ಮರೆವು ಸಾಧಾರಣವಾಗಿ ಹಲವು ಜನರನ್ನು ಕಾಡುವ ಒಂದು ಸಮಸ್ಯೆ. ಅಡುಗೆ ಆದಮೇಲೂ ಒಲೆ ಆರಿಸಿದ್ದೇನೋ ಇಲ್ಲವೋ ಎಂಬುದು ಹಲವರಿಗೆ ನೆನಪಿರುವುದಿಲ್ಲವಾದರೆ, ಮನೆಯಿಂದ ಹೊರಹೋಗುವಾಗ ಬಾಗಿಲಿಗೆ ಬೀಗ ಹಾಕುವುದೇ ಕೆಲವರಿಗೆ ಮರೆತು ಹೋಗಿರುತ್ತದೆ. ತಮ್ಮ ಮೊಬೈಲ್ ಫೋನನ್ನು ಇಟ್ಟ ಸ್ಥಳವನ್ನು ಮರೆಯುವುದು ಹಲವರಾದರೆ, ಬಹುಪಾಲು ಮಂದಿ ಪಡೆದ ಉಪಕಾರ ಮತ್ತು ಸಾಲವನ್ನು ಮರೆಯುವವರೇ. ಎಲ್ಲರನ್ನೂ ಕಾಡುವ ಈ ಮರೆವು, ಸಾರ್ವಕಾಲಿಕ ಶ್ರೇಷ್ಠ ವಿಜ್ಞಾನಿ, ಐಸಾಕ್ ನ್ಯೂಟನ್ನಿನಂತಹ ವ್ಯಕ್ತಿಗಳನ್ನೂ ಬಿಟ್ಟಿರಲಿಲ್ಲ ಎಂದು ಪ್ರತೀತಿ ಇದೆ.
ವಯಸ್ಸಿನ ಕಾರಣದಿಂದಲೋ ಅಥವಾ ಕಾಯಿಲೆಯ ಸಮಸ್ಯೆಯಿಂದಲೋ ಮರೆವು ಒಂದು ರೋಗವಾಗಿ ಆವರಿಸುವುದು ಬೇರೆ; ದೇಹ ಮತ್ತು ಬುದ್ಧಿಯ ಆರೋಗ್ಯ ಸರಿಯಾಗಿರುವಾಗ ಬರುವ ಮರೆವು ಬೇರೆ. ಆರೋಗ್ಯ ಸಂಬಂಧಿಯಾದ ಮರೆವು, ಮೆದುಳಿನ ನರಕೋಶದ ದೌರ್ಬಲ್ಯದಿಂದ ಆವರಿಸಿದರೆ, ನಮ್ಮ ದಿನ ನಿತ್ಯದ ಮರೆವಿಗೆ ಕಾರಣವು ಹಲವು. ಆದರೆ ಮರೆವು ಸಹಜವಾಗಿ ನಮ್ಮನ್ನು ಕಾಡುವ ಒಂದು ವ್ಯಾಧಿ ಎಂದು ಎಲ್ಲರೂ ಒಪ್ಪಿರುವಾಗ, ಮರೆಯಲು ಕಲಿಯುವ ಅಗತ್ಯವಾದರೂ ಏನು ? ಮರೆಯಬೇಕಾದದ್ದಾದರೂ ಯಾವುದನ್ನು? – ಎಂಬ ಪ್ರಶ್ನೆಗಳು ಸೋಜಿಗವಾಗಿ ತೋರುವುದು ಸಹಜ.
