ಆರೋಗ್ಯಭರಿತ ಗರ್ಭ ಮಾತ್ರ ಆರೋಗ್ಯವಂತ ಮಗುವಿಗೆ ಜನನ ನೀಡಲು ಸಾಧ್ಯ. ಹಾಗೆಯೇ ಭ್ರೂಣ ಬೆಳೆದಂತೆ ಆರೋಗ್ಯವಾದ ಮಗು ಜನಿಸಿ ಅರೋಗ್ಯವಂತ ಪ್ರಜೆಯಾಗಿ ದೇಶವು ಆರೋಗ್ಯಪೂರ್ಣವಾಗುತ್ತದೆ.
ವಿಶ್ವ ಅರೋಗ್ಯ ಸಂಸ್ಥೆಯ ಪ್ರಕಾರ ಅರೋಗ್ಯ ತುಂಬಿದ ದೇಶ ಎಂದರೆ ಪ್ರಜೆಗಳು ದೈಹಿಕ, ಮಾನಸಿಕ, ಆಧ್ಯಾತ್ಮಿಕ, ಸಾಮಾಜಿಕ, ಪರಿಸರಾತ್ಮಕವಾದ ಸದೃಢ ಸಮಾಜದ ರೂವಾರಿಗಳು ಎಂದರ್ಥ. ಸಸ್ಯಕ್ಕೆ ಹೇಗೆ ನೀರು, ಗೊಬ್ಬರ, ಮಣ್ಣು ಎಷ್ಟು ಮುಖ್ಯವೋ, ಹಾಗೆಯೇ ಮಗುವಿನ ಸೃಷ್ಟಿಕ್ರಿಯೆ ಪ್ರಾರಂಭವಾಗುವ ಭ್ರೂಣ ಮತ್ತದರ ಅರೋಗ್ಯ ಕೂಡ ಅಷ್ಟೇ ಮುಖ್ಯ.
ಹೀಗೆ ಭ್ರೂಣದ ಬೆಳವಣಿಗೆ ಗರ್ಭದ ಆರೋಗ್ಯದ ಮೇಲೆ ನಿಂತಿದೆ. ವೀರ್ಯಾಣು ಅಂಡಾಶಯದ ಮೊಟ್ಟೆಯಲ್ಲಿ ಬೆರೆತು, ಪರಿಪೂರ್ಣ ಮಾರ್ಪಾಡಾಗಿ ಬಲಿತ ಅಂಡಾಶಯ ಭ್ರೂಣವಾಗಿ ನಂತರ ಆರೋಗ್ಯಪೂರ್ಣ ಮಗುವಿಗೆ ಜನನ ನೀಡುತ್ತದೆ. ಈ ಪ್ರಕ್ರಿಯೆ ಆರೋಗ್ಯವಂತ ವಾತಾವರಣದಲ್ಲಿ ಪರಿಪೂರ್ಣವಾಗಬೇಕಾದರೆ ಗರ್ಭದ ಆರೋಗ್ಯ ಅತ್ಯಂತ ಅವಶ್ಯಕ.
ಇಂದು ನಾವು ಬಹಳಷ್ಟು ರೋಗಗಳನ್ನು ತಡೆಗಟ್ಟಿದ್ದರೂ, ಇತ್ತೀಚಿನ ದಿನಗಳಲ್ಲಿ ಪೋಷಕರ ಆಲಸ್ಯದಿಂದ ಮತ್ತು ಆರೋಗ್ಯ ಕಾರ್ಯಕರ್ತರ ಬೇಜಾವಾಬ್ದಾರಿಯಿಂದ ಲಸಿಕೆಗಳಿಂದ ತಡೆಗಟ್ಟಿದ್ದ ರೋಗಗಳಾದ ಗಂಟಲು ಮಾರಿ ಮತ್ತು ಧನುರ್ವಾಯು ರೋಗಗಳು ಮತ್ತೆ ಭೀಕರವಾಗಿ ತಲೆ ಎತ್ತಿವೆ. ಜೊತೆಗೆ ಡೆಂಗಿ, ಚಿಕೂನ್‌ಗುನ್ಯದಂತಹ ಹೊಸ ರೋಗಗಳು ಮಕ್ಕಳನ್ನಲ್ಲದೆ ದೊಡ್ಡವರನ್ನು ಸಹ ಬಾಧಿಸುತ್ತಿವೆ.
