ಕಾಲುಗಳ ಸ್ನಾಯುಗಳಿಗೆ ಉತ್ತಮ ವ್ಯಾಯಾಮ ಒದಗಿಸಿ ಸುರೂಪ ನೀಡುವ ಮೂಲಕ, ಕಾಲು, ಸೊಂಟಕ್ಕೆ ಉತ್ತಮ ರಕ್ತಪರಿಚಲನೆ ಯೊದಗಿಸಿ, ಜನನೇಂದ್ರಿಯಗಳ ಆರೋಗ್ಯ ಸಮಸ್ಯೆ ನಿವಾರಿಸುವಲ್ಲಿ ನೆರವಾಗುತ್ತದೆ ಸಮಕೋನಾಸನ. ಸಮ ಎಂದರೆ ಮಟ್ಟಸ, ನೇರವಾದುದು ಎಂದರ್ಥ. ಕೋನ ಎಂದರೆ ಮೂಲೆ ಎಂದರ್ಥ. ಸಮಕೋನ ಎಂದರೆ 90 ಅಂಶದ ಕೋನ.
ಈ ಆಸನ ಅಭ್ಯಾಸದಲ್ಲಿ ಕಾಲುಗಳು ಪಕ್ಕಕ್ಕೆ ವಿಸ್ತರಿಸಿಟ್ಟು ಸಮಕೋನ ಸ್ಥಿತಿಯಲ್ಲಿ ನೆಲೆಸುವುದರಿಂದ ಇದಕ್ಕೆ ಸಮಕೋನಾಸನ ಎಂದು ಎಂದು ಹೆಸರಿಸಲಾಗಿದೆ.
ಅಭ್ಯಾಸಕ್ರಮ
ಕಾಲುಗಳನ್ನು ಜೋಡಿಸಿ ನೇರವಾಗಿ(ತಾಡಾಸನ) ನಿಲ್ಲಿ. ನಂತರ, ಕೈಗಳನ್ನು ಸೊಂಟಗಳ ಮೇಲಿರಿಸಿ, ಕಾಲುಗಳನ್ನು ಸಾಧ್ಯವಾದಷ್ಟು ಎಡ-ಬಲ ಪಕ್ಕಕ್ಕೆ ವಿಸ್ತರಿಸಿ. ಬಳಿಕ, ತುಸು ಮುಂದೆ ಬಾಗಿ ಅಂಗೈಗಳನ್ನು ನೆಲಕ್ಕೂರಿ ನೆರವು ಪಡೆದು, ಕಾಲುಗಳನ್ನು ಮತ್ತಷ್ಟು ಪಕ್ಕಕ್ಕೆ ವಿಸ್ತರಿಸುತ್ತಾ ನೆಲಕ್ಕೊರಗಿಸಿ, ಪೃಷ್ಠವನ್ನು ನೆಲಕ್ಕೂರಿಡಿ. ಕಾಲುಗಳ ತೊಡೆಗಳ ಕೆಳಭಾಗ, ಮೀನಖಂಡ ನೆಲಕ್ಕೊರಗಿದ್ದು, ಎರಡೂ ಒಂದೇ ಸಮರೇಖೆಯಲ್ಲಿ ಬರುವಂತೆ ಇರಿಸಿ.
ಕಾಲುಗಳಿಗೆ ಶ್ರಮ ಎನಿಸದೆ ನಿರಾಯಾಸವಾಗಿ ನೆಲಕ್ಕೊರಗಿವೆ ಎಂದೆನೆಸಿದ ಬಳಿಕವಷ್ಟೇ ಕೈಗಳ ನೆರವನ್ನು ತೆಗೆದು, ಬೆನ್ನನ್ನು ನೇರವಾಗಿಸಿ, ಅಂಗೈಗಳನ್ನು ಎದೆಯ ಮುಂದೆ ತಂದು ನಮಸ್ಕಾರ ಸ್ಥಿತಿಯಲ್ಲಿರಿಸಿ.
