ವೈಟ್ ಸ್ವಾನ್ ಫೌಂಡೇಶನ್ ಸಹಯೋಗದಿಂದ ಮಾನಸಿಕ ಸ್ವಾಸ್ಥ್ಯ ಸಂಬಂಧಿತ ಲೇಖನಗಳನ್ನು ಪ್ರಕಟಿಸಲಾಗುತ್ತಿದೆ.
ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ನಿರ್ವಹಣೆ ಮಾಡುವುದು ದೈಹಿಕ ಆರೋಗ್ಯ ಸಮಸ್ಯೆಗಳ ನಿರ್ವಹಣೆಗಿಂತ ಭಿನ್ನವಾಗಿಲ್ಲ. ಮಾನಸಿಕ ಅಸ್ವಸ್ಥತೆಯ ಕುರಿತು ನನಗೆ ಮೊದಲು ತಿಳಿದಾಗ ಎಂಟು ವರ್ಷ ವಯಸ್ಸು. ನಾನು ಮತ್ತು ನನ್ನ ತಾಯಿ ಗಾಂಧಿ ಬಜಾರ್ ರಸ್ತೆಯಲ್ಲಿ ವಾಕಿಂಗ್ ಹೋಗಿದ್ದಾಗ, ಜನರೆಲ್ಲ ಒಬ್ಬ ವ್ಯಕ್ತಿಯ ಸುತ್ತ ಗುಂಪುಗೂಡಿದ್ದರು.
ಆ ವ್ಯಕ್ತಿಯ ತಲೆಗೂದಲು ಸಿಕ್ಕು ಸಿಕ್ಕಾಗಿತ್ತು ಹಾಗೂ ಆತ ಕೊಳಕಾದ ಹರಿದ ಅಂಗಿ ಧರಿಸಿದ್ದ. ಮುಷ್ಟಿಯನ್ನು ಅಲುಗಾಡಿಸುತ್ತಾ, ಸಿಟ್ಟಿನಿಂದ ಚೀರಾಡುತ್ತಿದ್ದ. ಯಾರೊಬ್ಬರನ್ನು ನಿರ್ದಿಷ್ಟವಾಗಿ ಗುರಿಯಾಗಿರಿಸಿಕೊಂಡ ಹಾಗೆ ಅವನು ವರ್ತಿಸುತ್ತಿರಲಿಲ್ಲ. “ಇಲ್ಲಿಂದ ಹೋಗೋಣ. ಇವನು ಹುಚ್ಚ. ಇವನು ಅಪಾಯಕಾರಿ ಆಗಿರಬಹುದೆಂದು” ನನ್ನ ಅಮ್ಮ ನನ್ನ ಕೈಯನ್ನು ಬಿಗಿಯಾಗಿ ಹಿಡಿದುಕೊಂಡು ಹೇಳಿದರು.
ವರ್ಷಗಳು ಕಳೆದಂತೆ ಸಿನಿಮಾ ಮತ್ತು ಪುಸ್ತಕಗಳು ‘ಹುಚ್ಚು’ ಮನಸ್ಥಿತಿಯ ಕುರಿತಾಗಿ, ಮಾನಸಿಕ ಅಸ್ವಸ್ಥತೆಯ ಕುರಿತಾಗಿನ ಚಿತ್ರಣವನ್ನು ಬಲಪಡಿಸಿದವು. ಕಾಲಕ್ರಮೇಣ ‘ಹುಚ್ಚು’ ಮನಸ್ಥಿತಿಯ ಮನುಷ್ಯರು ಮನೋವೈದ್ಯರಿಂದ ಚಿಕಿತ್ಸೆ ಪಡೆಯುತ್ತಾರೆ ಎಂದು ತಿಳಿಯಿತು. ಕಾಲಾನಂತರದಲ್ಲಿ ಆ ರೀತಿಯ ಕಲ್ಪನೆಗಳು ಕ್ರಮೇಣವಾಗಿ ಬದಲಾಗಿ, ‘ಮನೋವೈದ್ಯರು ಹುಚ್ಚು ಹಿಡಿದ ಜನರನ್ನು ಚಿಕಿತ್ಸಿಸುತ್ತಾರೆ’ ಎಂದಾಯಿತು.
