ಪ್ರಪಂಚದ ಮನ್ನಣೆಗೆ ಕಾತರಿಸದೆ ನಮ್ಮನ್ನು ನಾವು ಸ್ವೀಕರಿಸಿಕೊಳ್ಳುವುದೇ ನಿಜವಾದ ಗೆಲುವು. ಹೀಗೆ ಸ್ವೀಕರಿಸುವುದರಿಂದ ಹೊರಪ್ರಪಂಚದ ಸೋಲಿನ ಬಗ್ಗೆ ಭಯ ಇರದು....
ನಮ್ಮ ಜೀವನದ ಅನುಭವಗಳನ್ನು, ಆಗುಹೋಗುಗಳನ್ನು ‘ಸೋಲು-ಗೆಲುವು’ ಎನ್ನುವ ಸಂಕುಚಿತ ದೃಷ್ಟಿಕೋನದಿಂದ ನೋಡುವುದು ನಾವು ಬೆಳೆಯಬಹುದಾದ ಅನೇಕ ಅವಕಾಶಗಳನ್ನು ನಮ್ಮಿಂದ ಕಿತ್ತುಕೊಳ್ಳುವುದರೊಂದಿಗೆ ನಮ್ಮ ಮನಃಶಾಂತಿಗೂ ಕೇಡು ಮಾಡುತ್ತದೆ. ಬೇಕಾದ್ದು ಸಿಕ್ಕಿದರೆ ಗೆಲುವು, ನಾವು ಬಯಸಿದ್ದು ನೆರವೇರದಿದ್ದರೆ ಸೋಲು; ಗೆಲುವೆಂದರೆ ಸಮ್ಮಾನ, ಸ್ವೀಕಾರ, ಸೋಲೆಂದರೆ ಅವಮಾನ, ತಿರಸ್ಕಾರ ಮುಂತಾದ ಮಾನಸಿಕ ಚಿತ್ರಣಗಳು ನಮ್ಮನ್ನು ಹಿಂಸಿಸುತ್ತವೆ.
ಸೋಲು-ಗೆಲುವು ಆಟದ ಪರಿಭಾಷೆ, ಆಟದಲ್ಲಿ ಸೋಲು-ಗೆಲುವು ಸಹಜ ಕೂಡ; ಆದರೆ ಆ ಸೋಲು-ಗೆಲುವು ಆ ಆಟದ ಅವಧಿಗಷ್ಟೇ ಸೀಮಿತವಾದದ್ದು, ಆಟದ ಚೌಕಟ್ಟಿನಾಚೆಗೆ ಆ ಸೋಲು-ಗೆಲುವುಗಳಿಗೆ ಯಾವ ಅರ್ಥವೂ ಇಲ್ಲ; ಒಂದು ಪಂದ್ಯದಲ್ಲಿ ಸೋತವರು ಮುಂದೆಂದೂ ಆಟವನ್ನೇ ಆಡಬಾರದೆಂಬ ನಿಯಮವೂ ಇಲ್ಲ. ಆದರೆ ಸೋಲು-ಗೆಲುವುಗಳನ್ನು ನಾವು ಜೀವನಕ್ಕೆ ಅಳವಡಿಸಿಕೊಂಡಾಗ ವಿಚಿತ್ರವಾಗಿ ಕಾಣುತ್ತದೆ. ಜೀವನದಲ್ಲಿ ಸೋಲೆಂದರೆ ಏನು, ಗೆಲುವೆಂದರೆ ಏನು ಎಂದು ನಿರ್ಧರಿಸುವವರು ಯಾರು? ಸ್ಪರ್ಧೆ ಯಾರ ಜೊತೆ, ಯಾಕೆ? ಪಂದ್ಯವನ್ನು ಆಯೋಜಿಸಿರುವವರು ಯಾರು, ಅದರಿಂದ ಅವರಿಗೇನು ಲಾಭ? ಆಟದ ನೀತಿ–ನಿಯಮಗಳೇನು? ಗೆದ್ದವರು ಪಡೆಯುವುದೇನು, ಸೋತವರು ಕಳೆದುಕೊಳ್ಳುವುದೇನು? ಸೋತವರು ಮುನ್ನಡೆಯದೇ ಆಟದಿಂದಲೇ ನಿರ್ಗಮಿಸುವಷ್ಟು ಧೃತಿಗೆಡುವುದೇಕೆ? ಈ ಪ್ರಶ್ನೆಗಳಿಗೆ ಸರ್ವಸಮ್ಮತವಾದ, ಸ್ಪಷ್ಟವಾದ ಉತ್ತರಗಳಿಲ್ಲ.
