ADVERTISEMENT

ಮತ್ತೆ ನಾನಾಗುವ ಪ್ರಕ್ರಿಯೆಯಲ್ಲಿ...

ಡಾ.ಕೆ.ಎಸ್ ಶುಭ್ರತಾ
Published 17 ಮೇ 2016, 19:30 IST
Last Updated 17 ಮೇ 2016, 19:30 IST
ಮತ್ತೆ ನಾನಾಗುವ ಪ್ರಕ್ರಿಯೆಯಲ್ಲಿ...
ಮತ್ತೆ ನಾನಾಗುವ ಪ್ರಕ್ರಿಯೆಯಲ್ಲಿ...   

“ಆ ಆಸ್ಪತ್ರೆಯಲ್ಲಿರುವ ಎಲ್ಲರಿಗೂ ನನ್ನನ್ನು ನೋಡಿದರೆ ಹೆದರಿಕೆ. ಅವರೆಲ್ಲರೂ ನನ್ನಿಂದ ಒಂದು ಮಾರು ದೂರವೇ. ನನ್ನ ಸಂಬಂಧಿಕರು ಹೇಳಿದಂತೆ, ಒಂದು ತಿಂಗಳ ಹಿಂದೆ ನಾನು ನಾನಾಗಿರಲಿಲ್ಲ. ಕಿವಿಯಲ್ಲಿ ಯಾರೋ ಬೈದ ಹಾಗನಿಸುತ್ತಿತ್ತು. ಪೊಲೀಸರು ಬಂದು ಕರೆದುಕೊಂಡು ಹೋಗುತ್ತಾರೆಂಬ ಭಯ. ನಿದ್ರೆಯೇ ಇರಲಿಲ್ಲ. ಮನೋವೈದ್ಯರ ಬಳಿ ಹೋಗುವ ಮೊದಲು ಮನೆಯ ಹತ್ತಿರವಿದ್ದ ಸರ್ಕಾರಿ ಆಸ್ಪತ್ರೆಗೆ ಒಯ್ದಿದ್ದರು. ಅಲ್ಲೇ ನಾನು ಗಲಾಟೆ ಮಾಡಿ, ನರ್ಸ್‌ಗೆ ಹೊಡೆಯಲು ಹೋಗಿದ್ದೆನಂತೆ. ಆದರೆ, ಇದು ನನಗೆ ಕೂಡ ಅಂತೆ-ಕಂತೆಯೇ. ಏನೂ ನೆನಪಿಲ್ಲ. ಚಿಕಿತ್ಸೆ ತೆಗೆದುಕೊಂಡ ನಂತರ ಭಯ ಕಡಿಮೆಯಾಗಿದೆ. ಸಿಟ್ಟೂ ಇಲ್ಲ. ಮತ್ತೆ ಸಹಜಸ್ಥಿತಿಗೆ ಬರಲು ಪ್ರಯತ್ನ ಸಾಗಿದೆ. ಆದರೆ, ಈ ಜನರು, ಸಮಾಜ ಬಿಡಬೇಕಲ್ಲಾ!  ಸಂಬಂಧಿಕರು, ಹಳ್ಳಿಯವರು ಏನೋ ಒಂದು ಥರಾ ನೋಡುತ್ತಾರೆ. ಆ ಆಸ್ಪತ್ರೆಯಲ್ಲಂತೂ ನಾನು ಹೋದರೇ ಸಾಕು, ಎಲ್ಲರಿಗೂ ಹೊಡೆಯುತ್ತೇನೆಂಬ ಭಯದಿಂದ ಒಂದು ಥರಾ ಮಾಡುತ್ತಾರೆ”. ತೀವ್ರ ತರಹದ ಮನೋ ರೋಗದಿಂದ ಬಳಲಿ ಗುಣಮುಖವಾಗುತ್ತಿರುವ ರೋಗಿಯೊಬ್ಬರ ಮಾತುಗಳು ಇವು.