ಇಂತಹ ವಿಷಮ ಪರಿಸ್ಥಿತಿಯಲ್ಲಿ ಈ ಕಾಯಿಲೆಗಳನ್ನು ಸಂಪೂರ್ಣವಾಗಿ ಹತೋಟಿಗೆ ತರುವಲ್ಲಿ ವೈದ್ಯರ ಜವಾಬ್ದಾರಿ ಹೆಚ್ಚಿದೆ. ವಯಸ್ಕರಿಗೂ ಹರಡುವ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಲಸಿಕೆಗಳಿದ್ದರೂ ಸಹ ಮಾಹಿತಿಯ ಅಭಾವದಿಂದ ತಡೆಗಟ್ಟಬಹುದಾದ ಎಷ್ಟೋ ಕಾಯಿಲೆಗಳಿಂದ ಮರಣ ಸಂಭವಿಸುತ್ತಿವೆ. ಆದ್ದರಿಂದ ವಯಸ್ಕರು ಮತ್ತು ಎಲ್ಲ ಪ್ರೌಢರಲ್ಲೂ ಇಂತಹ ತಡೆಗಟ್ಟಬಹುದಾದ ಮಾರಣಾಂತಿಕ ಕಾಯಿಲೆಗಳನ್ನು ನಿಯಂತ್ರಿಸಲು ಎಲ್ಲ ತರಹದ ಪ್ರಯತ್ನ ಮಾಡಬೇಕಿದೆ.
ಪೋಷಕ ಆಹಾರದ ಕೊರತೆಯಿಂದ ಉಂಟಾಗುವ ಅಪೌಷ್ಟಿಕತೆಗೆ ಸಂಬಂಧಪಟ್ಟ ಕಾಯಿಲೆಗಳು ಬಡ ಕುಟುಂಬಗಳಲ್ಲಿ ಸಾಮಾನ್ಯ. ಇದನ್ನು ಸುಲಭವಾಗಿ ತಡೆಗಟ್ಟಬಹುದು. ಮುಂದುವರಿದ ರಾಷ್ಟ್ರಗಳಲ್ಲಿ ಆಧುನಿಕ ಜೀವನಶೈಲಿಯಿಂದ ಪ್ರೇರೇಪಿತರಾಗಿ ಆಹಾರ ಪದಾರ್ಥಗಳನ್ನು (ಫಾಸ್ಟ್‌ಫುಡ್) ಉಪಯೋಗಿಸುವ ಶೈಲಿಯೇ ಬದಲಾಗತೊಡಗಿದೆ. ಇದರ ಪರಿಣಾಮ ಹೆಚ್ಚು ಆಹಾರ ಸೇವನೆಯಿಂದ ಸ್ಥೂಲಕಾಯದ ಸಮಸ್ಯೆ ಜಾಗತಿಕ ಮಟ್ಟದಲ್ಲಿ ಅಧಿಕವಾಗಿ ಕಂಡುಬರುತ್ತಿದೆ. ಇದಕ್ಕೆ ಗ್ಲೋಬಲ್ ಒಬಿಸಿಟಿ ಅಥವಾ ‘ಗ್ಲೋಬಿಸಿಟಿ’ ಎಂದು ಕರೆಯತ್ತಾರೆ. ನಮ್ಮ ರಾಷ್ಟ್ರದಲ್ಲಿನ ಶ್ರೀಮಂತ ಕುಟುಂಬಗಳಲ್ಲಿ ಈ ಪರಿಸ್ಥಿತಿ ಕಂಡುಬರುತ್ತಿದೆ.
