ರಘು ವಿ.
ನಮ್ಮ ಜೀವನದ ಬಹುತೇಕ ಭಾಗ ಅವರಿವರ ಮಾತಿನಿಂದ ಪ್ರಭಾವಿತವಾಗುವುದು. ಬದುಕು ನಮ್ಮದಾದರೂ ಅದರ ಬಗ್ಗೆ ಇತರರು ಟೀಕೆಟಿಪ್ಪಣಿ ಮಾಡುತ್ತಿರುತ್ತಾರೆ. ಹೇಗೆ ಬಾಳಿದರೂ ಅಳೆದು ತೂಗುವವರು ಎತ್ತಿ ಆಡುವವರು ಇರುತ್ತಾರೆ. ಟೀಕೆಗಳನ್ನು ಹೇಗೆ ಸ್ವೀಕರಿಸಬೇಕು, ಅಥವಾ ಯಾವ ರೀತಿ ನಿರಾಕರಿಸಬೇಕು ಎಂಬುದನ್ನು ತಿಳಿದುಕೊಂಡರೆ ಜೀವನ ನೆಮ್ಮದಿ ಕಾಣಬಹುದು. ಗೀತೆಯನ್ನು ಬೋಧಿಸಿದ ಶ್ರೀಕೃಷ್ಣ, ಮರ್ಯಾದಾ ಪುರುಷೋತ್ತಮ ಶ್ರೀರಾಮನೂ ಜನರ ಟೀಕೆಗೆ ಒಳಗಾದವರೇ. ತಿದ್ದಿಕೊಳುವುದೆಷ್ಟು, ತಾಳಿಕೊಳುವುದೆಷ್ಟು ತಿರುಗಿಬೀಳುವುದೆಷ್ಟು ಎಂಬ ಗುಟ್ಟು ಅರಿತಿರಬೇಕು. ಮಹನೀಯರ ಬದುಕಿನಲ್ಲಿ ನಾವಿದನ್ನು ಕಾಣುತ್ತೇವೆ.
ಟೀಕೆಗಳನ್ನು ಮುಖ್ಯವಾಗಿ ಎರಡು ಬಗೆಯದಾಗಿ ಪರಿಗಣಿಸಬಹುದು. ಒಂದು ಸಕಾರಾತ್ಮಕ ಟೀಕೆ ಮತ್ತೊಂದು ನಕಾರಾತ್ಮಕ ಟೀಕೆ. ಇವೆರಡೂ ಮನಸ್ಸಿನ ಮೇಲೆ, ವ್ಯಕ್ತಿತ್ವದ ಮೇಲೆ ಪ್ರಭಾವ ಬೀರಬಲ್ಲವು. ಈ ಮಾತುಗಳು ಆತ್ಮವಿಶ್ವಾಸವನ್ನು ಹೆಚ್ಚಿಸಬಲ್ಲವು, ಹಾಗೇ ಅದನ್ನು ಕುಗ್ಗಿಸಲೂ ಬಲ್ಲವು. ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಬಲ ದೌರ್ಬಲ್ಯಗಳಿರುತ್ತವೆ. ಏನೇ ಆದರೂ ತಾನೊಬ್ಬ ವಿಶಿಷ್ಟ ಎಂಬ ಭಾವವೂ ಅವನಲ್ಲಿರುತ್ತದೆ. ಆದರೆ ಟೀಕೆಗಳು ಅವನ ಮೇಲೆ ಪರಿಣಾಮ ಬೀರಿ ಅವನು ಕುಗ್ಗುವಂತೆ ಮಾಡುವ ಗುಣ ಹೊಂದಿವೆ. ಸಜ್ಜನರು ಇತರರ ದೌರ್ಬಲ್ಯಗಳನ್ನು ಪರಿಗಣಿಸದೆ ಅವರ ಸದ್ಗುಣಗಳನ್ನು ಕಂಡು ಪ್ರೋತ್ಸಾಹಿಸುತ್ತಾರೆ. ಶ್ರೀರಾಮಕೃಷ್ಣರು ಸೌಜನ್ಯಮೂರ್ತಿ. ಅವರೆನ್ನುತ್ತಾರೆ: ‘ಒಬ್ಬ ಕುಂಟನನ್ನು ‘ನೀನು ಹೇಗೆ ಕುಂಟನಾದೆ?’ ಎಂದು ಕೇಳಬಾರದು.’ ಆದರೆ ಜಗತ್ತಿನಲ್ಲಿ ಇಂತಹವರು ವಿರಳ. ಗೇಲಿ ಮಾಡಿ ಕುಂದಿಸಲು ಪ್ರಯತ್ನಿಸುವವರೇ ಹೆಚ್ಚು. ಆದರೆ ವ್ಯಕ್ತಿಯೊಳಗಿನ ಕಿಚ್ಚು ಹೆಚ್ಚಲೂ ಇಂತಹ ಗೇಲಿಗಳೇ ಕಾರಣವಾದದ್ದಿದೆ. ಪುರಾತನ ಗ್ರೀಕ್‌ನ ಡೆಮಾಸ್ತನೀಸ್ ಹುಟ್ಟಿನಿಂದ ಹೊಂದಿದ್ದ ಉಗ್ಗನ್ನು ಕಳೆದುಕೊಂಡು ಪ್ರಚಂಡ ವಾಗ್ಮಿಯಾದದ್ದು ಇಂತಹ ಕೆಚ್ಚಿನಿಂದಲೇ.
ಸಕಾರಾತ್ಮಕ ಟೀಕೆಗೆ ಕಾರಣವಾಗುವುದು ಅಂತಹವರು ನಮ್ಮ ಬಗ್ಗೆ ಹೊಂದಿರಬಹುದಾದ ಕಾಳಜಿಯಿಂದ. ಇದು ನಾವು ತಿದ್ದಿಕೊಳ್ಳಬೇಕೆಂಬ ಆಶಯದ ಟೀಕೆ. ಇಂತಹ ಸಕಾರಾತ್ಮಕ ಟೀಕೆಗಳು ಹೆಚ್ಚು ಸೌಜನ್ಯಯುತವಾಗಿಯೂ ನಿರ್ದಿಷ್ಟವೂ ನಮ್ಮ ಭಾವನೆಗಳಿಗೆ ಸ್ಪಂದಿಸುವ ಮತ್ತು ನಮ್ಮನ್ನು ಉತ್ತಮಪಡಿಸುವ ಆಶಯ ಹೊಂದಿರುತ್ತವೆ. ಇದರಲ್ಲಿ ಲೇವಡಿ ಮಾಡುವ ಉದ್ದೇಶ ಇರದು. ಆದರೆ ಇದನ್ನು ಸ್ವೀಕರಿಸುವಾಗಲೂ ಎಚ್ಚರವಿರಬೇಕು. ಇದು ನಮ್ಮನ್ನು ಮೆಚ್ಚಿಸಲು ಆಡುವ ನುಡಿಯೋ ಅಥವಾ ತಿದ್ದುವ ಮನಸ್ಸಿನದೋ ಎಂದು ಆಲೋಚಿಸಬೇಕು. ಮತ್ತೊಂದು ಮುಖ್ಯವಾದ ಅಂಶವೆಂದರೆ ನಮ್ಮ ಒಳಿತಿಗೇ ಹೇಳಿದ್ದಾದರೂ ಅದೇನಾದರೂ ನಮ್ಮತನವನ್ನೂ ಕಳೆಯುವಂತಹದ್ದಾದರೆ ಅದನ್ನು ನಿರಾಕರಿಸುವ ಧಾರ್ಷ್ಟ್ಯವನ್ನು ನಾವು ಹೊಂದಿರಬೇಕು. ನಮ್ಮ ನಿತ್ಯಜೀವನದಲ್ಲಿ ನಮ್ಮನ್ನು ಹತ್ತಿರದಿಂದ ಬಲ್ಲವರು ಈ ಬಗೆಯ ಸಕಾರಾತ್ಮಕ ಟೀಕೆ ಮಾಡಬಲ್ಲರು. ಅವರ ಮಾತಿಗೆ ಮನ್ನಣೆ ಕೊಡಬೇಕಾಗುತ್ತದೆ.