ಇಬ್ಬರು ಭಿಕ್ಷುಗಳು, ತಾವು ವಾಸವಿದ್ದ ವಿಹಾರದಿಂದ ಪಕ್ಕದ ಊರಿನ ಇನ್ನೊಂದು ವಿಹಾರಕ್ಕೆ ಹೋಗಬೇಕಾದ ಸಂದರ್ಭ ಒದಗಿತು. ಇಬ್ಬರೂ ಭಿಕ್ಷುಗಳು ಮಾತನಾಡುತ್ತಾ ಹಾದಿಯನ್ನು ಕ್ರಮಿಸುವಾಗ ಮಾರ್ಗ ಮಧ್ಯೆ ಅವರಿಗೆ ಒಂದು ನದಿ ಕಾಣಿಸಿತು. ನದಿ ದಾಟದೆ ಅವರು ತಮ್ಮ ನಿಶ್ಚಿತ ಸ್ಥಳವನ್ನು ತಲುಪುವುದು ಸಾಧ್ಯವಿರಲಿಲ್ಲ. ದಡದ ಸುತ್ತಮುತ್ತ ವಿಚಾರಿಸಿದರು, ನದಿ ದಾಟಿಸುವ ಒಬ್ಬ ಅಂಬಿಗನೂ ಕಾಣಲಿಲ್ಲ. ನದಿ ಬೇರೆ ಸಲ್ಪ ಆಳವಾಗಿಯೇ ತೋರಿತು.
ಇಬ್ಬರಿಗೂ ಈಜು ಬಾರದು. ಅಲ್ಲಿದ್ದವರನ್ನು ವಿಚಾರಿಸಿದಾಗ, ನದಿಯ ದಡದಲ್ಲೇ ಸಲ್ಪ ಮುಂದೆ ಹೋದರೆ ಆಳ ಕಡಿಮೆ ಇರುವ ಸ್ಥಳದಲ್ಲಿ ನದಿಯನ್ನು ಹಾಯ್ದು ಹೋಗಬಹುದು ಎಂದು ತಿಳಿಯಿತು. ಸರಿ, ಇಬ್ಬರೂ ಹೊರಟರು. ನದಿಯು ಸಲ್ಪ ಆಳ ಕಡಿಮೆ ಇದೆ ಎಂದು ಕಂಡ ಒಂದು ಭಾಗದಲ್ಲಿ ದಾಟುವ ತೀರ್ಮಾನ ಆಯಿತು. ನದಿಯ ಹತ್ತಿರ ಹೋಗುತ್ತಿದ್ದಂತೆ, ನದಿಯನ್ನು ದಾಟಲು ಕಾಯುತ್ತಿದ್ದ ಒಬ್ಬ ತರುಣಿ ಇವರ ಕಣ್ಣಿಗೆ ಬಿದ್ದಳು. ಬ್ರಹ್ಮಚರ್ಯವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದ ಇವರು ಹೆಂಗಸರನ್ನು ಕಣ್ಣೆತ್ತಿಯೂ ನೋಡುವಂತಿರಲಿಲ್ಲ. ನದಿ ದಾಟಲು ಕಾಯುತ್ತಿದ್ದ ಆ ತರುಣಿ ಈ ಭಿಕ್ಷುಗಳನ್ನು ನೋಡಿ, ಅವರ ಸಹಾಯ ಕೇಳಿದಳು. ಭಿಕ್ಷುಗಳಿಗೆ ಧರ್ಮಸಂಕಟ ಶುರುವಾಯಿತು.