ಬೇಕು ಬೇಡಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಮಕ್ಕಳಿಗೆ ಹೆಚ್ಚು ಹೆಚ್ಚು ತಿನ್ನಿಸುವುದು ಉತ್ತಮ ಅಭ್ಯಾಸವಲ್ಲ. ಇತ್ತೀಚಿನ ದಿನಗಳಲ್ಲಿ, ಹಿಂದಿನಿಂದಲೂ ಬಳಕೆಯಲ್ಲಿರುವ ನಮ್ಮ ಸಂಸ್ಕೃತಿಯಾಧಾರಿತ ಸಾಂಪ್ರದಾಯಿಕ ಆಹಾರಗಳನ್ನು ಬಿಟ್ಟು ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಆಹಾರಗಳನ್ನು ಬಳಸುತ್ತಿದ್ದಾರೆ. ಈ ತಿನಿಸುಗಳು ನೈಜವಾಗಿರದೆ ಅಸ್ವಾಭಾವಿಕವೂ ಹೌದು. ಕೆಡದಂತಿರಲು ಹೆಚ್ಚು ರಾಸಾಯನಿಕಗಳನ್ನು ಉಪಯೋಗಿಸಿ ಸಂಸ್ಕರಿಸಲಾಗುತ್ತದೆ. ಈ ಉತ್ಪನ್ನಗಳು ದೇಶದ ಎಲ್ಲ ಮೂಲೆಮೂಲೆಗಳಲ್ಲೂ ಮಾರಾಟವಾಗುತ್ತಿವೆ. ಇಂತಹ ಆಹಾರ ಪದಾರ್ಥಗಳ ಸೇವನೆಯಿಂದ ಮಕ್ಕಳಲ್ಲಿ ಅನಾರೋಗ್ಯ ಹೆಚ್ಚಾಗುತ್ತಿದೆ. ಅವರ ಆರೋಗ್ಯಕರ ಬೆಳವಣಿಯೂ ಇದರಿಂದ ಕುಂಠಿತವಾಗುತ್ತದೆ.
ಇನ್ನು ಪೋಷಕರು ಸ್ತನ್ಯಪಾನದ ಅಪರಿಮಿತ ಅನುಕೂಲಗಳನ್ನು ಮರೆತು ಜಾಹಿರಾತಿನ ಪ್ರಭಾವಕ್ಕೊಳಗಾಗಿ ಪರ್ಯಾಯವಾದ ಕೃತಕ ಹಾಲು ಮತ್ತು ಆಹಾರ ಪದಾರ್ಥಗಳ ಬಳಕೆಗೆ ಮುಂದಾಗಿದ್ದಾರೆ. ಮೊಲೆಹಾಲನ್ನು ಕುಡಿಸುವುದರಿಂದ ಮಗುವಿಗೆ ಸಿಗುವ ಅತ್ಯಮೂಲ್ಯ ಆರೋಗ್ಯಪೂರ್ಣ ಸತ್ವಗಳನ್ನು ಮತ್ತು ಮಗುವಿನ ಪರಿಪೂರ್ಣ ಬೆಳವಣಿಗೆಯನ್ನು ಕೃತಕ ಆಹಾರ ಒದಗಿಸದು. ಈ ಕಾರಣದಿಂದಲೂ ಮಕ್ಕಳು ಅನೇಕ ಕಾಯಿಲೆಗಳಿಗೆ ಗುರಿಯಾಗುತ್ತಿದ್ದಾರೆ.
ಇಲ್ಲಿಯವರೆಗೆ ಉತ್ತಮವಾದ ಔಷಧಗಳನ್ನು ಉಪಯೋಗಿಸಿ ಬಹಳಷ್ಟು ಕಾಯಿಲೆಯನ್ನು ಹತೋಟಿ ಮಾಡಲಾಗುತ್ತಿದೆ ಮತ್ತು ಗುಣಪಡಿಸಲಾಗುತ್ತಿದೆ. ಆದರೆ ಈ ಔಷಧಗಳನ್ನು ಅವಶ್ಯವಿಲ್ಲದಿದ್ದರೂ ಹೆಚ್ಚಾಗಿ ಉಪಯೋಗಿಸುವುದರಿಂದ ಅದರ ದುರುಪಯೋಗವಾಗಿ ರೋಗಾಣುಗಳನ್ನು ಹತೋಟಿಗೆ ತರಲು ಕಷ್ಟವಾಗುತ್ತದೆ (ಆ್ಯಂಟಿಬಯಾಟಿಕ್ ರೆಸಿಸ್ಟೆನ್ಸ್). ಆದರೆ ಹೊಸ ಆ್ಯಂಟಿಬಯಾಟಿಕ್ ಔಷಧಗಳ ಉತ್ಪತ್ತಿ ಇಲ್ಲದಿರುವುದರಿಂದ ಬಹಳ ಗಂಭೀರಸ್ಥಿತಿ ಉದ್ಭವವಾಗುತ್ತದೆ. ಈ ಸ್ಥಿತಿಗೆ ವೈದ್ಯರೇ ಕಾರಣ – (ಆಂಟಿಬಯಾಟಿಕ್ ಅಬ್ಯೂಸ್) .
