ಮಕ್ಕಳು ಬೇಕೆಬೇಕು ಎಂದು ಬಯಸುವ ದಂಪತಿಗಳಲ್ಲಿ ಪುರುಷನ ವೀರ್ಯಾಣುವಿನ ಸಂಖ್ಯೆ ಹಾಗೂ ಗುಣಮಟ್ಟ ಅತಿ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಜನರಲ್ಲಿ ಹಲವಾರು ತಪ್ಪು ಕಲ್ಪನೆಗಳಿವೆ. ವೀರ್ಯಾಣು ನಾಶವಾಗುವ ಅಂಶಗಳ ಬಗ್ಗೆ ಮಿಥ್ಯನಂಬಿಕೆಗಳು ಸಾಕಷ್ಟು ಬೇರೂರಿವೆ. ಯಾವ ವಾದ ಎಷ್ಟು ಸರಿ ಎನ್ನುವುದನ್ನು ಈಗ ಚರ್ಚಿಸುವ.
ಲ್ಯಾಪ್‌ಟಾಪ್ ಬಳಕೆ ವೀರ್ಯಾಣು ನಾಶಪಡಿಸುತ್ತದೆ. ದಿನನಿತ್ಯದ ಜೀವನದಲ್ಲಿ ಲ್ಯಾಪ್‌ಟಾಪ್ ಬಳಸುವವರಲ್ಲಿ, ಅದರಲ್ಲೂ ವೈಫೈ ಸಂಪರ್ಕ ಇರುವ ಲ್ಯಾಪ್‌ಟಾಪ್ ಬಳಸುವವರಿಗೆ ಈ ಲ್ಯಾಪ್‌ಟಾಪ್‌ಗಳು ವೀರ್ಯಾಣು ಹಂತಕವಾಗಿಯೇ ಕೆಲಸ ಮಾಡಿವೆ ಎನ್ನಬಹುದು.
ಇದು ಕೇವಲ ಊಹಾಪೋಹವಲ್ಲ. ಅಧ್ಯಯನವೊಂದು ಇದನ್ನು ದೃಢಪಡಿಸಿದೆ. 29 ಆರೋಗ್ಯವಂತ ಪುರುಷರ ವೀರ್ಯಾಣುವನ್ನು ಶೇಖರಿಸಿ, ಒಂದೆಡೆ ಸಹಜ ವಾತಾವರಣದಲ್ಲಿ ಸಂಗ್ರಹಿಸಿಡಲಾಯಿತು. ಇನ್ನೊಂದೆಡೆ ವೈಫೈ ಸಂಪರ್ಕವಿರುವ ಲ್ಯಾಪ್‌ಟಾಪ್ ಅಡಿಯಲ್ಲಿ ಇಡಲಾಯಿತು. ಸ್ವಲ್ಪ ಸಮಯದ ನಂತರ ಲ್ಯಾಪ್‌ಟಾಪ್ ಅಡಿಯಲ್ಲಿದ್ದ ಮಾದರಿಯಲ್ಲಿಯ ಬಹುತೇಕ ವೀರ್ಯಾಣುಗಳು ನಶಿಸಿಹೋಗಿದ್ದವು. ಶೇ 25ರಷ್ಟು ವೀರ್ಯಾಣುಗಳು ಚಲನೆಯ ಸಾಮರ್ಥ್ಯವನ್ನು ಕಳೆದುಕೊಂಡಿದ್ದವು. ಶೇ 9ರಷ್ಟು ಡಿಎನ್‌ಎ ಹಾಳಾಗಿ ಹೋಗಿತ್ತು. ಸಾಮಾನ್ಯವಾಗಿ ಶಾಖದಿಂದಾಗಿ ವೀರ್ಯಾಣುಗಳು ನಾಶವಾಗುತ್ತವೆ. ಲ್ಯಾಪ್‌ಟಾಪ್‌ನ ಕಾವು ವೀರ್ಯಾಣುವಿನ ಚಲನಾ ಸಾಮರ್ಥ್ಯವನ್ನು ಕಸಿಯುತ್ತವೆ. ವೈಫೈ ಸಂಪರ್ಕದಿಂದ ಎಲೆಕ್ಟ್ರೊಮ್ಯಾಗ್ನೆಟಿಕ್ ರೇಡಿಯೇಶನ್ ವೀರ್ಯಾಣುವಿನ ವರ್ಣತಂತುವನ್ನು ಘಾಸಿಗೊಳಿಸಿತ್ತು.