ಚಿಕ್ಕ ಮಕ್ಕಳು ಚಂದ್ರ ಮತ್ತು ಸೂರ್ಯ ಒಂದೇ ಗಾತ್ರ ಎಂದು ನಂಬುತ್ತಾರೊ, ಅದೇ ಥರ ಮಾನಸಿಕ ಕಾಯಿಲೆ=ಹುಚ್ಚು ಎಂದು ಯುವ ಜನರ ಮನಸ್ಸಿನಲ್ಲಿ ಮಾನಸಿಕ ಕಾಯಿಲೆಯ ಕುರಿತಾಗಿ ಒಂದು ಕಲ್ಪನೆ ಬೇರೂರಿರುತ್ತದೆ. ಈ ಗ್ರಹಿಕೆಯು ಬದಲಾಗದೆ ಹಾಗೆಯೇ ಉಳಿದರೆ, ಅವರು ತೊಂದರೆಯಲ್ಲಿರುವ ಜನರಿಗೆ ಸಹಾಯ ಮಾಡುವ ಕುರಿತಾಗಿ, ಅವರ ಕುರಿತು ಅಥವಾ ತಮ್ಮ ಕುರಿತು ಕಾಳಜಿ ತೆಗೆದುಕೊಳ್ಳುವ ಕುರಿತಾಗಿ ತಪ್ಪು ಗ್ರಹಿಕೆ ಹೊಂದಬಹುದು. ‘ಏನು, ನೀವು ನನಗೆ ಹುಚ್ಚು ಹಿಡಿದಿದೆ ಎಂದು ಹೇಳುತ್ತಿದ್ದೀರಾ?’, ಮನೋವೈದ್ಯರಲ್ಲಿ ಸಲಹೆಗಾಗಿ ಬರುವವರ ಸಾಮಾನ್ಯ ಪ್ರತಿಕ್ರಿಯೆ ಇದು.
ನಮ್ಮ ದೇಹದ ಹೃದಯ, ಶ್ವಾಸಕೋಶ, ಮೂತ್ರಪಿಂಡ, ಪಿತ್ತಜನಕಾಂಗ ಮತ್ತು ದೇಹದ ಎಲ್ಲಾ ಅಂಗಗಳು ಅನೇಕ ರೀತಿಯ ಕಾಯಿಲೆಗಳಿಗೆ ಒಳಗಾಗುತ್ತವೆ. ಆದ್ದರಿಂದ ಮೆದುಳಿಗೆ ಮಾತ್ರ ಕಾಯಿಲೆಯಿಂದ ವಿನಾಯಿತಿ ಏಕೆ? (ಅಥವಾ ನಾವೇಕೆ ಮೆದುಳು ಭಿನ್ನ ಎಂದು ಪರಿಗಣಿಸುತ್ತೇವೆ?)
ನಾವು ನೋಡಿದ ವಸ್ತುವಿನ ಚಿತ್ರವು ಕಣ್ಣಿನ ಕಾರ್ನಿಯಾದ ಮೂಲಕ ಹಾದು ಹೋಗಿ ಮೆದುಳನ್ನು ತಲುಪಿದ ನಂತರ, ಮೆದುಳು ಅದು ಏನೆಂದು ಗುರುತಿಸುತ್ತದೆ. ಈ ಪ್ರಕ್ರಿಯೆ ಉದ್ದನೆಯ ಸರಪಣಿಯಾಗಿದೆ. ಇವೆಲ್ಲವು ಕೆಲವು ನ್ಯಾನೋ ಸೆಕೆಂಡ್‌ಗಳ ಅವಧಿಯಲ್ಲಿ ನಡೆಯುತ್ತವೆ. ಸಾವಿರಗಟ್ಟಲೆ ಜೀವಕೋಶಗಳು ಒಂದು ಚಿಂತನೆಹುಟ್ಟುವಲ್ಲಿ ಕೆಲಸ ಮಾಡುತ್ತವೆ. ‘ಆಹಾ, ಇದು ಚಾಕೊಲೇಟ್ ಐಸ್ ಕ್ರೀಮ್’ ಎಂದು ನೀವು ಕೋನ್ ಐಸ್ ಕ್ರೀಮ್ ನೋಡಿದಾಗ ಹೇಳುತ್ತೀರಿ.
