಬ ಅರಿವಾಗುವುದು. ಶಾಲಾ-ಕಾಲೇಜಿನಿಂದ ಬರುವುದು ಸ್ವಲ್ಪ ತಡವಾದರೂ ಚಡಪಡಿಸುವ ಪೋಷಕರು ನೀವಿಲ್ಲದೆ ನಿಮ್ಮ ನೆನಪಿನಲ್ಲೇ ಜೀವನ ಪೂರ್ತಿ ಕಳೆಯುವುದು ತುಂಬಾ ನೋವನ್ನುಂಟುಮಾಡುವ ಸಂಗತಿ. ಪರೀಕ್ಷೆಯೇ ಜೀವನವಲ್ಲ, ಪರೀಕ್ಷೆಯೆಂಬುದು ಜೀವನದ ಒಂದು ಭಾಗವಷ್ಟೇ.
ಹಿಂದೆಲ್ಲಾ ಪರೀಕ್ಷೆಯಲ್ಲಿ ಫೇಲಾದರೆ ಒಂದು ವರ್ಷವೇ ನಷ್ಟವಾಗಿರುತ್ತಿತ್ತು. ಆದರೆ ಈಗ ಫಲಿತಾಂಶ ಬಂದ ಒಂದೆರಡು ತಿಂಗಳಲ್ಲೇ ಬರುವ ಮರು ಪರೀಕ್ಷೆಯನ್ನು ತೆಗೆದುಕೊಂಡು ಉತ್ತೀರ್ಣರಾಗಿ ಆ ವರ್ಷವೇ ವಿದ್ಯಾಭ್ಯಾಸವನ್ನು ಮುಂದುವರೆಸಬಹುದು. ಸಾಧಾರಣವಾಗಿ ಪರೀಕ್ಷೆಗಳಲ್ಲಿ ಪಾಸಾಗುವವರ ಸಂಖ್ಯೆ ಶೇ60 ರಿಂದ 70 ಇರಬಹುದು ಉಳಿದ 30-40 ರಷ್ಟು ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುವರು. ಅಂದರೆ ಫೇಲಾಗುತ್ತಿರುವವರು ನೀವೊಬ್ಬರೇ ಅಲ್ಲ, ನಿಮ್ಮೊಂದಿಗೆ ಹಲವರಿದ್ದಾರೆಂಬುದು ನೆನಪಿರಲಿ.
ಕೆಲವೊಮ್ಮೆ ಮೌಲ್ಯಮಾಪಕರ ಕಣ್ತಪ್ಪಿನಿಂದ ಅಥವಾ ತಾಂತ್ರಿಕ ದೋಷದಿಂದ ಫಲಿತಾಂಶದಲ್ಲಿ ವ್ಯತ್ಯಾಸವಾಗಿರುವ ಸಂಭವವೂ ಇರುತ್ತದೆ. ಹಾಗಾಗಿ ಹತಾಶೆ ಬೇಡ. ಶಿಕ್ಷಕರ ಮಾರ್ಗದರ್ಶನದಲ್ಲಿ ಉತ್ತರ ಪತ್ರಿಕೆಗಳ ಜೆರಾಕ್ಸ್ ಪ್ರತಿ ತರಿಸಿಕೊಳ್ಳಬಹುದು. ಅಂಕಗಳ ಮರು ಎಣಿಕೆ, ಮರುಮೌಲ್ಯಮಾಪನ ಮಾಡಿಸುವ ಅವಕಾಶಗಳು ಉಂಟು.
ದುಡುಕಿ ಯಾವುದೇ ಕಾರಣಕ್ಕೂ ಅಪಾಯ ತಂದುಕೊಳ್ಳಬೇಡಿ. ಎಲ್ಲರಿಗಾಗಿದ್ದು ನಮಗೂ ಎಂದು ಫಲಿತಾಂಶವನ್ನು ಸಮಚಿತ್ತದಿಂದ ಸ್ವೀಕರಿಸುವ ದೃಢ ಭಾವನೆ ಬೆಳೆಸಿಕೊಳ್ಳಿ. ಪ್ರೀತಿಯ ವಿದ್ಯಾರ್ಥಿಗಳೇ, ಜೀವನದಲ್ಲಿ ಅಂಕಗಳಿಕೆಯೊಂದೇ ಮುಖ್ಯವಲ್ಲ. ಎಲ್ಲರ ಪ್ರೀತಿಗಳಿಸಿ ಒಳ್ಳೆಯ ನಾಗರಿಕರಾಗಿ ಬಾಳುವುದು ಮುಖ್ಯ. ಮೋಸ, ವಂಚನೆ, ಅಕ್ರಮಗಳನ್ನು ಮಾಡದೆ ಸತ್ಪ್ರಜೆಯಾಗುವುದು ನಿಮ್ಮ ಜೀವನದ ಗುರಿಯಾಗಿರಲಿ. ನಿಮ್ಮ ಶ್ರಮಕ್ಕೆ ತಕ್ಕ ಫಲಿತಾಂಶ ಖಂಡಿತಾ ಸಿಗುತ್ತದೆ. ಗುಡ್ ಲಕ್!
ಲೇಖಕರು ಆಪ್ತ ಸಮಾಲೋಚಕರು, ಬಾಳೇಬೈಲು, ತೀರ್ಥಹಳ್ಳಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.