ಬಣ್ಣ, ಕಾಫಿ: ಅತಿ ಗಾಢವೆನಿಸುವ ಬಣ್ಣಗಳ ಬಳಕೆ, ಕೆಫಿನ್ ಅಂಶ ಹೆಚ್ಚಾಗಿರುವ ಸೇವನೆಯಿಂದಲೂ ವೀರ್ಯಾಣು ನಾಶವಾಗುತ್ತದೆ. ಈ ಅಂಶವನ್ನು ಬೆಂಬಲಿಸುವ ಯಾವುದೇ ಬಲವಾದ ಪ್ರಮಾಣಗಳಿಲ್ಲ. ಆದರೆ ಅತಿಯಾದ ಕೆಫಿನ್ ಅಥವಾ ಹಳದಿ ಬಣ್ಣದ ಡೈಯಿಂದ ಪರಿಣಾಮ ಬೀರಬಹುದು ಎನ್ನುವುದೊಂದು ಊಹೆಯೂ ಇದೆ.
ಬಿಸಿನೀರ ಟಬ್: ಒತ್ತಡದಿಂದ ನಿರಾಳರಾಗಲು ಈಚೆಗೆ ಬಿಸಿನೀರ ಟಬ್‌ನಲ್ಲಿ ಕಾಲಕಳೆಯುವುದು ಹೆಚ್ಚಾಗಿದೆ. ಬಿಸಿನೀರಿನ ತಾಪದಿಂದಾಗಿ ವೀರ್ಯನಾಶವಾಗಬಹುದು ಎನ್ನುವುದೊಂದು ನಂಬಿಕೆಯಿದೆ. ಕಾವಿನಿಂದ ನಾಶವಾಗುವ ಸಾಧ್ಯತೆ ಇದೆ. ಆದರೆ ಬಿಸಿನೀರಿನ ಟಬ್ ಬಳಕೆಯಿಂದ ಆಗುತ್ತದೆ ಎಂದು ಹೇಳಲಾಗದು. ಪ್ರತಿದಿನವೂ ಗಂಟೆಗಟ್ಟಲೆ ತಾಪದೊಂದಿಗೆ ಶಾಖವಿರುವ ಪರಿಸರದಲ್ಲಿ ಕೆಲಸ ಮಾಡುವುದರಿಂದ ವೀರ್ಯಾಣುವಿನ ಗುಣಮಟ್ಟದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಮಾತ್ರ ಖಚಿತವಾಗಿ ಹೇಳಬಹುದು.
ಬಿಗಿ ಚಡ್ಡಿ: ಬಿಗಿಯಾದ ಒಳು ಉಡುಪು ಧರಿಸುವುದರಿಂದ ವೃಷಣಗಳನ್ನು ಹತ್ತಿಕ್ಕಿದಂತಾಗುವುದು. ಇದರಿಂದ ವೀರ್ಯಾಣು ಉತ್ಪಾದನೆ ಕಡಿಮೆಯಾಗುತ್ತದೆ. ಇದೇ ಕಾರಣಕ್ಕೆ ಪುರುಷರು ಸಡಿಲವಾದ ಚಡ್ಡಿಗಳನ್ನು ಧರಿಸಬೇಕು ಎಂದೂ ಜನರು ಅಭಿಪ್ರಾಯ ಪಡುತ್ತಾರೆ. ಆದರೆ ಒಳ ಉಡುಪಿನಿಂದಾಗಿ ವೀರ್ಯನಾಶವಾಗುವುದಕ್ಕೆ ಯಾವುದೇ ಪ್ರಬಲವಾದ ಸಾಕ್ಷಿಗಳು ಈ ವರೆಗೂ ಲಭ್ಯವಾಗಿಲ್ಲ. ಪುರುಷರ ಆರೋಗ್ಯಕ್ಕೆ ಧರಿಸುವ ಬಿಗಿಯುಡುಗೆಗೂ ಯಾವುದೇ ಸಂಬಂಧವಿಲ್ಲ. ಇದೊಂದು ಸುಳ್ಳು ನಂಬಿಕೆಯಾಗಿದೆ.