ಈ ರೀತಿಯ ಸರಪಣಿ ಕ್ರಿಯೆಗಳು ಜೀವಕೋಶಗಳು ರಾಸಾಯನಿಕಗಳೊಂದಿಗೆ ಸಂವಹನ ನಡೆಸುವುದರಿಂದ ನಡೆಯುತ್ತವೆ. ಇದನ್ನು ನ್ಯೂರೋಟ್ರಾನ್ಸಮಿಟರ್ (neurotransmitters) ಎನ್ನುತ್ತಾರೆ. ಕಣ್ಣಿನಲ್ಲಿರುವ ಅಸಮರ್ಪಕ ಎರಡು ನರಕೋಶಗಳ ಸಂಗಮ ರಾಸಾಯನಿಕ ಸಂಪರ್ಕವನ್ನು ಮಾಡದ ಕಾರಣ ಕಣ್ಣಿಗೆ ಐಸ್ ಕ್ರೀಮ್‌ಅನ್ನು ನೋಡಲಾಗದು. ಅದೇ ರೀತಿ ಮೆದುಳಿನ ಭಾಗಗಳು ಕಣ್ಣಿನೊಡನೆ ಸಂಪರ್ಕ ಕಳೆದುಕೊಂಡಿದ್ದರೆ ಅದು ಚಿತ್ರವನ್ನು ಐಸ್ ಕ್ರೀಮ್ ಎಂದು ಗುರುತಿಸದು.
ಈ ರೀತಿಯಾಗಿ ನರಕೋಶಗಳು ಮತ್ತು ನ್ಯೂರೋಟ್ರಾನ್ಸಮಿಟರ್ ಎರಡು ಕೂಡ ಚಿಂತನೆಯಲ್ಲಿ ಒಳಗೊಂಡಿವೆ. ಅವು ವ್ಯವಸ್ಥಿತವಾಗಿ ಕೆಲಸ ಮಾಡದಿದ್ದಲ್ಲಿ, ನಮ್ಮ ಮಾತು ಹಾಗೂ ವರ್ತನೆಯ ಮೇಲೆ ಪರಿಣಾಮ ಉಂಟಾಗುತ್ತದೆ. ಆದ್ದರಿಂದ ಮಾನಸಿಕ ಅಸ್ವಸ್ಥತೆಯು ಮಧುಮೇಹ ಮತ್ತು ಪಾರ್ಕಿನ್‌ಸನ್(ವಯಸ್ಸಾದವರಲ್ಲಿ ಕಂಡುಬರುವ ತೊಂದರೆ) ತೊಂದರೆಗಳಂತೆ ಜೈವಿಕ ಕ್ರಿಯೆಗಳ ಆಧಾರ ಹೊಂದಿದೆ. 90 ಪ್ರತಿಶತ ಮಾನಸಿಕ ಕಾಯಿಲೆಗಳು, ಸಾಮಾನ್ಯವಾಗಿ ಶೀತಜ್ವರ(Influenza), ನೆಗಡಿ, ಚರ್ಮದ ಅಲರ್ಜಿಯ ಗುಳ್ಳೆಗಳು (Allergic skin rashes), ತಲೆನೋವು, ಕಿವಿನೋವು ಅಥವಾ ಅತಿಸಾರಗಳಂತೆ. ಅವುಗಳಿಂದಾಗಿ ಜನರು ನಿಯಮಿತವಾಗಿ ತಮ್ಮ ಸಾಮಾನ್ಯ ವೈದ್ಯರ (General Physicians - GP) ಹತ್ತಿರ ಹೋಗುತ್ತಿರುತ್ತಾರೆ.