ಇತ್ತೀಚಿನ ದಿನಗಳಲ್ಲಿ ಮನುಷ್ಯನ ಜೀವಿತಾವಧಿ ವಿಸ್ತರಣೆಯಾಗಿದೆ. ಹಾಗಾಗಿ ವಯಸ್ಕರ ಸಂಖ್ಯೆಯೂ ಹೆಚ್ಚಿದೆ. ನಮ್ಮ ರಾಷ್ಟ್ರದಲ್ಲಿ ಈಗ ವಯಸ್ಕರ ಜನಸಂಖ್ಯೆ ಶೇ. 21ರಷ್ಟು ಮತ್ತು ಪ್ರೌಢಾವಸ್ಥೆಯ ಜನಸಂಖ್ಯೆ ಶೇ. 25 ರಷ್ಟು ಇದೆ. ಈ ಪ್ರಾಯದ ಯುವಜನರು ಅನಿಯಂತ್ರಿತ ಜೀವನಶೈಲಿ ಆಧಾರಿತ ಮತ್ತು ಅಸಾಂಕ್ರಾಮಿಕ ಕಾಯಿಲೆಗಳಿಗೆ ತುತ್ತಾಗುತ್ತಿದೆ.
ಉದಾಹರಣೆಗೆ: ಒತ್ತಡ, ಆಲಸ್ಯ ಜೀವನ, ವಿಪರೀತ ಸಕ್ಕರೆ, ಉಪ್ಪುಸೇವನೆ, ಮದ್ಯಪಾನ, ಧೂಮಪಾನ, ಅಕಾಲಿಕ ನಿದ್ರಾಪದ್ಧತಿ ಭವಿಷ್ಯದಲ್ಲಿ ಅಸಾಂಕ್ರಾಮಿಕ ಕಾಯಿಲೆಗಳಿಗೆ ನಾಂದಿಯಾಗುತ್ತವೆ.
ಅಸಾಂಕ್ರಾಮಿಕ ಕಾಯಿಲೆಗಳಾದ ರಕ್ತದೊತ್ತಡ, ಮಧುಮೇಹ, ಶ್ವಾಸಕೋಶದ ತೊಂದರೆ (ಆಸ್ತಮಾ) ಮತ್ತು ಉಸಿರಾಟದ ತೊಂದರೆ, ಸ್ಥೂಲಕಾಯ (ಬೊಜ್ಜುತನ) ಹಾಗೂ ಅರ್ಬುದದಂತಹ (ಕ್ಯಾನ್ಸರ್) ರೋಗಗಳು ಈ ಪೀಳಿಗೆಗೆ ಪಿಡುಗಾಗಲಿದೆ.
ಅಸಾಂಕ್ರಾಮಿಕ ಕಾಯಿಲೆಗಳಿಗೆ ಕಾರಣ ಏನು?
