ಮಳೆಗಾಲ ಬಂದಾಕ್ಷಣ ಹವಾಮಾನದಲ್ಲಿ ಏರುಪೇರುಗಳುಂಟಾಗಿ ತಕ್ಷಣಕ್ಕೆ ನಮಗೆ ಶೀತ, ಕಫ ಮತ್ತು ಅವುಗಳು ಅತಿರೇಕವಾದಾಗ ಜ್ವರ ಬರುವುದು ಸಹಜ. ಮಳೆಗಾಲದಲ್ಲಿ ಇಂತಹ ಬ್ಯಾಕ್ಟೀರಿಯಾ ಅಥವಾ ವೈರಲ್ ಸೋಂಕುಗಳು ಸಹಜವೇ ಆದರೂ ಇವುಗಳನ್ನು ದಿಟ್ಟವಾಗಿ ಎದುರಿಸಲು ನಮ್ಮಲ್ಲಿ ಸಾಕಷ್ಟು ಪ್ರಮಾಣದ ರೋಗನಿರೋಧಕ ಶಕ್ತಿ ಇರುವುದು ಅವಶ್ಯಕ.
ಇಂತಹ ರೋಗ ನಿರೋಧಕತೆ ಸಾಮರ್ಥ್ಯ ಹೊಂದಲು ಹೆಚ್ಚು ಹೆಚ್ಚು ಪೋಷಕಾಂಶಭರಿತವಾದ ಆಹಾರ ಪದಾರ್ಥಗಳ ಬ್ಭೆಟೆಯಲ್ಲಿ ತೊಡಗುವ ಅವಶ್ಯಕತೆ ಈಗಿಲ್ಲಾ..ನಿಮ್ಮ ಅಡುಗೆಮನೆಯ ಯಾವುದೋ ಮೂಲೆಯಲ್ಲಿ ಮುದುಡಿ ಕುಳಿತಿರುವ ಬೆಳ್ಳುಳ್ಳಿಯೇ ಸಾಕು..!
ಅನಾದಿ ಕಾಲದಿಂದಲೂ ಬೆಳ್ಳುಳ್ಳಿಯನ್ನು ಔಷಧೀಯ ಅಂಶಗಳಿಗಾಗಿ ಬಳಸುವುದನ್ನು ಕೇಳಿದ್ದೇವೆ,ಜೊತೆಗೆ ಆಹಾರವು ರುಚಿಕಟ್ಟಲೂ ಇದು ಅವಶ್ಯಕ ಪದಾರ್ಥ.ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕಿನ ವಿರುದ್ಧ ಹೋರಾಡುವಲ್ಲಿ ಇದು ಅತೀ ಶಕ್ತಿಶಾಲಿಯಾದ ನೈಸರ್ಗಿಕ ಮನೆಮದ್ದಾಗಿದೆ.ಇದರ ಸೇವನೆಯಿಂದ ನಮ್ಮ ದೇಹದಲ್ಲಿನ ಪ್ರತಿರಕ್ಷಣಾ ವ್ಯವಸ್ಥೆಯು ಬಲಗೊಂಡು ದೇಹದ ಸಾಮಾನ್ಯ ಉಷ್ಣತೆಯು ಕಡಿಮೆಯಾಗುವುದನ್ನು ತಡೆಗಟ್ಟುವ ಮೂಲಕ ದೇಹವು ಶೀತದಿಂದ ಬಳಲದಂತೆ ಕಾಪಾಡುತ್ತದೆ.
ಬೆಳ್ಳುಳ್ಳಿಯನ್ನು ನೇರವಾಗಿ ಸೇವಿಸುವುದು ಸಹ್ಯವಲ್ಲವಾದ್ದರಿಂದ ಬಹುಪಯೋಗಿಯಾದ ಇದನ್ನು ಸೇವಿಸುವ ಸಲುವಾಗಿ ಕೆಲವು ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕಾಗಿದ್ದು ಅವುಗಳೆಂದರೆ
*ಬೆಳ್ಳುಳ್ಳಿ ಮತ್ತು ಟೊಮೋಟೊ ಮಿಶ್ರಣದ ಪಾನಕ ಸಿದ್ದಪಡಿಸಿ ಸೇವಿಸುವ ಮೂಲಕ ಶೀತಕ್ಕೆ ಅಂತ್ಯ ಹಾಡಬಹುದು.
*ಮಲಗುವ ಮುನ್ನ ನಾವು ಸಾಮಾನ್ಯವಾಗಿ ಸೇವಿಸುವ ಕಿತ್ತಳೆ ಜ್ಯೂಸ್ ಜೊತೆಗೆ ಬೆಳ್ಳುಳ್ಳಿಯ ಎಸಳುಗಳನ್ನು ಹಾಕಿಕೊಂಡು ಸೇವಿಸುವುದರಿಂದಲೂ ಶೀತದಿಂದ ಮುಕ್ತಿ ಹೊಂದಬಹುದು.
*ನಿಂಬೆರಸದೊಡನೆ ಬೆಳ್ಳುಳ್ಳಿಯ ಸೇವನೆಯು ದೇಹವನ್ನು ಸಾಂಕ್ರಾಮಿಕ ರೋಗಗಳಿಂದ ದೂರವಿರಿಸುತ್ತದೆ.
*ಜಜ್ಜಿದ ಬೆಳ್ಳುಳ್ಳಿಯನ್ನು ಉಗುರು ಬೆಚ್ಚಗಿನ ನೀರಿನೊಡನೆ ಸೇರಿಸಿ ಸೇವಿಸುತ್ತಾ ಬಂದಲ್ಲಿ ರೋಗನಿರೋಧಕ ಶಕ್ತಿ ಇಮ್ಮಡಿಸುತ್ತದೆ.
*ಜೇನಿನೊಂದಿಗೆ ನೆನೆಸಿಟ್ಟ ಬೆಳ್ಳುಳ್ಳಿಯ ಎಸಳುಗಳನ್ನು ಪ್ರತಿದಿನ ಬೆಳಗ್ಗೆ ದಿನಕ್ಕೊಂದರಂತೆ ಸೇವಿಸುತ್ತಾ ಬಂದಲ್ಲಿ ಕಫ ಕರಗುವುದು ಮತ್ತು ಮೂಗು ಕಟ್ಟುವುದೂ ಶಮನವಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.