ಸೈಕ್ಲಿಂಗ್: ಸೈಕಲ್ ತುಳಿಯುವ ಉತ್ಸಾಹ ಇರುವವರಿಗೆ ಇಲ್ಲೊಂದು ನಿರಾಶಾದಾಯಕ ಸುದ್ದಿ ಇದೆ. ಸುದೀರ್ಘ ಯಾನವನ್ನು ಸೈಕಲ್ ಮೇಲೆ ಕೈಗೊಳ್ಳುವವರ ವೀರ್ಯ ಉತ್ಪತ್ತಿಯ ಮೇಲೆ ಖಂಡಿತ ಪರಿಣಾಮಬೀರುತ್ತದೆ. ಸ್ಪ್ಯಾನಿಷ್ ಅಧ್ಯಯನವೊಂದು ಈ ಬಗ್ಗೆ ಖಚಿತವಾಗಿ ಹೇಳಿದೆ. ಆಟೋಟಗಳಲ್ಲಿ ಭಾಗವಹಿಸುವ ಅಥ್ಲೀಟ್‌ಗಳಿಗೆ ಹೋಲಿಸಿದರೆ ಸೈಕಲ್ ಸವಾರರಲ್ಲಿ ವೀರ್ಯ ಉತ್ಪಾದನೆಯ ಪ್ರಮಾಣ ಕಡಿಮೆಯಾಗಿರುತ್ತದೆ ಎಂದು ಆ ಅಧ್ಯಯನ ಹೇಳುತ್ತದೆ.
ಸೆಲ್‌ಫೋನ್ ಬಳಕೆ: ಕ್ಯಾಲಿಫೋರ್ನಿಯಾ ಬರ್ಕ್ಲಿಯ ಅಧ್ಯಯನವೊಂದು ಸೆಲ್‌ಫೋನುಗಳ ಬಳಕೆ ಹಾಗೂ ಸಂತಾನೋತ್ಪತ್ತಿಯ ಬಗ್ಗೆ 9 ವಿವಿಧ ಅಧ್ಯಯನಗಳ್ನು ಕೈಗೊಂಡಿದೆ. ಅವುಗಳಲ್ಲಿ 8 ಅಧ್ಯಯನಗಳು ಸೆಲ್‌ಫೋನ್ ಬಳಕೆಯಿಂದ ಪುರುಷರ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ ಎಂದೇ ಹೇಳಿವೆ. ವಿಶೇಷವಾಗಿ ಸೆಲ್‌ಫೋನುಗಳನ್ನು ಪ್ಯಾಂಟಿನ ಜೋಬುಗಳಲ್ಲಿ ಇಟ್ಟುಕೊಳ್ಳುವುದರಿಂದ ವೀರ್ಯ ಉತ್ಪಾದನೆಯ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ. ಸೆಲ್ ಫೋನುಗಳು ಉಗುಳುವ ಎಲೆಕ್ಟ್ರೊ ಮ್ಯಾಗ್ನೆಟಿಕ್ (ವಿದ್ಯುತ್ಕಾಂತೀಯ) ಅಲೆಗಳು ವೀರ್ಯ ಉತ್ಪಾದನೆಗೆ ಅನುವು ಆಗುವ ಜೀವಕೋಶಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ.