ನೀವು ಹೊಟ್ಟೆ ಉರಿ ಎಂದು ನಿಮ್ಮ ಸಾಮಾನ್ಯ ವೈದ್ಯರ ಬಳಿ ಹೋದಾಗ ಅವರು ಅದನ್ನು ಪರೀಕ್ಷಿಸಿ ‘ಅಸಿಡಿಟಿ’ ಎಂದು ಹೇಳಿ ಔಷಧ ನೀಡುತ್ತಾರೆ. ನೀವು ಆತಂಕಗೊಂಡಿದ್ದರೆ ಅವರು ನಿಮ್ಮನ್ನು ಆ ಕುರಿತಾಗಿ ಕೇಳುತ್ತಾರೆ ಹಾಗೂ ನಿಮ್ಮ ಆತಂಕ ಕಡಿಮೆಗೊಳಿಸಲು ಔಷಧ ನೀಡುತ್ತಾರೆ. ಒಂದು ವೇಳೆ ಆನಂತರದಲ್ಲಿಯೂ ಆತಂಕ ಹಾಗೆಯೆ ಉಳಿದಿದ್ದರೆ ಆತಂಕ ಪ್ರತಿಬಂಧಕ ಔಷಧೋಪಚಾರವನ್ನು ಕೆಲವು ವಾರಗಳ ಕಾಲ ತೆಗೆದುಕೊಳ್ಳಲು, ನಿಮ್ಮನ್ನು ಮನೋವೈದ್ಯರಲ್ಲಿ ಶಿಫಾರಸ್ಸು ಮಾಡಬಹುದು. ನಿಮಗೆ ಕಿವಿನೋವಿದ್ದು ಅದು ಸಾಮಾನ್ಯ ವೈದ್ಯರ ಚಿಕಿತ್ಸೆಯಿಂದ ಕಡಿಮೆಯಾಗದಿದ್ದಲ್ಲಿ ಅವರು ENT ತಜ್ಞರಿಗೆ ಶಿಫಾರಸ್ಸು ಮಾಡುವುದಕ್ಕಿಂತ ಇದು ಹೇಗೆ ಭಿನ್ನವಾಗಿದೆ?
ಆರು ತಿಂಗಳುಗಳ ಹಿಂದೆ ನಾನೊಬ್ಬ ಮಹಿಳೆಯನ್ನು ನೋಡಿದೆ. ವಯಸ್ಸು 35. ವಸ್ತುಗಳ ಕುರಿತಾಗಿ ಅನಾವಶ್ಯಕವಾಗಿ ಮತ್ತೆಮತ್ತೆ ಚಿಂತೆ ಮಾಡುತ್ತಿದ್ದರಿಂದ ಅವಳು ಜೀವನವನ್ನು ಸರಿಯಾಗಿ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಚಿಂತನೆಗಳು ಗೊಂದಲಮಯವಾಗಿ ಮತ್ತು ನಿಯಂತ್ರಿಸಲು ಆಗದಂತಿದ್ದವು; ಮತ್ತು ಅದು ಅವಳ ತಲೆಯಿಂದ ಹೊರಬರುವ ಯಾವುದೇ ಮಾರ್ಗಗಳಿರಲಿಲ್ಲ. ಯಾವಾಗಲು ಆತಂಕ ಪಡುತ್ತಿದ್ದರು, ಅಧಿಕ ರಕ್ತದೊತ್ತಡಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು, ನಿದ್ರಿಸುತ್ತಿರಲಿಲ್ಲ ಮತ್ತು ವಾಕರಿಕೆ ಹಾಗೂ ಹೊಟ್ಟೆ ಉರಿಯ ಸಮಸ್ಯೆಯಿಂದಾಗಿ ಯಾವಾಗಲು ಏನನ್ನು ಸರಿಯಾಗಿ ತಿನ್ನುತ್ತಿರಲಿಲ್ಲ.