ಆಧುನಿಕ ಯುಗದ ಜನರ ಅನಾರೋಗ್ಯದ ಸಮಸ್ಯೆಗಳಿಗೆ ಮೂಲ ಕಾರಣ ಹೆಣ್ಣುಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡದೇ ಇರುವುದು. ತನ್ನ ಗರ್ಭದಲ್ಲಿ ಬೆಳೆಯುತ್ತಿರುವ ಮುಂದಿನ ಪೀಳಿಗೆಯನ್ನು ಪೋಷಿಸುವ ಅತಿ ಮಹತ್ತರವಾದ ಕೆಲಸ ಹೆಣ್ಣಿನದ್ದಾಗಿರುತ್ತದೆ. ಈ ಕಾರಣಕ್ಕಾಗಿ ಪ್ರತಿ ಹೆಣ್ಣುಮಕ್ಕಳ ಆರೋಗ್ಯ, ಗರ್ಭದ ಆರೈಕೆ ಮತ್ತು ಆಕೆಯೆಡೆಗೆ ಕಾಳಜಿ ತೋರುವುದು ಅತ್ಯಗತ್ಯ. ಇದು ಪ್ರತಿಯೊಬ್ಬರ ಕರ್ತವ್ಯ ಕೂಡ.
ಅಪಕ್ವವಾಗಿ ಜನಿಸಿದ ಶಿಶುಗಳಲ್ಲಿ ಹೆಚ್ಚಾಗಿ ಅಸಾಂಕ್ರಾಮಿಕ ರೋಗಗಳು ಕಂಡುಬರುತ್ತಿವೆ. ಇದನ್ನು ತಡೆಗಟ್ಟಲು ತಾಯಿಯ ಗರ್ಭದ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಬೇಕು. ತಾಯಿ ಗರ್ಭ ಧರಿಸುವ ಮುನ್ನ ಮತ್ತು ನಂತರ ಅರೋಗ್ಯ ತಪಾಸಣೆ ಮಾಡುವುದು ಅಗತ್ಯ.
ವಿಶ್ವದಲ್ಲಿ ಶೇ. 17ರಷ್ಟು ಮಕ್ಕಳು ಏಳು ತಿಂಗಳಿಗೂ ಮೊದಲೇ ಜನಿಸುತ್ತವೆ. ಹೀಗೆ ಅಕಾಲಿಕವಾಗಿ ಜನಿಸಿದ ಮಕ್ಕಳು ತಿಂಗಳು ತುಂಬುವ ಮುನ್ನವೇ ಸಾವನ್ನಪ್ಪುತ್ತಾರೆ. ಅಂಕಿ-ಅಂಶಗಳ ಪ್ರಕಾರ, ಅಕಾಲಿಕವಾಗಿ ಜನಿಸುವ ಪ್ರತಿ ಹದಿನೈದು ದಶಲಕ್ಷ ಮಕ್ಕಳಲ್ಲಿ ಒಂದು ದಶಲಕ್ಷ ಮಕ್ಕಳು ತಿಂಗಳು ತುಂಬುವ ಮುನ್ನವೇ ಸಾವಿಗೀಡಾಗುತ್ತವೆ.
ಇನ್ನು ಬದುಕುಳಿಯುವ ಹದಿನಾಲ್ಕು ದಶಲಕ್ಷ ಮಕ್ಕಳಲ್ಲಿ ಹೆಚ್ಚಿನವರು ಜೀವನಪರ್ಯಂತ ದೇಹದ ಊನತೆ ಮತ್ತು ಹಲವಾರು ಅಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಾರೆ.
ಹೀಗೆ ಬದುಕುಳಿದ ಅಪಕ್ವ ಶಿಶುಗಳು ಬೆಳೆದು ದೊಡ್ಡವರಾಗಿ ಗರ್ಭವತಿಯಾದಾಗ ಅವರಲ್ಲಿನ ಅಸಾಂಕ್ರಾಮಿಕ ಕಾಯಿಲೆಯು ಮತ್ತೆ ಅಪಕ್ವವಾದ, ಅಪೂರ್ಣ ತೂಕದ ಮಗುವಿನ ಜನನಕ್ಕೆ ಕಾರಣವಾಗುತ್ತದೆ. ಹೀಗೆ ಈ ಚಕ್ರ ಮುಂದುವರೆಯುತ್ತದೆ. ಆದುದರಿಂದ ಈ ಅಪಾಯಕಾರಿ ಚಕ್ರವನ್ನು ನಿಯಂತ್ರಿಸಲು ಗರ್ಭದಿಂದಲೇ ಮಗುವಿನ ತಪಾಸಣೆ ಅತ್ಯಗತ್ಯ. ಇಂತಹ ಮಕ್ಕಳ ಜನನ ತಡೆಯಲು ತಾಯಿಯ ಭ್ರೂಣ ಹಾಗೂ ಗರ್ಭದ ಆರೈಕೆಗೆ ಹೆಚ್ಚು ಆದ್ಯತೆ ಅತ್ಯವಶ್ಯಕ.