ನಕಾರಾತ್ಮಕ ಟೀಕೆಗಳು ವ್ಯಕ್ತಿಯನ್ನು ಕುಗ್ಗಿಸಲೆಂದೇ ಬಳಕೆಯಾಗುವಂತಹವು. ಅಸೂಯೆ, ಕೋಪ, ತಿರಸ್ಕಾರದ ಬೀಜಗಳು ಟೀಕೆಗಳಾಗಿ ರೂಪ ತಳೆದು ಗಾಳಿಮಾತಿನಿಂದ ಮೊದಲ್ಗೊಂಡು ಚಾರಿತ್ರ್ಯಹನನದವರೆಗೂ ಇದು ಸಾಗಬಲ್ಲದು. ಇಂತಹ ಸಂದರ್ಭಗಳಲ್ಲಿ ಆತ್ಮಸಾಕ್ಷಿಗನುಗುಣವಾಗಿ ವರ್ತಿಸಿ ಸುಮ್ಮನಿರುವುದು ಉಚಿತ. ಸಂದರ್ಭಕ್ಕೆ ತಕ್ಕಂತೆ ಕಡೆಗಣಿಸುವುದೋ ಅಥವಾ ಬಾಯಿಮುಚ್ಚಿಸುವುದೋ ಸೂಕ್ತಕ್ರಮ. ಸಂಬಂಧಗಳಲ್ಲಿ, ಉದ್ಯೋಗವಲಯದಲ್ಲಿ ಇಂತಹ ನಕಾರಾತ್ಮಕ ಟೀಕೆಗಳು ಹೆಚ್ಚು. ಅದರಲ್ಲೂ ಸಾರ್ವಜನಿಕ ವ್ಯಕ್ತಿಗಳು, ಸಿನೆಮಾತಾರೆಯರು, ರಾಜಕಾರಣಿಗಳು – ಈ ಬಗೆಯ ನಕಾರಾತ್ಮಕ ಟೀಕೆಗಳಿಗೆ ಪಕ್ಕಾಗುತ್ತಾರೆ. ಆದರೆ ಅದನ್ನು ಅವರು ಸಮರ್ಥವಾಗಿ ಎದುರಿಸುವುದನ್ನೂ ಕಾಣುತ್ತೇವೆ. ಅಂದರೆ, ಟೀಕೆಗಳಲ್ಲಿ ಹುರುಳಿಲ್ಲ ಎಂಬ ನಂಬಿಕೆ ವ್ಯಕ್ತಿಗಿದ್ದರೆ ಅವನು ಒಂದು ಬಗೆಯ ಭಂಡತನದಿಂದಲೇ ಅದನ್ನು ಜಯಿಸಿಬಿಡುತ್ತಾನೆ. ಇದರರ್ಥ ಲಜ್ಜೆಗೇಡಿಗಳಾಗಿರಬೇಕು ಎಂದಲ್ಲ. ಆದರೆ ಟೀಕೆ ನಿರಾಧಾರವಾದದ್ದು ಎಂಬ ನಂಬಿಕೆ ಇದ್ದಾಗ ಹಾಗೆ ವರ್ತಿಸಿ ಅದರ ನಕಾರಾತ್ಮಕ ಪ್ರಭಾವದಿಂದ ಪಾರಾಗಬಹುದು ಎಂಬ ಗಮನಿಕೆ.