ನಮ್ಮ ಸುತ್ತಲಿನವರು, ನಮ್ಮ ಸಮುದಾಯ ನಮಗೊಂದು ನಕ್ಷೆಯನ್ನು ತಯಾರು ಮಾಡಿಕೊಡುತ್ತದೆ; ಆ ನಕ್ಷೆಯಂತೆ ಬಾಳಿದರೆ ಗೆಲುವು, ಅದರಲ್ಲಿದ್ದಂತೆ ಬಾಳಲು ಸಾಧ್ಯವಾಗದಿದ್ದರೆ ಸೋಲು ಎಂಬುದನ್ನು ಸ್ವಲ್ಪವೂ ವಿಮರ್ಶೆ ಮಾಡದೆ ಒಪ್ಪಿಕೊಂಡು ಒಂದು ರೀತಿ ಯಾಂತ್ರಿಕವಾಗಿ, ಅಪ್ರಜ್ಞಾಪೂರ್ವ ಸ್ಥಿತಿಯಲ್ಲಿ ಬದುಕುತ್ತಿರುತ್ತೇವೆ. ನಾವಂದುಕೊಂಡ ಸೋಲು–ಗೆಲುವುಗಳು ನಿಜವಾದ ಸೋಲು–ಗೆಲುವುಗಳೇ ಹೌದೇ? ಅವುಗಳ ಮೂಲಸ್ವರೂಪವೇನು ಎಂಬ ಜಿಜ್ಞಾಸೆ ಮಾಡುವುದನ್ನು ಮರೆತು ದಿನ ದೂಡುತ್ತೇವೆ.
ಹುಟ್ಟಿದ ಮಗು ಇಂತಿಂಥ ಬೆಳವಣಿಗೆಯ ಹಂತಗಳನ್ನು ಇಷ್ಟು ಸಮಯದಲ್ಲಿ ದಾಟಬೇಕು, ಶಾಲೆಯಲ್ಲಿ ಇಂತಿಂಥದ್ದನ್ನು ಹೀಗೆಯೇ ಕಲಿಯಬೇಕು, ಇಂಥದ್ದೇ ಓದಬೇಕು, ಇಂಥ ವೃತ್ತಿಯನ್ನೇ ಮಾಡಬೇಕು, ಭಾವನೆಗಳನ್ನು ಹೀಗೆಯೇ ತೋರ್ಪಡಿಸಬೇಕು ಇಲ್ಲ ಅದುಮಿಡಬೇಕು, ಸಂಬಂಧಗಳು ಹೀಗಿದ್ದರೇ ಅದು ಯಶಸ್ವೀ ಬಾಂಧವ್ಯ; ಇವುಗಳಲ್ಲಿ ಎಲ್ಲಿ ಸ್ವಲ್ಪ ಏರುಪೇರಾದರೂ ಅದು ನಮ್ಮ ಸೋಲು. ಎಲ್ಲಕ್ಕಿಂತಲೂ ಮಿಗಿಲಾಗಿ ನಮ್ಮ ಸುತ್ತಲಿನವರು ತಮ್ಮ ಜೀವನವನ್ನು ಹೇಗೆ ನಡೆಸುತ್ತಿದ್ದಾರೆ ಎನ್ನುವುದನ್ನು ಗಮನಿಸುತ್ತಾ ಅವರಿಗಿಂತಾ ಚೆನ್ನಾಗಿ ಬದುಕಿದರೆ ಅದು ನಮ್ಮ ಗೆಲುವು, ಬೇರೆಯವರಿಗಿಂತ ಹೆಚ್ಚು ಸಂತೋಷವಾಗಿರುವುದೇ ನಮ್ಮ ಯಶಸ್ಸು ಎನ್ನುವ ದೃಷ್ಟಿಕೋನದಿಂದ ನೋಡಿದಾಗ ಸೋಲೆಂದರೆ ಭಯ ಉಂಟಾಗದೇ ಇರದು.