ಅಂತಿಮ ಸ್ಥಿತಿಯಲ್ಲಿ ಸರಳ ಉಸಿರಾಟ ನಡೆಸುತ್ತಾ 10ರಿಂದ 20 ಸೆಕೆಂಡು ನೆಲೆಸಿ. ಅವರೋಹಣ ಮಾಡುವಾಗ ಕೈಗಳನ್ನು ನೆಲಕ್ಕೂರಿ ನೆರವುಪಡೆದು ದೇಹವನ್ನು ಮೇಲಕ್ಕೆತ್ತಿ, ಕಾಲುಗಳನ್ನು ಮೇಲಕ್ಕೆ ಸೆಳೆದು ಎದ್ದು ನಿಲ್ಲಿ.
ಸೂಚನೆ
ಸಮಕೋನಾಸನ ನೋಡಲು ಸುಲಭ ಎಂಬಂತೆ ಕಂಡರೂ ಅಭ್ಯಾಸ ಕಷ್ಟಕರವಾದುದು. ಅತ್ಯಂತ ಜಾಗರೂಕತೆಯಿಂದ ಅಭ್ಯಾಸ ನಡೆಸಿ. ದೇಹಕ್ಕೆ ಕಾಲುಗಳೇ ಆಧಾರ. ಆದ್ದರಿಂದ, ಹೆಚ್ಚೆಚ್ಚು ಒತ್ತಡ ಹಾಕಿ ತೊಂದರೆಗೊಳಗಾಗಬೇಡಿ. ಅನಗತ್ಯ ಒತ್ತಡ ಹಾಕಿದರೆ ತೊಡೆ, ತೊಡೆಯ ಹಿಂಬದಿಯ ಹಾಗೂ ಸಂದುಗಳ ನರಗಳು, ಎಲುಬುಗಳು ತೊಡಕಿ, ತೊಂದರೆ ಎದುರಾಗುವ ಸಾಧ್ಯತೆ ಇದೆ. ನಿತ್ಯ ಎಷ್ಟು ಸಾಧ್ಯವೊ ಅಷ್ಟು ಮಾತ್ರ ಕಾಲುಗಳನ್ನು ವಿಸ್ತರಿಸಿ. ಶ್ರಮ ಎನಿಸಿದ ತಕ್ಷಣ ಕೈಗಳ ಮೇಲೆ ಭಾರ ಹಾಕಿ ಒಂದೆರೆಡು ಇಂಚಿನಷ್ಟು ಮೇಲೇಳಿ. ಅಲ್ಲಿ ಸಾಧ್ಯವಾದಷ್ಟು ಕಾಲ ನೆಲೆಸಿ ವಿರಮಿಸಿ. ನಿರಂತರ, ಪುನರಾವರ್ತನೆ ಅಭ್ಯಾಸ ನಡೆಸಿದರೆ ಸುಲಭವಾಗುತ್ತದೆ.
ಫಲಗಳು
* ಕಾಲುಗಳನ್ನು ಬೇಕೆಂದೆಡೆಗೆ ತಿರುಗಿಸಲು ನೆರವಾಗುವುದು.
* ಸೊಂಟದ ಕೀಲುಗಳಿಗೆ ಉತ್ತಮ ವ್ಯಾಯಾಮ ಒದಗಿಸುವುದು.
* ಬೆನ್ನೆಲುಬು ಉತ್ತಮವಾಗಿ ಹಿಗ್ಗಿ ನ್ಯೂನತೆಯನ್ನು ಸರಿಪಡಿಸುವುದು.
* ಅಂಡವಾಯು ಬೆಳೆಯದಂತೆ ತಡೆಯುತ್ತದೆ.
* ಕಾಲುಗಳ ಸ್ನಾಯುಗಳಿಗೆ ಉತ್ತಮ ವ್ಯಾಯಾಮ ಒದಗಿಸಿ ಸುರೂಪ ನೀಡುತ್ತದೆ.
* ಕಾಲುಗಳು ಹಾಗೂ ಸೊಂಟಕ್ಕೆ ಉತ್ತಮ ರಕ್ತಪರಿಚಲನೆ ಉಂಟುಮಾಡುತ್ತದೆ.
* ಜನನೇಂದ್ರಿಯಗಳ ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟು ಸರಿಯಾದ ಕಾರ್ಯ ನಿರ್ವಹಣೆಗೆ ನೆರವಾಗುತ್ತದೆ.
* ಯೋಗದ ಕುರಿತಾದ ಹೆಚ್ಚಿನ ಮಾಹಿತಿಗಾಗಿಇವನ್ನೂ ಓದಿ....
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.