ADVERTISEMENT

‘ಬರವಣಿಗೆ ಎಂದೂ ಒತ್ತಡ ಎನಿಸಿಲ್ಲ’

ಸೆಲಿಬ್ರಿಟಿ ಅ–ಟೆನ್ಶನ್

ಗಣೇಶ ವೈದ್ಯ
Published 6 ಫೆಬ್ರುವರಿ 2018, 19:30 IST
Last Updated 6 ಫೆಬ್ರುವರಿ 2018, 19:30 IST
‘ಬರವಣಿಗೆ ಎಂದೂ ಒತ್ತಡ ಎನಿಸಿಲ್ಲ’
‘ಬರವಣಿಗೆ ಎಂದೂ ಒತ್ತಡ ಎನಿಸಿಲ್ಲ’   

ನಾನು ಜಂಬ ಕೊಚ್ಚಿಕೊಳ್ಳೋಕೆ ಅಂತ ಹೇಳೋದಲ್ಲ. ನನ್ನ ಬದುಕಲ್ಲಿ ಸಾಕಷ್ಟು ದೊಡ್ಡ ದೊಡ್ಡ ಒತ್ತಡಗಳನ್ನೆಲ್ಲ ಎದುರಿಸಿದ್ದೇನೆ. ಅಂಥ ಸಂದರ್ಭದಲ್ಲಿ ನಾನು ನಿಶ್ಚಲಳಾಗಿಬಿಡ್ತೇನೆ. ‘ಎಂಥ ಬೇಕಾದ್ರು ಆಗ್ಲಿ’ ಎಂದು ಸುಮ್ಮನೆ ಇದ್ದುಬಿಡ್ತೇನೆ – ‘ಕೈ ಎತ್ತಿಬಿಡೋದು’ ಅಂತಾರಲ್ಲ, ಹಾಗೆ. ಆಗ ಅದು ತನ್ನಷ್ಟಕ್ಕೆ ತಾನೇ ಪರಿಹಾರ ಆಗುತ್ತೆ. ಅದನ್ನು ಬಿಟ್ಟು ಬೆಟ್ಟದಂಥ ಸಂಕಷ್ಟ ಎದುರಾಯ್ತು ಎಂದು ತೀರಾ ಮನಸ್ಸಿಗೆ ಹಚ್ಚಿಕೊಂಡರೆ ನಾವು ಒಳಗಿಂದೊಳಗೇ ಕುಸಿದುಹೋಗ್ತೇವೆ. ಯಾವುದೇ ಸಂದರ್ಭವನ್ನು ಎದುರಿಸಬೇಕೆಂದರೆ ನಾವು ಕುಸಿಯದೇ ದೃಢವಾಗಿ ಇರಬೇಕು.

ಅಷ್ಟಕ್ಕೂ, ಎಷ್ಟೇ ಕೆಲಸ ಇದ್ದಾಗಲೂ, ಯಾವುದೇ ಸಂದರ್ಭ ಎದುರಾದಾಗಲೂ ಎಲ್ಲವನ್ನೂ ಸರಿಯಾಗಿ ಯೋಜಿಸಿ ನಿರ್ವಹಿಸಿದಾಗ ಯಾವುದೂ ಒತ್ತಡ ಅನ್ನಿಸೋದಿಲ್ಲ. ರಾಶಿ ರಾಶಿ ಕೆಲಸಗಳನ್ನ ಇಟ್ಟುಕೊಂಡು, ಯಾವುದನ್ನೂ ಪ್ಲ್ಯಾನ್ ಮಾಡದೇ ಇದ್ದಾಗ ‘ಯಾವುದು ಮೊದಲು ಮಾಡೋದು, ಯಾವುದು ಬಿಡೋದು’ ಎಂಬ ಗೊಂದಲಕ್ಕೆ ಸಿಕ್ಕು ಒತ್ತಡಕ್ಕೆ ಒಳಗಾಗುತ್ತೇವೆ. ಆದರೆ ನಾವು ನಿರಾಳವಾಗಿ ಇದ್ದುಕೊಂಡು ಒಂದರ ನಂತರ ಒಂದರಂತೆ ಕೆಲಸ ಮಾಡುತ್ತಹೋದರೆ ಎಷ್ಟು ಕೆಲಸ ಬೇಕಾದರೂ ಮುಗಿಸಬಹುದು, ಎಂಥ ಸಂದರ್ಭವನ್ನಾದರೂ ಎದುರಿಸಬಹುದು.