ಹೆಂಗಸರನ್ನು ನೋಡಲೂ ಅಪ್ಪಣೆ ಇರದ ಇವರು, ಅವಳಿಗೆ ಸಹಾಯ ಮಾಡುವುದು ಹೇಗೆ? ಸ್ವಲ್ಪ ಹೊತ್ತು ಯೋಚಿಸಿದ ಒಬ್ಬ ಭಿಕ್ಷು, ದಡದಲ್ಲಿದ್ದ ಆ ತರುಣಿಯನ್ನು ತನ್ನ ಹೆಗಲ ಮೇಲೆ ಕೂರಿಸಿಕೊಂಡು ನದಿಯನ್ನು ದಾಟಿಯೇ ಬಿಟ್ಟ. ಅವನ ಜೊತೆಗಿದ್ದ ಮತ್ತೊಬ್ಬ ಭಿಕ್ಷು ಕುಪಿತಗೊಂಡು ದಾರಿಯುದ್ದಕ್ಕೂ ಗೊಣಗುತ್ತಲೇ ಇದ್ದ. ಇಬ್ಬರೂ ವಿಹಾರವನ್ನು ಸೇರಿದಾಗ ಈ ಭಿಕ್ಷುವಿನ ಸಹನೆಯ ಕಟ್ಟೆ ಒಡೆದಿತ್ತು. "ಹೆಂಗಸರನ್ನು ಮುಟ್ಟುವುದು ದೂರದ ಮಾತು, ನಾವು ಅವರನ್ನು ನೋಡಲೂಬಾರದು. ಹೀಗಿರುವಾಗ, ನೀನು ಆಕೆಯನ್ನು ಹೆಗಲ ಮೇಲೆ ಕೂರಿಸಿಕೊಂಡು ನದಿ ದಾಟಿದ್ದು ನಮ್ಮ ವ್ರತಕ್ಕೆ ವಿರುದ್ಧವಾದದ್ದು ಮತ್ತು ಉದ್ಧಟತನ" ಎಂದು ಚೀರಾಡಿದ. ಇವನ ಮಾತನ್ನೆಲ್ಲಾ ಶಾಂತಚಿತ್ತನಾಗಿ ಆಲಿಸಿದ ಇನ್ನೊಬ್ಬ ಭಿಕ್ಷು ತನ್ನ ತುಟಿಯಂಚಿನಲ್ಲಿ ನಗೆ ತರಿಸಿ ಹೇಳಿದ; ‘ನಾನು ಆ ಹೆಂಗಸನ್ನು ನದಿ ದಾಟಿಸಿದ ಮರುಕ್ಷಣವೇ ಇಳಿಸಿದೆ. ನೀನು ಇನ್ನೂ ಹೊತ್ತುಕೊಂಡಿದ್ದೀಯಲ್ಲ!’ ಇನ್ನೊಬ್ಬ ಭಿಕ್ಷುವಿಗೆ ಮಾತೇ ಹೊರಡಲಿಲ್ಲ.
ನಮ್ಮ ದಿನನಿತ್ಯದ ಜೀವನದಲ್ಲಿ ಈ ರೀತಿಯ ಅನುಭವಗಳು ಎಲ್ಲರಿಗೂ ಸಹಜವಾಗಿ ಆಗಿರುಂಥವು. ಒಮ್ಮೆ ನಮ್ಮ ಚಿಂತನೆಗಳನ್ನು ಮತ್ತು ಯೋಚನೆಗಳನ್ನೂ ಗಮನಿಸಿದರೆ ನಮಗೇ ತಿಳಿಯುವಂತೆ, ನಾವು ಗತಿಸಿದ ಘಟನೆಗಳ ಕಹಿ ನೆನಪುಗಳನ್ನು ಹೊತ್ತು ಅಥವಾ ಮುಂದೆ ನಡೆಯಬಹುದಾದದ್ದನ್ನು ಚಿಂತಿಸಿ ಬದುಕುತ್ತಿರುತ್ತೇವೆ. ಕಹಿ ನೆನಪುಗಳ ಮೂಟೆ ನಮ್ಮ ಬೆನ್ನಮೇಲೆ ಕುಳಿತು ಹಿಂದಕ್ಕೆ ಜಗ್ಗುತ್ತಿದ್ದರೆ, ಭವಿಷ್ಯದ ಚಿಂತೆ ತಲೆಯ ಒಳಗೆ ಕುಳಿತು ನೆಮ್ಮದಿಯನ್ನೇ ಕೆಡಿಸುತ್ತದೆ. ಭೂತಕಾಲ ಮತ್ತು ಭವಿಷ್ಯತ್ತಿನ ನಡುವೆ ನಾವು ಬದುಕುವ ವರ್ತಮಾನದಲ್ಲಿ ನಾವು ಬಾಳುವುದೇ ಇಲ್ಲ.