ಮಗುವಿನ ಹುಟ್ಟಿದ ತೂಕ 2.5 ಕೆ.ಜಿ.ಗಿಂತ ಕಡಿಮೆ ಇರಬಾರದು. ನಮ್ಮ ದೇಶದಲ್ಲಿ ಶೇ. 30ರಿಂದ 33ರಷ್ಟು ಮಕ್ಕಳು ಅಕಾಲಿಕ ಜನನದ ಮತ್ತು ಕಡಿಮೆ ತೂಕದವರಾಗಿರುತ್ತಾರೆ. ಎಂಟರಿಂದ ಹನ್ನೆರಡು ಕೆ.ಜಿ. ತೂಕ ಶೇಕರಿಸಿದರೆ ಮಾತ್ರ ಗರ್ಭಿಣಿ ಗರ್ಭ ಆರೋಗ್ಯಕರವಾಗಿ ಸರಿಯಾದ ತೂಕದ ಮಗುವಿಗೆ ಜನನ ನೀಡುತ್ತಾಳೆ.
**
ಡೋರಿಯನ್ ಹೈಪಾಥಿಸಿಸ್
(ಆರೋಗ್ಯ ಮತ್ತು ಅನಾರೋಗ್ಯದಿಂದ ವಯಸ್ಸಾಗುವ ಪ್ರಕ್ರಿಯೆ)
ಅಪೌಷ್ಟಿಕತೆ ಇರುವ ಗರ್ಭಿಣಿಯರು ಕಡಿಮೆ ತೂಕದ ಮಗುವಿಗೆ ಜನನ ನೀಡುತ್ತಾರೆ. ಅಂತಹ ಮಕ್ಕಳು ಮುಂದೆ ಅಸಾಂಕ್ರಮಿಕ ರೋಗಕ್ಕೆ ಗುರಿಯಾಗುತ್ತಾರೆ. ಹಾಗೆಯೇ ಹೆಚ್ಚು ತೂಕ ಅಥವಾ ಸ್ಥೂಲಕಾಯ ಇರುವ ಗರ್ಭಿಣಿಯರಿಗೆ ಹುಟ್ಟುವ ಮಕ್ಕಳೂ ಮುಂದೆ ಅಸಾಂಕ್ರಮಿಕ ಕಾಯಿಲೆಗಳಾದ ಅರ್ಬುದ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳಿಗೆ ಗುರಿಯಾಗುತ್ತಾರೆ. ದೇಶದಲ್ಲಿನ ಹದಿನಾಲ್ಕು ದಶಲಕ್ಷ ಅಪಕ್ವ ಮತ್ತು ಕಡಿಮೆ ತೂಕದ ಮಕ್ಕಳ ತಾಯಂದಿರು ಈ ಮೂರರಲ್ಲಿ ಯಾವುದಾದರು ಒಂದು ಗುಂಪಿಗೆ (ಹೈಪಾಥಿಸಿಸ್) ಸೇರಿರುತ್ತಾರೆ.
**
ತ್ರಿಫ್ಟಿ ಜೀನ್ ಹೈಪಾಥಿಸಿಸ್
ತ್ರಿಫ್ಟಿ ಜೀನ್ (ಅನುವಂಶಿಕ ಜಿಪುಣತನ) ಜೀವಕಣದ ಮುಖ್ಯ ಕಾರ್ಯ ನಾವು ತಿಂದ ಆಹಾರದಿಂದ ಕೊಬ್ಬನ್ನು ಸಂಸ್ಕರಿಸಿ, ದೇಹದ ಬೆಳವಣಿಗೆಗಾಗಿ ಶೇಖರಿಸುವುದು. ದೇಹಕ್ಕೆ ದೊರಕುವ ಆಹಾರದ ಪ್ರಮಾಣವನ್ನು ಅವಲಂಬಿಸಿ, ಕೊಬ್ಬಿನ ಶೇಖರಣೆ ಮತ್ತು ಅದರ ವಿತರಣೆ ನಡೆಯುತ್ತಿರುತ್ತದೆ.