ತೀರಾ ಒತ್ತಡಕ್ಕೆ ಒಳಗಾದಾಗ ನಾನು ಒಳಗಿಂದ ರಿಲೀಫ್ ಆಗಿಬಿಡ್ತೀನಿ. ನಿದ್ದೆ ಮಾಡ್ತೀನಿ. ಅಂಥ ಸಂದರ್ಭದಲ್ಲಿ ಚೆನ್ನಾಗಿ ನಿದ್ದೆಯೂ ಬರುತ್ತೆ. ಏಳುವ ಹೊತ್ತಲ್ಲಿ ಏನಾದರೊಂದು ಮಾರ್ಗ ಹೊಳೆಯುತ್ತದೆ. ಬಹುಶಃ ನಿದ್ದೆಯ ಸಂದರ್ಭದಲ್ಲಿ ಸುಪ್ತಮನಸ್ಸಿನಲ್ಲಿ ಏನೋ ಚಿಂತನೆ ನಡೆದಿರುತ್ತದೆ. ಇದೊಂದು ಮಾಯಾ ಮಂತರ್ ಎಂದಲ್ಲ ನಾನು ಹೇಳುವುದು. ಪ್ರತಿಯೊಬ್ಬನಲ್ಲೂ ಈ ಗುಣ ಇರುತ್ತೆ ಅನ್ನಿಸುತ್ತೆ. ಎಷ್ಟೆಂದರೂ ಇವೆಲ್ಲವೂ ಮನೋವಿಜ್ಞಾನವೇ ಅಲ್ಲವಾ?

ADVERTISEMENT

ಆದರೆ ನನ್ನ ಆತ್ಮಕ್ಕೆ ತೃಪ್ತಿ ಇಲ್ಲದೇ ಏನಾದರೂ ಕೆಲಸ ಮಾಡಿದಾಗ ರಾತ್ರಿಯಿಡೀ ತಳಮಳ ಅನುಭವಿಸುತ್ತೇನೆ. ಬರೀ ಕೆಲಸದ ಒತ್ತಡ ಮಾತ್ರವಲ್ಲ, ಬೇರೆ ಬೇರೆ ಒತ್ತಡಗಳೂ ಎದುರಾಗಿದ್ದಿದೆ. ಎಷ್ಟೋ ಬಾರಿ ನಾನು ಎದುರಿಸುತ್ತಿರುವ ಪರಿಸ್ಥಿತಿಗೆ ಕಾರಣ ಏನು ಎಂಬುದು ನನಗೂ ಗೊತ್ತಿರುವುದಿಲ್ಲ. ಅದನ್ನು ಸಕಾರಾತ್ಮಕವಾಗಿ ಪರಿಣಮಿಸಿಕೊಳ್ಳಬೇಕಾದರೆ, ಯಾಕೆ, ಏನು, ಎತ್ತ ಎಂದು ಅದರ ಜೊತೆ ಅನುಸಂಧಾನ ಮಾಡಿಕೊಳ್ಳುತ್ತ ಇರಬೇಕಾಗುತ್ತದೆ. ಯಾವಾಗ ನನ್ನ ಕೈಲಿ ಏನೂ ಇಲ್ಲ ಎಂದು ತಿಳಿಯುತ್ತೋ, ಆಗ ಯೋಚನೆ ಮಾಡಿ ಏನೂ ಪ್ರಯೋಜನ ಇಲ್ಲ; ಬಿಟ್ಟುಬಿಡುತ್ತೇನೆ. ನಾವು ಎಂಥದ್ದೇ ಪರಿಸ್ಥಿತಿಗೆ ಎದುರಾಗುತ್ತಿದ್ದರೂ ಸಮಯ ನಿಲ್ಲೋದಿಲ್ಲ. ಸಮಯದ ಜೊತೆಗೆ ನಾವು ಎದುರಿಸುವ ಒತ್ತಡದ ಸಂದರ್ಭವೂ ಕಳೆದು ಹೋಗುತ್ತದೆ.

ಬರವಣಿಗೆ ಕಾರಣಕ್ಕೆ ನಾನು ಯಾವತ್ತೂ ಒತ್ತಡ ಅನುಭವಿಸಿದ್ದಿಲ್ಲ. ಬರೆಯೋದಕ್ಕೆ ರಾತ್ರಿ ಎರಡೂವರೆಯಿಂದ ಮೂರು ಗಂಟೆ ನನಗೆ ಹಿತಕರವಾದ ಸಮಯ. ಬೆಳಿಗ್ಗೆ ಆಗೋವಾಗ ನಿರಾಳ ಆಗಿಬಿಟ್ಟಿರ್ತೀನಿ. ಅದೇ ಕಾರಣಕ್ಕೆ ನಾನು ಎಂದಿಗೂ ನನ್ನ ಬರವಣಿಗೆಯಿಂದಾಗಿ ಕುಟುಂಬವನ್ನು ಮಿಸ್ ಮಾಡಿಕೊಳ್ತಿದ್ದೇನೆ, ಮಕ್ಕಳಿಗೆ ಸಮಯ ಕೊಡೋಕಾಗ್ತಿಲ್ಲ ಎಂಬ ಭಾವನೆ ನನ್ನನ್ನು ಬಾಧಿಸಿಲ್ಲ. ಹಾಗೇ ನಾನು ಬರವಣಿಗೆಗೆ ಕೂತಾಗ ಮನೆಯಲ್ಲೂ ಸಹಕಾರ ಚೆನ್ನಾಗೆ ಇರುತ್ತದೆ.