ಮನೋರೋಗಗಳು ದೈಹಿಕ ರೋಗಗಳಿಗಿಂತ ಭಿನ್ನವಾದವು. ಕಣ್ಣಿಗೆ ಕಾಣದ ಈ ರೋಗಗಳು, ರೋಗಿಗಳ ವ್ಯಕ್ತಿತ್ವವನ್ನೇ ಕಲಕುತ್ತವೆ. ತನ್ನತನಕ್ಕೇ ಧಕ್ಕೆ ಕೊಡುತ್ತದೆ. ರೋಗಿಯ ಜೀವನದ ದಾರಿಯನ್ನೇ ಬದಲಿಸಬಹುದು. ಮುಂದಿನ ಬದುಕಿಗೆ ಸಂಬಂಧಿಸಿದ ಆಶಾವಾದವನ್ನೇ ನಡುಗಿಸುತ್ತದೆ. ಇದೆಲ್ಲದರ ನಡುವೆ ಸಂತಸದ ಸಂಗತಿಯೆಂದರೆ, ಮನೋರೋಗಗಳಿಗೆ ಒಳ್ಳೆಯ ಚಿಕಿತ್ಸೆ ಲಭ್ಯವಿದೆ. ಔಷಧಗಳು ಕಾಯಿಲೆಯ ಲಕ್ಷಣಗಳನ್ನು ಪೂರ್ಣಮಟ್ಟಿಗೆ ಗುಣಪಡಿಸುತ್ತವೆ. ಆಪ್ತ ಸಮಾಲೋಚನೆ ಮನಸ್ಸಿಗೆ ಸಾಂತ್ವನ ನೀಡುತ್ತದೆ. ಅಷ್ಟೇ ಸಾಕೆ? ಆ ವ್ಯಕ್ತಿ ಸಹಜ ಬದುಕಿಗೆ ಮರಳಲು ಕುಟುಂಬದವರ, ಸಮಾಜದ ಬೆಂಬಲ, ಪ್ರೋತ್ಸಾಹ  ಬೇಕು. ನಾಳಿನ ಬದುಕಿನ ಭರವಸೆಯ ಬೆಳಕು ಕಾಣಬೇಕು.  ಸಕಾರಾತ್ಮಕವಾಗಿ ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕು. ಕಳಂಕಿತರಂತೆ ನೋಡದೆ, ಎಲ್ಲರಂತೆ ಕಾಣುವವರು ಬೇಕು. ನಮ್ಮಿಂದ ಇದು ಸಾಧ್ಯವೇ?. ಮನೋರೋಗಗಳನ್ನು ತಾರತಮ್ಯ ಧೋರಣೆಯಿಂದ ನೋಡುವುದನ್ನ ಬಿಡುವವರೆಗೆ ಈ ಯಾವುದನ್ನೂ ಮಾಡಲು ಸಾಧ್ಯವಿಲ್ಲ.

ಉನ್ಮಾದದಿಂದ ಬಳಲಿ ಗುಣಮುಖ ಹೊಂದಿರುವ ರೋಗಿಯೊಬ್ಬರು ಹೇಳುತ್ತಾರೆ “ನಾನು ಒಬ್ಬ ಯಶಸ್ವೀ ಕೈಗಾರಿಕೋದ್ಯಮಿ, ನನ್ನ ಯೌವ್ವನದಲ್ಲಿ ನಾನು ಅನುಭವಿಸಿದ ಮನೋರೋಗದ ಸಮಸ್ಯೆಗಿಂತ, ನಂತರದ ದಿನಗಳಲ್ಲಿ ಸಂಬಂಧಿಕರು-ಸಮಾಜವನ್ನು ಎದುರಿಸಿದ ಸಮಸ್ಯೆಯೇ ದೊಡ್ಡದಾಗಿ ಕಾಣಿಸುತ್ತದೆ. ಮನೋ ರೋಗದಿಂದೇನೋ ಒಂದೇ ತಿಂಗಳಿನಲ್ಲಿ ಹೊರಬಂದೆ. ನಂತರ ಸಹಜ ಜೀವನಕ್ಕೆ ಮರಳಲು, ಮತ್ತೆ ತನ್ನತನವನ್ನು ಪುನರ್‌ ಸ್ಥಾಪಿಸಲು ಹಲವಾರು ತಿಂಗಳುಗಳೇ ಹಿಡಿದವು. ಆ ದಿನಗಳಲ್ಲಿ ನಾನು ಮತ್ತೆ ಮುಂಚಿನ ನಾನಾಗಿದ್ದೇನೆ ಎಂದು ಎಲ್ಲರಿಗೂ ಮನದಟ್ಟು ಮಾಡಿಸುವುದೇ ಹೊರೆಯಾಯಿತು”. ಮುಂದಿನ ಬಾರಿ ನಿಮ್ಮ ಸಂಬಂಧಿಕರಲ್ಲಿ ಅಥವಾ ಅಕ್ಕಪಕ್ಕದ ಮನೆಗಳಲ್ಲಿ ಯಾರಾದರೂ ಮನೋ ರೋಗಿಗಳಿದ್ದರೆ, ಅವರನ್ನು ಎಲ್ಲರಂತೆ ನೋಡಿ, ಎಲ್ಲರಂತೆ ಬದುಕಲು ಪ್ರೋತ್ಸಾಹಿಸಿ. ರೋಗಿಗಳನ್ನು ಗುಣಪಡಿಸಬಹುದು. ರೋಗವಿಲ್ಲದವರನ್ನು? ತಾವೇ ನಿರ್ಧರಿಸಿ...
(ಮನೋವೈದ್ಯೆ, ಶಿವಮೊಗ್ಗ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.