ಒಂದು ಸಲ ಅವಳ ಗಂಡ ಭಾವರಹಿತನಾಗಿ ಅವಳ ಪಕ್ಕದಲ್ಲಿ ಕುಳಿತು ‘ನಾನು ಈ ಮದುವೆಯಿಂದ ಹೊರಬರಬೇಕೆಂದುಕೊಂಡಿದ್ದೇನೆ’ ಎಂದರು. ಹೆಂಡತಿಯ ವರ್ತನೆ ಮತ್ತು ಆಗಾಗ್ಗೆ ವೈದ್ಯರ ಭೇಟಿ ಹಾಗೂ ಶಾಶ್ವತ ಬಿಡುಗಡೆ ಸಿಗದ ಹೆಂಡತಿಯ ವಿಚಿತ್ರ ಲಕ್ಷಣಗಳಿಂದ ಅವರು ನಿರಾಶರಾಗಿದ್ದರು. ಅವರು ಮದುವೆಯಾದಂದಿನಿಂದ ಈ ಹನ್ನೆರಡು ವರ್ಷಗಳಲ್ಲಿ ಅವಳು ಈ ರೀತಿಯಾಗಿಯೇ ವರ್ತಿಸುತ್ತಿದ್ದಳು. ಸರಿಯಾಗಿ ಅಡುಗೆ ಮಾಡದಿರುವುದು, ಅವ್ಯವಸ್ಥೆಯಿಂದ ಕೂಡಿದ ಮನೆ ಮತ್ತು ಮಕ್ಕಳ ಕುರಿತಾಗಿ ನಿರ್ಲಕ್ಷ್ಯ ಸಾಮಾನ್ಯವಾಗಿತ್ತು. ಅವರ ಮಧ್ಯೆ ಯಾವತ್ತು ಒಂದು ಒಳ್ಳೆಯ ಮಾತುಕತೆ ನಡೆದಿರಲಿಲ್ಲ. ಹೆಂಡತಿ ಯಾವಾಗಲು ಮಾತುಕತೆಯನ್ನು ಮುರಿಯುತ್ತಿದ್ದಳು, ಕಣ್ಣೀರಿಡುತ್ತಿದ್ದಳು ಅಥವಾ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸುತ್ತಿದ್ದಳು.
ತಪಾಸಣೆಯ ನಂತರ ಅವಳಿಗೆ ಔಷಧೋಪಚಾರ ಶುರು ಮಾಡಲಾಯಿತು. ಅವಳ ರೋಗ ಲಕ್ಷಣಗಳು ಕಳೆದ ಆರು ತಿಂಗಳಲ್ಲಿ ಕ್ರಮೇಣವಾಗಿ ಕಡಿಮೆಯಾಗುತ್ತಿವೆ. ಈಗ ಅವಳು ಕೆಲಸಕ್ಕೆ ಹೋಗುತ್ತಾಳೆ. ಮತ್ತೆ ವಿಚ್ಛೇದನದ ಕುರಿತಾಗಿ ಮಾತುಕತೆ ನಡೆದಿಲ್ಲ. ಹಂತಹಂತವಾಗಿ ಸಂಬಂಧ ಸುಧಾರಿಸುತ್ತಿದೆ. ಮನೆಯು ಸ್ಪಷ್ಟವಾಗಿ ಹಾಗೆಯೆ ಅವ್ಯವಸ್ಥಿತವಾಗಿದೆ. ಆದರೆ ಅವಳು ಶುಚಿತ್ವದ ಕಡೆಗೆ ಗಮನ ಕೊಡುವ ಕುರಿತಾಗಿ ಉತ್ಸಾಹದಿಂದ ಮಾತನಾಡುತ್ತಾಳೆ.
ಬೇಕೊ ಅಥವಾ ಬೇಡವೊ ಜನರು ಮಾನಸಿಕ ರೋಗ ಲಕ್ಷಣಗಳಾದ ವಿಪರೀತ ದುಃಖ, ಭಯ, ಕೋಪ ಇವುಗಳ ಕುರಿತಾಗಿ ಸಹಾಯ ಕೇಳಬಹುದು. ಅದು ಅವರು ತಮ್ಮ ಮಾನಸಿಕ ಕಾಯಿಲೆಯ ಕುರಿತಾಗಿ ಹೇಗೆ ಗ್ರಹಿಸಿದ್ದಾರೆ ಎನ್ನುವುದನ್ನು ಅವಲಂಬಿಸಿರುತ್ತದೆ. ಮಾನಸಿಕ ಕಾಯಿಲೆಯ ನಿರ್ವಹಣೆ ಕೂಡ ದೈಹಿಕ ಕಾಯಿಲೆಯ ನಿರ್ವಹಣೆಗಿಂತ ಭಿನ್ನವಾಗಿಲ್ಲ ಎಂದು ಜನರು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ತಪ್ಪುಗ್ರಹಿಕೆಗಳಿಂದ ಹೊರಬರಬೇಕು. (ಲೇಖಕಿ ಮನೋವೈದ್ಯೆ).
ಮಾಹಿತಿಗಾಗಿ http://kannada.whiteswanfoundation.org ಲಾಗಿನ್ ಆಗಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.