ಈಗ ಇಬ್ಬರು ಭಿಕ್ಷುಗಳ ಕಥೆಯ ಕಡೆಗೆ ಮತ್ತೆ ಗಮನ ಹರಿಸೋಣ. ನದಿಯನ್ನು ದಾಟುವಾಗ ತರುಣಿಯನ್ನು ಹೆಗಲ ಮೇಲೆ ಹೊತ್ತ ಭಿಕ್ಷು ವರ್ತಮಾನದಲ್ಲಿ ಬದುಕುತ್ತಿದ್ದವನು, ಆದರೆ ಅವನ ಜೊತೆಗಿದ್ದ ಇನ್ನೊಬ್ಬ ಭಿಕ್ಷು, ಭೂತಕಾಲದಲ್ಲಿ ಬದುಕುತ್ತಿದ್ದವನು. ಅವನಿಗೆ ತನ್ನ ಸ್ನೇಹಿತ ಹಿಂದೆ ಮಾಡಿದ ಕೆಲಸದ ಬಗ್ಗೆಯೇ ಯೊಚನೆಗಳು. ಅದರ ಧರ್ಮಸೂಕ್ಷ್ಮದ ವಿಶ್ಲೇಷಣೆ, ನೀತಿ-ನಿಯಮದ ಜಿಜ್ಞಾಸೆಯಲ್ಲಿಯೇ ಒಲವು. ಹೀಗಾಗಿ ಅವನಿಗೆ ವರ್ತಮಾನದಲ್ಲಿ ಜೀವಿಸಲು ಸಾಧ್ಯವೇ ಆಗುತ್ತಿರಲಿಲ್ಲ. ಹಾಗೂ ಆ ಭಿಕ್ಷುವಿಗೆ ತನ್ನ ಸ್ನೇಹಿತ ಮಾಡಿದ ಸಹಾಯದ ಕಡೆಗೂ ಅವನ ಗಮನ ಹೋಗಲಿಲ್ಲ. ಹೆಂಗಸಿಗೆ ಸಹಾಯ ಮಾಡಿದ ಭಿಕ್ಷು ತನ್ನ ವ್ರತದ ನಿಯಮವನ್ನು ಮೀರಿರಬಹುದು, ಆದರೆ ಆ ನಿಯಮವನ್ನು ಮೀರುವ ಸಂದರ್ಭದಲ್ಲೂ ಅವನು ವಾಸ್ತವಿಕ ಜಗತ್ತಿನ ಪರಿಸ್ಥಿತಿಗೆ ಸ್ಪಂದಿಸಿದ ರೀತಿ ಸ್ತುತ್ಯರ್ಹ.
ನಾವೆಲ್ಲರೂ ಈ ಭಿಕ್ಷುವಿನಂತೆ ಹಳೆಯ ನೆನಪಿನ ಬುತ್ತಿಗಳನ್ನು ಹೊತ್ತು ಸಾಗುತ್ತಲೇ ಇರುತ್ತೇವೆ. ಆ ನೆನಪುಗಳಿಂದ ಹಲವರ ವಿರುದ್ಧ ನಮ್ಮ ಮನಸ್ಸು ಇಂದಿಗೂ ಕಹಿಯಾಗಿರುತ್ತದೆ; ಮನಸ್ಸಿನೊಳಗೇ ಜ್ವಾಲಾಮುಖಿ ಕುದಿಯುತ್ತಿರುತ್ತದೆ. ಅದು ಜಿದ್ದು ಸಾಧಿಸಿ ಸರಿಯಾದ ಸಮಯದಲ್ಲಿ ಸ್ಫೋಟಗೊಳ್ಳಲು ಕಾಯುತ್ತಿರುತ್ತದೆ. ಆದರೆ, ಆ ಕೋಪ-ದ್ವೇಷವನ್ನು ಹೊರಹಾಕಲು ಸರಿಯಾದ ಮಾರ್ಗ ಸಿಗದಿದ್ದರೆ, ಅವು ನಮ್ಮನ್ನೇ ಸುಡುತ್ತವೆ . ಅದನ್ನೇ ಬಸವಣ್ಣನವರು ಹೇಳುವುದು ‘ಮನದೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ ನೆರೆಮನೆಯ ಸುಡದೋ’ ಎಂದು. ನಮ್ಮ ಈ ಬೆಂಕಿ ತಣ್ಣಗಾಗಬೇಕಾದರೆ, ನಾವು ಮುಖ್ಯವಾಗಿ ರೂಢಿಸಿಕೊಳ್ಳಬೇಕಾದ ಒಂದು ಅಭ್ಯಾಸವೆಂದರೆ ಮರೆಯುವುದು.