ಗೆಲುವು ಒಬ್ಬಬ್ಬರಿಗೆ ಒಂದೊಂದು ಬಗೆಯದಾಗಿರುತ್ತದೆ. ಅನಕ್ಷರಸ್ಥ ಕುಟುಂಬದ ಮಗುವೊಂದು ಪದವಿಯವರೆಗೆ ಕಲಿತರೆ ಅದು ಆ ಕುಟುಂಬದ ಗೆಲುವು. ಸದಾ ಸಿಟ್ಟಾಗಿ ಕೂಗಾಡುವ ವ್ಯಕ್ತಿಯೊಬ್ಬ ತಾನೇಕೆ ಸಮಾಧಾನದಿಂದ ಇರಲಾಗುತ್ತಿಲ್ಲ ಎಂದು ತನ್ನನ್ನೇ ತಾನು ಪ್ರಶ್ನಿಸಿಕೊಳ್ಳುವುದೇ ಆ ವ್ಯಕ್ತಿಯ ಪಾಲಿನ ಗೆಲುವು, ತನ್ನ ಮಗು ಇತರ ಮಕ್ಕಳಂತೆ ಇಲ್ಲವಲ್ಲ ಎಂದು ಕೊರಗುವ ತಾಯಿ ಅಂಥ ಹೋಲಿಕೆಗಳನ್ನು ಮಾಡುವುದು ಬಿಟ್ಟು ಮಗುವನ್ನು ಅದಿರುವಂತೆಯೇ ಪ್ರೀತಿಸಿದರೆ ಅದು ಆ ತಾಯಿಯ ಗೆಲುವು - ಹೀಗೆ ಒಬ್ಬೊಬ್ಬರ ಗುರಿಯೂ ಅವರಿಗೇ ವಿಶಿಷ್ಟವಾದದ್ದು.
ಇಷ್ಟಕ್ಕೂ ನಾವು ಗೆಲುವಿಗೆ ಇಷ್ಟೊಂದು ಕಾತರಿಸುವುದೇಕೆ, ಸೋಲಿಗೆ ಇಷ್ಟು ಹೆದರುವುದೇಕೆ? ಸಮಾಜದ, ಕುಟುಂಬದ, ಆತ್ಮೀಯರ ಪ್ರೀತಿ, ಮನ್ನಣೆ, ಅವರಿಂದ ಸ್ವೀಕೃತವಾದಂತಹ ಭಾವ ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲೊಂದು. ಸಮಾಜದಿಂದ ತಿರಸ್ಕೃತಗೊಳ್ಳುವುದು ಅಸಾಮಾನ್ಯವಾದ ನೋವನ್ನು ತರುತ್ತದೆ. ಆ ನೋವಿನಿಂದ ತಪ್ಪಿಸಿಕೊಳ್ಳಲು, ಪ್ರಪಂಚದ ಮನ್ನಣೆ ಪಡೆಯಲು ಏನು ಮಾಡಬೇಕೆನ್ನುವುದನ್ನು ನಾವು ನಮಗೇ ಗೊತ್ತಿಲ್ಲದಂತೆ ಅಂತರ್ಗತಗೊಳಿಸಿಕೊಂಡಿರುತ್ತೇವೆ.