ರಸೀದಿ: ನಗದು ರಸೀದಿಯೊಂದಿಗೆ ಕೆಲಸ ಮಾಡುವವರಲ್ಲಿ ವೀರ್ಯನಾಶವಾಗುತ್ತದೆ ಎನ್ನುವ ವಾದದಲ್ಲಿ ಹುರುಳಿದೆ. ಅದು ನಗದು ರಸೀದಿಯ ತಪ್ಪಲ್ಲ. ಆದರೆ ಆ ರಸೀದಿಗೆ ಅಂಟಿಕೊಂಡಿರುವ ಪ್ಲಾಸ್ಟಿಕ್ ಕೋಟಿಂಗ್‌ನಲ್ಲಿರುವ ಬಿಪಿಎ(BPA) ಯಿಂದಾಗಿ ಪುರುಷರ ಹಾರ್ಮೋನ್ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಪ್ಲಾಸ್ಟಿಕ್ ಕೋಟ್ ಇರುವ ರಸೀದಿಯನ್ನು 10 ಸೆಕೆಂಡುಗಳ ಅವಧಿಗೆ ಹಿಡಿದುಕೊಂಡರೂ 2.5 ಮೈಕ್ರೋಗ್ರಾಮ್‌ಗಳಷ್ಟು ಬಿಪಿಎ ನಿಮ್ಮ ಚರ್ಮದೊಳಕ್ಕೆ ರವಾನೆಯಾಗಿರುತ್ತದೆ. ಬಿಪಿಎ ಎಂಡೊಕ್ರೈನ್ ವಿನಾಶಕವೆಂದೇ ಹೆಸರಾಗಿದೆ. ಇದು ಪುರುಷರ ಫಲವಂತಿಕೆಯ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಆದರೆ ಜೇಬಿನಲ್ಲಿ ಈ ರಸೀದಿಗಳನ್ನು ಇರಿಸುವುದರಿಂದ ಏನಾದರೂ ವ್ಯತ್ಯಯವಾಗುತ್ತದೆಯೇ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಆದರೆ ರಸೀದಿಯ ಕೆಲಸ ಮುಗಿದೊಡನೇ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳುವುದು ಒಳ್ಳೆಯ ಅಭ್ಯಾಸವಾಗಿದೆ.
ಧೂಮಪಾನ: ಫಲವಂತಿಕೆಯ ಸಮಸ್ಯೆ ಇದ್ದವರು ಧೂಮಪಾನಿಗಳಾಗಿದ್ದಲ್ಲಿ ಧೂಮಪಾನವನ್ನು ಬಿಡಲೇ ಬೇಕಾಗುತ್ತದೆ. ಹಲವಾರು ವರ್ಷಗಳ ಸಂಶೋಧನೆಯು ಈ ವಿಷಯವನ್ನು ಮತ್ತೆ ಮತ್ತೆ ಸ್ಪಷ್ಟ ಪಡಿಸುತ್ತಲೇ ಬಂದಿದೆ. ಧೂಮಪಾನವು ವೀರ್ಯ ಮತ್ತು ವೀರ್ಯಾಣುವಿನ ಗುಣಮಟ್ಟದ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರುತ್ತದೆ. ವೀರ್ಯಾಣುವಿನ ಡಿಎನ್‌ಎ ಹಾಗೂ ಕ್ರೋಮೊಸೋಮ್‌ಗಳು ಸಮರ್ಪಕವಾಗಿರುವುದಿಲ್ಲ. ಬಸಿರು ಕಟ್ಟಿದರೂ ಗರ್ಭಪಾತವಾಗುವ ಸಾಧ್ಯತೆಗಳು ಎಲ್ಲಕ್ಕಿಂತಲೂ ಹೆಚ್ಚಾಗಿರುತ್ತದೆ. ಗರ್ಭಧಾರಣೆ ಅಥವಾ ಫಲವಂತಿಕೆಯ ಬಗ್ಗೆ ಚಿಂತಿತರಾಗಿರುವವರಿಗೆ ಧೂಮಪಾನದಿಂದ ಯಾವುದೇ ಸಮಾಧಾನವಂತೂ ಸಿಗುವುದಿಲ್ಲ.
*
ಮಾಹಿತಿಗೆ: 1800 208 4444
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.