ಡೆಡ್‌ಲೈನ್‌ ಹಾಕಿಕೊಂಡು ಕೆಲಸ ಮಾಡೋಕೆ ನನಗೆ ಆಗೋದಿಲ್ಲ. ಬೇಕಿದ್ರೆ ಡೆಡ್‌ಲೈನ್‌ ಅನ್ನೇ ಸ್ವಲ್ಪ ಮುಂದೂಡಿ ಅಂತ ಹೇಳ್ತೇನೆ. ಒಂದು ಕಥಾಸಂಕಲನ ಪ್ರಕಟಿಸಲು ಇನ್ನೆರಡೇ ಕಥೆಗಳು ಬೇಕು ಎನ್ನುವ ಸಂದರ್ಭದಲ್ಲೂ ತರಾತುರಿಯಲ್ಲಿ ಕಥೆಗಳನ್ನು ಬರೆದು, ಪ್ರಕಟಿಸಿಬಿಡೋಣ ಎಂದುಕೊಳ್ಳುವುದಿಲ್ಲ. ಪ್ರಕಟಣೆ ಎರಡು ವರ್ಷ ತಡವಾದರೂ ಪರವಾಗಿಲ್ಲ. ಬರವಣಿಗೆಗೆ ನನಗೆ ತುಂಬಾ ಸಮಯ ಹಿಡಿಯುತ್ತದೆ. ಒಂದು ಸಿನಿಮಾ ಚಿತ್ರೀಕರಣ ಆದ ಮೇಲೆ ಸಂಕಲನಕ್ಕೆ ಸಮಯ ತೆಗೆದುಕೊಳ್ಳುವ ರೀತಿಯೇ ಕಥೆ ಬರೆದ ಮೇಲೆ ಅದನ್ನು ಒಪ್ಪ ಮಾಡುವುದಕ್ಕೂ ಸಮಯ ಬೇಕಾಗುತ್ತದೆ.

ಯಾರಾದರೂ ಏನಾದರೂ ಬರೆದುಕೊಡಿ ಎಂದಾಕ್ಷಣ ‘ಆಯ್ತು ಬರೆದುಕೊಡುತ್ತೇನೆ’ ಎಂದು ಖಚಿತವಾಗಿ ಮಾತು ಕೊಡುವುದಿಲ್ಲ. ‘ಆದರೆ ಬರೆದುಕೊಡುತ್ತೇನೆ’ ಎನ್ನುತ್ತೇನೆ. ಯಾವಾಗಲೂ ನನ್ನದೇ ಒಂದು ಮಾರ್ಜಿನ್ ಇಟ್ಟುಕೊಂಡಿರುತ್ತೇನೆ. ಮುಲಾಜಿಗೆ ಒಪ್ಪಿಕೊಂಡು, ಆಮೇಲೆ ಬರೆದುಕೊಡೋಕೆ ಆಗದೇ ಹೋದರೆ ಅದು ನನ್ನನ್ನು ಬಾಧಿಸುತ್ತಿರುತ್ತದೆ. ಒಪ್ಪಿಕೊಂಡು ಬಿಟ್ರೆ ನನ್ನ ಸ್ಪೇಸ್ ಕಳೆದುಕೊಂಡುಬಿಡುತ್ತೇನೆ. ಹಾಗಂತ, ಬರೆಯಬೇಕು ಎಂಬ ಒಂದು ಸಂಕಲ್ಪ ಇಲ್ಲದೇ ಏನೂ ಮಾಡೋಕೆ ಆಗೋದಿಲ್ಲ.