ಸಮಾಜದ ರೀತಿ–ನೀತಿಗಳನ್ನು ಒಪ್ಪಿ ಬದುಕು ಕಟ್ಟಿಕೊಳ್ಳುವುದು ಅಪೇಕ್ಷಣೀಯವೇ ಹೌದು. ಅದರಿಂದ ವ್ಯಕ್ತಿಗೂ ಸಮಾಜಕ್ಕೂ ಹಿತ. ಆದರೆ ಪ್ರಪಂಚದ ಮನ್ನಣೆ ಮತ್ತು ಸ್ವೀಕೃತಿಯ ಮೇಲೆಯೇ ನಮ್ಮ ಗೆಲುವು ಅವಲಂಬಿತವಾಗಿದ್ದರೆ ನಿರಾಸೆ ಖಚಿತ. ಹೊರಗಿನಿಂದ ಮನ್ನಣೆ ನಮಗೆ ಸುಲಭವಾಗಿ ಸಿಗುವುದಿಲ್ಲ. ಅದಕ್ಕೆ ಕಾರಣಗಳು ಹಲವು, ಮನ್ನಣೆ ಪ್ರೀತಿ ಹೊರಗಿನಿಂದ ಸಿಕ್ಕರೂ ಅದು ತೃಪ್ತಿ ನೀಡದೇ ಹೋಗುವ ಸಾಧ್ಯತೆಯೇ ಹೆಚ್ಚು.
ನಮ್ಮ ಕಲ್ಪನೆಯ ಬದುಕೊಂದಿರುತ್ತದೆ, ಅದನ್ನು ಸಾಕಾರಗೊಳಿಸಿಕೊಳ್ಳಲು ಹೋದಾಗ ಕಲ್ಪನೆಗೂ ವಾಸ್ತವಕ್ಕೂ ಇರುವ ಅಪಾರ ವ್ಯತ್ಯಾಸ ತಿಳಿಯುತ್ತದೆ; ಆ ಕಲ್ಪನೆಯ ಬದುಕು ಕನಸಾಗೇ ಉಳಿದಾಗ ಅದು ಯಾತನೆಯನ್ನು ತರುತ್ತದೆ ಹಾಗೂ ನಾವು ನಮ್ಮ ಕಲ್ಪನೆಯ ಬದುಕಿನಲ್ಲೇ ಸಿಲುಕಿಕೊಂಡ ಕಾರಣ ನಿಜದ ನಮ್ಮ ಬದುಕನ್ನು ನಿರ್ಲಕ್ಷಿಸುತ್ತೇವೆ. ಕೊನೆಗೆ ಎಲ್ಲೂ ನಮ್ಮನ್ನು ನಾವು ನೆಲೆಗೊಳಿಸಿಕೊಳ್ಳಲು ಸಾಧ್ಯವಾಗಲಿಲ್ಲವೆಂಬ ಭಾವಕ್ಕೆ ಸೋಲೆಂದು ಹೆಸರಿಡುತ್ತೇವೆ.
‘ನಮ್ಮ ಗೆಲುವು’ ಎಂದರೇನೆಂದು ಅರಿಯದೆ, ಪ್ರಪಂಚ ಗುರುತಿಸುವ ಗೆಲುವುಗಳನ್ನು ಅರಸಿಕೊಂಡು ಹೋಗುವ ಭರದಲ್ಲಿ, ಪ್ರಪಂಚಕ್ಕೆ ನಾವು ಹೊಂದಿಕೊಳ್ಳಲು ಅನುಕೂಲವಾಗುವಂತೆ ನಮ್ಮನ್ನು ನಾವು ಮಾರ್ಪಡಿಸಿಕೊಳ್ಳುವುದೇ ಬೇರೆ (fitting in) ನಮ್ಮನ್ನು ನಾವು ಕಂಡುಕೊಂಡೂ ಎಲ್ಲರೊಳು ಒಂದಾಗಿ ಬಾಳುವುದೇ ಬೇರೆ (belonging).