ಪ್ರಯತ್ನಪೂರ್ವಕವಾಗಿ ನಾವು ಕೆಲವು ಘಟನೆಗಳನ್ನು ಮರೆಯುವುದು ಅನಿವಾರ್ಯ. ಎಂದೋ ಯಾರೋ ನಮ್ಮನ್ನು ಹೀಯಾಳಿಸಿ ಆಡಿದ ಮಾತು, ನಮ್ಮ ದೋಷವನ್ನು ಗುರುತಿಸಿ ಮಾಡಿದ ಕುಹಕ, ನಮ್ಮ ನಡವಳಿಕೆಯನ್ನು ಮತ್ತೊಬ್ಬರ ಬಳಿ ದೂಷಿಸಿದ್ದು, ಈ ಎಲ್ಲವನ್ನೂ ಮರೆಯಬೇಕು. ಈ ಮರೆಯುವಿಕೆಯಲ್ಲಿಯೇ ನಾವು ಎಲ್ಲರನ್ನೂ ಕ್ಷಮಿಸಿದ್ದೇವೆ ಎಂಬ ಸಮಾಧಾನದ ಜೊತೆಗೆ ಇತರರಿಗಿಂತ ನಾವು ಭಾವನಾತ್ಮಕವಾಗಿ ಬಲಿಷ್ಠರಾಗಿದ್ದೇವೆ ಎಂಬ ಔನ್ನತ್ಯವೂ ದೊರಕುತ್ತದೆ. ಆದರೆ ಹೀಗೆ ಮರೆಯುವುದು ಅಷ್ಟು ಸುಲಭದ ಕೆಲಸವಲ್ಲ.
ಮೊದಲು ನಾವು ಪರಿಸ್ಥಿತಿಯ ಹೊರಗೆ ಬಂದು ಮೂರನೆಯ ವ್ಯಕ್ತಿಯ ದೃಷ್ಟಿಯಿಂದ ನಡೆದ ಘಟನೆಯನ್ನು ವಿಶ್ಲೇಷಿಸಬೇಕು. ಹಾಗೆ ಮಾಡಿದ ನಂತರ ಇತರರ ಸ್ಥಾನದಲ್ಲಿ ನಿಂತು, ನಾವು ಆ ಪರಿಸ್ಥಿತಿಯಲ್ಲಿ ಹೇಗೆ ನಡೆದುಕೊಳ್ಳುತ್ತಿದ್ದೆವು ಎಂಬುದನ್ನು ಯೋಚಿಸಬೇಕು. ಹಾಗೆ ವಿಶ್ಲೇಷಿಸಿದಾಗ, ನಮ್ಮ ಮತ್ತು ಇತರರ ನಡವಳಿಕೆಗಳಲ್ಲಿ ಹೆಚ್ಚಿನ ವ್ಯತ್ಯಾಸವಿರುವುದಿಲ್ಲ ಎಂದು ತಿಳಿಯುತ್ತದೆ. ಹೀಗೆ ನಮ್ಮ ಮತ್ತು ಇತರರ ನಡವಳಿಕೆಗಳಲ್ಲಿ ಹೆಚ್ಚು ವ್ಯತ್ಯಾಸವಿಲ್ಲ ಎಂದು ತಿಳಿದಾಗ, ಪೂರ್ವಾಗ್ರಹಗಳನ್ನು ಮರೆತು ಮುನ್ನಡೆಯಲು ಸಹಕಾರಿಯಾಗುತ್ತದೆ. ಪೂರ್ವಗ್ರಹಗಳನ್ನು ಮರೆಯುವ ಕಲೆ ಸುಲಭವಾಗಿ ಸಿದ್ಧಿಸದಿದ್ದರೂ, ಸ್ವಲ್ಪ ಪ್ರಯತ್ನದ ನಂತರ ಖಂಡಿತ ಸಾಧ್ಯವಾಗುತ್ತದೆ. ಇದರಿಂದ ನಮ್ಮ ಮನಸ್ಸಿನ ಎಷ್ಟೋ ಭಾರಗಳು ಇಳಿದು ನಮ್ಮ ಸುತ್ತಮುತ್ತಲಿನ ಸಮಾಜವು ಸುಂದರವಾಗಿ ಕಾಣುತ್ತದೆ. ಆಗ ನಮ್ಮಲ್ಲಿ ನೆಮ್ಮದಿಯೂ ಮೂಡುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.