ಟೀಕೆ ಸಕಾರಾತ್ಮಕವೋ ನಕಾರಾತ್ಮಕವೋ ಎಂದು ದೃಢಪಟ್ಟಮೇಲೆ ಅದಕ್ಕೆ ತಕ್ಕಂತೆ ಪ್ರತಿಕ್ರಿಯೆ ತೋರುವುದು ಜಾಣತನ. ಅದು ಸಕಾರಾತ್ಮಕವಾಗಿದ್ದಾರೆ ಹಾಗೆ ಟೀಕಿಸಿದವರಿಗೆ ಕೃತಜ್ಞತೆ. ಏಕೆಂದರೆ ನಾವು ಉತ್ತಮಗೊಳ್ಳಲು ಅವರು ನೆರವಾಗುತ್ತಿದ್ದಾರೆ. ನಕಾರಾತ್ಮಕವಾಗಿದ್ದರೆ, ಅದು ಸತ್ಯವಾಗಿದ್ದರೆ ತಿದ್ದಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ವರ್ತನೆಗಳಿಂದ ಪರಿವರ್ತನೆ ಸಾಧ್ಯವಾಗುವುದಾದರೆ ತಿದ್ದಿಕೊಳ್ಳುವ ಅವಕಾಶ ಬಳಸಿಕೊಳ್ಳಬೇಕು. ನಿಂದಕರನ್ನೂ ವಂದಿಸೋಣ. ನಿಂದಕರಿರಬೇಕು ನಿಜ ಆದರೆ ಸುತ್ತಲೂ ನಿಂದಕರೇ ಇದ್ದರೆ ಬದುಕು ಬರ್ಬರವಾಗುವ ಮುನ್ನ ಅವರಿಂದ ದೂರಾಗುವುದು ಕ್ಷೇಮಕರ.
ಸಂತೆಯೊಳಗೆ ಮನೆ ಮಾಡಿ ಶಬ್ದಕ್ಕೆ ಅಂಜಬೇಡಿ ಎಂಬಂತೆ ಜಗತ್ತಿನೊಳಗಿದ್ದು ಟೀಕೆಗೆ ಹೆದರಬೇಡಿ ಎಂದೆನ್ನಬೇಕು. ಸಾರಾಂಶ ಇಷ್ಟೆ. ಟೀಕೆಯ ಉದ್ದೇಶ ಅರಿಯಬೇಕು, ತಾಳ್ಮೆಯಿಂದ ಗ್ರಹಿಸಬೇಕು, ಅದರಿಂದ ನಮ್ಮ ಉತ್ತಮೀಕರಣ ಸಾಧ್ಯವೆನಿಸಿದರೆ ಬದಲಾವಣೆ ತಂದುಕೊಳ್ಳಬೇಕು. ನಿರಾಕಾರಣವಾಗಿದ್ದರೆ ನಿಂದಕರನ್ನು ದೂರ ಮಾಡಬೇಕು. ಎಂತಾದರಾಗಲಿ, ಛಲದಿಂದ ಬಾಳಬೇಕು. ಸಾವು ಕೂಡ ಒಂದು ವಿರಾಮವೆಂದು ಭಾವಿಸುವ ಮನಸ್ಸು ನಮ್ಮದಾದಾಗ ಇನ್ನು ಲೋಕದ ಹೊಗಳಿಕೆ ನಿಂದೆಗಳು ಹೆಚ್ಚು ಪರಿಣಾಮ ಬೀರವು. ಅಂತಹ ನಿಲುವು ನಮ್ಮದಾಗಲಿ. ಲೋಕನಿಂದೆಗೆ ಕುಗ್ಗುವ ಮನಗಳಿಗೆ ಕಗ್ಗದ ಈ ಪದ್ಯ ಆನ್ವಯಿಕ: ‘ಸತ್ತೆನೆಂದೆನಬೇಡ; ಸೋತೆನೆಂದೆನಬೇಡ, ಬತ್ತಿತೆನ್ನೊಳು ಸತ್ತ್ವದೂಟೆಯೆನಬೇಡ, ಮೃತ್ಯುವೆನ್ನುವುದೊಂದು ತೆರೆಯಿಳಿತ; ತೆರೆಯೇರು ಮತ್ತೆ ತೋರ್ಪುದು ನಾಳೆ.’ ಹೀಗೆ ಟೀಕೆಯ ಟಾಕುಗಳಿಗೆ ಕುಗ್ಗದೆ ಠೀಕಾಗಿ ಬದುಕೋಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.