ಪ್ರಶಸ್ತಿಗಳನ್ನೂ ವೈಯಕ್ತಿಕವಾಗಿ ತೆಗೆದುಕೊಳ್ಳುವುದಿಲ್ಲ. ‘ಚೆನ್ನಾಗಿ ಬರಿತೀಯಮ್ಮ’ ಎಂದು ಮನೆಯಲ್ಲಿ ಬೆನ್ನು ತಟ್ಟುತ್ತಾರಲ್ಲ, ಹಾಗೇ ಸಮಾಜ ಬೆನ್ನು ತಟ್ಟುವ ಪರಿ ಪ್ರಶಸ್ತಿ. ಹಲವು ಜನರ ಪೋಷಣೆ, ಕೊಡುಗೆಯಿಂದಾಗಿ ಬರವಣಿಗೆ ನಮಗೆ ಬಂದಿರುತ್ತದೆ. ನಾನು ಪ್ರಶಸ್ತಿ ಸ್ವೀಕರಿಸುವ ಮೂಲಕ ಅವರಿಗೆಲ್ಲ ಗೌರವ ಸಲ್ಲಿಸುತ್ತಿರುತ್ತೇನೆ. ಆಗ ಪ್ರಶಸ್ತಿಯೂ ಭಾರ ಎನ್ನಿಸುವುದಿಲ್ಲ. ನಿರೀಕ್ಷೆಯ ಭಾರವೂ ಇರುವುದಿಲ್ಲ. ಬೇರೆಯವರಿಗೆ ಪ್ರಶಸ್ತಿ ಬಂದಾಗಲೂ ಖುಷಿಯೇ ಆಗುತ್ತದೆ.

ಬರವಣಿಗೆಯನ್ನು ಪ್ರೀತಿ ಮಾಡದೇ ಅದು ನಮ್ಮ ಹತ್ತಿರ ಬರೋದಿಲ್ಲ. ಬರೆಯಬೇಕು ಎಂಬ ಆಸೆಯಿಂದ ನಾವು ಹತ್ತು ಹೆಜ್ಜೆ ಇಟ್ಟಾಗ ಹನ್ನೊಂದನೇ ಹೆಜ್ಜೆಯನ್ನು ಬರವಣಿಗೆಯೇ ನಮ್ಮಿಂದ ಇಡಿಸುತ್ತದೆ. ಹೊಗಳಿಕೆ–ತೆಗಳಿಕೆ ಎರಡಕ್ಕೂ ಪ್ರತಿಕ್ರಿಯಿಸದೆ ಸುಮ್ಮನೆ ಇದ್ದುಬಿಡುತ್ತೇನೆ. ಬರವಣಿಗೆ ನನ್ನೊಳಗೆ ನಾನು ಮಾತನಾಡಿಕೊಳ್ಳುವ ಪ್ರಕ್ರಿಯೆ ಆದ ಕಾರಣ ಟೀಕೆ, ಶಹಬ್ಬಾಸ್‌ಗೆ ತಲೆಕೆಡಿಸಿಕೊಳ್ಳುವ ಪ್ರಮೇಯವೇ ಇಲ್ಲ. ಟೀಕೆ ನಿಜ ಎನ್ನಿಸಿದರೆ ತಿದ್ದಿಕೊಳ್ತೇನೆ. ನನ್ನದಲ್ಲದ ಕಾರಣಕ್ಕೆ ನಾನು ಜವಾಬು ಕೊಡುವ ಸಂದರ್ಭ ಎದುರಾದಾಗ ಘನ ಮೌನಕ್ಕೆ ಶರಣಾಗಿಬಿಡುತ್ತೇನೆ.

ಮನಸ್ಸು ನೊಂದ ಸಂದರ್ಭದಲ್ಲಿ ಬಾಗಿಲು ಹಾಕಿಕೊಂಡು ಕೂರುತ್ತೇನೆ ಎಂಬುದು ಹೆಂಗಸರ ಲೋಕಕ್ಕೆ ಸಲ್ಲದ ಮಾತು. ನಾವು ಜಗತ್ತಿನೊಂದಿಗೆ, ಕುಟುಂಬದೊಂದಿಗೆ ವ್ಯವಹರಿಸುತ್ತಲೇ ನಮ್ಮೊಳಗಿನ ಏಕಾಂತವನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಮನೆ ಕೆಲಸಗಳನ್ನೆಲ್ಲ ಮುಗಿಸಿ ಬಿಡುವಾಗಿ ಲೋಕದ ಎಲ್ಲ ವಿಷಯಗಳ ಬಗೆಗೂ ಮಾತಾಡಿಕೊಂಡು ಗಮ್ಮತ್ತಲ್ಲಿ ಪಟ್ಟಾಂಗ ಹೊಡೆದುಕೊಂಡು ಕಾಲ ಕಳೆಯೋದೂ ನನ್ನ ಒತ್ತಡದ ಶಮನಕವಾಗಿ ಪರಿಣಮಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.