ದೇಹಕ್ಕೆ ಬೇಕಾದ ಪೋಷಕಾಂಶ ಸಿಗದಿದ್ದಾಗ ತ್ರಿಫ್ಟಿ ಜೀವಕಣಗಳು ಶೇಖರಿಸಿಟ್ಟ ಕೊಬ್ಬನ್ನು ಬೇಕಾದ ಪ್ರಮಾಣದಲ್ಲಿ ವಿನಿಯೋಗಿಸಿ ದೇಹದ ಗಾತ್ರ ಮತ್ತು ತೂಕವನ್ನು ಸಮತೋಲನದಲ್ಲಿ ಇಡುತ್ತವೆ. ಹಾಗೆಯೇ ಯಥೇಚ್ಛವಾಗಿ ಆಹಾರ ಸಿಕ್ಕಾಗಲೂ ಕೊಬ್ಬಿನ ಶೇಖರಣೆಯನ್ನು ನಿಯಂತ್ರಿಸುವುದಿಲ್ಲ. ಬದಲಾಗಿ ಶೇಖರಣೆ ಮಾಡುತ್ತಲೇ ಹೋಗುತ್ತದೆ. ಈ ವಿಭಿನ್ನ ಕ್ರಿಯೆಯಿಂದ ದೇಹದಲ್ಲಿ ಏರು-ಪೇರಾಗಿ ಬೊಜ್ಜು ತುಂಬಿಕೊಂಡು ಮಧುಮೇಹ, ಸ್ಥೂಲಕಾಯಗಳಿಗೆ ಗುರಿಮಾಡುತ್ತದೆ. ಅಕಾಲಿಕವಾಗಿ ಜನಿಸಿದ ಮಕ್ಕಳಲ್ಲಿ ಈ ಸಮಸ್ಯೆಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ.
ಗರ್ಭಿಣಿಯರ ಆರೋಗ್ಯಕ್ಕೆ ಆದ್ಯತೆ ನೀಡುವುದು ಈಗಿನ ತುರ್ತು. ಹೆಣ್ಣುಮಕ್ಕಳ ಆರೋಗ್ಯಕ್ಕೆ ಒತ್ತು ನೀಡದಿದ್ದರೆ ಮುಂದಿನ ಪೀಳಿಗೆ ಹೆಚ್ಚು ಹೆಚ್ಚು ಅಸಾಂಕ್ರಾಮಿಕ ಕಾಯಿಲೆಗೆ ಗುರಿಯಾಗುತ್ತದೆ. ಇದನ್ನು ತಡೆಗಟ್ಟಲು ಆರೋಗ್ಯಕರವಾದ ಗರ್ಭವನ್ನು ಬೆಳೆಸಬೇಕು. ಇದು ನಮ್ಮೆಲ್ಲರ ಆದ್ಯ ಕರ್ತವ್ಯ.
**
ಬಾರ್ಕರ್ ಹೈಪಾಥಿಸಿಸ್
ಮಗುವಿನ ತೂಕ ಕಡಿಮೆಯಿದ್ದರೆ ಅಂತಹ ಮಗು ಅಸಾಂಕ್ರಮಿಕ ಕಾಯಿಲೆಗೆ ಗುರಿಯಾಗುತ್ತದೆ. ಗರ್ಭದಲ್ಲಿ ಅಪೌಷ್ಟಿಕತೆಯಿದ್ದರೆ ಮಗುವಿನ ದೇಹವು ಹಲವಾರು ನ್ಯೂನತೆಗಳಿಗೆ ಗುರಿಯಾಗಿ ದೇಹದ ರಚನೆ ಹಾಗೂ ಆರೋಗ್ಯ ಕುಂಠಿತವಾಗುತ್ತದೆ.