ಪ್ರಪಂಚಕ್ಕೆ ಹೊಂದಿಕೊಳ್ಳುವಂತೆ ನಮ್ಮನ್ನು ನಾವು ಮಾರ್ಪಡಿಸಿಕೊಂಡಾಗ ಮನ್ನಣೆ ಸಿಕ್ಕರೆ ಅದು ಗೆಲುವು ಮನ್ನಣೆ ಸಿಗದೇ ಹೋದರೆ ಸೋಲು ಎಂಬಂತಾಗುತ್ತದೆ, ಇಂತಹ ಸೋಲಿನಿಂದ ಕೀಳರಿಮೆ ಮತ್ತು ಅವಮಾನ ಸಹಜ. ಸೋಲಿಗೆ ನಾವೇಕೆ ಹೆದರುತ್ತೇವೆಂದರೆ ನಾವು ಅವಮಾನಕ್ಕೆ ಹೆದರುತ್ತೇವೆ, ನಮ್ಮ ಕಣ್ಣಲ್ಲೇ ನಾವು ಸಣ್ಣವರಾಗುವ ನೋವು ನಮ್ಮನ್ನು ಬಾಧಿಸುತ್ತದೆ.
ಪ್ರಪಂಚದ ಮನ್ನಣೆಗೆ ಕಾತರಿಸದೆ ನಮ್ಮನ್ನು ನಾವು ಸ್ವೀಕರಿಸಿಕೊಳ್ಳುವುದೇ ನಿಜವಾದ ಗೆಲುವು. ಹೊರಪ್ರಪಂಚದ ಸೋಲು ಗೆಲುವುಗಳ, ಅವಮಾನದ ಭಯವಿರದ ನಮ್ಮ ಆತ್ಮತೃಪ್ತಿಗಾಗಿಯೇ ನಾವು ನಮ್ಮ ಕೆಲಸಗಳನ್ನು, ಕರ್ತವ್ಯವನ್ನು ನಿರ್ವಹಿಸಿದಾಗ ನಾವು ಊಹಿಸಿದ್ದು ನಡೆಯದಿದ್ದಾಗಲೂ ಅದು ಸೋಲೆಂದು ನಮಗನಿಸುವುದಿಲ್ಲ, ಆತ್ಮಸಂತೋಷಕ್ಕಾಗಿ ಮಾಡಿದ ಕೆಲಸ ನಿರೀಕ್ಷಿತ ಫಲಿತಾಂಶ ತರದಿದ್ದರೂ ನಮ್ಮನ್ನು ಕಂಗೆಡಿಸುವುದಿಲ್ಲ. ಬೇರೆಯವರು ತಮ್ಮ ಅನುಕೂಲಕ್ಕೆ ತಕ್ಕಂತೆ, ತಮ್ಮ ತಿಳಿವಳಿಕೆಗೆ ನಿಲುಕಿದಂತೆ ನಮ್ಮನ್ನು ಸ್ವೀಕರಿಸುತ್ತಾರೆ ಅಥವಾ ತಿರಸ್ಕರಿಸುತ್ತಾರೆ; ಅದರ ಮೇಲೆ ನಮ್ಮ ಮೌಲ್ಯ ನಿರ್ಧಾರಿತವಾದರೆ ಸೋಲು ಗೆಲುವುಗಳ ಹಿಡಿತದಲ್ಲಿ ನಾವು ಸೀಮಿತವಾಗಿ ಬದುಕುತ್ತೇವೆ ಆದರೆ ನಮ್ಮೊಳಗಿನ ಬೆಳಕಿಗೆ ನಿಷ್ಠರಾಗಿ ಬದುಕಿದಾಗ ಪ್ರತಿಯೊಂದು ಅನುಭವವೂ ನಮ್ಮನ್ನು ನಾವು ವಿಕಾಸಗೊಳಿಸಿಕೊಳ್ಳುವುದಕ್ಕೆ, ವಿಸ್ತರಿಸಿಕೊಳ್ಳುವುದಕ್ಕೆ ನೆರವಾಗುತ್ತವೆ, ಆಗ ಸೋಲಿಗೆ ಹೆದರದೆ ಮುನ್ನುಗ್ಗುವ ಸ್ವಭಾವವೂ ನಮ್ಮದಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.